ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹದಾಯಿ: ಸಿಕ್ಕಿಲ್ಲ ಅರಣ್ಯ ಅನುಮೋದನೆ- ವಿಶೇಷ ವರದಿ

ಕುಗ್ಗಿದ ಅರಣ್ಯ ಬಳಕೆ ಪ್ರಮಾಣ l ಬೇಕಿದೆ 49.7 ಹೆಕ್ಟೇರ್ ಅರಣ್ಯ l ಕಾಮಗಾರಿಯ ಚಾಲನೆ ಇನ್ನಷ್ಟು ವಿಳಂಬ
Last Updated 6 ಅಕ್ಟೋಬರ್ 2022, 20:50 IST
ಅಕ್ಷರ ಗಾತ್ರ

ನವದೆಹಲಿ: ಮಹದಾಯಿ (ಕಳಸಾ– ಬಂಡೂರಿ) ಯೋಜನೆಯ ಪರಿಷ್ಜೃತ ಪೂರ್ವ ಕಾರ್ಯಸಾಧ್ಯತಾ ವರದಿಯ ಪ್ರಕಾರ, ಯೋಜನೆಯ ಅನುಷ್ಠಾನಕ್ಕೆ 49.7 ಹೆಕ್ಟೇರ್ ಅರಣ್ಯ ಭೂಮಿ ಬೇಕಿದೆ. ಈ ಅರಣ್ಯ ಭೂಮಿ ಬಳಕೆಗೆ ಕೇಂದ್ರ ಅರಣ್ಯ, ಪರಿಸರ ಮತ್ತು ಹವಾಮಾನ ಬದಲಾವಣೆ ಸಚಿವಾಲಯಕ್ಕೆ ಕರ್ನಾಟಕ ಸರ್ಕಾರವು ಹೊಸ ಪ್ರಸ್ತಾವನೆ ಸಲ್ಲಿಸಿದೆ.

ಈ ಯೋಜನೆಯ ಪರಿಷ್ಜೃತ ಯೋಜನಾ ವರದಿಗೆ ಕೇಂದ್ರ ಜಲ ಆಯೋಗ ಅನುಮೋದನೆ ನೀಡಿದ್ದು, ಶೀಘ್ರದಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಕರ್ನಾಟಕ ಸರ್ಕಾರ ಹೇಳಿಕೊಂಡಿದೆ. ಆದರೆ, ಪರಿಸರ ಸಚಿವಾಲಯದಿಂದ ಅನುಮೋದನೆ ಸಿಕ್ಕ ಬಳಿಕವಷ್ಟೇ ಯೋಜನೆಯ ಕಾಮಗಾರಿಗೆ ಚಾಲನೆ ನೀಡಲು ಸಾಧ್ಯ. ಹೀಗಾಗಿ, ಕಾಮಗಾರಿಗೆ ಚಾಲನೆ ನೀಡುವುದು ಇನ್ನಷ್ಟು ತಡವಾಗಲಿದೆ.

ಈ ಯೋಜನೆಗೆ 500 ಹೆಕ್ಟೇರ್‌ ಅರಣ್ಯ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಪ್ರಸ್ತಾಪಿಸಲಾಗಿತ್ತು. ಇದು ಕುಡಿಯುವ ನೀರಿನ ಯೋಜನೆ ಆಗಿರುವುದರಿಂದ ‘ಪರಿಸರ ಪರಿಣಾಮ ಅಧ್ಯಯನ ಅಧಿಸೂಚನೆ–2006’ರ ವ್ಯಾಪ್ತಿಗೆ ಬರುವುದಿಲ್ಲ. ಹೀಗಾಗಿ, ಯೋಜನೆ ಅನುಷ್ಠಾನಕ್ಕೆ ಯಾವುದೇ ತಕರಾರು ಇಲ್ಲ ಎಂದು ಕೇಂದ್ರ ಪರಿಸರ ಸಚಿವಾಲಯ 2019ರಲ್ಲೇ ಸ್ಪಷ್ಟಪಡಿಸಿದೆ. ಆದರೂ, ಅರಣ್ಯ ಭೂಮಿ ಸ್ವಾಧೀನಕ್ಕೆ ಕೇಂದ್ರ ಪರಿಸರ ಸಚಿವಾಲಯದ ಒಪ್ಪಿಗೆ ಪಡೆಯಬೇಕಿದೆ. ಕಾಲುವೆಗಳ ಮೂಲಕ ನೀರು ಹರಿಸಿದರೆ 500 ಹೆಕ್ಟೇರ್‌ ಅರಣ್ಯ ಭೂಮಿ ಸ್ವಾಧೀನಪಡಿಸಿಕೊಳ್ಳಬೇಕಾಗುತ್ತದೆ. ಪೈಪ್‌ಗಳ ಮೂಲಕ ನೀರು ಹರಿಸಲು ಪರಿಷ್ಕೃತ ‌ಯೋಜನೆಯಲ್ಲಿಪ್ರಸ್ತಾಪಿಸಲಾಗಿದೆ. ಇದರಿಂದಾಗಿ, ಅರಣ್ಯ ಭೂಮಿ ಸ್ವಾಧೀನ ಶೇ 85ರಷ್ಟು ಕಡಿಮೆ ಆಗಿದೆ.

ಕರ್ನಾಟಕ ಸರ್ಕಾರ ಸಲ್ಲಿಸಿರುವ ಪ್ರಸ್ತಾವದ ಪ್ರಕಾರ, ಕಳಸಾ ಯೋಜನೆಗೆ 16.6 ಹೆಕ್ಟೇರ್ ಅರಣ್ಯ ಹಾಗೂ 11.27 ಹೆಕ್ಟೇರ್ ಅರಣ್ಯೇತರ ಭೂಮಿ, ಬಂಡೂರಿ ಯೋಜನೆಗೆ 32.21 ಹೆಕ್ಟೇರ್‌ ಅರಣ್ಯ ಹಾಗೂ 11.05 ಹೆಕ್ಟೇರ್ ಅರಣ್ಯೇತರ ಭೂಮಿ ಬೇಕಿದೆ.

40 ಹೆಕ್ಟೇರ್‌ಗಿಂತ ಕಡಿಮೆ ಅರಣ್ಯ ಭೂಮಿ ಸ್ವಾಧೀನಕ್ಕೆ ಕೇಂದ್ರ ಪರಿಸರ ಸಚಿವಾಲಯದ ಬೆಂಗಳೂರು ಪ್ರಾದೇಶಿಕ ಕಚೇರಿಯಿಂದ ಅನುಮತಿ ಪಡೆದರೆ ಸಾಕು. ಹೀಗಾಗಿ, ಕಳಸಾ– ಬಂಡೂರಿ ಯೋಜನೆಗೆ ಅಗತ್ಯವಿರುವ ಅರಣ್ಯ ಭೂಮಿಗಳಪ್ರತ್ಯೇಕ ಪ್ರಸ್ತಾವಗಳನ್ನು ಸಲ್ಲಿಸಲಾಗಿದೆ. ಶೀಘ್ರ ಅನುಮೋದನೆ ಸಿಗುವ ವಿಶ್ವಾಸ ಇದೆ ಎಂದು ಕರ್ನಾಟಕ ಸರ್ಕಾರದ ಮೂಲಗಳು
ತಿಳಿಸಿವೆ.

‘ಯೋಜನೆ ಅನುಷ್ಠಾನ
ಕ್ಕಾಗಿ ಅರಣ್ಯ ಪರಿವರ್ತನೆ ಕೋರಿರುವ ಖಾನಾಪುರ ತಾಲ್ಲೂಕಿನ ಅರಣ್ಯ ಪ್ರದೇಶಗಳು ಅಪರೂಪದ ವನ್ಯಜೀವಿಗಳಿಗೆ ಆಶ್ರಯತಾಣವಾಗಿದ್ದು ವನ್ಯಜೀವಿಗಳ ಹಾಗೂ ವನ್ಯಜೀವಿಗಳ ಆವಾಸಸ್ಥಾನಕ್ಕೆ ಧಕ್ಕೆಯಾಗದಂತೆ ಯೋಜನೆ ರೂಪಿಸಬೇಕು. ಈ ಕುರಿತು ಸೂಕ್ತ ಉಪಶಮನ ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ವನ್ಯಜೀವಿ ಸಂರಕ್ಷಣಾವಾದಿ ಗಿರಿಧರ್‌ ಕುಲಕರ್ಣಿ ಒತ್ತಾಯಿಸಿದರು.

‘ವನ್ಯಜೀವಿಗಳ ಹಾಗೂ ವನ್ಯ ಜೀವಿಗಳ ಆವಾಸಸ್ಥಾನದ ಸಂರಕ್ಷಣೆಗಾಗಿ ವನ್ಯಜೀವಿ ಸಂರಕ್ಷಣಾ ಯೋಜನೆಯನ್ನು ಅರಣ್ಯ ಇಲಾಖೆ ಸಿದ್ಧಪಡಿಸಬೇಕು ಹಾಗೂ ಇದರ ಅನುಷ್ಠಾನಕ್ಕಾಗಿ ಬಳಕೆದಾರ ಸಂಸ್ಥೆಯು ಅರಣ್ಯ ಇಲಾಖೆಗೆ ಸೂಕ್ತ ಅನುದಾನ ಒದಗಿಸಬೇಕು’ ಎಂದು ಅವರು
ಹೇಳಿದರು.

‘ಇದೇ ಭೂ ಪ್ರದೇಶದಲ್ಲಿ ಚೋರ್ಲಾ ರಸ್ತೆಯ ಉನ್ನತೀಕರಣ ಯೋಜನೆಗಾಗಿ ವನ್ಯಜೀವಿ ಅನುಮೋದನೆ ಹಾಗೂ ಗೋವಾ ರಾಜ್ಯಕ್ಕೆ ಹೆಚ್ಚುವರಿ ವಿದ್ಯುತ್ ಒದಗಿಸಲು 400 ಕೆ.ವಿ. ಪ್ರಸರಣ ಮಾರ್ಗಕ್ಕಾಗಿ ಅರಣ್ಯ ಪರಿವರ್ತನೆಯ ಪ್ರಸ್ತಾವನೆ ಇದ್ದು ಈ ಪ್ರಸ್ತಾವನೆಗಳನ್ನು ಸುಸ್ಥಿರ ಅಭಿವೃದ್ಧಿಯ ದೃಷ್ಟಿಯಿಂದ ತಿರಸ್ಕರಿಸಬೇಕು. ಯಾವುದೇ ಕಾರಣಕ್ಕೂ ಮಹದಾಯಿ ಜಲ ವಿದ್ಯುತ್ ಯೋಜನೆಗೆ ಅನುಮತಿ ನೀಡಬಾರದು’ ಎಂದು ಅವರು ಆಗ್ರಹಿಸಿದರು.

---

3.90 ಟಿಎಂಸಿ ಅಡಿ

ಮಹದಾಯಿ ನ್ಯಾಯಾಧೀಕರಣದಿಂದ ನೀರು ಹಂಚಿಕೆ

2.18 ಟಿಎಂಸಿ ಅಡಿ

ಬಂಡೂರಿ ಮೂಲಕ

1.72 ಟಿಎಂಸಿ ಅಡಿ

ಕಳಸಾ ಮೂಲಕ

₹791.50 ಕೋಟಿ

ಬಂಡೂರಿ ಯೋಜನಾ ವೆಚ್ಚ

₹598 ಕೋಟಿ

ಕಳಸಾ ಯೋಜನಾ ವೆಚ್ಚ


ಬಂಡೂರಿ ಯೋಜನೆ

59 ಹೆಕ್ಟೇರ್‌

ಅಗತ್ಯವಿರುವ ಒಟ್ಟು ಭೂಮಿ

16.6 ಹೆಕ್ಟೇರ್

ಅಗತ್ಯವಿರುವ ಅರಣ್ಯ ಭೂಮಿ‌

43.15 ಹೆಕ್ಟೇರ್‌

ಬೇಕಿರುವ ಕಂದಾಯ ಭೂಮಿ

ಕಳಸಾ ಯೋಜನೆ

130 ಹೆಕ್ಟೇರ್

ಬೇಕಿರುವ ಒಟ್ಟು ಭೂಮಿ

32.27 ಹೆಕ್ಟೇರ್‌

ಅಗತ್ಯವಿರುವ ಅರಣ್ಯ ಭೂಮಿ

96.42 ಹೆಕ್ಟೇರ್

ಬೇಕಿರುವ ಕಂದಾಯ ಭೂಮಿ


‘ಆರು ತಿಂಗಳಲ್ಲೇ ಅನುಷ್ಠಾನ’

ಹುಬ್ಬಳ್ಳಿ– ಧಾರವಾಡಕ್ಕೆ ಕುಡಿಯುವ ನೀರು ಪೂರೈಸಲು ಈ ಯೋಜನೆ ರೂಪಿಸಲಾಗಿದ್ದು, ಈ ನಗರಗಳ ಈಗಿನ ಜನಸಂಖ್ಯೆ 10 ಲಕ್ಷ. 2051ಕ್ಕೆ ಈ ನಗರಗಳ ಜನಸಂಖ್ಯೆ 33.41 ಲಕ್ಷಕ್ಕೆ ಏರಲಿದೆ. ನೀರಿನ ಬೇಡಿಕೆ ಪ್ರಮಾಣ 8.61 ಟಿಎಂಸಿ ಅಡಿಗೆ ಏರಲಿದೆ ಎಂದೂ ಪರಿಷ್ಕೃತ ಪೂರ್ವ ಕಾರ್ಯಸಾಧ್ಯತಾ ವರದಿಯಲ್ಲಿ ಹೇಳಲಾಗಿದೆ. ಕಾಲುವೆಗಳನ್ನು ನಿರ್ಮಾಣ ಮಾಡಿದ್ದರೆ ಯೋಜನೆ ಅನುಷ್ಠಾನಕ್ಕೆ ಐದು ವರ್ಷಗಳು ಬೇಕಿತ್ತು. ಈಗ ಆರು ತಿಂಗಳಲ್ಲೇ ಕಾಮಗಾರಿ ಪೂರ್ಣಗೊಳಿಸಬಹುದು ಎಂದೂ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT