ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಧನ ಇಲಾಖೆ: ವರ್ಗಾವಣೆ ಮಾರ್ಪಾಡು ನಿರಂತರ

‘ಒಪ್ಪಂದ’ ಮಾಡಿಕೊಂಡವರಿಗೆ ಆಯಕಟ್ಟಿನ ಹುದ್ದೆ: ಆರೋಪ
Last Updated 17 ಮೇ 2022, 16:19 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ವಿವಿಧ ವಿದ್ಯುತ್‌ ಸರಬರಾಜು ಕಂಪನಿಗಳಲ್ಲಿ (ಎಸ್ಕಾಂ) ವಿವಿಧ ಶ್ರೇಣಿಯ ನೂರಾರು ಎಂಜಿನಿಯರ್‌ಗಳಿಗೆ ಪ್ರಭಾರ ಹುದ್ದೆಯಲ್ಲಿರಿಸಿ ‘ಮುಂಬಡ್ತಿ’ ನೀಡಿ ಸ್ಥಳ ನಿಯುಕ್ತಿಗೊಳಿಸಿದ ಕೆಲವೇ ದಿನಗಳಲ್ಲಿ ವರ್ಗಾವಣೆ ಮಾರ್ಪಾಟು ಮಾಡಲಾಗಿದೆ. ವರ್ಷಕ್ಕೂ ಹಿಂದಿನಿಂದ ಈ ರೀತಿಯ ಪ್ರಕರಣಗಳು ನಿರಂತರವಾಗಿ ನಡೆಯುತ್ತಲೇ ಇವೆ ಎಂಬ ಆರೋಪಕ್ಕೆ ಇಲಾಖೆ ಗುರಿಯಾಗಿದೆ.

‘ಬ್ಯಾಕ್‌ಲಾಗ್‌ ಹುದ್ದೆಗಳನ್ನು ಭರ್ತಿ ಮಾಡುವವರೆಗೂ ಯಾವುದೇ ಹುದ್ದೆಗಳನ್ನು ಮುಂಬಡ್ತಿ ಮೂಲಕ ಬಡ್ತಿ ಮಾಡಬಾರದು ಮತ್ತು ಅಧಿಕಾರಿಗಳನ್ನು ಶಾಶ್ವತವಾಗಿ ಸ್ಥಳ ನಿಯುಕ್ತಿ ಮಾಡುವಂತಿಲ್ಲ’ ಎಂದು ಬಿ. ಗುರುಮೂರ್ತಿ ಮತ್ತು ಇತರರ ಪ್ರಕರಣದಲ್ಲಿ ಹೈಕೋರ್ಟ್‌ ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮಕ್ಕೆ(ಕೆಪಿಟಿಸಿಎಲ್‌) ನಿರ್ದೇಶನ ನೀಡಿತ್ತು. ಷರತ್ತಿನ ಆಧಾರದಲ್ಲಿ ಪ್ರಭಾರದಲ್ಲಿರಿಸಲು ನ್ಯಾಯಾಲಯ ಅನುಮತಿ ನೀಡಿತ್ತು. ಈ ಅವಕಾಶವನ್ನೇ ದುರ್ಬಳಕೆ ಮಾಡಿಕೊಂಡು ಮನಸೋ ಇಚ್ಛೆ ವರ್ಗಾವಣೆ ಮಾಡಲಾಗುತ್ತಿದೆ ಎಂಬುದು ಕೆಲವು ಎಂಜಿನಿಯರ್‌ಗಳ ದೂರಿದ್ದಾರೆ.

ವಿವಿಧ ಎಸ್ಕಾಂಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ 150 ಮಂದಿ ಸಹಾಯಕ ಎಂಜಿನಿಯರ್‌ಗಳಿಗೆ (ಎಇ) ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ಗಳ (ಎಇಇ) ಹುದ್ದೆಯ ಪ್ರಭಾರ ನೀಡಿ ಸ್ಥಳನಿಯುಕ್ತಿಗೊಳಿಸಿ 2021ರ ಮಾರ್ಚ್‌ 15ರಂದು ಆದೇಶ ಹೊರಡಿಸಲಾಗಿತ್ತು. ಆದರೆ, ಈ ಪಟ್ಟಿಯಲ್ಲಿದ್ದ 30ಕ್ಕೂ ಹೆಚ್ಚು ಜನರ ಸ್ಥಳ ನಿಯುಕ್ತಿಯನ್ನು ಬದಲಿಸಿ ನಂತರದ ದಿನಗಳಲ್ಲಿ ಪರಿಷ್ಕೃತ ಆದೇಶಗಳನ್ನು ಹೊರಡಿಸಲಾಗಿದೆ. 2021ರ ಮಾರ್ಚ್‌ನಲ್ಲಿ ಸ್ಥಳನಿಯುಕ್ತಿಗೊಳಿಸಿ ಹೊರಡಿಸಿದ್ದ ಆದೇಶವನ್ನು ಮಾರ್ಪಡಿಸುವ ಕೆಲಸ ಈಗಲೂ ಮುಂದುವರಿದಿದೆ.

‘ಪ್ರಭಾರ ಹುದ್ದೆ ನೀಡುವ ಅವಕಾಶವನ್ನು ಬಳಸಿಕೊಂಡು ಕೆಲವರನ್ನು ಆಯಕಟ್ಟಿನ ಹುದ್ದೆಗಳಿಗೆ ವರ್ಗಾವಣೆ ಮಾಡಲಾಗಿದೆ. ಇಲಾಖೆಯ ‘ದೊಡ್ಡವರ’ ಜತೆ ‘ಒಪ್ಪಂದ’ ಮಾಡಿಕೊಂಡವರಿಗಷ್ಟೇ ಲಾಭದಾಯಕ ಹುದ್ದೆಗೆ ಸ್ಥಳನಿಯುಕ್ತಿ ಆದೇಶ ಹೊರಡಿಸಲಾಗುತ್ತಿದೆ. ಹೈಕೋರ್ಟ್‌ ಆದೇಶಕ್ಕೆ ವ್ಯತಿರಿಕ್ತವಾಗಿ ಈ ರೀತಿಯ ವರ್ಗಾವಣೆ ನಡೆಯುತ್ತಿದೆ. ‘ಒಪ್ಪಂದ’ಕ್ಕೆ ಬಾರದವರನ್ನು 400ರಿಂದ 500 ಕಿ.ಮೀ. ದೂರಕ್ಕೆ ವರ್ಗಾವಣೆ ಮಾಡಲಾಗುತ್ತಿದೆ’ ಎಂದು ಕೆಲವು ನೊಂದ ಎಂಜಿನಿಯರ್‌ಗಳು ಅಳಲು ತೋಡಿಕೊಂಡಿದ್ದಾರೆ.

ಕಿರಿಯ ಎಂಜಿನಿಯರ್‌ಗಳು ಮಾತ್ರವಲ್ಲ; ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಹುದ್ದೆಯಿಂದ ಕಾರ್ಯನಿರ್ವಾಹಕ ಎಂಜಿನಿಯರ್‌, ಕಾರ್ಯನಿರ್ವಾಹಕ ಎಂಜಿನಿಯರ್‌ ಹುದ್ದೆಯಿಂದ ಸೂಪರಿಂಟೆಂಡಿಂಗ್‌ ಎಂಜಿನಿಯರ್‌, ನಂತರದ ಹಂತದಲ್ಲಿ ಮುಖ್ಯ ಎಂಜಿನಿಯರ್‌ಗಳ ಹುದ್ದೆಗಳವರೆಗೂ ಪ್ರಭಾರದ ಹೆಸರಿನಲ್ಲಿ ದೊಡ್ಡ ಸಂಖ್ಯೆಯಲ್ಲಿ ವರ್ಗಾವಣೆ, ಸ್ಥಳನಿಯುಕ್ತಿ ಆದೇಶಗಳನ್ನು ಹೊರಡಿಸಲಾಗಿದೆ ಎಂದು ದೂರುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT