ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ಬಳಿಕ ಯಡಿಯೂರಪ್ಪ ಹೇಳಿದ್ದು: ಮುಖ್ಯಾಂಶಗಳು

Last Updated 26 ಜುಲೈ 2021, 8:48 IST
ಅಕ್ಷರ ಗಾತ್ರ

ಬೆಂಗಳೂರು: ಬಿ.ಎಸ್.ಯಡಿಯೂರಪ್ಪ ಅವರು ರಾಜಭವನಕ್ಕೆ ತೆರಳಿ ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಅವರು ನೀಡಿರುವ ಹೇಳಿಕೆಗಳ ಮುಖ್ಯಾಂಶಗಳು ಇಲ್ಲಿವೆ;

* ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ ಶಾ ಅವರಿಗೆ, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ಕೃತಜ್ಞತೆಗಳು.

* ಎರಡು ತಿಂಗಳ ಹಿಂದೆಯೇ ರಾಜೀನಾಮೆ ನೀಡಲು ನಿರ್ಧರಿಸಿದ್ದೆ. ಆದರೆ ಎರಡು ವರ್ಷ ತುಂಬಿದ ದಿನ ರಾಜೀನಾಮೆ ನೀಡುವುದು ಒಳ್ಳೆಯದು ಎಂದು ಕೊಟ್ಟಿದ್ದೇನೆ. ಅದನ್ನು ಒಪ್ಪಿದ್ದಾರೆ. 4 ಬಾರಿ ಮುಖ್ಯಮಂತ್ರಿಯಾಗಿ ಕೆಲಸ ಮಾಡಲು ರಾಜ್ಯದ ಜನ ಅವಕಾಶ ನೀಡಿದ್ದಾರೆ. ಅದಕ್ಕೆ ಋಣಿ.

* ಮುಂದೆ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಬೇಕು. ನಾನು ಮುಂದಿನ ಮುಖ್ಯಮಂತ್ರಿ ಸ್ಥಾನಕ್ಕೆ ಯಾವುದೇ ಹೆಸರು ಹೇಳುವುದಿಲ್ಲ. ನಾನು ಯಾವುದೇ ಹೆಸರು ಶಿಫಾರಸು ಮಾಡಲ್ಲ. ರಾಜ್ಯಪಾಲರ ಹುದ್ದೆ ಬೇಡ.

* ಸ್ವ ಇಚ್ಛೆಯಿಂದಲೇ ರಾಜೀನಾಮೆ ನೀಡಿದ್ದೇನೆ. ನನ್ನ ಮೇಲೆ ಹೈಕಮಾಂಡ್‌ನಿಂದ ಯಾವುದೇ ಒತ್ತಡ ಇಲ್ಲ. ಬೇರೆಯವರಿಗೆ ಅವಕಾಶ ಸಿಗಬೇಕೆಂದು ಸ್ವಯಂ ಪ್ರೇರಿತವಾಗಿ ರಾಜೀನಾಮೆ ನೀಡಿದ್ದೇನೆ.

* ಮುಂದಿನ ಮುಖ್ಯಮಂತ್ರಿಯಾಗಿ ಯಾರ ಹೆಸರನ್ನೂ ಶಿಫಾರಸು ಮಾಡುವುದಿಲ್ಲ.

* ಪಕ್ಷದ ಸಂಘಟನೆ ಬಲಪಡಿಸಲು ಕೆಲಸ ಮಾಡುತ್ತೇನೆಯೇ ಹೊರತು, ಬೇರೆ ಯಾವುದೇ ಸ್ಥಾನಮಾನವನ್ನು ಒಪ್ಪಿಕೊಳ್ಳುವುದಿಲ್ಲ. ಮುಂದೆ ಬರುವ ಮುಖ್ಯಮಂತ್ರಿಗೂ ನೆರವು ನೀಡುತ್ತೇನೆ.

* ಯಾರೂ ಇಲ್ಲದ ಕಾಲದಿಂದಲೂ ಪಕ್ಷಕ್ಕಾಗಿ ದುಡಿದಿರುವೆ. ಎಲ್ಲ ಸಂದರ್ಭದಲ್ಲೂ ಅಗ್ನಿ ಪರೀಕ್ಷೆ ಎದುರಿಸಿರುವೆ. 75 ವರ್ಷ ವಯಸ್ಸಾದರೂ ಎರಡು ವರ್ಷ ಅಧಿಕಾರ ನಡೆಸಲು ಅವಕಾಶ ಕಲ್ಪಿಸಿದ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ವರಿಷ್ಠರಿಗೆ ನಾನು ಚಿರ ಋಣಿ

* ಎರಡು ವರ್ಷಗಳ ಹಿಂದೆ ಅಧಿಕಾರ ಸ್ವೀಕರಿಸಿದಾಗ ಎರಡು ತಿಂಗಳ ಕಾಲ ಸಂಪುಟ ರಚಿಸದಂತೆ ಕೇಂದ್ರ ನಾಯಕರು ತಡೆದಿದ್ದರು. ನಂತರ ಸಂಪುಟ ರಚಿಸಿ ಸರ್ಕಾರ ಮುನ್ನಡೆಸಿದೆ.

* ಅಟಲ್ ಬಿಹಾರಿ ವಾಜಪೇಯಿ ಅವರು ಕೇಂದ್ರ ಸಂಪುಟದಲ್ಲಿ ಸಚಿವನಾಗುವಂತೆ ಆಹ್ವಾನ ನೀಡಿದ್ದರು. ರಾಜ್ಯದಲ್ಲಿ ಪಕ್ಷ ಕಟ್ಟದೇ ಕೇಂದ್ರಕ್ಕೆ ಬರುವುದಿಲ್ಲ ಎಂದು ಇಲ್ಲಿಯೇ ಉಳಿದಿದ್ದೆ.

* ಹಿಂದೆ ಬಿಜೆಪಿ ಜತೆ ಯಾರೂ ಇರಲಿಲ್ಲ. ಸಭೆ ನಡೆಸಿದರೆ 300-400 ಜನ ಸೇರುತ್ತಿರಲಿಲ್ಲ. ಆದರೂ ಎದೆಗುಂದದೆ ಪಕ್ಷ ಕಟ್ಟಿದೆ. ಇಬ್ಬರು ಶಾಸಕರು ಗೆದ್ದಾಗ ವಸಂತ ಬಂಗೇರ ಪಕ್ಷ ತೊರೆದರು. ಆಗಲೂ ಧೈರ್ಯಗೆಡದೆ ಪಕ್ಷ ಕಟ್ಟಿದ್ದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT