ಮಂಗಳವಾರ, ಮಾರ್ಚ್ 21, 2023
29 °C
ರಾಷ್ಟ್ರೀಯ ಶಿಕ್ಷಣ ನೀತಿಗೆ ವಿರೋಧ l ವಿಧಾನಸೌಧ ಮುತ್ತಿಗೆಗೆ ಯತ್ನ

ರಾಷ್ಟ್ರೀಯ ಶಿಕ್ಷಣ ನೀತಿಗೆ ವಿರೋಧ: ವಿದ್ಯಾರ್ಥಿಗಳ ಮೇಲೆ ಲಾಠಿ ಪ್ರಹಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಹಿಂಪಡೆಯಬೇಕು’ ಎಂದು ಒತ್ತಾಯಿಸಿ ವಿಧಾನಸೌಧಕ್ಕೆ ಮಂಗಳವಾರ ಮುತ್ತಿಗೆ ಹಾಕಲು ಯತ್ನಿಸಿದ ವಿದ್ಯಾರ್ಥಿಗಳ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದು, ಹಲವರು ಗಾಯಗೊಂಡರು.

50ಕ್ಕೂ ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದ ಪೊಲೀಸರು, ಸಂಜೆ ಬಿಡುಗಡೆ ಮಾಡಿದರು.

ಮಂಗಳೂರು, ತುಮಕೂರು, ಮೈಸೂರು, ಕಲಬುರ್ಗಿ, ದಾವಣಗೆರೆ, ಬೀದರ್ ಸೇರಿದಂತೆ ರಾಜ್ಯದ ಹಲವು ಕಾಲೇಜುಗಳ 400ಕ್ಕೂ ಹೆಚ್ಚು ವಿದ್ಯಾರ್ಥಿಗಳು ‘ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ’ ನೇತೃತ್ವದಲ್ಲಿ ಬೆಂಗಳೂ ರಿನಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ದರು. ‘ರಾಷ್ಟ್ರೀಯ ಶಿಕ್ಷಣ ನೀತಿಯು ಆರ್‌ಎಸ್‌ಎಸ್, ಬಿಜೆಪಿ ಹುನ್ನಾರ’ ಹಾಗೂ ‘ಶಿಕ್ಷಣದ ಹಕ್ಕು ಹತ್ತಿಕ್ಕುವ ತಂತ್ರ’ ಎಂಬ ಘೋಷಣಾ ಫಲಕಗಳನ್ನು ಪ್ರದರ್ಶಿಸಿದರು.

ಕೆಲ ವಿದ್ಯಾರ್ಥಿಗಳು, ಶಿಕ್ಷಣ ನೀತಿಯ ಪ್ರತಿಗಳನ್ನು ಹರಿದು ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಮೆರವಣಿಗೆ ಮೂಲಕ ಮೈಸೂರು ಬ್ಯಾಂಕ್ ವೃತ್ತಕ್ಕೆ ಬಂದು ಸೇರಿದ್ದ ವಿದ್ಯಾರ್ಥಿಗಳು, ಕೆಲ ಹೊತ್ತು ಪ್ರತಿಭಟನೆ ನಡೆಸಿದರು. ನಂತರ, ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಹೊರಟಿದ್ದರು.

ಅವರನ್ನು ತಡೆದ ಪೊಲೀಸರು, 'ವಿಧಾನಸೌಧ ಸುತ್ತ ನಿಷೇಧಾಜ್ಞೆ ಜಾರಿಯಲ್ಲಿದೆ. ಮೆರವಣಿಗೆಗೆ ಅವಕಾಶವಿಲ್ಲ. ವಾಪಸ್‌ ಹೋಗಿ’ ಎಂದರು. ಅದಕ್ಕೆ ಒಪ್ಪದ ವಿದ್ಯಾರ್ಥಿಗಳು, ಬ್ಯಾರಿಕೇಡ್‌ಗಳನ್ನು ತಳ್ಳಾಡಿ ಮುನ್ನುಗಿದರು. ಇದೇ ವೇಳೆ ಪ್ರತಿಭಟನಕಾರರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು.

ಪರಿಸ್ಥಿತಿ ಬಿಗಡಾಯಿಸುತ್ತಿದ್ದಂತೆ ಪೊಲೀಸರು, ವಿದ್ಯಾರ್ಥಿಗಳ ಮೇಲೆ ಲಾಠಿ ಬೀಸಿದರು. ಬಹುತೇಕ ವಿದ್ಯಾರ್ಥಿಗಳು, ಪರಸ್ಪರ ಕೈ ಹಿಡಿದು ರಸ್ತೆಯಲ್ಲಿ ಕುಳಿತು ಪ್ರತಿಭಟನೆ ಮುಂದುವರಿಸಿದರು. ಅವರನ್ನೆಲ್ಲ ವಶಕ್ಕೆ ಪಡೆದ ಪೊಲೀಸರು, ಎಳೆದೊಯ್ದು ಬಸ್‌ ಹತ್ತಿಸಿದರು.

ಲಾಠಿ ಪ್ರಹಾರದ ವೇಳೆ ವಿದ್ಯಾರ್ಥಿಯೊಬ್ಬರ ತಲೆಗೆ ಪೆಟ್ಟು ಬಿದ್ದು ರಕ್ತ ಸೋರುತ್ತಿತ್ತು. ವಾಹನ ಹತ್ತಲು ಒಪ್ಪದ ಅವರನ್ನು ಪೊಲೀಸರೇ ಎಳೆದೊಯ್ದು ಜೀಪು ಹತ್ತಿಸಿದರು. ಪರಸ್ಪರ ತಳ್ಳಾಟ– ನೂಕಾಟವೂ ನಡೆಯಿತು.

ಅನುಮತಿ ಪಡೆಯದೇ ಪ್ರತಿಭಟನೆ: ‘ವಿಧಾನಸೌಧ ಸುತ್ತಮುತ್ತಲಿನ 2 ಕಿ.ಮೀ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಹಾಗೂ ಐಪಿಸಿ ಸೆಕ್ಷನ್‌ 188 ಜಾರಿಗೊಳಿಸಲಾಗಿದೆ. ಇಂಥ ಸಂದರ್ಭದಲ್ಲೇ 400ಕ್ಕೂ ಹೆಚ್ಚು ಮಂದಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರು. ಬ್ಯಾರಿಕೇಡ್‌ಗಳನ್ನು ತಳ್ಳಿ, ಪೊಲೀಸರನ್ನೇ ನೂಕಾಡಿದರು. ಪರಿಸ್ಥಿತಿ ನಿಯಂತ್ರಿಸಲು ಬಲಪ್ರಯೋಗ ಮಾಡಬೇಕಾಯಿತು’ ಎಂದು ದಕ್ಷಿಣ ವಿಭಾಗದ ಡಿಸಿಪಿ ಎಂ.ಎನ್. ಅನುಚೇತ್ ಹೇಳಿದರು.

‘ಪ್ರತಿಭಟನೆಗೆ ಯಾವುದೇ ಅನುಮತಿ ಸಹ ಪಡೆದಿರಲಿಲ್ಲ. ಪ್ರತಿಭಟನೆ ಆಯೋಜಿಸಿದ್ದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಅವರು ಹೇಳಿದರು.

‘ಲಾಠಿಯಿಂದ ಪ್ರತಿಭಟನೆ ಹತ್ತಿಕ್ಕಬಹುದೆಂಬುದು ಭ್ರಮೆ’: 'ರಾಷ್ಟ್ರೀಯ ಶಿಕ್ಷಣ ನೀತಿ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಪೊಲೀಸರು ನಡೆಸಿದ ದೌರ್ಜನ್ಯ ಖಂಡನೀಯ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ, ಪೊಲೀಸರ ಲಾಠಿಯಿಂದ ಪ್ರತಿಭಟನೆ ಹತ್ತಿಕ್ಕಬಹುದೆಂದು ತಿಳಿದುಕೊಂಡಿದ್ದರೆ ಅದು ನಿಮ್ಮ ಭ್ರಮೆ’ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

‘ಶಿಕ್ಷಣದ ಕೇಸರೀಕರಣದ ಹುನ್ನಾರ’

‘ರಾಷ್ಟ್ರೀಯ ಶಿಕ್ಷಣ ನೀತಿಯು ಸಂವಿಧಾನದ ವಿರೋಧಿಯಾಗಿದೆ. ಶಿಕ್ಷಣದ ಖಾಸಗೀಕರಣಕ್ಕೆ ಒತ್ತು ನೀಡಿ, ಶಿಕ್ಷಣವನ್ನು ಕೇಸರೀಕರಣಗೊಳಿಸುವ ಹುನ್ನಾರ ಇದರ ಹಿಂದಿದೆ’ ಎಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಅನೀಸ್ ಕುಂಬ್ರ ಹೇಳಿದರು.

ಪ್ರತಿಭಟನೆ ವೇಳೆ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ನಮ್ಮ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ. ಇದರಿಂದಾಗಿ 25ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಾಯಗೊಂಡು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ’ ಎಂದರು.

‘ನೀತಿ ಹಿಂಪಡೆಯುವಂತೆ ಸರ್ಕಾರಕ್ಕೆ ಹಲವು ಬಾರಿ ಮನವಿ ಸಲ್ಲಿಸಿದರೂ ಸ್ಪಂದನೆ ಸಿಕ್ಕಿಲ್ಲ. ನೀತಿ ಬಗ್ಗೆ ಮುಕ್ತ ಚರ್ಚೆಗೆ ಸಿದ್ಧ ಎಂದಿದ್ದ ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ, ಇದುವರೆಗೂ ಚರ್ಚೆಗೆ ಬಂದಿಲ್ಲ’ ಎಂದೂ ಹೇಳಿದರು.

ಪೊಲೀಸರ ವರ್ತನೆಗೆ ಆಕ್ರೋಶ

ವಿದ್ಯಾರ್ಥಿಗಳ ಮೇಲೆ ಲಾಠಿ ಪ್ರಹಾರ ಮಾಡಿರುವ ಪೊಲೀಸರ ವರ್ತನೆಗೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ.

ಲಾಠಿ ಪ್ರಹಾರದ ವಿಡಿಯೊ, ಫೋಟೊ ಹಂಚಿಕೊಂಡಿರುವ ಹಲವರು, ‘ವಿದ್ಯಾರ್ಥಿಗಳ ಮೇಲೆ ಲಾಠಿ ಬೀಸಿರುವುದು ಖಂಡನೀಯ. ಲಾಠಿ ಬೀಸಲು ಹೇಳಿದ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದ್ದಾರೆ.

‘ಪ್ರತಿಯೊಬ್ಬರಿಗೂ ಪ್ರತಿಭಟಿಸುವ ಹಕ್ಕಿದೆ. ಶಾಂತಿಯುತವಾಗಿ ಪ್ರತಿ ಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳನ್ನು ಪೊಲೀಸರೇ ಪ್ರಚೋದಿಸಿ ಲಾಠಿಯಿಂದ ಹೊಡೆದಿದ್ದಾರೆ. ಹೋರಾಟದ ದಿಕ್ಕು ತಪ್ಪಿಸುವ ಯತ್ನ ಇದಾಗಿದೆ. ಘಟನೆ ಬಗ್ಗೆ ಸೂಕ್ತ ತನಿಖೆ ನಡೆಸಬೇಕು’ ಎಂದೂ ಒತ್ತಾಯಿಸಿದ್ದಾರೆ.

***
ಲಾಠಿ ಪ್ರಹಾರದ ಮೂಲಕ ವಿದ್ಯಾರ್ಥಿ ಹೋರಾಟವನ್ನು ಹತ್ತಿಕ್ಕಲು ಸರ್ಕಾರ ಯತ್ನಿಸಿದೆ. ಇದಕ್ಕೆ ನಾವು ಅಂಜುವುದಿಲ್ಲ. ನಮ್ಮ ಹೋರಾಟ ಮುಂದುವರಿಯಲಿದೆ ಅಥಾವುಲ್ಲಾ ಪೂಂಜಾಲಕಟ್ಟೆ,

- ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ, ರಾಜ್ಯ ಘಟಕದ ಅಧ್ಯಕ್ಷ

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು