ಶನಿವಾರ, ಅಕ್ಟೋಬರ್ 1, 2022
20 °C
ಮಹಿಳಾ ಕಲ್ಯಾಣ ಕಾರ್ಯಕ್ರಮಗಳು: ಆತ್ಮಾವಲೋಕನಕ್ಕೆ ಪ್ರತಿಪಕ್ಷಗಳ ಆಗ್ರಹ

ಪ್ರಧಾನಿ ಮೋದಿಗೆ ‘ನಾರಿಶಕ್ತಿ’ ತರಾಟೆ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ‘ನಾರಿಶಕ್ತಿ’ಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಹೊಗಳಿದ್ದಾರೆ. ಮಹಿಳೆಯರಿಗೆ ಅವಮಾನ ಮಾಡಬಾರದು ಎಂದಿದ್ದಾರೆ. ಆದರೆ, ವಾಸ್ತವ ಬೇರೆಯೇ ಇದೆ ಎಂದು ಪ್ರತಿಪಕ್ಷಗಳ ಮುಖಂಡರು ಹಾಗೂ ಮಹಿಳಾ ಕಾರ್ಯಕರ್ತರು ಪ್ರಧಾನಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಮಹಿಳೆಯರನ್ನು ಬಿಜೆಪಿ ನಡೆಸಿಕೊಳ್ಳುತ್ತಿರುವ ರೀತಿಯ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುವಂತೆ ಪ್ರತಿಪಕ್ಷಗಳು ಸಲಹೆ ನೀಡಿವೆ. ಸರ್ಕಾರ ಜಾರಿ ಮಾಡಿರುವ ಮಹಿಳಾಪರ ಯೋಜನೆಗಳ ಅನುಷ್ಠಾನದ ಸ್ಥಿತಿಗತಿಯನ್ನು ಮಹಿಳಾ ಕಾರ್ಯಕರ್ತರು ಪ್ರಶ್ನಿಸಿದ್ದಾರೆ.

ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ‘ದೀದಿ ಓ ದೀದಿ’ ಎಂದು ಗೇಲಿ ಮಾಡಿದ್ದ ಪ್ರಧಾನಿ ಅವರ ಮಾತುಗಳನ್ನು ಟಿಎಂಸಿ ಸಂಸದ ಡೆರೆಕ್ ಒಬ್ರಿಯಾನ್ ಅವರು ಟ್ವಿಟರ್‌ನಲ್ಲಿ ನೆನಪಿಸಿದ್ದಾರೆ. ‘ಸ್ತ್ರೀದ್ವೇಷ ತೊಡೆದುಹಾಕಲು ಪ್ರತಿಜ್ಞೆ ಮಾಡೋಣ’ ಎಂದು ಪ್ರಧಾನಿ ಕರೆ ನೀಡಿದ್ದಾರೆ. ಇದಕ್ಕೆ ನನ್ನ ಪೂರ್ಣ ಸಹಮತವಿದೆ. ಮೋದಿ ಅವರೇ, ಇದನ್ನು ನಿಮ್ಮಿಂದಲೇ ಆರಂಭಿಸೋಣವೇ?’ ಎಂದು ಉಲ್ಲೇಖಿಸಿರುವ ಒಬ್ರಿಯಾನ್, ಪ್ರಧಾನಿ ಅವರು ಮಮತಾ ಅವರನ್ನು ಕುರಿತು ಮಾತನಾಡಿದ್ದ ವಿಡಿಯೊವನ್ನು ತಮ್ಮ ಟ್ವೀಟ್‌ ಜತೆಗೆ ಹಂಚಿಕೊಂಡಿದ್ದಾರೆ.  

ಸರ್ಕಾರಕ್ಕೆ ಮಹಿಳೆಯರು ಅಥವಾ ಸಾಮಾಜಿಕವಾಗಿ ಹಿಂದುಳಿದವರ ಬಗ್ಗೆ ಸ್ಪಷ್ಟ ಹಾಗೂ ಗಂಭೀರ ಬದ್ಧತೆ ಇಲ್ಲ ಎಂದು ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ. ರಾಜಾ ಅವರು ಟೀಕಿಸಿದ್ದಾರೆ. ‘ಇದು ಕೇವಲ ಮಹಿಳೆಯರ ವಿಷಯವಲ್ಲ. ಸಮಾಜದಲ್ಲಿ ಎಲ್ಲರನ್ನೂ ಗೌರವದಿಂದ ಕಾಣಬೇಕು. ಆದರೆ, ಮನುಸ್ಮೃತಿ, ಪಿತೃಪ್ರಭುತ್ವ ಹಾಗೂ ಜಾತಿ ಪದ್ಧತಿಯಲ್ಲಿ ನಂಬಿಕೆ ಇರಿಸಿರುವ ನಿಮ್ಮ ಪಕ್ಷದ ನಿಯಂತ್ರಿತ ಮನಸ್ಥಿತಿಯಿಂದ ಇದು ಸಾಧ್ಯವಾಗುತ್ತಿಲ್ಲ. ಸಂಸತ್ತಿನ ಎರಡೂ ಸದನಗಳಲ್ಲಿ ಬಹುಮತವಿದ್ದರೂ ಮಹಿಳಾ ಮೀಸಲಾತಿ ಮಸೂದೆ ಇನ್ನೂ ಅಂಗೀಕಾರವಾಗಿಲ್ಲ’ ಎಂದು ರಾಜಾ ಹೇಳಿದ್ದಾರೆ. 

‘ಮಹಿಳೆಯರ ಬಗ್ಗೆ ಮಾತನಾಡಿದ್ದಕ್ಕೆ ಖುಷಿಯಿದೆ. ಆದರೆ ಸುರಕ್ಷೆಯೂ ಇಲ್ಲ, ಶಿಕ್ಷಣವೂ ಇಲ್ಲ. ಶಕ್ತಿಯಂತೂ ಇಲ್ಲವೇ ಇಲ್ಲ’ ಎಂದು ಸಾಮಾಜಿಕ ಕಾರ್ಯಕರ್ತೆ ಅಕಂಚಾ ಶ್ರೀವಾಸ್ತವ ಹೇಳಿದ್ದಾರೆ. ‘ಮಹಿಳಾ ಶಿಕ್ಷಣದ ಬಗ್ಗೆ ದೇಶದಲ್ಲಿ ಇರುವ ಅಸಡ್ಡೆಯಿಂದ, ಹೆಣ್ಣುಮಕ್ಕಳಿಗೆ ಶಾಲೆಗಳಲ್ಲಿ ಸರಿಯಾದ ಶೌಚಾಲಯ ವ್ಯವಸ್ಥೆಯನ್ನೂ ಕಲ್ಪಿಸಲು ಆಗಿಲ್ಲ. ನಿರ್ಭಯಾ ನಿಧಿಯಡಿ ಕೈಗೊಳ್ಳಲು ಉದ್ದೇಶಿಸಿದ್ದ ಸುರಕ್ಷತಾ ಕ್ರಮಗಳು ಎಲ್ಲಿವೆ’ ಎಂದು ಅವರು ಕೇಳಿದ್ದಾರೆ.

‘ಹಿಜಾಬ್: ಏಕೆ ಮೌನವಾಗಿದ್ದಿರಿ?’
ಬಿಜೆಪಿ ಆಡಳಿತ ಇರುವ ರಾಜ್ಯಗಳು ಹಿಜಾಬ್ ಧರಿಸಿದ ಹೆಣ್ಣುಮಕ್ಕಳು ಶಾಲೆ, ಕಾಲೇಜಿಗೆ ಹೋಗುವುದನ್ನು ನಿರ್ಬಂಧಿಸಿದಾಗ, ಪ್ರಧಾನಿ ಏಕೆ ಮೌನವಾಗಿದ್ದರು ಎಂದು ಆಲ್ ಇಂಡಿಯಾ ಪ್ರೊಗ್ರೆಸಿವ್ ವಿಮೆನ್ ಅಸೋಸಿಯೇಷನ್ ಸದಸ್ಯೆ ಕವಿತಾ ಕೃಷ್ಣನ್ ಪ್ರಶ್ನಿಸಿದ್ದಾರೆ.  

ಮಹಿಳೆಯರ ಬಗೆಗಿನ ಮನಸ್ಥಿತಿ ಬದಲಾಗಬೇಕು ಎಂದು ಒಬ್ಬ ಜನಪ್ರತಿನಿಧಿಯಾಗಿ ಹೇಳುವುದನ್ನು ಸ್ವಾಗತಿಸುತ್ತೇನೆ. ಆದರೆ, ಈ ಸಲಹೆಗಳು ನಿರ್ದಿಷ್ಟವಾಗಿಲ್ಲದಿದ್ದರೆ ಟೊಳ್ಳು ಎನಿಸಿಕೊಳ್ಳುತ್ತವೆ. ಆನ್‌ಲೈನ್‌ನಲ್ಲಿ ಮುಸ್ಲಿಂ ಹೆಣ್ಣುಮಕ್ಕಳನ್ನು ಹರಾಜು ಹಾಕುತ್ತಿದ್ದಾಗ ಎಲ್ಲಿ ಹೋಗಿದ್ದಿರಿ? ಹಿಂದುತ್ವವಾದಿ ಯತಿ ನರಸಿಂಹಾನಂದ ಅವರು ಮುಸ್ಲಿಂ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರಕ್ಕೆ ಕರೆ ಕೊಟ್ಟಾಗ ನೀವು ಏಕೆ ಮೌನವಾಗಿದ್ದಿರಿ?’ ಎಂದು ಕವಿತಾ ಪ್ರಶ್ನಿಸಿದ್ದಾರೆ. ವಿವಿಧ ಮಹಿಳಾ ಯೋಜನೆಗಳಿಗೆ ಬಜೆಟ್‌ನಲ್ಲಿ ಕೇವಲ ಶೇ 1ಕ್ಕಿಂತ ಕಡಿಮೆ ಅನುದಾನ ತೆಗೆದಿರಿಸಿರುವುದು ಸರಿಯೇ ಎಂದು ಅವರು ಕೇಳಿದ್ದಾರೆ.

*

ಮಹಿಳೆಯರ ಕುರಿತು ಮೋದಿ ಅವರ ಮಾತುಗಳಿಗೂ, ಕ್ರಮಗಳಿಗೂ ಹೊಂದಾಣಿಕೆಯಾಗುತ್ತಿಲ್ಲ. ಮಹಾರಾಷ್ಟ್ರ ಸಂಪುಟದಲ್ಲಿ ಒಬ್ಬ ಮಹಿಳೆಯೂ ಇಲ್ಲ. ಸಂಸತ್ತಿನಲ್ಲಿ ಬಹುಮತವಿದ್ದರೂ, ಮಹಿಳಾ ಮೀಸಲಾತಿ ಜಾರಿಯಾಗಿಲ್ಲ.
-ಪ್ರಿಯಾಂಕಾ ಚತುರ್ವೇದಿ, ಶಿವಸೇನಾ ಸಂಸದೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು