ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಕೆದಾಟು ಅಣೆಕಟ್ಟು ನಿರ್ಮಾಣದಂತಹ ಯೋಜನೆಗಳಿಂದ ನದಿಗಳ ನಾಶ: ಮೇಧಾ ಪಾಟ್ಕರ್ ಕಳವಳ

‘ಮೇಕೆದಾಟು ಪರ, ಅಣೆಕಟ್ಟು ವಿರುದ್ಧ’ ಸಂವಾದ
Last Updated 15 ಜನವರಿ 2022, 12:05 IST
ಅಕ್ಷರ ಗಾತ್ರ

ಬೆಂಗಳೂರು: ‘ಅಣೆಕಟ್ಟು ನಿರ್ಮಾಣದಂತಹ ಬೃಹತ್‌ ಯೋಜನೆಗಳಿಂದ ನದಿಗಳು ನಾಶವಾಗುತ್ತಿವೆಯೇ ಹೊರತು ಜನಸಾಮಾನ್ಯರಿಗೆ ಪ್ರಯೋಜನವಾಗುತ್ತಿಲ್ಲ’ ಎಂದು ಸಾಮಾಜಿಕ ಕಾರ್ಯಕರ್ತೆ ಮೇಧಾ ಪಾಟ್ಕರ್‌ ಹೇಳಿದರು.

ಕರ್ನಾಟಕ ನೆಲ ಜಲ ಪರಿಸರ ರಕ್ಷಣಾ ಸಮಿತಿ ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಮೇಕೆದಾಟು ಪರ, ಅಣೆಕಟ್ಟು ವಿರುದ್ಧ’ ಕುರಿತು ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ರಾಜಕೀಯ ಲಾಭಕ್ಕಾಗಿ ಕೈಗೊಳ್ಳುವ ಯೋಜನೆಗಳು ಸಂಪೂರ್ಣ ಅವೈಜ್ಞಾನಿಕ. ಕೇವಲ ಗುತ್ತಿಗೆದಾರರು, ಹೂಡಿಕೆದಾರರು ಮತ್ತು ರಾಜಕಾರಣಿಗಳಿಗೆ ಅನುಕೂಲ ಕಲ್ಪಿಸುವ ಯೋಜನೆಗಳಾಗಿರುತ್ತವೆ’ ಎಂದು ಕಿಡಿಕಾರಿದರು.

‘ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಗಳು ಬೃಹತ್‌ ಯೋಜನೆಗಳಿಗೆ ಆರ್ಥಿಕ ನೆರವು ನೀಡುತ್ತಿವೆ. ದೇಶದಲ್ಲಿನ ನೈಸರ್ಗಿಕ ಸಂಪನ್ಮೂಲಗಳ ಮೇಲೆ ನಿಯಂತ್ರಣ ಸಾಧಿಸಲು ಮತ್ತು ಕಾನೂನುಗಳನ್ನು ಬದಲಾಯಿಸುವ ಹುನ್ನಾರ ಈ ಉದ್ದೇಶದ ಹಿಂದೆ ಅಡಗಿದೆ’ ಎಂದರು.

ನರ್ಮದಾ ನದಿಗೆ ಅಣೆಕಟ್ಟು ನಿರ್ಮಾಣದಿಂದ ಉಂಟಾಗಿರುವ ಹಾನಿಯನ್ನು ವಿಶ್ಲೇಷಿಸಿದ ಅವರು, ‘ನಿಸರ್ಗದ ಮೇಲೆ ಶೋಷಣೆ ನಡೆಸುವ ಬೃಹತ್‌ ನೀರಾವರಿ ಯೋಜನೆಗಳು ಏಕೆ ಬೇಕು ಎನ್ನುವ ಬಗ್ಗೆಯೇ ಮೊದಲು ಚರ್ಚೆಗಳು ನಡೆಯಬೇಕು. ಈ ಯೋಜನೆಗಳು ನಗರ ಕೇಂದ್ರೀತವಾಗಿರುತ್ತವೆ ಮತ್ತು ಉದ್ಯಮಿಗಳ ಪರವಾಗಿರುತ್ತವೆ. ಕೋಟ್ಯಂತರ ರೂಪಾಯಿ ದುರುಪಯೋಗಪಡಿಸಿಕೊಂಡು ನಿಸರ್ಗ ನಾಶ ಮಾಡಲು ಇಂತಹ ಯೋಜನೆಗಳನ್ನು ರೂಪಿಸುವ ಅಗತ್ಯವಿದೆಯೇ’ ಎಂದು ಪ್ರಶ್ನಿಸಿದರು.

‘ಬೃಹತ್‌ ಅಣೆಕಟ್ಟುಗಳ ನಿರ್ಮಾಣದಿಂದ ನದಿಗಳ ನೀರಿನ ಮಟ್ಟ ಕಡಿಮೆಯಾಗುತ್ತಿದೆ. ಜತೆಗೆ, ಅವೈಜ್ಞಾನಿಕ ಯೋಜನೆಗಳಿಂದಲೇ ದಿಢೀರ್‌ ಪ್ರವಾಹ ಸೃಷ್ಟಿಯಾಗುತ್ತಿದೆ. ಮೇಕೆದಾಟು ಯೋಜನೆಯಿಂದಲೂ ಸ್ಥಳೀಯ ಆದಿವಾಸಿಗಳು ಸಂಕಷ್ಟಕ್ಕೆ ಸಿಲುಕುತ್ತಾರೆ. ಪರಿಸರಕ್ಕೂ ಅಪಾರ ಹಾನಿಯಾಗಲಿದೆ. 95 ಕಿ.ಮೀ. ದೂರದಿಂದ ಬೆಂಗಳೂರಿಗೆ ನೀರು ತರುವ ಬದಲು ಕೆರೆ ಸಂರಕ್ಷಣೆ ಮತ್ತು ಮಳೆ ನೀರು ಸಂಗ್ರಹದಂತಹ ಪರಿಸರ ಸ್ನೇಹಿ ಪರ್ಯಾಯ ಯೋಜನೆಗಳ ಬಗ್ಗೆ ಸರ್ಕಾರ ಏಕೆ ಚಿಂತನೆ ನಡೆಸುವುದಿಲ್ಲ’ ಎಂದು ಕೇಳಿದರು.

‘ದೇಶದಲ್ಲಿ ಹಲವು ನದಿಗಳು ನಶಿಸುತ್ತಿವೆ. ಪಂಜಾಬ್‌ನಲ್ಲಿ ಸಟ್ಲೇಜ್ ನದಿಯು ಈಗಾಗಲೇ ರಾಸಾಯನಿಕಗಳಿಂದ ಭರ್ತಿಯಾಗಿದೆ. ಕರ್ನಾಟಕದಲ್ಲಿ ವೃಷಭಾವತಿ ಸೇರಿದಂತೆ ಹಲವು ನದಿಗಳು ನಶಿಸಿವೆ. ಇದೇ ರೀತಿಯ ಪರಿಸ್ಥಿತಿ ಕಾವೇರಿ ನದಿಗೂ ಬರಲಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

ಪತ್ರಕರ್ತ ನಾಗೇಶ ಹೆಗಡೆ, ‘ಈ ಯೋಜನೆಯಿಂದ ಸಂಕಷ್ಟಗಳೇ ಹೆಚ್ಚಾಗಲಿವೆ. ಈ ಯೋಜನೆಯಿಂದ ನಾಶವಾಗುವ ಅರಣ್ಯಕ್ಕೆ ಪರ್ಯಾಯವಾಗಿ ಗುರುತಿಸಿರುವ ಭೂಮಿಯ ಜಾಗವನ್ನು ಬಹಿರಂಗಪಡಿಸಬೇಕು’ ಎಂದರು.

‘ಮೇಕೆದಾಟು: ಪರಿಸರ ಮೇಲಿನ ಯುದ್ಧ’

‘ಮೇಕೆದಾಟು ಯೋಜನೆಯು ಮೂರು ರಾಜಕೀಯ ಪಕ್ಷಗಳು ಪರಿಸರ ಮೇಲೆ ನಡೆಸುತ್ತಿರುವ ಯುದ್ಧವಾಗಿದೆ. ಇದು ಗುತ್ತಿಗೆದಾರರ ಪರ ಯೋಜನೆ’ ಎಂದು ನಟ ಚೇತನ್‌ ಆಕ್ರೋಶ ವ್ಯಕ್ತಪಡಿಸಿದರು.

‘₹9 ಸಾವಿರ ಕೋಟಿ ಮೊತ್ತದಲ್ಲಿ ಕೈಗೊಳ್ಳಲಿರುವ ಮೇಕೆದಾಟು ಯೋಜನೆಯಿಂದ 12 ಸಾವಿರ ಎಕರೆಗೂ ಹೆಚ್ಚು ಅರಣ್ಯ ನಾಶವಾಗಲಿದೆ. ಲಕ್ಷಾಂತರ ಮರಗಳು ನಾಶವಾಗಲಿವೆ. ಐದು ಹಳ್ಳಿಗಳು ಮುಳುಗಡೆಯಾಗಲಿವೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ಈಗ ರಾಜಕಾರಣಿಗಳೇ ಗುತ್ತಿಗೆದಾರರಾಗಿದ್ದಾರೆ. ಹೀಗಾಗಿ, ಪರಿಸರ ನಾಶ ಮಾಡಿ ಆರ್ಥಿಕ ಲಾಭ ಮಾಡಿಕೊಳ್ಳುವ ಹುನ್ನಾರದಲ್ಲಿ ತೊಡಗಿದ್ದಾರೆ. ಈ ಯೋಜನೆ ಸ್ಥಗಿತಗೊಳಿಸಿ, ನಿಸರ್ಗ ರಮಣೀಯವಾಗಿರುವ ಮೇಕೆದಾಟು ಸ್ಥಳವನ್ನು ವಿಶ್ವ ಪಾರಂಪರಿಕ ತಾಣವನ್ನಾಗಿ ಯುನೆಸ್ಕೊ ಘೋಷಿಸಬೇಕು’ ಎಂದು ಆಗ್ರಹಿಸಿದರು.

ಗಂಡಸುತನದ ಬಗ್ಗೆ ಚರ್ಚೆಯಾಗುತ್ತಿದೆ. ಗಂಡಸುತನ ಎನ್ನುವುದೇ ತಪ್ಪು. ಗಂಡಸುತನ ಮುಖ್ಯ ಅಲ್ಲ, ಪರಿಸರ ಉಳಿಸುವ ಮನುಷ್ಯತ್ವ ಇಂದು ಬೇಕಾಗಿದೆ

- ಚೇತನ್‌, ನಟ

ಪ್ರಧಾನಿ, ಸ್ಕಾಟ್‌ಲ್ಯಾಂಡ್‌ನ ಗ್ಲಾಸ್ಗೊದಲ್ಲಿ ನಡೆದ ಶೃಂಗಸಭೆಯಲ್ಲಿ ಪರಿಸರ ರಕ್ಷಣೆಯ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಆದರೆ, ಇಲ್ಲಿ ಕಾಡು ನಾಶ ಮಾಡಲು ಅನುಮತಿ ನೀಡುತ್ತಾರೆ

- ನಾಗೇಶ ಹೆಗಡೆ, ಪತ್ರಕರ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT