ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಹೋದರ ಪ್ರೀತಿಯ ದೀಕ್ಷೆ ನೀಡಿದ ಮಾಸ್ತಿ: ಕವಿ ಎಚ್.ಎಸ್. ವೆಂಕಟೇಶಮೂರ್ತಿ ಅಭಿಮತ

‘ಮಾಸ್ತಿ ಪ್ರಶಸ್ತಿ’ ಪ್ರದಾನ
Last Updated 6 ನವೆಂಬರ್ 2021, 16:48 IST
ಅಕ್ಷರ ಗಾತ್ರ

ಬೆಂಗಳೂರು: ‘ಕನ್ನಡ ಸಾಹಿತ್ಯ ಲೋಕಕ್ಕೆಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರು‘ನುಡಿ ಸಹೋದರರು’ ಎಂಬ ಪರಿಕಲ್ಪನೆಯನ್ನು ಪರಿಚಯಿಸಿದರು. ಹೀಗಾಗಿ, ಅವರನ್ನು ಬಹುತೇಕ ಲೇಖಕರು ಅಣ್ಣ ಎಂದೇ ಕರೆಯುತ್ತಿದ್ದರು’ ಎಂದು ಕವಿ ಎಚ್.ಎಸ್. ವೆಂಕಟೇಶಮೂರ್ತಿ ತಿಳಿಸಿದರು.

ಡಾ. ಮಾಸ್ತಿ ವೆಂಕಟೇಶ ಅಯ್ಯಂಗಾರ್ ಟ್ರಸ್ಟ್‌ ನಗರದಲ್ಲಿ ಶನಿವಾರ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಅವರು ವಿಮರ್ಶಕ ಮಾಧವ ಕುಲಕರ್ಣಿ, ಕಥೆಗಾರ ಆರ್. ವಿಜಯರಾಘವನ್, ವಿಮರ್ಶಕಿ ಎಂ.ಎಸ್. ಆಶಾದೇವಿ, ಲೇಖಕಿ ವಸುಮತಿ ಉಡುಪ ಮತ್ತು ಎಚ್.ಎಲ್. ಪುಷ್ಪಾ ಅವರಿಗೆ ‘ಮಾಸ್ತಿ ಪ್ರಶಸ್ತಿ’ ಪ್ರದಾನ ಮಾಡಿದರು. ಈ ಪ್ರಶಸ್ತಿಯು ತಲಾ ₹ 25 ಸಾವಿರ ನಗದು ಒಳಗೊಂಡಿದೆ.

‘ಮಾಸ್ತಿ ಅವರುಸಹಲೇಖಕರನ್ನು ನುಡಿ ಸಹೋದರರು ಎಂದೇ ಕರೆಯುತ್ತಿದ್ದರು. ಅವರು ಕನ್ನಡ ಸಾಹಿತ್ಯಕ್ಕೆಸಹೋದರ ಪ್ರೀತಿಯ ದೀಕ್ಷೆ ನೀಡಿದರು. ಬೆಂದ್ರೆ ಅವರೂ ಅಣ್ಣ ಎಂದೇ ಕರೆಯುತ್ತಿದ್ದರು. ಅಣ್ಣ ಎಂದು ಯಾರಾದರೂ ಕರೆದರೆ ಕವಿಯ ಅಂಹಕಾರಗಳೆಲ್ಲ ಭಸ್ಮವಾಗುತ್ತವೆ.ಮಾಸ್ತಿ ಎನ್ನುವ ವ್ಯಕ್ತಿ ಕನ್ನಡದ ಅಸಾಮಾನ್ಯ ಲೇಖಕ. ನವೋದಯ, ಪ್ರಗತಿಶೀಲ, ನವ್ಯ ಹಾಗೂ ದಲಿತ–ಬಂಡಾಯದವರೂ ಮಾಸ್ತಿ ಅವರನ್ನು ಪ್ರೀತಿಸಿದ್ದರು’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರಶಸ್ತಿ ಪುರಸ್ಕೃತ ಮಾಧವ ಕುಲಕರ್ಣಿ, ‘ಸರಳತೆಗೆ ಗೌರವ ತಂದುಕೊಟ್ಟ ವ್ಯಕ್ತಿತ್ವ ಮಾಸ್ತಿ ಅವರದ್ದಾಗಿತ್ತು. ಆದರೆ, ಆ ಸರಳತೆಯಲ್ಲಿ ಘನತೆ ಇತ್ತು. ಅವರ ಕಥೆಗಳು ಸರಳವಾಗಿರುವುದರಿಂದ ಇವತ್ತಿಗೂ ಪ್ರಸ್ತುತ. ಸಂಕೀರ್ಣ ವಿಷಯಗಳನ್ನೂ ಅವರು ಸರಳವಾಗಿ ಮಂಡಿಸಿದರು.ನಾವು ಒಂದು ಮಟ್ಟ ಮುಟ್ಟಿದ ಬಳಿಕ ಸರಳವಾಗದಿದ್ದರೆ ಲೇಖಕ ಸಾಯುತ್ತಾನೆ. ಇದನ್ನು ಯುರೋಪಿನಲ್ಲಿ ಕಾಣಬಹುದು’ ಎಂದು ತಿಳಿಸಿದರು.

ಸ್ತ್ರಿವಾದಿ ಲೇಖಕ:ಎಂ.ಎಸ್. ಆಶಾದೇವಿ, ‘ನಮ್ಮ ಇಡೀ ಸಾಹಿತ್ಯ ಪರಂಪರೆಯನ್ನು ಮರು ಓದಿಗೆ, ಮರು ಮೌಲ್ಯಮಾಪನಕ್ಕೆ ಒಡ್ಡಬೇಕಾದ ಸವಾಲನ್ನು ಎದುರಿಸಬೇಕಿದೆ. ನಮ್ಮ ಪರಂಪರೆಯನ್ನು ಹೆಣ್ಣಿನ ನೋಟ, ಸ್ಪರ್ಶದಿಂದ ಪೂರ್ಣಗೊಳಿಸಬೇಕು. ಕನ್ನಡದ ಕೆಲವೇ ಸ್ತ್ರಿವಾದಿ ಲೇಖಕರಲ್ಲಿ ಮಾಸ್ತಿ ಕೂಡ ಒಬ್ಬರಾಗಿದ್ದರು’ ಎಂದು ಹೇಳಿದರು.

ವಸುಮತಿ ಉಡುಪ, ‘ನನ್ನ ಅನುಭವದ ಮಿತಿಯಲ್ಲಿ ನಾನು ಬರೆಯುತ್ತೇನೆ. ಕಥಾ ಪಾತ್ರವು ಮಧ್ಯಮ, ಕೆಳ ಮಧ್ಯಮದ ಜೀವನದಿಂದ ಎದ್ದು ಬಂದವುಗಳಾಗಿವೆ. ಹಾಗಾಗಿ, ನೆಲದಿಂದ ಆಕಾಶಕ್ಕೆ ಜಿಗಿಯುವುದಿಲ್ಲ’ ಎಂದರು.

ಟ್ರಸ್ಟ್‌ನ ಅಧ್ಯಕ್ಷಮಾವಿನಕೆರೆ ರಂಗನಾಥನ್, ‘ಮಾಸ್ತಿ ವೆಂಟಕೇಶ್ ಅಯ್ಯಂಗಾರ್ ಅವರು ಕಥೆ, ಕಾದಂಬರಿ, ಕಾವ್ಯ, ಆತ್ಮಕಥೆ ಸೇರಿದಂತೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕೃತಿ ರಚಿಸಿ, ಯಶಸ್ಸು ಮತ್ತು ಸಾರ್ಥಕತೆ ಸಾಧಿಸಿದ್ದಾರೆ’ ಎಂದು ಹೇಳಿದರು.

ಮಾಸ್ತಿ ಪುರಸ್ಕಾರ ಪ್ರದಾನ

ಮಾಸ್ತಿಟ್ರಸ್ಟ್ ವತಿಯಿಂದ ‘ಕೋಳಿ ಅಂಕ’ ಕೃತಿಗೆಡಾ. ಕುರುವ ಬಸವರಾಜ್ ಅವರಿಗೆ ‘ಮಾಸ್ತಿ ಕಥಾ ಪುರಸ್ಕಾರ’ ಹಾಗೂ‘ಬೂಬರಾಜ ಸಾಮ್ರಾಜ್ಯ’ ಕೃತಿಗೆಡಾ.ಬಿ. ಜನಾರ್ದನ ಭಟ್ ಅವರಿಗೆ ‘ಮಾಸ್ತಿ ಕಾದಂಬರಿ ಪುರಸ್ಕಾರ’ ನೀಡಿ, ಗೌರವಿಸಲಾಯಿತು.‘ಕೋಳಿ ಅಂಕ’ ಕೃತಿಯನ್ನು ಬೆಂಗಳೂರಿನ ಕಿ.ರಂ. ಪ್ರಕಾಶನ ಹಾಗೂ‘ಬೂಬರಾಜ ಸಾಮ್ರಾಜ್ಯ’ ಕೃತಿಯನ್ನು ಅಂಕಿತ ಪುಸ್ತಕ ಪ್ರಕಟಿಸಿದೆ.ಈ ಪುರಸ್ಕಾರವು ಕೃತಿಯ ಲೇಖಕರಿಗೆ ₹ 25 ಸಾವಿರ ಹಾಗೂ ಪ್ರಕಾಶಕರಿಗೆ ₹ 10 ಸಾವಿರ ಬಹುಮಾನವನ್ನು ಒಳಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT