ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಕೆಆರ್‌ಟಿಸಿ ನೇಮಕಾತಿ : ಅಭ್ಯರ್ಥಿ ಒಳ ಉಡುಪಿನಲ್ಲಿ 5 ಕೆ.ಜಿ ಕಬ್ಬಿಣದ ಕಲ್ಲು!

Last Updated 10 ಫೆಬ್ರುವರಿ 2023, 10:06 IST
ಅಕ್ಷರ ಗಾತ್ರ

ಕಲಬುರಗಿ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ(ಕೆಕೆಆರ್‌ಟಿಸಿ) ಚಾಲಕ ಕಂ ನಿರ್ವಾಹಕ ನೇಮಕಾತಿಯ ದೇಹದಾರ್ಢ್ಯ ಪರೀಕ್ಷೆಯಲ್ಲಿ ನಿಗದಿತ ತೂಕ ತೋರಿಸಲು ಒಳ ಉಡುಪುಗಳಲ್ಲಿ ಕಬ್ಬಿಣದ ಕಲ್ಲು, ಕಬ್ಬಿಣದ ತುಂಡುಗಳು, ಸೈಕಲ್‌ ಚೈನ್‌ ಇರಿಸಿಕೊಂಡ ಬಂದ ಅಭ್ಯರ್ಥಿಗಳನ್ನು ಕಪ್ಪುಪಟ್ಟಿಗೆ ಸೇರಿಸಲಾಗಿದೆ.

ಕೆಕೆಆರ್‌ಟಿಸಿಯು 1,619 ಚಾಲಕ ಕಂ ನಿರ್ವಾಹಕ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆಸುತ್ತಿದೆ. ಸುಮಾರು 39 ಸಾವಿರ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದು, ಸಂಸ್ಥೆಯ ಕೇಂದ್ರ ಕಚೇರಿ ಸಮೀಪ ಡಿಸೆಂಬರ್‌ನಿಂದ ದೇಹದಾರ್ಢ್ಯ ಪರೀಕ್ಷೆ ನಡೆಯುತ್ತಿದೆ.

'ದೇಹದಾರ್ಢ್ಯ ಪರೀಕ್ಷೆಯಲ್ಲಿ ಅಕ್ರಮವಾಗಿ ಪಾಸಾಗಲು ಕಡಿಮೆ ತೂಕದ ಅಭ್ಯರ್ಥಿಯೊಬ್ಬ 5 ಕೆ.ಜಿ.ಯ ಕಬ್ಬಿಣದ ಕಲ್ಲನ್ನು ಒಳುಡುಪಿನಲ್ಲಿ ಇರಿಸಿಕೊಂಡಿದ್ದ. ಮತ್ತೆ ಕೆಲವರು ಕಬ್ಬಿಣ ತುಂಡುಗಳನ್ನು ತೊಡೆಗೆ, ಸೈಕಲ್‌ ಚೈನ್‌ಗಳನ್ನು ಸೊಂಟಕ್ಕೆ ಕಟ್ಟಿಕೊಂಡು ಬಂದಿದ್ದರು. ನೋಡಲು ನೀಳಕಾಯದಂತೆ ಇದ್ದು, ನಡಿಗೆಯಲ್ಲಿ ಅನುಮಾನ ಬಂದು ತಪಾಸಣೆ ಮಾಡಿದಾಗ ಸುಮಾರು 5 ಅಭ್ಯರ್ಥಿಗಳು ಸಿಕ್ಕಿಬಿದ್ದಿದ್ದಾರೆ. ನೇಮಕಾತಿಯಿಂದ ಅವರನ್ನು ಕಪ್ಪುಪಟ್ಟಿಗೆ ಸೇರಿಸಿ, ಎಚ್ಚರಿಕೆ ನೀಡಿ ಕಳುಹಿಸಲಾಗಿದೆ’ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎಂ.ರಾಚಪ್ಪ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ಈ ಹಿಂದೆ ನಡೆದಿದ್ದ ನೇಮಕಾತಿಗಳಲ್ಲಿ ಇಂತಹ ಅಕ್ರಮ ಚಟುವಟಿಕೆಗಳನ್ನು ಕಂಡುಬಂದಿದ್ದವು ಎಂದು ಹಿರಿಯ ಸಿಬ್ಬಂದಿ ಹೇಳಿದ್ದರು. ಹೀಗಾಗಿ, ಪಾರದರ್ಶಕ ನೇಮಕಾತಿಗೆ ನುರಿತ ಅಧಿಕಾರಿಗಳನ್ನು ನಿಯೋಜನೆ ಮಾಡಲಾಗಿತ್ತು. ನೇಮಕಾತಿ ಕೇಂದ್ರದಲ್ಲಿ ಸಿಸಿಟಿವಿ ಕ್ಯಾಮೆರಾ ಸಹ ಅಳವಡಿಸಿ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳ ಚಲನವಲನಗಳನ್ನು ಗಮನಿಸಲಾಗುತ್ತಿದೆ. ಅನುಮಾನ ಬಂದವರನ್ನು ಹೆಚ್ಚಿನ ತಪಾಸಣೆಗೆ ಒಳಪಡಿಸಲಾಗುತ್ತಿದೆ’ ಎಂದರು.

‘ಕೆಕೆಆರ್‌ಟಿಸಿ ಅಧಿಕಾರಿಗಳು ಕಬ್ಬಿಣದ ತುಂಡುಗಳು, ಸರಪಳಿಗಳು, ರಾಡ್ ಮತ್ತು ಕಲ್ಲುಗಳಂತಹ ಸಾಧನಗಳನ್ನು ಅತ್ಯಾಧುನಿಕ ಯಂತ್ರಗಳನ್ನು ಬಳಸಿ ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಡಿಜಿಟಲ್ ಪ್ರಕ್ರಿಯೆಯ ಮೂಲಕ ಅಭ್ಯರ್ಥಿಗಳ ತೂಕ ಮತ್ತು ಎತ್ತರವನ್ನು ದಾಖಲಿಸಿಕೊಳ್ಳಲಾಗುತ್ತಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT