ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನ್‌ಲೈನ್‌ನಲ್ಲಿ ಹಣಕಾಸಿನ ವಂಚನೆ ಹೆಚ್ಚಳ

ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಹೋಟೆಲ್‌ಗಳೇ ಗುರಿ, ಸೈನಿಕರ ಹೆಸರಿನಲ್ಲಿ ಕರೆ ಮಾಡುವ ಕಳ್ಳರು
Last Updated 29 ಜನವರಿ 2021, 19:30 IST
ಅಕ್ಷರ ಗಾತ್ರ

ಮಂಡ್ಯ: ಜಿಲ್ಲೆಯಲ್ಲಿ ಆನ್‌ಲೈನ್‌ ಮೂಲಕ ಹಣಕಾಸಿನ ವಂಚನೆ ಪ್ರಕರಣಗಳು ಹೆಚ್ಚಳವಾಗುತ್ತಿದ್ದು ನಗರದಲ್ಲಿರುವ ಸೈಬರ್‌ ಪೊಲೀಸ್‌ ಠಾಣೆ ಪೊಲೀಸರಿಗೆ ಆರೋಪಿಗಳ ಪತ್ತೆ ಕಾರ್ಯ ತಲೆನೋವಾಗಿ ಪರಿಣಮಿಸಿದೆ.

ಸಾಮಾಜಿಕ ಜಾಲತಾಣಗಳ ಮೂಲಕ ಪರಿಚಯ ಮಾಡಿಕೊಂಡು, ಒಳ್ಳೆಯವರಂತೆ ನಟಿಸಿ ಬ್ಯಾಂಕ್‌ ಖಾತೆ, ಎಟಿಎಂ ಕಾರ್ಡ್‌ ಪಿನ್‌ ಸಂಖ್ಯೆ, ಒಟಿಪಿ ವಿವರ ಪಡೆದು ಖಾತೆಯಲ್ಲಿರುವ ಹಣ ವಂಚನೆ ಮಾಡುತ್ತಿದ್ದಾರೆ. ನಗರದ ಪೂರ್ವ ಪೊಲೀಸ್‌ ಠಾಣೆಯ ಕಟ್ಟಡದಲ್ಲಿ ಸೈಬರ್‌ ಪೊಲೀಸ್‌ ಠಾಣೆಯಿದೆ. ಜಿಲ್ಲೆಗೆ ಒಂದೇ ಠಾಣೆ ಇದ್ದು ಆನ್‌ಲೈನ್‌ ವಂಚನೆ ಪ್ರಕರಣಗಳಲ್ಲಿ ವಂಚಕರ ಪತ್ತೆ ಕಠಿಣವಾಗಿದೆ.

ಹೋಟೆಲ್‌ ಮಾಲೀಕರಿಗೆ ವಂಚನೆ: ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿರುವ ಹೋಟೆಲ್‌ಗಳನ್ನು ಗುರಿಯಾಗಿಸಿಕೊಂಡು ನಡೆಸುವ ವಂಚನೆ ಪ್ರಕರಣಗಳು ಜಿಲ್ಲಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿವೆ. ನಾಗಮಂಗಲದಲ್ಲಿ ರಾಷ್ಟ್ರೀಯ ಹೆದ್ದಾರಿ ಬದಿಯ ವೈಭವ್‌ ಹೋಟೆಲ್‌ ಮಾಲೀಕರಿಗೆ ಮಾಡಿರುವ ವಂಚನೆ ಸೋಜಿಗ ಎನಿಸುತ್ತದೆ.

ವೈಭವ್‌ ಹೋಟೆಲ್‌ ಮಾಲೀಕ ರಮಾನಂದ್‌ ಅವರಿಗೆ ಒಂದು ಕರೆ ಬರುತ್ತದೆ .‘ಆರ್ಮಿ ಕಮಾಂಡರ್‌ ಮಾತನಾಡುತ್ತಿದ್ದೇವೆ. ನಾವು 20 ಮಂದಿ ಇದ್ದು ತಿಂಡಿ ಬೇಕಾಗಿದೆ. ನಮ್ಮ ಹುಡುಗ ಬರುತ್ತಾನೆ ಕೊಟ್ಟು ಕಳುಹಿಸಿ’ ಎಂದು ತಿಳಿಸುತ್ತಾನೆ. ಸೈನಿಕರ ಬಗ್ಗೆ ಅಪಾರ ಪ್ರೀತಿ ಉಳ್ಳವರಾದ ರಮಾನಂದ್‌ಆತನ ಮಾತು ನಂಬಿ ತಿಂಡಿ ಕಟ್ಟಿಡುತ್ತಾರೆ. ₹ 3,700ರಷ್ಟು ಬಿಲ್‌ ಆಗುತ್ತದೆ.

ಮತ್ತೆ ಕರೆ ಮಾಡಿದ ಕಳ್ಳ ‘ನಮ್ಮ ಹುಡುಗನಿಗೆ ಹಣ ಕೊಟ್ಟಿಲ್ಲ, ನಿಮ್ಮ ಅಕೌಂಟ್‌ ಡೀಟೆಲ್‌ ಕೊಡಿ, ಹಣ ಹಾಕುತ್ತೇನೆ’ ಎಂದು ಕೇಳುತ್ತಾನೆ. ರಮಾನಂದ ಅವರು ವಿವರ ನೀಡುತ್ತಾರೆ. ಮತ್ತೆ ಕರೆ ಮಾಡಿದ ಕಳ್ಳ, ಅಕೌಂಟ್‌ಗೆ ಹಣ ಜಮೆಯಾಗುತ್ತಿಲ್ಲ ಎಂದು ತಿಳಿಸಿ ಎಟಿಎಂ ವಿವರ ಪಡೆದುಕೊಳ್ಳುತ್ತಾನೆ.

ಕೆಲ ಕ್ಷಣಗಳ ನಂತರ ಮತ್ತೆ ಕರೆ ಮಾಡಿ ಒಟಿಪಿ ಸಂಖ್ಯೆ ಕೇಳುತ್ತಾನೆ. ಒಟಿಪಿ ನೀಡುವುದು ಸರಿಯಲ್ಲ ಎಂದು ರಮಾನಂದ ಅವರ ಮಗ ಎಚ್ಚರಿಸುತ್ತಾರೆ. ಆದರೆ, ಸೈನಿಕರು ಮೋಸ ಮಾಡುವುದಿಲ್ಲ ಎಂದು ತಿಳಿಸಿ ರಮಾನಂದ್‌ ಒಟಿಪಿ ನೀಡುತ್ತಾರೆ. ಕೆಲವೇ ಸೆಕೆಂಡ್‌ಗಳಲ್ಲಿ ₹ 10 ಸಾವಿರ ಹಣ ಖಾತೆಯಿಂದ ಕಡಿತಗೊಳ್ಳುತ್ತದೆ.

ಮತ್ತೆ ಕರೆ ಮಾಡಿದ ಕಳ್ಳ, ಇನ್ನೊಂದು ಒಟಿಪಿ ಕೇಳುತ್ತಾನೆ. ರಮಾನಂದ್‌ ಅವರಿಗೆ ತಕ್ಷಣ ಮೋಸದ ಅರಿವಾಗಿ ಅವನನ್ನು ಪ್ರಶ್ನಿಸುತ್ತಾರೆ. ತಕ್ಷಣ ಕರೆ ಸ್ಥಗಿತಗೊಳ್ಳುತ್ತದೆ. ಮತ್ತೆ ಕರೆ ಮಾಡಿದರೆ ಆ ಸಂಖ್ಯೆ ಸಂಪರ್ಕಕ್ಕೆ ಸಿಗುವುದಿಲ್ಲ. ರಮಾನಂದ್‌ ಮಂಡ್ಯ ಸೈಬರ್‌ ಠಾಣೆಗೆ ದೂರು ನೀಡಿದ್ದು ಇನ್ನೂ ಕಳ್ಳ ಪತ್ತೆಯಾಗಿಲ್ಲ.

‘ನನ್ನಂತೆ ಹಲವರು ಮೋಸ ಹೋಗಿದ್ದಾರೆ. ಬಹಳ ಒಳ್ಳೆಯವರಂತೆ ನಟಿಸಿ ವಂಚಿಸುತ್ತಾರೆ. ಫೋನ್‌ ನಂಬರ್‌ ಇದ್ದರೂ ಸೈಬರ್‌ ಪೊಲೀಸರಿಗೆ ಕಳ್ಳನನ್ನು ಹಿಡಿಯಲು ಸಾಧ್ಯವಾಗಿಲ್ಲ. ಫೋನ್‌ ಕಂಪನಿಗಳು ಪೊಲೀಸರಿಗೆ ಸಹಾಯ ಮಾಡಬೇಕು. ತಂತ್ರಜ್ಞಾನ ಬಳಸಿ ಸೈಬರ್‌ ಪ್ರಕರಣಗಳನ್ನು ಭೇದಿಸಬೇಕು’ ಎಂದು ರಮಾನಂದ್‌ ಒತ್ತಾಯಿಸಿದರು.

ವೈಭವ್‌ ಹೋಟೆಲ್‌ ಮಾತ್ರವಲ್ಲದೇ ನಗರದ ಅಪೂರ್ವ ದರ್ಶಿನಿ ಹೋಟೆಲ್‌ ಮಾಲೀಕರಿಗೂ ಇದೇ ರೀತಿ ಕರೆ ಬಂದಿದೆ. ಒಟಿಪಿ ನೀಡದೆ ಎಚ್ಚರಿಕೆ ವಹಿಸಿದ ಕಾರಣ ವಂಚನೆ ತಪ್ಪಿದೆ. ಮದ್ದೂರು ಬಳಿಯ ಹಲವು ಹೋಟೆಲ್‌ಗಳಲ್ಲೂ ಇದೇ ರೀತಿಯ ಪ್ರಕರಣ ನಡೆದಿವೆ.

ಜನ್ಮದಿನದ ದಿನವೇ ವಂಚನೆ
ನಗರದ ಯುವಕನೊಬ್ಬನಿಗೆ ವಿದೇಶಿ ವಾಟ್ಸ್ ಆ್ಯಪ್‌ ಗೆಳತಿಯೊಬ್ಬಳು ಜನ್ಮದಿನದ ದಿನವೇ ವಂಚಿಸಿದ್ದಾಳೆ. ‘ಜನ್ಮದಿನದ ಉಡುಗೊರೆ ಕಳುಹಿಸುವುದಾಗಿ ತಿಳಿಸಿದ್ದಳು. ಬ್ರ್ಯಾಂಡೆಡ್‌ ಬಟ್ಟೆಗಳು, ಶೂ, ಬೆಲ್ಟ್‌, ವಾಚ್‌ ಚಿತ್ರ ಕಳುಹಿಸಿದ್ದಳು. ಕಸ್ಟಮ್‌ ಶುಲ್ಕ ಎಂದು ₹ 15 ಸಾವಿರ ಹಣ ಫೋನ್‌ ಪೇ ಮಾಡುವಂತೆ ತಿಳಿಸಿದಳು. ನಂತರ ವಾಪಸ್‌ ಬರುತ್ತದೆ ಎಂದು ನಂಬಿಸಿದ್ದಳು. ಹಣ ಕಳುಹಿಸಿದ ನಂತರ ಉಡುಗೊರೆಯೂ ಬರಲಿಲ್ಲ, ಆಕೆಯ ಸಂಪರ್ಕವೂ ಸಿಗಲಿಲ್ಲ’ ಎಂದು ಯುವಕ ತಿಳಿಸಿದರು.

ಸಂಖ್ಯೆಯ ಹೆಚ್ಚಳ ಆತಂಕಕಾರಿ
ಸೈಬರ್‌ ಅಪರಾಧಗಳ ಸಂಖ್ಯೆ ಆತಂಕಕಾರಿ ರೀತಿಯಲ್ಲಿ ಹೆಚ್ಚಳವಾಗುತ್ತಿದೆ. 2017ರಲ್ಲಿ 6ರಷ್ಟಿದ್ದ ಪ್ರಕರಣ ಸಂಖ್ಯೆ 2020ರ ವೇಳೆಗೆ 68ಕ್ಕೆ ಏರಿಕೆಯಾಗಿದೆ.

'ಬ್ಯಾಂಕ್‌ ಸಿಬ್ಬಂದಿ ಹೆಸರಿನಲ್ಲಿ ಕರೆ ಮಾಡಿ ವಂಚನೆ ಪ್ರಕರಣ ಹೆಚ್ಚಾಗಿವೆ. ಫೋನ್‌ ಸಂಖ್ಯೆ, ವಿಳಾದ ಹುಡುಕಿದರೆ ಆರೋಪಿಗಳು ಅಲ್ಲಿ ಸಿಗುವುದಿಲ್ಲ. ತಪ್ಪಾದ ವಿಳಾಸ ನೀಡಿರುತ್ತಾರೆ. ಯಾರದ್ದೋ ಹೆಸರಿನಲ್ಲಿ ಫೋನ್‌ ನಂಬರ್‌ ಪಡೆದಿರುತ್ತಾರೆ. ಹೀಗಾಗಿ ಆರೋಪಿಗಳ ಪತ್ತೆ ಕಠಿಣವಾಗಿದೆ’ ಎಂದು ಮಂಡ್ಯ ಸೈಬರ್‌ ಠಾಣೆ ಇನ್‌ಸ್ಪೆಕ್ಟರ್‌ ಹರೀಶ್‌ಬಾಬು ತಿಳಿಸಿದರು.

ಅಂಕಿ ಅಂಶ:ಮಂಡ್ಯ ಸೈಬರ್ ಠಾಣೆ ಪ್ರಕರಣ
2017–
06
2018–09
2019– 64
2020– 68

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT