ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಕದ ತಟ್ಟುತ್ತಿರುವ ವಿನಯ್‌ ಕುಲಕರ್ಣಿ

ಶೆಟ್ಟರ್‌, ಜೋಶಿ ಸಂಪರ್ಕಿಸದೇ ಮುಂದುವರಿದಿದೆ ಪ್ರಯತ್ನ!
Last Updated 5 ಅಕ್ಟೋಬರ್ 2020, 19:31 IST
ಅಕ್ಷರ ಗಾತ್ರ

ನವದೆಹಲಿ: ಕಾಂಗ್ರೆಸ್‌ ಮುಖಂಡ, ಮಾಜಿ ಸಚಿವ ವಿನಯ್‌ ಕುಲಕರ್ಣಿ ಬಿಜೆಪಿ ಕದ ತಟ್ಟುತ್ತಿದ್ದಾರೆಯೇ?

ಈ ಪ್ರಶ್ನೆಗೆ ದೆಹಲಿ ಹಾಗೂ ಹುಬ್ಬಳ್ಳಿ– ಧಾರವಾಡದ ಬಿಜೆಪಿ ಮೂಲಗಳಿಂದಲೇ ‘ಹೌದು’ ಎಂಬ ಉತ್ತರ ದೊರೆಯುತ್ತಿದೆ.

ಜಿಲ್ಲಾ ಪಂಚಾಯ್ತಿ ಸದಸ್ಯರಾಗಿದ್ದ ಯೋಗೇಶ ಗೌಡ ಕೊಲೆ ಪ್ರಕರಣದ ತನಿಖೆಯನ್ನುಕೇಂದ್ರ ತನಿಖಾ ಸಂಸ್ಥೆ (ಸಿಬಿಐ)ಯು ತೀವ್ರಗೊಳಿಸಿರುವುದು ಧಾರವಾಡದ ವಿನಯ್‌ ಕುಲಕರ್ಣಿಅವರು ಕೇಂದ್ರ ಮತ್ತು ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿಗೆ ಸೇರಬಯಸಲು ಪ್ರಮುಖ ಕಾರಣ. ಈ ನಿಟ್ಟಿನಲ್ಲಿ ಎರಡು ತಿಂಗಳಿಂದ ಪ್ರಯತ್ನ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಬಿಜೆಪಿಯ ಬೆಂಗಳೂರಿನ ಮುಖಂಡರೊಬ್ಬರೊಂದಿಗೆ ರಾಷ್ಟ್ರ ರಾಜಧಾನಿಯಲ್ಲಿ ಕಳೆದ 3 ದಿನಗಳಿಂದ ಬೀಡು ಬಿಟ್ಟಿರುವ ವಿನಯ್‌, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಗೃಹ ಸಚಿವ ಅಮಿತ್‌ ಶಾ ಹಾಗೂ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿ.ಲ್‌. ಸಂತೋಷ್ ಮತ್ತಿತರರ ಭೇಟಿಗೆ ಪ್ರಯತ್ನ ನಡೆಸಿದ್ದಾರೆ ಎಂದು ಉನ್ನತ ಮೂಲಗಳು ‘ಪ್ರಜಾವಾಣಿ’ ಗೆ ಖಚಿತಪಡಿಸಿವೆ.

‘ವಿನಯ್‌ ಕುಲಕರ್ಣಿ ಅವರು ಈಗಾಗಲೇ ದೆಹಲಿಯಲ್ಲಿ ಪಕ್ಷದ ಇಬ್ಬರು ಹಿರಿಯ ಮುಖಂಡರನ್ನು ಭೇಟಿ ಮಾಡಿ ಮೊದಲ ಹಂತದ ಮಾತುಕತೆ ನಡೆಸಿದ್ದಾರೆ. ಅಮಿತ್‌ ಶಾ ಅವರ ಭೇಟಿಗೆ ಪ್ರಯತ್ನ ನಡೆಸಿದ್ದು ಫಲ ನೀಡಿಲ್ಲ ಎಂಬ ವಿಷಯ ಗೊತ್ತಾಗಿದೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಪಕ್ಷದ ರಾಜ್ಯ ಮುಖಂಡರೊಬ್ಬರು ವಿವರಿಸಿದರು.

ಪಕ್ಷ ಸೇರ್ಪಡೆಗೆ ಆಯಾ ಜಿಲ್ಲೆಗಳ ಮುಖಂಡರ ಮೂಲಕ ಪ್ರಯತ್ನಿಸುವುದು ವಾಡಿಕೆ. ಆದರೆ, ಕೇಂದ್ರ ಮತ್ತು ರಾಜ್ಯದ ಸಚಿವರೂ, ಪಕ್ಷದ ಮುಖಂಡರೂ ಆಗಿರುವ ಹುಬ್ಬಳ್ಳಿಯ ಪ್ರಲ್ಹಾದ್ ಜೋಶಿ ಹಾಗೂ ಜಗದೀಶ ಶೆಟ್ಟರ್‌ ಅವರನ್ನು ಸಂಪರ್ಕಿಸದ ವಿನಯ್‌, ಬೇರೊಬ್ಬರ ಮೂಲಕ ಪ್ರಯತ್ನ ಮುಂದುವರಿಸಿದ್ದಾರೆ ಎಂಬುದು ಗುಟ್ಟಾಗಿ ಉಳಿದಿಲ್ಲ ಎಂದು ಪಕ್ಷದ ಇನ್ನೊಬ್ಬ ಹಿರಿಯ ನಾಯಕರು ತಿಳಿಸಿದರು.

‘ಸ್ಥಳೀಯ ಮುಖಂಡರನ್ನೇ ಸಂಪರ್ಕಿಸದೆ ರಾಷ್ಟ್ರೀಯ ಪಕ್ಷವೊಂದನ್ನು ಸೇರಲು ಯಾರಾದರೂ ಪ್ರಯತ್ನ ನಡೆಸುತ್ತಾರೆ ಎಂದಾದರೆ, ಆ ಪಕ್ಷವೂ ಅವರನ್ನು ಸೇರಿಸಿಕೊಳ್ಳಲು ಆಸಕ್ತಿ ತಾಳಿರುವ ಸಾಧ್ಯತೆಗಳೂ ಇರುತ್ತವೆ’ ಎಂದೂ ಅವರು ಒತ್ತಿಹೇಳಿದರು.

‘ಬಿಜೆಪಿ ಸೇರ್ಪಡೆ ಕನಸಿನ ಮಾತು’

‘ಜಿಲ್ಲಾ ಪಂಚಾಯ್ತಿಯ ಬಿಜೆಪಿ ಸದಸ್ಯರಾಗಿದ್ದ ಯೋಗೇಶಗೌಡ ಕೊಲೆ ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರವೇ ಸಿಬಿಐಗೆ ವಹಿಸಿದೆ. ಹೈಕೋರ್ಟ್‌ನ ಧಾರವಾಡ ಪೀಠ ತನಿಖೆಗೆ ತಡೆ ನೀಡಿದ್ದನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದ ಸಿಬಿಐ ಪರ ಸ್ವತಃ ಸಾಲಿಸಿಟರ್‌ ಜನರಲ್‌ ವಾದ ಮಂಡಿಸಿದ್ದರು. ಹಾಗಾಗಿ ತನಿಖೆ ಮುಂದುವರಿಸಲು ಅನುಮತಿ ದೊರೆತಿದೆ. ರಾಜಕೀಯ ಮಹತ್ವ ಇದ್ದುದರಿಂದಲೇ ಈ ಪ್ರಕರಣದಲ್ಲಿ ಸಾಲಿಸಿಟರ್‌ ಜನರಲ್‌ ವಾದಿಸಿದ್ದಾರೆ. ಇದು ಎಲ್ಲರಿಗೂ ಗೊತ್ತಿರುವ ವಿಷಯ. ಪ್ರಕರಣದಲ್ಲಿ ಭಾಗಿಯಾದವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದು ಕನಸಿನ ಮಾತು’ ಎಂಬುದು ಬಿಜೆಪಿಯ ಹಿರಿಯರೊಬ್ಬರ ಅಭಿಪ್ರಾಯ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ಸಂಬಂಧಿಗಳು, ಆಪ್ತರ ಮನೆಗಳು, ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ) ಮತ್ತು ಸಿಬಿಐ ದಾಳಿ ನಡೆಸಿದ್ದರ ಬೆನ್ನಲ್ಲೇ ವಿನಯ್ ಕುಲಕರ್ಣಿ ಬಿಜೆಪಿ ಸೇರಲು ಮುಂದಾಗಿರುವುದು ಧಾರವಾಡ ಜಿಲ್ಲೆಯಾದ್ಯಂತರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT