ಶನಿವಾರ, ಮೇ 28, 2022
30 °C

ಆರಿದ ತೇಜಸ್ವಿಯ ‘ಶಕ್ತಿ’ ದೀಪ ರಾಜೇಶ್ವರಿ

ನರೇಂದ್ರ ರೈ ದೇರ್ಲ Updated:

ಅಕ್ಷರ ಗಾತ್ರ : | |

Prajavani

(ರಾಜೇಶ್ವರಿ ಮತ್ತು ತೇಜಸ್ವಿ ನಡುವಿನ ಬಾಂಧವ್ಯ ಮತ್ತು ತಮ್ಮ ಒಡನಾಟದ ನೆನಪನ್ನು ಪದಗಳಲ್ಲಿ ಕಟ್ಟಿಕೊಟ್ಟಿದ್ದಾರೆ ಲೇಖಕ ನರೇಂದ್ರ ರೈ ದೇರ್ಲ)

‘ನಿಮ್ಮ ಕಾಫಿಪುಡಿ ಮುಗಿಸಲು ನಾನೊಂದು ಎಮ್ಮೆ ಸಾಕಬೇಕು’. ಶಿವರಾಮ ಕಾರಂತರ ಪತ್ರ ಓದಿ ರಾಜೇಶ್ವರಿಗೆ ನಗು ತಡೆಯಲಾಗಲಿಲ್ಲ.

ಹೌದು ಎರಡು ದಿನಗಳ ಕಾಲ ‘ನಿರುತ್ತರ’ದಲ್ಲಿ ಉಳಿದಿದ್ದ ಶಿವರಾಮ ಕಾರಂತರು ತಿರುಗಿ ಊರಿಗೆ ಹೋಗುವಾಗ ತನ್ನದೇ ತೋಟದ ಕಾಫಿಪುಡಿ ಕೊಡಲು ರಾಜೇಶ್ವರಿ ಮರೆತಿದ್ದರು. ಅಂಚೆಯಲ್ಲಿ ಹೋದ ಕಾಫಿಪುಡಿಯ ಪ್ರಮಾಣ ನೋಡಿದ ಕಾರಂತರು ‘ನಿರುತ್ತರ’ಕ್ಕೆ ಬರೆದ ಉತ್ತರವದು.

‘ಕಾರಂತರ ಪ್ರಯೋಗಶೀಲತೆ, ತಂದೆ ಕುವೆಂಪು ಅವರ ಕಲಾತ್ಮಕತೆ, ಲೋಹಿಯಾ ಅವರ ಸಮಾಜವಾದವೇ ನನಗೆ ಸ್ಫೂರ್ತಿ’ ಎಂದು ತೇಜಸ್ವಿ ಆಗಾಗ ಹೇಳಿದರೂ ಕಾರಂತರನ್ನು ಎಂದೂ ಅವರು ನೇರವಾಗಿ ಭೇಟಿಯಾದವರಲ್ಲ. ‘ನಾನು ಪರಿಸರದ ಬಗ್ಗೆ ಬರೆಯುವೆ. ನೀವೂ ಬರೆಯುತ್ತೀರಿ. ನಾನು ಗಮನಿಸಿ ಬರೆಯುವೆ. ನೀವು ಅನುಭವಿಸಿ ಬರೆಯುವಿರಿ. ನನ್ನ ಅನುಭವಕ್ಕಿಂತ ನಿಮ್ಮದೇ ಹಿರಿದು. ನಾನು ನಿಮ್ಮ ಮನೆಗೆ ಬರುವವನಿದ್ದೇನೆ’ ಹೀಗೆಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ, ತನಗಿಂತ ಹಿರಿಯ ಲೇಖಕ ಶಿವರಾಮ ಕಾರಂತರು ಪೂರ್ಣಚಂದ್ರ ತೇಜಸ್ವಿಯವರಿಗೆ ಪತ್ರ ಬರೆದಾಗ ಗಂಡನಿಗಿಂತ ಹೆಚ್ಚು ಹಿರಿಹಿರಿ ಹಿಗ್ಗಿದವರು, ಸಂಭ್ರಮಿಸಿದವರು ರಾಜೇಶ್ವರಿ.

ತೇಜಸ್ವಿ ಯಾವತ್ತೂ ನೆಲಬಿಟ್ಟು ಎದ್ದು ಬಂದವರಲ್ಲ. ನಿರಂತರ ಹಸಿರು ಮತ್ತು ಕೆಸರಿಗೆ ಕಾಲಿಟ್ಟುಕೊಂಡೇ ಬರೆದವರು. ಮೂಡಿಗೆರೆಯ ಮಹಾಜನರು, ಸ್ವಂತ ತೋಟದ ಕೂಲಿಯಾಳುಗಳು ಬಂದು ಹೋದಷ್ಟು ಸಲೀಸಾಗಿ ‘ರಾಜೇಶ್‌’ (ರಾಜೇಶ್ವರಿಯವರು) ತೇಜಸ್ವಿ ಅವರ ಕೃತಿಗಳಲ್ಲಿ ಕಾಣಿಸಿಕೊಂಡಿಲ್ಲ. ಬರೆಯುವ ಶಕ್ತಿ ಇದ್ದರೂ ನಾಲ್ಕೈದು ದಶಕ ಜತೆಯಾಗಿ ಬದುಕಿದರೂ ಮಡದಿಗೆ ನೀನೂ ಬರಿ ಎಂದು ತೇಜಸ್ವಿ ಹೇಳಿದವರಲ್ಲ. ತೇಜಸ್ವಿ ಕೃತಿಯ ಮೊದಲ ಓದುಗಳಾಗುವುದೇ ಪರಮಸುಖ ಎಂದು ಭಾವಿಸಿದವರು ರಾಜೇಶ್ವರಿ.

‘ಕುವೆಂಪು ಮಗನಂತೆ, ಸುರಸುಂದರನಂತೆ, ಬಹಳ ಬುದ್ಧಿವಂತ’ ಎಂದು ಕೇಳಿಸಿಕೊಂಡಿದ್ದ ತತ್ವಶಾಸ್ತ್ರ ಎಂ.ಎ. ಮಾಡುವ ರಾಜೇಶ್ವರಿ ಅದೇ ಕ್ಯಾಂಪಸ್ಸಿನಲ್ಲಿದ್ದ ಕನ್ನಡ ಎಂ.ಎ. ತರಗತಿಗೆ ಆಗಾಗ ಬಂದು ಇಣುಕುತ್ತಿದ್ದರಂತೆ. ಈ ಪ್ರೇಮಕಥೆ ಕನ್ನಡಿಗರಿಗೆ ಗೊತ್ತಾಗಿದ್ದು ರಾಜೇಶ್ವರಿ ಅವರ ‘ನನ್ನ ತೇಜಸ್ವಿ’ಯಲ್ಲೇ.

‘ಕುವೆಂಪು– ತೇಜಸ್ವಿ’ ಇಬ್ಬರು ಸರಸ್ವತಿ ಪುತ್ರರ ನಡುವೆ ಬದುಕಿದ ರಾಜೇಶ್ವರಿ ತುಂಬು ಜೀವನವನ್ನು ಸಾರ್ಥಕವಾಗಿ ಬಾಳಿದವರು.

ತೇಜಸ್ವಿ, ಕುವೆಂಪು ಜತೆಗಿನ ಕರ್ನಾಟಕದ ನೂರಾರು ಬರಹಗಾರ, ಸಾಧಕರ ಬದುಕಿನ ಖಾಸಗಿತನವನ್ನು ನನ್ನೆದುರು ರಾಶಿ ಸುರಿದವರು ರಾಜೇಶ್ವರಿಯವರು. ‘ಈ ಕಟ್ಟಿನಲ್ಲಿ ಎರಡು ಸಾವಿರಕ್ಕೂ ಹೆಚ್ಚು ಪತ್ರಗಳಿವೆ. ಸಂಪಾದಿಸಿ ಪುಸ್ತಕ ಮಾಡಿಕೊಡುವ ಜವಾಬ್ದಾರಿ ನಿಮ್ಮದು’ ಎಂದು ಹೇಳಿದಾಗ, ಆ ಕ್ಷಣ ರಾಜೇಶ್ವರಿ ಕುಟುಂಬ ನನ್ನೊಂದಿಗೆ ಇರಿಸಿದ ಪ್ರೀತಿ, ನಂಬಿಕೆಗೆ ನ್ಯಾಯ ಒದಗಿಸಲು ಸಾಧ್ಯವೇ ಇಲ್ಲ ಎಂದು ಅನ್ನಿಸಿದ್ದೂ ಹೌದು.

‘ತೇಜಸ್ವಿ ಪತ್ರಗಳು’ ಪುಸ್ತಕ ಬಿಡುಗಡೆಗೆ ಬಂದವರು ದೇರ್ಲಕ್ಕೆ ಬಂದು ಮನೆಯಂಗಳದಲ್ಲಿ ನಿಂತು ಹೇಳಿದ ಮೊದಲ ಮಾತೇ ‘ತೇಜಸ್ವಿ ಇಲ್ಲಿಗೊಮ್ಮೆ ಬರಬೇಕಿತ್ತು’ ಎಂದು. ಅವರಿಲ್ಲ. ಅಮ್ಮ ನೀವು ಬಂದಿರಲ್ಲ, ಅದೇ ನನ್ನ ಭಾಗ್ಯ ಎಂದಿದ್ದೆ.

ಹೌದು ಪರಿಸರವನ್ನು ಗಾಢವಾಗಿ ಪ್ರೀತಿಸುತ್ತಿದ್ದ, ವಿಕೃತ ನಾಗರಿಕ ಜಗತ್ತಿನಿಂದ ದೂರವಾಗಿ ಹಳ್ಳಿಯಲ್ಲಿ ಬದುಕಬೇಕೆಂದು ಹಪಹಪಿಸುತ್ತಿದ್ದ ತೇಜಸ್ವಿಯವರು ಈ ಭೂಮಿಯ ಮೇಲೆ ಚಿಕ್ಕಮಗಳೂರಿನ ಮೂಡಿಗೆರೆಯನ್ನೇ ಆಯ್ಕೆ ಮಾಡಿಕೊಳ್ಳಲು ಕಾರಣ ರಾಜೇಶ್ವರಿಯವರೇ. ಮೂಡಿಗೆರೆ ರಾಜೇಶ್ವರಿ ಅವರ ತೌರು. ತಾನು ಬರೆಯದೇ, ಬರೆದುದನ್ನು ಪ್ರಕಟಿಸದೇ ಕೃತಿ ಒಂದರಿಂದಲೇ ಬದುಕಬಲ್ಲೇ ಎಂಬ ಯಾವ ನಂಬಿಕೆಯೂ ತೇಜಸ್ವಿ ಅವರಿಗೆ ಇದ್ದಂತಿಲ್ಲ. ಬೇಟೆ, ಗಾಳ, ಫೊಟೋಗ್ರಫಿಯ ಹವ್ಯಾಸ, ಓದು–ಬರಹದ ಸುಖಕ್ಕೆ ಒದಗುತ್ತಿದ್ದ ಏಕಾಂತದ ಹಸಿರು ಶಕ್ತಿಯನ್ನು ಕೃಷಿಗಿಂತ ಹೆಚ್ಚು ಅವರು ನಂಬಿದ್ದರು. ತಾನೇನು ಬರೆಯದೇ ತೇಜಸ್ವಿ ಇರುವವರೆಗೂ ಅವರು ಬರೆದುದ್ದನ್ನು ಓದುತ್ತಿದ್ದ ರಾಜೇಶ್ವರಿ ಲೌಕಿಕವಾಗಿ ತೇಜಸ್ವಿ, ಕುಟುಂಬ, ಕೃಷಿ ವಿಚಾರದಲ್ಲಿ ಗರಿಷ್ಠ ನಿಗಾ ಇಡುತ್ತಿದ್ದರು. ಗಂಡ–ಹೆಂಡತಿ ಓದಿದ ಪದವಿಯನ್ನು ಉದ್ಯೋಗಕ್ಕೆ ಬದಲಾಯಿಸಿಕೊಳ್ಳದೇ, ನಗರದಲ್ಲಿ ಉಳಿಯದೇ ಹಳ್ಳಿಗೆ ಸರಿದು ಆರಂಭದ ದಿನಮಾನಗಳಲ್ಲಿ ಕೃಷಿ ಮಾಡಿ ಬಂದ ಹಸಿರು ಉತ್ಪನ್ನಗಳನ್ನು ಸಂತೆಗೆ ಒಯ್ದು ಮಾರಿದ ಕಡು ಕಷ್ಟದ ದಿನಗಳೂ ಅವರಿಗೆ ನೆನಪಿವೆ.

ತೇಜಸ್ವಿ ಇಲ್ಲವಾದ ಮೇಲೆ ‘ನಿರುತ್ತರ’ ತೋಟ ಸೊಂಪಾಗಿ ನಳನಳಿಸಿದ್ದನ್ನು ನಾನು ಕಣ್ಣಾರೆ ಕಂಡಿದ್ದೇನೆ. ತೇಜಸ್ವಿಯವರು ಕಾಫಿ ತೋಟದ ಕಳೆಯನ್ನು ಕತ್ತಿಯಿಂದ ಕಡಿಯುತ್ತಿದ್ದರೆ. ಶ್ರೀಮತಿಯವರು ಕಳೆಕೊಳೆಯನ್ನೆಲ್ಲಾ ಹಾರೆಯಿಂದ ಹೆರೆಹೆರೆದು ಬುಡಕ್ಕೆ ರಾಶಿ ಹಾಕುತ್ತಿದ್ದರು. ತೇಜಸ್ವಿಯವರಿಗೆ ಇವೆಲ್ಲಾ ಅನಗತ್ಯವಾಗಿ ಕಂಡರೆ ರಾಜೇಶ್ವರಿ ಅವರಿಗೆ ಹಿರಿವಯಸ್ಸಿನಲ್ಲೂ ಅದೆಲ್ಲಾ ಆಗಲೇಬೇಕಾದ ಕೆಲಸಗಳಾಗಿದ್ದವು. ಕಾಳುಮೆಣಸನ್ನು ನೆಲಕ್ಕೆ ಹರಡಿ ಪಾರದರ್ಶಕ ಪ್ಲಾಸ್ಟಿಕ್‌ ಹೊದೆಸಿ ಬೇಗ ಒಣಗಿಸುವ, ಮೆಣಸನ್ನು ಕಡುಕಪ್ಪು ಮಾಡುವ ತಂತ್ರವನ್ನು ನನಗೂ ಅವರು ಕಲಿಸಿದ್ದರು. ಈ ಸುಖಕ್ಕಾಗಿಯೇ ಅವರಿಗೆ ಮಹಾನಗರ ಒಗ್ಗುತ್ತಿರಲಿಲ್ಲ. ‘ನಿರುತ್ತರ’ದ ನಿರುದ್ವಿಗ್ನ ಹಸಿರು ಮತ್ತು ತೇಜಸ್ವಿ ಅವರ ನೆನಪಿನ ಕಾರಣಕ್ಕಾಗಿ ಮಕ್ಕಳಿಬ್ಬರೂ ಅವರನ್ನು ರಾಜಧಾನಿಗೆ ಕರೆದರೂ ಹೋಗದೇ ತೋಟದಲ್ಲೇ ಉಳಿದಿದ್ದರು.

ರಾಜೇಶ್ವರಿ ತೇಜಸ್ವಿ ಅವರು ಬರವಣಿಗೆಯಲ್ಲಿ ಗಂಭೀರವಾಗಿ ತೊಡಗಿಕೊಂಡದ್ದು ತೇಜಸ್ವಿ ಇಲ್ಲವಾದ ಮೇಲೆಯೇ. ‘ನಮ್ಮ ಮನೆಗೆ ಗಾಂಧಿ ಬಂದರು’ ಎಂಬ ಕೃತಿಗಿಂತ ಅವರು ಬರೆದ ‘ನನ್ನ ತೇಜಸ್ವಿ’ ಶ್ರೇಷ್ಠ ಕೃತಿ. ಪತಿಯ ಅಕಾಲಿಕ ಸಾವು ಮತ್ತು ತನ್ನನ್ನು ಆವರಿಸಿದ ಕಾಡು, ಅಲ್ಲಿಯ ಏಕಾಂತ ತೇಜಸ್ವಿ ಅವರೊಂದಿಗೆ ಇದ್ದ ಉತ್ಕಟ ಸಂಬಂಧ ಅವರಿಂದ ಇಂಥ ಕೃತಿಯನ್ನು ಬರೆಸಿದೆ. ಅದು ಏಕಕಾಲದಲ್ಲಿ ರಾಜೇಶ್ವರಿ ಮತ್ತು ತೇಜಸ್ವಿ ಇಬ್ಬರ ಆತ್ಮಕತೆಯೂ ಹೌದು. ಹಾಗೆ ನೋಡಿದರೆ ತೇಜಸ್ವಿ ಅವರ ಸಮಕಾಲೀನ ಬರಹಗಾರರ ಪತ್ನಿಯರ ಪೈಕಿ ಅತ್ಯಂತ ಹೆಚ್ಚು ಶೈಕ್ಷಣಿಕ ಪದವಿಯ ಅರ್ಹತೆ ಇದ್ದವರು ರಾಜೇಶ್ವರಿಯವರೇ. ತತ್ವಶಾಸ್ತ್ರದಲ್ಲಿ ಎಂ.ಎ ಮಾಡಿದರೂ ಜೀವನದುದ್ದಕ್ಕೂ ಎಂದೂ ರಾಜೀಯಾಗದೇ ಬದುಕಿದ್ದ ಕನ್ನಡದ ಬಹುದೊಡ್ಡ ನೈತಿಕ ಶಕ್ತಿ ಆಗಿದ್ದ ತೇಜಸ್ವಿ ಬದುಕಿಗೆ ಗಟ್ಟಿ ಪಾಯವಾಗಿದ್ದ ರಾಜೇಶ್ವರಿ ಸಾವಿನಲ್ಲೂ ಇತರರಿಗೆ ಮಾದರಿಯಾದವರು. ಅವರ ಇಚ್ಛೆಯಂತೆ ಅವರ ದೇಹವನ್ನು ದಾನ ಮಾಡಲಾಗಿದೆ.

(ಲೇಖಕ ತೇಜಸ್ವಿಯವರ ಒಡನಾಡಿ, ಲೇಖಕ, ಕೃಷಿಕ)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು