ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಂಪೇಗೌಡ ಜಯಂತಿ 3 ದಿನ ‘ಬೆಂಗಳೂರು ಹಬ್ಬ’ವಾಗಿ ಆಚರಣೆ: ಡಿಸಿಎಂ ಅಶ್ವತ್ಥನಾರಾಯಣ

ಅಂಚೆ ಲಕೋಟೆ ಲೋಕಾರ್ಪಣೆ l ಅಧ್ಯಯನ ಕೇಂದ್ರ ನಿರ್ಮಾಣ ಕಾಮಗಾರಿಗೆ ಚಾಲನೆ
Last Updated 27 ಜೂನ್ 2021, 20:15 IST
ಅಕ್ಷರ ಗಾತ್ರ

ಬೆಂಗಳೂರು: ‘ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ಮುಂದಿನ ವರ್ಷದಿಂದ ಮೂರು ದಿನ ‘ಬೆಂಗಳೂರು ಹಬ್ಬ’ವಾಗಿ ಆಚರಿಸಲಾಗುವುದು’ ಎಂದು ನಾಡಪ್ರಭು ಕೆಂಪೇಗೌಡ ಪಾರಂಪರಿಕ ತಾಣ ಅಭಿವೃದ್ಧಿ ಪ್ರಾಧಿಕಾರದ ಉಪಾಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ ಅಶ್ವತ್ಥನಾರಾಯಣ ತಿಳಿಸಿದರು.

ಕೆಂಪೇಗೌಡರ 512ನೇ ಜಯಂತಿ ಅಂಗವಾಗಿ ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಭಾನುವಾರ ನಡೆದ ಅಂಚೆ ಲಕೋಟೆ ಲೋಕಾರ್ಪಣೆ ಮತ್ತು ಅಧ್ಯಯನ ಕೇಂದ್ರ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕೆಂಪೇಗೌಡರ ಜಯಂತಿಯನ್ನು ಪ್ರತಿ ವರ್ಷ ಜೂನ್ 27ರಂದು ಆಚರಿಸಲಾಗುತ್ತದೆ. ಮುಂದಿನ ವರ್ಷದಿಂದ ಜೂನ್ 26, 27 ಮತ್ತು 28ರಂದು ‘ಬೆಂಗಳೂರು ಹಬ್ಬ'ದ ಹೆಸರಿನಲ್ಲಿ ಆಚರಿಸಲಾಗುವುದು. ಈ ದಿನಗಳಲ್ಲಿ ಬೆಂಗಳೂರಿನ ಪಾರಂಪರಿಕ ತಾಣ, ಕಟ್ಟಡಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಿ ವಿಶ್ವವಿಖ್ಯಾತ ಹಬ್ಬದ ಮಾದರಿಯಲ್ಲಿ ಆಚರಿಸಲಾಗುವುದು’ ಎಂದರು.

‘ಬೆಂಗಳೂರು ಆಂತರರಾಷ್ಟ್ರೀಯ ವಿಮಾನ ನಿಲ್ದಾಣ ಬಳಿ 23 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗುತ್ತಿರುವ ಕೆಂಪೇಗೌಡರ 108 ಎಡಿ ಎತ್ತರದ ಲೋಹದ ಪ್ರತಿಮೆಯನ್ನು ಮುಂದಿನ ವರ್ಷದ ಫೆಬ್ರವರಿ ಅಥವಾ ಮಾರ್ಚ್‌ನಲ್ಲಿ ಲೋಕಾರ್ಪಣೆ ಮಾಡಲಾಗುವುದು. ಕೋವಿಡ್‌ ಕಾರಣದಿಂದ ಈ ವರ್ಷ ಲೋಕಾರ್ಪಣೆ ಸಾಧ್ಯವಾಗಿಲ್ಲ. ನೋಯಿಡಾದಲ್ಲಿ ಪ್ರತಿಮೆ ನಿರ್ಮಾಣ ಭರದಿಂದ ನಡೆಯುತ್ತಿದೆ’ ಎಂದು ವಿವರಿಸಿದರು.

ಕೆಂಪೇಗೌಡ ಪ್ರವಾಸೋದ್ಯಮ ಸರ್ಕ್ಯೂಟ್: ‘ಬೆಂಗಳೂರು ನಗರದ ಸುತ್ತಮುತ್ತ ಈಗಲೂ 15 ಸಾವಿರ ಹೆಕ್ಟೇರ್‌ ದಟ್ಟ ಅರಣ್ಯವಿದೆ. ಅದರ ಜತೆಗೆ ರಾಜಧಾನಿಯ ಸುತ್ತಮುತ್ತಲಿನಲ್ಲಿ ಕೆಂಪೇಗೌಡರಿಗೆ ಸಂಬಂಧಿಸಿದ 46 ಪಾರಂಪರಿಕ ತಾಣಗಳಿವೆ. ಎಲ್ಲವನ್ನೂ ಅನುಸಂಧಾನಗೊಳಿಸಿ ಪ್ರವಾಸೋದ್ಯಮ ಸರ್ಕ್ಯೂಟ್ ಮಾಡಲು ಉದ್ದೇಶಿಸಲಾಗಿದೆ. ಇನ್ನೆರಡು ವರ್ಷದೊಳಗೆ ಈ ಯೋಜನೆಯನ್ನು ಜಾರಿಗೆ ತರಲಾಗುವುದು’ ಎಂದು ಅವರು ಹೇಳಿದರು.

‘ಕೆಂಪೇಗೌಡರ ವೀರ ಸಮಾಧಿ ಇರುವ ಮಾಗಡಿ ತಾಲ್ಲೂಕಿನ ಕೆಂಪಾಪುರವನ್ನು ಜಾಗತಿಕ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಈಗಾಗಲೇ ಟೆಂಡರ್‌ ಪ್ರಕ್ರಿಯೆ ಮುಗಿದು ಭೂಸ್ವಾಧೀನ ನಡೆಯುತ್ತಿದೆ. ಮುಂದಿನ ವರ್ಷದ ಜಯಂತಿ ಕಾರ್ಯಕ್ರಮವನ್ನು ಸಮಾಧಿಯ ಎದುರು ಆಚರಿಸುವ ಸಂಕಲ್ಪ ಸರ್ಕಾರದ್ದು’ ಎಂದರು.

ಜ್ಞಾನಭಾರತಿಯಲ್ಲಿ ನಿರ್ಮಾಣ ಆಗುತ್ತಿರುವ ಕೆಂಪೇಗೌಡ ಅಧ್ಯಯನ ಕೇಂದ್ರದ ನಿರ್ಮಾಣ ಕಾಮಗಾರಿಗೆ ವರ್ಚುಯಲ್‌ ಮೂಲಕ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಚಾಲನೆ ನೀಡಿ, ನಾಡಪ್ರಭುಗಳ ಅಂಚೆ ಲಕೋಟೆ ಲೋಕಾರ್ಪಣೆ ಮಾಡಿದರು.

ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ, ಬ್ರಹ್ಮಗುಂಡ ಸ್ಫಟಿಕಪುರಿ ಸಂಸ್ಥಾನದ ನಂಜಾವಧೂತ ಸ್ವಾಮೀಜಿ, ವಿಶ್ವ ಒಕ್ಕಲಿಗರ ಮಠದ ಚಂದ್ರಶೇಖರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಸಚಿವರಾದ ಕೆ.ಸಿ. ನಾರಾಯಣ ಗೌಡ, ಗೋಪಾಲಯ್ಯ, ಶಾಸಕರಾದ ಎಸ್.‌ಆರ್.‌ವಿಶ್ವನಾಥ್‌, ಮಂಜುನಾಥ್‌, ರಿಜ್ವಾನ್‌ ಅರ್ಷದ್‌, ವೈ.ಎ.ನಾರಾಯಣ ಸ್ವಾಮಿ, ಸಂಸದ ಪಿ.ಸಿ.ಮೋಹನ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT