ಕೆಪಿಎಸ್‌ಸಿ: ಸಕ್ರಮಕ್ಕೆ ಹೈಕೋರ್ಟ್ ತಡೆ

ಬೆಂಗಳೂರು: ಕೆಪಿಎಸ್‌ಸಿ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳಿಗೆ 2011ನೇ ಸಾಲಿನಲ್ಲಿ ನಡೆಸಲಾಗಿದ್ದ ಪರೀಕ್ಷೆಯಲ್ಲಿ ಅಂತಿಮ ಪಟ್ಟಿಯಲ್ಲಿದ್ದ 362 ಅಭ್ಯರ್ಥಿಗಳ ಆಯ್ಕೆಯನ್ನು ಸಿಂಧುಗೊಳಿಸಿ; ಅವರಿಗೆ ನೇಮಕಾತಿ ಆದೇಶ ನೀಡುವ ಸಂಬಂಧದ, ‘ಕರ್ನಾಟಕ ಸಿವಿಲ್ ಸೇವೆಗಳ (2011ನೇ ಸಾಲಿನ ಗೆಜೆಟೆಡ್ ಪ್ರೊಬೇಷನರಿ ಆಯ್ಕೆ ಮತ್ತು ನೇಮಕಾತಿಯ ಸಿಂಧುಗೊಳಿಸುವಿಕೆ) ಕಾಯ್ದೆ’ ಜಾರಿಗೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.
ಈ ಸಂಬಂಧ ಎ.ಟಿ.ಶ್ರೀನಿವಾಸ್ ಮತ್ತಿತರರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಜಿ.ನರೇಂದರ್ ನೇತೃತ್ವದ ವಿಭಾಗೀಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿ, ‘ಕಾಯ್ದೆ ಜಾರಿಗೆ ಸಂಬಂಧಿಸಿದಂತೆ ಇದೇ 25ರವರೆಗೆ ಯಥಾಸ್ಥಿತಿ ಕಾಯ್ದುಕೊಳ್ಳಬೇಕು’ ಎಂದು ಸರ್ಕಾರಕ್ಕೆ ಆದೇಶಿಸಿದೆ.
ಕೆಪಿಎಸ್‌ಸಿ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳಿಗೆ 2011ನೇ ಸಾಲಿನಲ್ಲಿ ನಡೆಸಲಾಗಿದ್ದ ಪರೀಕ್ಷೆಯಲ್ಲಿ ಅಂತಿಮ ಪಟ್ಟಿಯಲ್ಲಿದ್ದ 362 ಅಭ್ಯರ್ಥಿಗಳ ಆಯ್ಕೆಯನ್ನು ಸಿಂಧುಗೊಳಿಸಿ ಅವರಿಗೆ ನೇಮಕಾತಿ ಆದೇಶ ನೀಡುವ ಸಂಬಂಧ ಕರ್ನಾಟಕ ಸಿವಿಲ್ ಸೇವೆಗಳ (2011ನೇ ಸಾಲಿನ ಗೆಜೆಟೆಡ್ ಪ್ರೊಬೇಷನರಿ ಆಯ್ಕೆ ಮತ್ತು ನೇಮಕಾತಿ ಸಿಂಧುಗೊಳಿಸುವಿಕೆ) ಮಸೂದೆಗೆ ವಿಧಾನಮಂಡಲದ ಉಭಯ ಸದನಗಳಲ್ಲಿ ಕಳೆದ ಫೆಬ್ರುವರಿಯಲ್ಲಿ ಅನುಮೋದನೆ ಪಡೆಯಲಾಗಿತ್ತು.
ಇದಕ್ಕೆ ರಾಜ್ಯಪಾಲರು ಕಳೆದ ವಾರವಷ್ಟೇ ಅಂಕಿತ ಹಾಕಿದ್ದರು.
‘ಸಿಐಡಿ ವರದಿ ಆಧರಿಸಿ ಹೈಕೋರ್ಟ್ ನೇಮಕಾತಿ ರದ್ದುಗೊಳಿಸಿತ್ತು. ಇದನ್ನು ಸುಪ್ರೀಂಕೋರ್ಟ್ ಎತ್ತಿಹಿಡಿದಿದೆ. ಆದರೂ, ನ್ಯಾಯಾಲಯದ ಆದೇಶ ಧಿಕ್ಕರಿಸಿ 362 ಅಭ್ಯರ್ಥಿಗಳ ಅಕ್ರಮ ನೇಮಕಾತಿಯನ್ನು ಸಕ್ರಮಗೊಳಿಸಲು ಸರ್ಕಾರ ಕಾಯ್ದೆ ರೂಪಿಸಿದೆ. ಇದು ಕಾನೂನುಬಾಹಿರ. ಆದ್ದರಿಂದ, ಅದನ್ನು ರದ್ದುಗೊಳಿಸಬೇಕು’ ಎಂದು ಅರ್ಜಿದಾರರು ಕೋರಿದ್ದಾರೆ.
ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಅರ್ಜಿದಾರರು ಈ ಮೊದಲು ಕೆಎಟಿಯಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ, ಕೆಎಟಿ ಯಾವುದೇ ಮಧ್ಯಂತರ ಆದೇಶ ನೀಡಿರಲಿಲ್ಲ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.