ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ಸಾಹಿತ್ಯ ಪರಿಷತ್ತು: 49 ದತ್ತಿ ಪ್ರಶಸ್ತಿ ಘೋಷಣೆ

ವಿವಿಧ ವಿಭಾಗಗಳಲ್ಲಿ 53 ಕೃತಿಗಳು ಆಯ್ಕೆ *ಮಾ.12ಕ್ಕೆ ಪ್ರಶಸ್ತಿ ಪ್ರದಾನ
Last Updated 16 ಫೆಬ್ರುವರಿ 2023, 16:17 IST
ಅಕ್ಷರ ಗಾತ್ರ

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು (ಕಸಾಪ) 2021ನೇ ಸಾಲಿನ ವಿವಿಧ ದತ್ತಿ ಪ್ರಶಸ್ತಿಗಳನ್ನು ಘೋಷಿಸಿದ್ದು, ‘ಪ್ರಜಾವಾಣಿ’ಯ ಹಿರಿಯ ಉಪಸಂಪಾದಕ ವಿಕ್ರಂ ಕಾಂತಿಕೆರೆ ಅವರ ‘ಕಾವೇರಿ ತೀರದ ಪಯಣ’ ಕೃತಿ ಸೇರಿ 49 ವಿಭಾಗಗಳಲ್ಲಿ 53 ಕೃತಿಗಳು ಆಯ್ಕೆಯಾಗಿವೆ.

2021ರ ಜನವರಿಯಿಂದ ಡಿಸೆಂಬರ್‌ ಅಂತ್ಯದೊಳಗೆ ಪ್ರಕಟಗೊಂಡ ಕೃತಿಗಳನ್ನು ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ. ರಾಜ್ಯದ ವಿವಿಧೆಡೆ ಹಾಗೂ ಹೊರರಾಜ್ಯದಿಂದ 2 ಸಾವಿರಕ್ಕೂ ಅಧಿಕ ಕೃತಿಗಳು ಬಂದಿದ್ದವು. ಪರಿಷತ್ತಿನ ಅಧ್ಯಕ್ಷ ಮಹೇಶ ಜೋಶಿ ನೇತೃತ್ವದ ಸಮಿತಿ ದತ್ತಿ ಪ್ರಶಸ್ತಿಗೆ ಕೃತಿಗಳನ್ನು ಆಯ್ಕೆ ಮಾಡಿವೆ.

ಈ ದತ್ತಿ ಪ್ರಶಸ್ತಿಗಳು ₹ 250ರಿಂದ ₹ 10 ಸಾವಿರದವರೆಗೆ ನಗದು ಬಹುಮಾನ ಹೊಂದಿವೆ. ಪ್ರಶಸ್ತಿ ಪ್ರದಾನ ಸಮಾರಂಭವನ್ನು ಮಾ.12ರಂದು ಪರಿಷತ್ತಿನ ಶ್ರೀ ಕೃಷ್ಣರಾಜ ಪರಿಷತ್ತಿನ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕಸಾಪ ಅಧ್ಯಕ್ಷ ಮಹೇಶ ಜೋಶಿ ತಿಳಿಸಿದ್ದಾರೆ. ‌

ಪ್ರಮುಖ ದತ್ತಿ ಪ್ರಶಸ್ತಿಗಳು: ‘ಬಿಸಲೇರಿ ಜಯಣ್ಣ ಮತ್ತು ಬಿಸಲೇರಿ ಬ್ರದರ್ಸ್ ದತ್ತಿ’ಗೆ ಮಂಗಳೂರಿನ ಮುರಳಿಮೋಹನ್ ಚೂಂತಾರು ಅವರ ‘ಸಂಗಾತಿ’ ಕೃತಿ, ‘ವಿ. ಗೌರಮ್ಮ ಗಂಗಾಧರಯ್ಯ ಮತ್ತು ಮಕ್ಕಳ ಸಾಹಿತ್ಯ ಪ್ರಶಸ್ತಿ’ಗೆ ಕಾಸರಗೋಡಿನ ರಾಜಶ್ರೀ ಟಿ.ರೈ. ಪೆರ್ಲ ಅವರ ‘ತುಳುನಾಡಿನ ಮೂರಿಗಳ ಆರಾಧನೆ’ ಕೃತಿ, ‘ಭಾರತಿ ಮೋಹನ ಕೋಟಿ ದತ್ತಿ’ಗೆ ಕಾಸರಗೋಡಿನ ವಿಕ್ರಂ ಕಾಂತಿಕೆರೆ ಅವರ ‘ಕಾವೇರಿ ತೀರದ ಪಯಣ’ ಕೃತಿ, ‘ಹೊಳಲ್ಕೆರೆ ಪದ್ಮಾವತಮ್ಮ ಶ್ರೀಪಾಲಶೆಟ್ಟಿ ಡಾ. ಮದನಕೇಸರಿ ಜೈನ ದತ್ತಿ’ಗೆ ತುಮಕೂರಿನ ಸಂತೋಷ್ ಕುಮಾರ್ ಅವರ ‘ಆಪ್ತಮೀಮಾಂಸಾ (ದೇವಾಗಮ ಸ್ತೋತ್ರ)’ ಕೃತಿ ಹಾಗೂ ‘ಪೂಜ್ಯ ಸ್ವಸ್ತಿಶ್ರೀ ದೇವೇಂದ್ರಕೀರ್ತಿ ದತ್ತಿ’ಗೆ ಹುಬ್ಬಳ್ಳಿಯ ಶಾಂತಿನಾಥ ಕೆ. ಹೋತಪೇಟಿ ಅವರ ‘ಅನಾಸಕ್ತ ಮಹಾಯೋಗಿ’ ಕೃತಿ ಆಯ್ಕೆಯಾಗಿವೆ. ಈ ಪ್ರಶಸ್ತಿಗಳು ತಲಾ ₹ 10 ಸಾವಿರ ನಗದು ಒಳಗೊಂಡಿವೆ.

‘ವಸುದೇವ ಭೂಪಾಲಂ ದತ್ತಿ’ಗೆ ದಕ್ಷಿಣ ಕನ್ನಡದ ಶ್ರೀಧರ ಎಚ್.ಜಿ. ಅವರ ‘ಚಪಡ’ ಕಾದಂಬರಿ, ಬೆಳಗಾವಿಯ ಇಸ್ಮಾಯಿಲ್ ತಳಕಲ್ ಅವರ ‘ಬೆತ್ತಲೆ ಸಂತ’ ಸಣ್ಣ ಕಥಾ ಸಂಕಲನ, ಧಾರವಾಡದ ವೈ.ಜಿ. ಭಗವತಿ ಅವರ ‘ಮಕ್ಕಳು ಓದಿದ ಟೀಚರ್ ಡೈರಿ’ ಹಾಗೂ ಬೆಂಗಳೂರಿನ ಕೆ. ಶ್ರೀನಿವಾಸ ರೆಡ್ಡಿ ಅವರ ‘ಅಂತರಂಗ’ ಕೃತಿ ಭಾಜನವಾಗಿವೆ. ಈ ಪ್ರಶಸ್ತಿಯು ಕ್ರಮವಾಗಿ ₹ 5 ಸಾವಿರ, ₹ 3 ಸಾವಿರ ಹಾಗೂ ತಲಾ ₹ 2 ಸಾವಿರ ನಗದು ಹೊಂದಿದೆ.

‘ದಿ.ಡಿ. ಮಾಣಿಕರಾವ ಸ್ಮರಣಾರ್ಥ ಹಾಸ್ಯ ಸಾಹಿತ್ಯ ದತ್ತಿ’ಗೆ ದಕ್ಷಿಣ ಕನ್ನಡದ ನಿರ್ಮಲಾ ಸುರತ್ಕಲ್ ಅವರ ‘ನಿತ್ಯಪುಷ್ಪ ಮತ್ತು ! ಗೂಗಲ್ ಗುರು’ ಕೃತಿ, ‘ದಿ.ಡಾ.ಎ.ಎಸ್. ಧರಣೇಂದ್ರಯ್ಯ-ಮನೋವಿಜ್ಞಾನ ದತ್ತಿ’ಗೆ ಚಂದ್ರಶೇಖರ ದಾಮ್ಲೆ ಅವರ ‘ನನ್ನ ಮಗಳು ತುಂಟಿ ಅಲ್ಲ !?’ ಕೃತಿ, ‘ಭಾರತೀಸುತ ಸ್ಮಾರಕ ದತ್ತಿ ಪ್ರಶಸ್ತಿ’ಗೆ ಗದಗದ ಪುಂಡಲೀಕ ಕಲ್ಲಿಗನೂರ ಅವರ ‘ಮನೋಜನನಿ’ ಕೃತಿ, ‘ಲಕ್ಷ್ಮೀದೇವಿ ಶಾಂತರಸ ಹೆಂಬೇರಾಳು ದತ್ತಿ ಪ್ರಶಸ್ತಿ’ಗೆ ಅಮೆರಿಕಾದ ಕಾವ್ಯಾ ಕಡಮೆ ಅವರ ‘ಮಾಕೋನ ಏಕಾಂತ’ ಕೃತಿ, ‘ಪ್ರಕಾಶಕ ಆರ್.ಎನ್. ಹಬ್ಬು ದತ್ತಿ ಪ್ರಶಸ್ತಿ’ಗೆ ಆಸ್ಟ್ರೇಲಿಯಾದ ಶ್ರೀಹರ್ಷ ಸಾಲಿಮಠ ಅವರ ‘ಉದಕ ಉರಿದು’ ಕೃತಿ, ‘ಅಮೃತ ಮಹೋತ್ಸವ ಸಾಹಿತ್ಯ ಸಮ್ಮೇಳನದ ಸವಿ ನೆನಪಿನ ದತ್ತಿ’ಗೆ ಬಾಗಲಕೋಟೆಯ ಸೋಮಲಿಂಗ ಗೆಣ್ಣೂರ ಅವರ ‘ಅಂಬೇಡ್ಕರ್ ಮಾರ್ಗ’ ಕೃತಿ, ‘ನಿಡಸಾಲೆ ಪುಟ್ಟಸ್ವಾಮಯ್ಯ ಸಾಹಿತ್ಯ ಪ್ರಶಸ್ತಿ ದತ್ತಿ’ಗೆ ಬಳ್ಳಾರಿಯ ಸಿ.ಆರ್. ಗೋಪಾಲ್ ಅವರ ‘ಸಾಮಾಜಿಕ ಕ್ರಿಯಾಚರಣೆ’ ಕೃತಿ ಆಯ್ಕೆಯಾಗಿದೆ.

‘ಗುಬ್ಬಿ ಸೋಲೂರು ಮುರುಗಾರಾಧ್ಯ ದತ್ತಿ ಪ್ರಶಸ್ತಿ’ಗೆ ತುಮಕೂರಿನ ಸಿದ್ದಗಂಗಯ್ಯ ಹೊಲತಾಳು ಅವರ ‘ಸಿಂಗಾರಿ’ ಕೃತಿ, ‘ಗೌರುಭಟ್ ದತ್ತಿ ಪ್ರಶಸ್ತಿ’ಗೆ ಬೆಂಗಳೂರಿನ ಕ್ಷಮಾ ವಿ. ಭಾನುಪ್ರಕಾಶ್ ಅವರ ‘ವಿಜ್ಞಾನ ಲೋಕದ ಜ್ಞಾನಕುಸುಮಗಳು’ ಕೃತಿ, ‘ಶ್ರೀಮತಿ ಗಂಗಮ್ಮ ಶ್ರೀ ಟಿ. ಶಿವಣ್ಣ ದತ್ತಿ ಪ್ರಶಸ್ತಿ’ಗೆ ವಿಜಯಪುರದ ಶಂಕರ ಬೈಚಬಾಳ ಅವರ ‘ಕನ್ನಡದ ಮಠ, ಪುಸ್ತಕದ ಜಗದ್ಗುರು ಡಾ. ತೋಂಟದ ಸಿದ್ದಲಿಂಗ ಶ್ರೀಗಳು’ ಕೃತಿ, ‘ಡಾ.ಹಾ.ಮಾ. ನಾಯಕ ಸ್ಮಾರಕ ದತ್ತಿ ಪ್ರಶಸ್ತಿ’ಗೆ ಬಾಗಲಕೋಟೆಯ ಅಶೋಕ ನರೋಡೆ ಅವರ ‘ಮಹಾಕಾವ್ಯಗಳಲ್ಲಿ ಬುದ್ಧ’ ಕೃತಿ ಹಾಗೂ ‘ಡಾ. ವೀಣಾ ಶಾಂತೇಶ್ವರ ದತ್ತಿ’ಗೆ ದಕ್ಷಿಣ ಕನ್ನಡದ ದೀಪಾ ಫಡ್ಕೆ ಅವರ ‘ಮುಂದಣ ಹೆಜ್ಜೆ’ ಕೃತಿ ಆಯ್ಕೆಯಾಗಿದೆ. ಈ ಪ್ರಶಸ್ತಿಗಳು ತಲಾ ₹ 5 ಸಾವಿರ ನಗದು ಒಳಗೊಂಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT