ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಕ್ಕಟೆ ಪ್ರಚಾರ ಪಡೆಯುತ್ತಿರುವ ಮೋದಿ: ಎಚ್‌.ಡಿ. ಕುಮಾರಸ್ವಾಮಿ ವಾಗ್ದಾಳಿ

'ಹಿಂದಿನ ಸರ್ಕಾರಗಳು ರೂಪಿಸಿದ್ದ ಹಲವು ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಎಲ್ಲವನ್ನೂ ತಾವೇ ಮಾಡಿದ್ದು ಎಂಬಂತೆ ಬಿಂಬಿಸಿಕೊಳ್ಳುತ್ತಿದ್ದಾರೆ'
Last Updated 21 ಜೂನ್ 2022, 14:11 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ಉಪನಗರ ರೈಲು ಯೋಜನೆಯೂ ಸೇರಿದಂತೆ ಹಿಂದಿನ ಸರ್ಕಾರಗಳು ರೂಪಿಸಿದ್ದ ಹಲವು ಯೋಜನೆಗಳಿಗೆ ಸೋಮವಾರ ಶಂಕುಸ್ಥಾಪನೆ ನೆರವೇರಿಸಿರುವ ಪ್ರಧಾನಿ ನರೇಂದ್ರ ಮೋದಿ, ಎಲ್ಲವನ್ನೂ ತಾವೇ ಮಾಡಿದ್ದು ಎಂಬಂತೆ ಬಿಂಬಿಸಿಕೊಂಡು ಪುಕ್ಕಟೆ ಪ್ರಚಾರ ಪಡೆಯುತ್ತಿದ್ದಾರೆ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಟೀಕಿಸಿದರು.

ಸುದ್ದಿಗಾರರ ಜತೆ ಮಂಗಳವಾರ ಮಾತನಾಡಿದ ಅವರು, ‘ಪ್ರಧಾನಿ ₹ 33,000 ಕೋಟಿ ಮೊತ್ತದ ಕಾಮಗಾರಿಗಳಿಗೆ ಚಾಲನೆ ನೀಡುರುವುದಾಗಿ ಹೇಳಿಕೊಂಡಿದ್ದಾರೆ. ಈ ಯೋಜನೆಗಳು ಆರಂಭವಾಗಿದ್ದು ಬಿಜೆಪಿ ಸರ್ಕಾರದಿಂದ ಅಲ್ಲ. ಆದರೆ, ನಾನೇ ಆರಂಭ ಮಾಡುತ್ತಿದ್ದೇನೆ ಎಂದು ಮೋದಿ ಹೇಳಿದ್ದಾರೆ. ಇದು ಅವರ ಚಾಳಿ’ ಎಂದು ದೂರಿದರು.

40 ವರ್ಷದಿಂದ ಚರ್ಚೆಯಲ್ಲಿದ್ದ ಉಪನಗರ ರೈಲು ಯೋಜನೆಯನ್ನು 40 ತಿಂಗಳಲ್ಲಿ ಪೂರ್ಣಗೊಳಿಸುವುದಾಗಿ ಪ್ರಧಾನಿ ಹೇಳಿದ್ದಾರೆ. ಹಿಂದೆ ಅರುಣ್‌ ಜೇಟ್ಲಿ ಹಣಕಾಸು ಸಚಿವರಾಗಿದ್ದಾಗ ಕೇವಲ ₹ 1 ಕೋಟಿ ಅನುದಾನ ಒದಗಿಸಿದ್ದರು. ಈಗ ₹ 415 ಕೋಟಿ ಮಾತ್ರ ಒದಗಿಸಿದ್ದಾರೆ. ಮೋದಿ ತಾವೇ ರೂಪಿಸಿದ ಯೋಜನೆಗಳಿಗೆ ಚಾಲನೆ ನೀಡಿದರೋ ಅಥವಾ ಹಿಂದಿನ ಸರ್ಕಾರಗಳು ರೂಪಿಸಿದ್ದ ಯೋಜನೆಗಳಿಗೆ ಚಾಲನೆ ನೀಡಿದರೋ ಎಂಬುದನ್ನು ಬಿಜೆಪಿ ನಾಯಕರು ಜನರಿಗೆ ತಿಳಿಸಲಿ ಎಂದು ಸವಾಲು ಹಾಕಿದರು.

‘ನಾನು 2108ರಲ್ಲಿ ಮುಖ್ಯಮಂತ್ರಿ ಆಗುವವರೆಗೂ ಉಪನಗರ ರೈಲು ಯೋಜನೆ ದೂಳು ಕುಡಿಯುತ್ತಿತ್ತು. 14 ತಿಂಗಳ ಕಾಲ ಮುಖ್ಯಮಂತ್ರಿಯಾಗಿದ್ದ ನಾನು, ಕೇಂದ್ರ ರೈಲ್ವೆ ಸಚಿವರನ್ನು ಭೇಟಿಮಾಡಿ ಚರ್ಚಿಸಿದ್ದೆ. ಎರಡೇ ತಿಂಗಳಲ್ಲಿ ₹ 23,000 ಕೋಟಿ ವೆಚ್ಚದ ಯೋಜನಾ ಪ್ರಸ್ತಾವ ಸಿದ್ದಪಡಿಸಿ, ಸಲ್ಲಿಸಿದ್ದೆ. ತಕ್ಷಣ ಶಂಕುಸ್ಥಾಪನೆಗೆ ಮನವಿ ಮಾಡಿದ್ದೆ. 2019ರ ಲೋಕಸಭಾ ಚುನಾವಣೆಗೂ ಮೊದಲು ಅಡಿಗಲ್ಲು ಹಾಕಲ್ಲು ನಿರ್ಧರಿಸಿದ್ದೆ. ಆದರೆ, ಬಿಜೆಪಿ ಸರ್ಕಾರ ದುರುದ್ದೇಶದಿಂದ ಯೋಜನೆಗೆ ಒಪ್ಪಿಗೆ ನೀಡಿರಲಿಲ್ಲ’ ಎಂದು ವಾಗ್ದಾಳಿ ನಡೆಸಿದರು.

ಕಾಲಮಿತಿಯಲ್ಲಿ ಯೋಜನೆ ಪೂರ್ಣಗೊಳಿಸುವ ತೀರ್ಮಾನವನ್ನು ತಮ್ಮ ಸರ್ಕಾರ ಕೈಗೊಂಡಿತ್ತು. ಅದಕ್ಕೆ ಕೇಂದ್ರ ಸರ್ಕಾರ 19 ಷರತ್ತು ವಿಧಿಸಿತ್ತು. ಆ ಷರತ್ತುಗಳನ್ನೂ ಸರ್ಕಾರ ಪೂರ್ಣಗೊಳಿಸಿತ್ತು. ಮೈತ್ರಿ ಸರ್ಕಾರ ಪತನವಾದ ಬಳಿಕ ಮೂರು ವರ್ಷಗಳ ಕಾಲ ಉಪನಗರ ರೈಲು ಯೋಜನೆ ಮೂಲೆ ಸೇರಿತ್ತು. ಈಗ ಚುನಾವಣೆ ಸಮೀಪಿಸುತ್ತಿದೆ ಎಂಬ ಕಾರಣಕ್ಕೆ ಯೋಜನೆಗೆ ಚಾಲನೆ ನೀಡಲಾಗಿದೆ. ಇದೊಂದು ಚುನಾವಣಾ ಗಿಮಿಕ್‌ ಎಂದರು.

ಉಪನಗರ ವರ್ತುಲ ರಸ್ತೆ ಕೂಡ ತಮ್ಮ ಸರ್ಕಾರದ ಅವಧಿಯಲ್ಲಿ ರೂಪಿಸಿದ್ದ ಯೋಜನೆ. ಜೆಡಿಎಸ್‌ ನೇತೃತ್ವದ ಮೈತ್ರಿ ಸರ್ಕಾರದಲ್ಲಿ ರೂಪಿಸಿದ್ದ ಹಲವು ಯೋಜನೆಗಳನ್ನು ಬಿಜೆಪಿ ಈಗ ಪ್ರಚಾರ ಪಡೆಯಲು ಬಳಸುತ್ತಿದೆ ಎಂದು ದೂರಿದರು.

ರಾಜ್ಯದಲ್ಲಿ ಭೀಕರ ಪ್ರವಾಹ ಸೇರಿದಂತೆ ಯಾವುದೇ ಸಂಕಷ್ಟ ಎದುರಾದರೂ ಪ್ರಧಾನಿ ಇಲ್ಲಿಗೆ ಬಂದು ನೆರವಿಗೆ ನಿಲ್ಲಲಿಲ್ಲ. ಪ್ರತಿ ವಿಷಯದಲ್ಲೂ ರಾಜ್ಯದ ಬಗ್ಗೆ ಮಲತಾಯಿ ಧೋರಣೆ ಹೊಂದಿದ್ದಾರೆ. ಹೀಗಾಗಿ ರಾಜ್ಯದ ಬಿಜೆಪಿ ನಾಯಕರಿಗೆ ಜನರನ್ನು ಎದುರಿಸಲು ಮುಖವಿಲ್ಲ. ಈಗ ಮೋದಿಯವರನ್ನು ಮುಂದಿಟ್ಟುಕೊಂಡು ಹೋಗುತ್ತಿದ್ದಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT