ಬುಧವಾರ, ಫೆಬ್ರವರಿ 1, 2023
27 °C
ಸುಪ್ರೀಂ ಕೋರ್ಟ್‌ನಲ್ಲಿ ಸಮರ್ಥ ವಾದ ಮಂಡನೆಗೆ ಕರ್ನಾಟಕ ಸರ್ಕಾರ ಸಜ್ಜು

ಕರ್ನಾಟಕ–ಮಹಾರಾಷ್ಟ್ರ ಗಡಿ ವಿವಾದ ಪ್ರಕರಣ: ಸುಪ್ರೀಂ ಕೋರ್ಟ್‌ನಲ್ಲಿ ಇಂದು ವಿಚಾರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಕರ್ನಾಟಕ–ಮಹಾರಾಷ್ಟ್ರ ಗಡಿ ವಿವಾದ ಪ್ರಕರಣವನ್ನು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಕೆ.ಎಂ.ಜೋಸೆಫ್‌ ನೇತೃತ್ವದ ತ್ರಿಸದಸ್ಯ ಪೀಠವು ಬುಧವಾರ ವಿಚಾರಣೆ ನಡೆಸಲಿದ್ದು, ನ್ಯಾಯಾಲಯದಲ್ಲಿ ಸಮರ್ಥವಾಗಿ ವಾದ ಮಂಡಿಸಲು ಕರ್ನಾಟಕ ಸರ್ಕಾರ ಅಗತ್ಯ ಸಿದ್ಧತೆ ಮಾಡಿಕೊಂಡಿದೆ. 

ಕರ್ನಾಟಕ ಸರ್ಕಾರವು ಹಿರಿಯ ವಕೀಲರಾದ ಮುಕುಲ್‌ ರೋಹಟಗಿ, ಶ್ಯಾಮ್‌ ದಿವಾನ್‌ ನೇತೃತ್ವದಲ್ಲಿ ವಕೀಲರ ತಂಡ ರಚಿಸಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮುಕುಲ್‌ ರೋಹಟಗಿ
ಅವರನ್ನು ನವದೆಹಲಿಯಲ್ಲಿ ಮಂಗಳವಾರ ಭೇಟಿ ಮಾಡಿ ಕಾನೂನು ಹೋರಾಟದ ಕುರಿತು ಸಮಾಲೋಚನೆ ನಡೆಸಿದರು. ರಾಜ್ಯ ಸರ್ಕಾರದ ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ಕೆ.ನಾವದಗಿ ಜತೆಗಿದ್ದು, ಪೂರಕ ಮಾಹಿತಿ ನೀಡಿದರು. 

ಬಳಿಕ ಸುದ್ದಿಗಾರರ ಜತೆಗೆ ಮಾತನಾಡಿದ ಬೊಮ್ಮಾಯಿ, ‘ಮುಕುಲ್ ರೋಹಟಗಿ ಅವರು ಕರ್ನಾಟಕದ ಪರವಾಗಿ ಸಮರ್ಥವಾಗಿ ವಾದ ಮಾಡುವ ಭರವಸೆ ಇದೆ. ಗಡಿ ವಿವಾದದ ಎಲ್ಲ ಆಯಾಮಗಳನ್ನು ರೋಹಟಗಿ ಅವರಿಗೆ ನಮ್ಮ ಅಡ್ವೊಕೇಟ್ ಜನರಲ್‌ ವಿವರಿಸಿದ್ದಾರೆ. ನಾನು ಗಡಿ ವಿವಾದದ ಕಾನೂನಾತ್ಮಕ ಹಿನ್ನೆಲೆ ಕುರಿತು ರೋಹಟಗಿ ಅವರಿಗೆ ವಿವರಣೆ ನೀಡಿದ್ದೇನೆ. ಸುಪ್ರೀಂ ಕೋರ್ಟ್‌ನಲ್ಲಿ ಸಮರ್ಥ ವಾದ ಮಂಡಿಸಲು ಎಲ್ಲ ರೀತಿಯ ಸಿದ್ಧತೆ ನಡೆದಿದೆ’ ಎಂದು ಅವರು ಹೇಳಿದರು. 

ಮಹಾರಾಷ್ಟ್ರದ ಜತ್ ತಾಲ್ಲೂಕಿನ ಹಲವು ಗ್ರಾಮಗಳ ಗ್ರಾಮಸ್ಥರು ಕರ್ನಾಟಕಕ್ಕೆ ಸೇರುವ ಸಂಬಂಧ ಮುಖ್ಯಮಂತ್ರಿ ಭೇಟಿಗೆ ಅವಕಾಶ ಕೋರಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಹಳ್ಳಿಗಳು ಸೇರ್ಪಡೆಯಾಗಲು ನಿಯಮಗಳಿವೆ. ಈ ಸಮಸ್ಯೆ ಇಂದು ನಿನ್ನೆಯದಲ್ಲ. ಸರಿಯಾದ ಸೌಲಭ್ಯ ದೊರಕದ ಕಾರಣ ಅವರು ಬಹಳಷ್ಟು ವರ್ಷಗಳಿಂದ ಈ ಹೇಳಿಕೆ ನೀಡುತ್ತಿದ್ದಾರೆ. ಆದರೆ, ಈ ವಿಚಾರ ಸುಪ್ರೀಂ ಕೋರ್ಟ್‌ನಲ್ಲಿದೆ. ಸರ್ವ ಪಕ್ಷ ಸಭೆ ಕರೆದು ಚರ್ಚೆ ಮಾಡಲಾಗುವುದು. ಕಾನೂನು ಸಲಹೆ ಪಡೆದು ಮುಂದುವರಿಯಲಾಗುವುದು’ ಎಂದರು.

‘ಗಡಿ ವಿವಾದದ ಬಗ್ಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ರಾಜಕೀಯ ಹೇಳಿಕೆ ನೀಡುತ್ತಿ
ದ್ದಾರೆ. ಸಿದ್ದರಾಮಯ್ಯ ಸರ್ಕಾರ ಇದ್ದಾಗಲೇ ಈ ಗ್ರಾಮಗಳಿಗೆ ಕುಡಿಯುವ ‌ನೀರು ನೀಡುವ ನಿರ್ಣಯ ಮಾಡಿದ್ದರು. ಅವರು ಯಾಕೆ ಗ್ರಾಮಗಳನ್ನು ಸೇರಿಸಿಕೊಂಡಿಲ್ಲ’ ಎಂದು ಅವರು ಪ್ರಶ್ನಿಸಿದರು. 

ಮಹಾರಾಷ್ಟ್ರದಲ್ಲಿ ರಾಜ್ಯ ಸಾರಿಗೆ ಸಂಸ್ಥೆ ಬಸ್ ಮೇಲೆ ದಾಳಿಯಾಗಿರುವ ಬಗ್ಗೆ ಪ್ರತಿಕ್ರಿಯಿಸಿ, ‘ಮಹಾರಾಷ್ಟ್ರ ಗೃಹ ಇಲಾಖೆಯ ಹಿರಿಯ ಅಧಿಕಾರಿಗಳ ಜತೆಗೆ ನಮ್ಮ ರಾಜ್ಯದ ಅಧಿಕಾರಿಗಳು ಮಾತನಾಡಿದ್ದಾರೆ. ಈಗ ಪರಿಸ್ಥಿತಿ ನಿಯಂತ್ರಣದಲ್ಲಿದೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು