ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಪಿಟಿಸಿಎಲ್‌ ಪರೀಕ್ಷಾ ಅಕ್ರಮ: 9 ಮಂದಿ ಬಂಧನ

ರಾಜ್ಯದ ವಿವಿಧ ಕೇಂದ್ರಗಳಲ್ಲೂ ಅಕ್ರಮ ನಡೆದ ಸಂದೇಹ, ಅಕ್ರಮಕ್ಕೆ ವಿನೂತನ ಮಾರ್ಗ ಬಳಸಿದ ಆರೋಪಿಗಳು
Last Updated 22 ಆಗಸ್ಟ್ 2022, 15:51 IST
ಅಕ್ಷರ ಗಾತ್ರ

ಬೆಳಗಾವಿ: ಕೆಪಿಟಿಸಿಎಲ್‌ ಕಿರಿಯ ಸಹಾಯಕರ ನೇಮಕಾತಿ ಪರೀಕ್ಷೆಯಲ್ಲಿ ನಡೆದ ಅಕ್ರಮಕ್ಕೆ ಸಂಬಂಧಿಸಿದಂತೆ, ಪೊಲೀಸರು ಒಟ್ಟು 9 ಮುಖ್ಯ ಆರೋಪಿಗಳನ್ನು ಬಂಧಿಸಿದ್ದಾರೆ. ತಲೆಮರೆಸಿಕೊಂಡ ಇನ್ನೂ ನಾಲ್ವರ ಹುಡುಕಾಟ ನಡೆದಿದೆ. ಸದ್ಯಕ್ಕೆ ಎರಡು ಪರೀಕ್ಷಾ ಕೇಂದ್ರಗಳ ಅಕ್ರಮ ಬಯಲಿಗೆ ಬಂದಿದ್ದು, ಇನ್ನೂ ಹಲವು ಕಡೆ ನಡೆದಿರುವ ಸಾಧ್ಯತೆ ಇದೆ ಎಂದು ಪೊಲೀಸರು ಸಂದೇಹ ವ್ಯಕ್ತ‍ಪಡಿಸಿದ್ದಾರೆ.

ಈ ಬಗ್ಗೆ ನಗರದಲ್ಲಿ ಸೋಮವಾರ ಮಾಹಿತಿ ನೀಡಿದ ಜಿಲ್ಲಾ ಪೊಲಿಸ್‌ ವರಿಷ್ಠಾಧಿಕಾರಿ ಡಾ.ಸಂಜೀವ ಪಾಟೀಲ, ‘ಗೋಕಾಕ ನಗರದ ಜೆಎಸ್‌ಎಸ್‌ ಪದವಿಪೂರ್ವ ಕಾಲೇಜು ಹಾಗೂ ಗದಗ ನಗರದ ಮುನ್ಸಿಪಲ್‌ ಕಾಲೇಜಿನಲ್ಲಿ ನಡೆದ ಅಕ್ರಮಗಳು ಖಚಿತಪಟ್ಟಿವೆ. ಅಥಣಿಯೂ ಸೇರಿದಂತೆ ವಿವಿಧ ಕೇಂದ್ರಗಳಲ್ಲಿ ಅಕ್ರಮ ನಡೆದ ಅನುಮಾನಗಳಿವೆ’ ಎಂದರು.

ಬಂಧಿತರಲ್ಲಿ ಮೂವರು ಅಭ್ಯರ್ಥಿಗಳು, ಪ್ರಶ್ನೆ ಪತ್ರಿಕೆ ಬಹಿರಂಗ ಮಾಡಿದವರು, ಉತ್ತರ ಸಿದ್ಧಪಡಿಸಿ ಹೇಳಿದವರು, ಇದಕ್ಕೆ ಅನುಕೂಲ ಮಾಡಿಕೊಟ್ಟವರೂ ಸೇರಿದ್ದಾರೆ. ಇವರಲ್ಲಿ ಒಬ್ಬ ಸರ್ಕಾರಿಶಾಲೆ ಶಿಕ್ಷಕ ಹಾಗೂ ಕೆಲವರು ಸರ್ಕಾರಿ ನೌಕರಿಯಲ್ಲಿದ್ದಾರೆ. ಗೋಕಾಕ ನಗರದಲ್ಲಿ ವೃತ್ತಿಪರ ತರಬೇತಿ ನೀಡುವ ಕೇಂದ್ರದವರೂ ಸೇರಿದ್ದಾರೆ.

ಆ.7ರಂದು ಗೋಕಾಕದಲ್ಲಿ ನಡೆದ ಪರೀಕ್ಷೆಯಲ್ಲಿ ಅಭ್ಯರ್ಥಿಯೊಬ್ಬ ಸ್ಮಾರ್ಟ್‌ವಾಚ್‌ ಬಳಸಿ ಪ್ರಶ್ನೆಪತ್ರಿಕೆ ಫೋಟೊ ತೆಗೆದು ಟೆಲಿಗ್ರಾಮ್‌ ಆ್ಯಪ್‌ ಮೂಲಕ ಹೊರಗೆ ಕಳುಹಿಸಿದ್ದಾನೆ ಎಂದು ಸಚಿನ್ ಎಂಬ ಇನ್ನೊಬ್ಬ ಅಭ್ಯರ್ಥಿ ದೂರು ನೀಡಿದ್ದರು. ಸಿಸಿಟಿವಿ ಕ್ಯಾಮೆರಾ ಪರಿಶೀಲಿಸಿದಾಗ ಇದು ಖಚಿತಪಟ್ಟಿತು.

ಆರೋಪಿಯು ಸೂಕ್ಷ್ಮವಾದ ಬ್ಲೂಟೂತ್‌ ಡಿವೈಸ್‌ ಅನ್ನು ಕಿವಿಯೊಳಗೆ, ಅದರ ಸಿಮ್‌ ಅನ್ನು ಬಾಯೊಳಗೆ ಇಟ್ಟುಕೊಂಡಿದ್ದ. ಸ್ಮಾರ್ಟ್‌ವಾಚ್‌ ಮೂಲಕ ಸ್ನೇಹಿತರಿಗೆ ಪ್ರಶ್ನೆಪತ್ರಿಕೆಯ ಫೋಟೊ ಕಳುಹಿಸಿದ್ದ. ಹುಕ್ಕೇರಿ ತಾಲ್ಲೂಕಿನ ಶಿರಹಟ್ಟಿ (ಬಿ.ಕೆ) ಗ್ರಾಮದ ತೋಟದ ಮನೆಯಲ್ಲಿ ಕುಳಿತ ಈತನ ಸ್ನೇಹಿತರು ಬ್ಲೂಟೂತ್‌ ಮೂಲಕ ಉತ್ತರ ನೀಡಿದ್ದರು. ಈ ಎಲ್ಲರನ್ನೂ ಬಂಧಿಸಲಾಗಿದೆ ಎಂದು ಎಸ್ಪಿ ತಿಳಿಸಿದರು.

ಶಿರಹಟ್ಟಿ ತೋಟದ ಮನೆಯನ್ನು ಜಾಲಾಡಿದಾಗ ಅಕ್ರಮಕ್ಕೆ ಬಳಸಿದ ಉಪಕರಣಗಳು ಸಿಕ್ಕವು. ಅವುಗಳೊಂದಿಗೆ ಒಂದು ಪ್ರಶ್ನೆ ಪತ್ರಿಕೆಯ ನಕಲು ‍ಪ್ರತಿಯೂ ಸಿಕ್ಕಿತು.‌ ಅದರ ಮೂಲೆಯಲ್ಲಿ ಒಂದು ‍ಪರೀಕ್ಷಾ ಕೇಂದ್ರದ ನೋಂದಣಿ ಸಂಖ್ಯೆ ಇತ್ತು. ಅದರ ಜಾಲ ಹಿಡಿದು ಹೋದಾಗ; ಅದು ಗದಗ ನಗರದ ಮುನ್ಸಿಪಲ್‌ ಕಾಲೇಜಿನಲ್ಲಿ ನೀಡಿದ್ದ ಪ್ರಶ್ನೆ ಪತ್ರಿಕೆ ಎಂದು ಖಚಿತವಾಯಿತು. ತಕ್ಷಣ ಅಲ್ಲಿಗೆ ತೆರಳಿದ ಬೆಳಗಾವಿ ಸೈಬರ್‌ ಕ್ರೈಂ ಪೊಲೀಸರು ಅಕ್ರಮ ಎಸಗಿದ ಉಪಪ್ರಾಂಶುಪಾಲ ಹಾಗೂ ಅವರ ಮಗನನ್ನು ಭಾನುವಾರ ಬಂಧಿಸಿದ್ದರು.

‘ಪರೀಕ್ಷಾ ಕೇಂದ್ರದ ಮೇಲ್ವಿಚಾರಣೆ ಹೊತ್ತಿದ್ದ ಉಪಪ್ರಾಂಶುಪಾಲ ಹಾಗೂ ಪತ್ರಕರ್ತನ ಸೋಗಿನಲ್ಲಿ ಕೇಂದ್ರದೊಳಗೆ ಹೋಗಿ ಪ್ರಶ್ನೆ ಪತ್ರಿಕೆಯ ಫೋಟೊ ಕ್ಲಿಕ್ಕಿಸಿಕೊಂಡು ಬಂದ ಅವರ ಮಗ ಸಿಕ್ಕಿಬಿದ್ದರು. ಇವರಿಂದ ಇನ್ನೂ ಎಲ್ಲೆಲ್ಲಿಗೆ ಈಗ ಪ್ರಶ್ನೆ ಪತ್ರಿಕೆ ರವಾನೆಯಾಗಿದೆ ಎಂಬ ಬಗ್ಗೆ ತನಿಖೆ ನಡೆದಿದೆ’ ಎಂದು ಎಸ್ಪಿ ತಿಳಿಸಿದರು.

ಬಂಧಿತ ಆರೋಪಿಗಳು

ಬೆಳಗಾವಿ: ಗೋಕಾಕ ತಾಲ್ಲೂಕಿನ ನಾಗನೂರು ಗ್ರಾಮದ ಸಿದ್ದಪ್ಪ ಕೆಂಪಣ್ಣ ಮದಿಹಳ್ಳಿ, ಮಾಲದಿನ್ನಿಯ ಸುನೀಲ ಅಜ್ಜಪ್ಪ ಭಂಗಿ, ಶಿರಹಟ್ಟಿ ಬಿ.ಕೆ. ಗ್ರಾಮದ ಬಸವಣ್ಣಿ ಶಿವಪ್ಪ ಡೊಣವಾಡ, ವೀರನಗಡ್ಡಿಯ ಸಂತೋಷ ಪ್ರಕಾಶ ಮಾಣಗಾವಿ, ಬೆಣಚಿನಮರಡಿಯ ಸಿದ್ಧಪ್ಪ ಕೆಂಚಪ್ಪ ಕೊತ್ತಲ, ಮಾಲದಿನ್ನಿಯ ರೇಣುಕಾ ವಿಠಲ ಜವಾರಿ, ಗದಗ– ಬೆಟಗೇರಿಯ ಅಮರೇಶ ಚಂದ್ರಶೇಖರಯ್ಯ ರಾಜೂರ, ಮಾರುತಿ ಶಂಕರ ಸೋನವಣೆ (ಉಪಪ್ರಾಂಶುಪಾಲ), ಸಮಿತ್‌ಕುಮಾರ ಮಾರುತಿ ಸೋನವಣೆ (ಉಪಪ್ರಾಂಶುಪಾಲರ ಪುತ್ರ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT