ಮಂಗಳವಾರ, ಮೇ 17, 2022
25 °C
ಸಾಲ, ಅಕ್ರಮಗಳಿಂದ ನಷ್ಟದ ಸುಳಿಗೆ ಸಿಲುಕಿದ ಸಂಸ್ಥೆ

ಉಗ್ರಾಣ ನಿಗಮ ಸಿಬ್ಬಂದಿ ವೇತನಕ್ಕೆ ತಡೆ

ವಿ.ಎಸ್‌. ಸುಬ್ರಹ್ಮಣ್ಯ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸಾಲದ ಹೊರೆ ಮತ್ತು ಉಗ್ರಾಣಗಳ ನಿರ್ವಹಣೆಯಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರದ ಕಾರಣದಿಂದ ರಾಜ್ಯ ಉಗ್ರಾಣ ನಿಗಮದ 300 ಅಧಿಕಾರಿಗಳು ಮತ್ತು ಸಿಬ್ಬಂದಿ ವೇತನ ತಡೆ ಹಿಡಿಯಲಾಗಿದೆ.

11 ದಿನಗಳು ಕಳೆದರೂ ಆರ್ಥಿಕ ಸ್ಥಿತಿ ಕುರಿತು ಸಮಜಾಯಿಷಿ ನೀಡಿ, ವೇತನ ಬಿಡುಗಡೆ ಮಾಡಿಸಲು ಸಾಧ್ಯವಾಗದೇ ನಿಗಮದ ಅಧಿಕಾರಿಗಳು ಇಕ್ಕಟ್ಟಿಗೆ ಸಿಲುಕಿದ್ದಾರೆ.

ರಾಜ್ಯವ್ಯಾಪಿ 180 ಉಗ್ರಾಣಗಳನ್ನು ಹೊಂದಿರುವ ನಿಗಮ, ಕೃಷಿ ಉತ್ಪನ್ನಗಳು, ಬೀಜ, ರಸಗೊಬ್ಬರ ಮತ್ತು ಇತರ ಕೆಲವು ಉತ್ಪನ್ನಗಳನ್ನು ದಾಸ್ತಾನು ಇರಿಸಿಕೊಳ್ಳುವ ಹಾಗೂ ಸಾಗಣೆ ಸೌಲಭ್ಯ ಒದಗಿಸುವ ಕೆಲಸ ಮಾಡುತ್ತಿದೆ. ಉಗ್ರಾಣಗಳ ನಿರ್ಮಾಣಕ್ಕಾಗಿ ಬ್ಯಾಂಕ್‌ಗಳಿಂದ ಪಡೆದಿರುವ ₹ 600 ಕೋಟಿ ಸಾಲ ತೀರಿಸಲಾಗದೆ ಸಂಕಷ್ಟಕ್ಕೆ ಸಿಲುಕಿದೆ. ಉಗ್ರಾಣಗಳ ನಿರ್ವಹಣೆಯಲ್ಲಿ ನಡೆಯುತ್ತಿರುವ ಭಾರಿ ಮೊತ್ತದ ಭ್ರಷ್ಟಾಚಾರದಿಂದಾಗಿ 2020–21ರಲ್ಲಿ ₹ 60 ಕೋಟಿಗೂ ಹೆಚ್ಚು ಹೊರೆ ಬಿದ್ದಿದೆ.

ಸರ್ಕಾರ ನೌಕರರ ವೇತನ ಪರಿಷ್ಕರಣೆಗೆ  ಸರಿಸಮವಾಗಿ ನಿಗಮದ ಸಿಬ್ಬಂದಿಗೂ ಶೇಕಡ 20ರಷ್ಟು ವೇತನ ಹೆಚ್ಚಳ ಮಾಡುವ ಪ್ರಸ್ತಾವಕ್ಕೆ ಆರ್ಥಿಕ ಇಲಾಖೆ ತಕರಾರು ಎತ್ತಿದೆ. ನಿಗಮ ಪೂರ್ಣ ಪ್ರಮಾಣದಲ್ಲಿ ನಷ್ಟ ಮತ್ತು ಸಾಲದಲ್ಲಿ ಸಿಲುಕಿರುವ ಸಂದರ್ಭದಲ್ಲಿ ವೇತನ ಪರಿಷ್ಕರಣೆ ಅಗತ್ಯವಿಲ್ಲ ಎಂದಿರುವ ಆರ್ಥಿಕ ಇಲಾಖೆ, ನಷ್ಟ ತಡೆಗೆ ಕೈಗೊಂಡಿರುವ ಕ್ರಮಗಳ ಕುರಿತು ವಿವರಣೆ ನೀಡುವಂತೆ ಕೇಳಿದೆ.

ಹಗರಣಗಳ ಭಾರ: ರಾಯಚೂರು, ಚಿಂತಾಮಣಿ ಸೇರಿದಂತೆ ಐದು ಕಡೆಗಳಲ್ಲಿ ಬ್ಯಾಂಕ್‌ಗಳಿಗೆ ಆಧಾರವಾಗಿ ನೀಡಿದ್ದ ದಾಸ್ತಾನನ್ನೂ ಕದ್ದು ಸಾಗಿಸಿರುವುದು 2020ರಲ್ಲಿ ನಡೆದಿದೆ.

‘ಈ ಐದು ಪ್ರಕರಣಗಳಲ್ಲೂ ಬ್ಯಾಂಕ್‌ಗಳು ರಾಜ್ಯ ಉಗ್ರಾಣ ನಿಗಮ ವನ್ನು ಜವಾಬ್ದಾರಿ ಮಾಡಿ ಪ್ರಕರಣ ದಾಖಲಿಸಿವೆ. ಮೊದಲೇ ನಷ್ಟದ ಸುಳಿಯಲ್ಲಿದ್ದ ನಿಗಮ, ಗೋದಾಮುಗಳ ನಿರ್ವಹಣೆಯಲ್ಲಿನ ಅಕ್ರಮ, ಭ್ರಷ್ಟಾಚಾರದ ಕಾರಣದಿಂದ ಮತ್ತಷ್ಟು ಬಿಕ್ಕಟ್ಟಿನತ್ತ ಸಾಗುತ್ತಿದೆ’ ಎನ್ನುತ್ತವೆ ನಿಗಮದ ಮೂಲಗಳು.

ವೇತನ ಬಿಡುಗಡೆಗೆ ಪ್ರಯತ್ನ: ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ರಾಜ್ಯ ಉಗ್ರಾಣ ನಿಗಮದ ವ್ಯವಸ್ಥಾಪಕ ನಿರ್ದೇಶಕ ರಿಚರ್ಡ್‌ ವಿನ್ಸೆಂಟ್ ಡಿಸೋಜ, ‘ಸಾಲದ ಕಾರಣದಿಂದಾಗಿ ನಿಗಮ ಸಂಕಷ್ಟದಲ್ಲಿದೆ. ಅವ್ಯವಹಾರಕ್ಕೆ ಸಂಬಂಧಿಸಿದಂತೆ ಪ್ರಕರಣಗಳು ದಾಖಲಾಗಿರುವುದೂ ನಿಜ. ಎಲ್ಲ ವಿವರಗಳನ್ನೂ ಒಳಗೊಂಡಂತೆ ಸರ್ಕಾರಕ್ಕೆ ಸಮಜಾಯಿಷಿ ನೀಡಿ, ಸಿಬ್ಬಂದಿಯ ವೇತನ ಬಿಡುಗಡೆಗೆ ಪ್ರಯತ್ನ ನಡೆಸಲಾಗುತ್ತಿದೆ’ ಎಂದರು.

ಕಂಪನಿಗಳಿಗೆ ಮಣೆ

‘ಗೋದಾಮುಗಳನ್ನು ಬಾಡಿಗೆಗೆ ನೀಡುವುದು, ಸರಕುಗಳನ್ನು ದಾಸ್ತಾನು ಇರಿಸಿಕೊಳ್ಳುವುದು ಸೇರಿದಂತೆ ರಾಜ್ಯ ಉಗ್ರಾಣ ನಿಗಮದ ಸ್ವರೂಪದಲ್ಲೇ ಕಾರ್ಯನಿರ್ವಹಿಸುವ ಖಾಸಗಿ ಕಂಪನಿಗಳು ನಿಗಮದ ಯಾವುದೇ ಟೆಂಡರ್‌ ಪ್ರಕ್ರಿಯೆಯಲ್ಲಿ ಭಾಗವಹಿಸದಂತೆ 2020ರವರೆಗೂ ನಿರ್ಬಂಧವಿತ್ತು. ಅದನ್ನು ಸಡಿಲಿಸಿದ್ದು, ಈಗ ಸ್ವಂತ ಉಗ್ರಾಣಗಳನ್ನು ಹೊಂದಿರುವ ಖಾಸಗಿ ಕಂಪನಿಗಳೂ ಟೆಂಡರ್‌ನಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿದೆ. ಇದು ಇಡೀ ನಿಗಮ ಖಾಸಗಿ ಕಂಪನಿಗಳ ತೆಕ್ಕೆಗೆ ಸರಿಯಲು ಕಾರಣವಾಗಬಹುದು’ ಎಂದು ನಿಗಮದ ಸಿಬ್ಬಂದಿ ಆತಂಕ ವ್ಯಕ್ತಪಡಿಸುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು