ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯತ್ನಾಳ್‌ ವಿರುದ್ಧ ಕ್ರಮ ಇಲ್ಲವೇ: ಕಟೀಲ್‌ಗೆ ಪ್ರಿಯಾಂಕ್‌ ಖರ್ಗೆ ಚಾಟಿ

ಅಕ್ಷರ ಗಾತ್ರ

ಬೆಂಗಳೂರು: ಬಸವನಗೌಡ ಪಾಟೀಲ್‌ ಯತ್ನಾಳ್ ವಿರುದ್ದ ಕ್ರಮ ಜರುಗಿಸುವ ಧೈರ್ಯ ನಿಮಗಿಲ್ಲವೇ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳೀನ್‌ ಕುಮಾರ್‌ ಕಟೀಲ್‌ ಅವರನ್ನು ಕಾಂಗ್ರೆಸ್‌ ಶಾಸಕ ಪ್ರಿಯಾಂಕ್‌ ಖರ್ಗೆ ಪ್ರಶ್ನಿಸಿದ್ದಾರೆ.

ಈ ವಿಚಾರದ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ‘ಬಿಜೆಪಿ ರಾಜ್ಯಾಧ್ಯಕ್ಷರಾದ ನಳೀನ್‌ ಕುಮಾರ್‌ ಕಟೀಲ್‌ ಅವರು, ಮಾಧ್ಯಮವೊಂದರಲ್ಲಿ ರಾಜ್ಯದ ಎಲ್ಲಾ ಸಮಸ್ಯೆಗಳಿಗೆ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರೇ ಹೊಣೆ ಎಂದಿದ್ದಾರೆ. ಈ ಮೂಲಕ 8 ವರ್ಷದಿಂದ ಪ್ರಧಾನಿಯಾಗಿದ್ದರೂ ದೇಶದ ಎಲ್ಲಾ ಕಷ್ಟಗಳಿಗೆ ನೆಹರೂ ಹೊಣೆ ಎನ್ನುವ ಮೋದಿಯವರ ಹೊಣೆಗೇಡಿತನದ ಪಾಠವನ್ನು ಚೆನ್ನಾಗಿ ಪಾಲಿಸುತ್ತಿದ್ದಾರೆ’ ಎಂದು ಟೀಕಿಸಿದ್ದಾರೆ.

‘ರಾಜ್ಯದಲ್ಲಿ ನಡೆಯುತ್ತಿರುವ ಗಲಭೆಗಳಿಗೆ ಸಿದ್ದರಾಮಯ್ಯ ಹಾಗೂ ಡಿಕೆಶಿ ಹೊಣೆಯಾಗಿದ್ದೇ ಆದಲ್ಲಿ ಕಾನೂನು ಕ್ರಮ ಜರುಗಿಸಲು ಬಿಜೆಪಿ ಸರ್ಕಾರ ಹಿಂಜರೆಯುತ್ತಿರುವುದೇಕೆ? ಇವರ ಮಾತಿಗೂ, ಮಾಡುವ ಕೆಲಸಗಳಿಗೂ ಸಂಬಂಧವೇ ಇಲ್ಲ. ಇವರ ಬಾಯಿಂದ ಬರುವ ಪ್ರತಿ ಪದವೂ ಸಮಾಜವನ್ನು ಒಡೆಯುವ ಹಾಗೂ ಶಾಂತಿ ಹಾಳು ಮಾಡುವ ಉದ್ದೇಶವನ್ನೇ ಹೊಂದಿರುತ್ತವೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಬಿಜೆಪಿಯಲ್ಲಿ ಸಿಎಂ ಆಗಬೇಕೆಂದರೆ ₹2,500 ಕೋಟಿ ನೀಡಬೇಕಿದೆ ಎಂದು ಬಸವನಗೌಡ ಯತ್ನಾಳ್ ನೇರವಾಗಿ ಹೇಳಿದ್ದಾರೆ. ಹಲವರು ಸಿಡಿ ತೋರಿಸಿ ಬ್ಲ್ಯಾಕ್‌ ಮೇಲ್ ಮಾಡಿ ಮಂತ್ರಿಯಾಗಿದ್ದಾರೆಂದು ಆರೋಪಿಸಿದ್ದಾರೆ. ಅವರ ವಿರುದ್ದ ಕ್ರಮ ಜರುಗಿಸುವ ಧೈರ್ಯ ನಿಮಗಿಲ್ಲವೇ? ಡಿಕೆಶಿ ಹಾಗೂ ಸಿದ್ದರಾಮಯ್ಯರ ವಿರುದ್ದದ ವೀರಾವೇಶವನ್ನು ನಿಮ್ಮ ಪಕ್ಷದವರೆದುರು ತೋರಲಾಗದೇ?’ ಎಂದು ಪ್ರಶ್ನಿಸಿದ್ದಾರೆ.

‘ಎಲ್ಲಾ ಅನಗತ್ಯ ವಿಚಾರದ ಬಗ್ಗೆಯೂ ಮಾತನಾಡುವ ಕಟೀಲ್ ಅವರೇ, ಬಿಟ್ ಕಾಯಿನ್ ಬಗ್ಗೆ ನಿಮ್ಮ ನೀರವ ಮೌನವೇಕೆ? ಈ ಹಗರಣದಲ್ಲಿ ನಿಮ್ಮ ಪಾಲೇನು? ಇದರ ಬಗ್ಗೆ ನೀವು ತುಟಿ ಬಿಚ್ಚದಿರುವುದೇಕೆ? ಇದರ ಬಗ್ಗೆ ನೀವು ಈವರೆಗೂ ಒಂದೇ ಒಂದು ಮಾತನ್ನೂ ಆಡದಿರಲು ನಿಮ್ಮನ್ನು ತಡೆಯುತ್ತಿರುವವರು ಯಾರು ಸ್ವಾಮಿ?’ ಎಂದು ಖರ್ಗೆ ಕೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT