ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚರ್ಚೆ: ಅಲ್ಪ ಪ್ರಮಾಣದ ಅಡಿಕೆ ಆಮದು ದೇಶದ ರೈತರ ಬಾಧಿಸದು

Last Updated 7 ಅಕ್ಟೋಬರ್ 2022, 19:38 IST
ಅಕ್ಷರ ಗಾತ್ರ

ನಮ್ಮ ನೆರೆಯಲ್ಲಿರುವ, ಪುಟ್ಟ ಹಾಗೂ ಎಲ್ಲ ಭಾಗಗಳಿಂದಲೂ ಭೂಮಿಯಿಂದ ಆವೃತವಾಗಿರುವ ಭೂತಾನ್‌ ದೇಶದಿಂದ ಭಾರತಕ್ಕೆ ಕನಿಷ್ಠ ಆಮದು ದರ ನಿರ್ಬಂಧವಿಲ್ಲದೆಯೇ ವಾರ್ಷಿಕ 17,000 ಟನ್‌ ಹಸಿರು ಅಡಿಕೆ ಆಮದು ಮಾಡಿಕೊಳ್ಳಲು ಕೇಂದ್ರ ಸರ್ಕಾರವು ಇತ್ತೀಚೆಗೆ ಅನುಮತಿ ನೀಡಿದೆ. ಇದು ದೇಶೀಯ ಅಡಿಕೆ ಬೆಳೆಗಾರರಲ್ಲಿ ಆತಂಕ ಉಂಟಾಗುವಂತೆ ಮಾಡಿದೆ.

ಆದರೆ, ವಾಸ್ತವ ಸಂಗತಿ ಅರಿಯದಿರುವ ಕಾರಣದಿಂದ ಬೆಳೆಗಾರರಲ್ಲಿ ಆತಂಕ ಮೂಡಿದೆ. ಅಡಿಕೆ ವರ್ತಕರು ಇಂತಹ ಅವಕಾಶವನ್ನು ದುರುಪಯೋಗ ಮಾಡಿಕೊಂಡು ಬೆಳೆಗಾರರರ ಭಾವನೆಯನ್ನು ಮುಂದಿಟ್ಟುಕೊಂಡು, ಮಾರುಕಟ್ಟೆಯಲ್ಲಿಪ್ರಸ್ತುತ ಇರುವ ಸುಸ್ಥಿರ ದರವನ್ನು ಕಡಿಮೆ ಮಾಡಿ ಲಾಭ ಮಾಡಿಕೊಳ್ಳುವ ಪ್ರಯತ್ನಕ್ಕೆ ಮುಂದಾಗುತ್ತಾರೆ. ದೇಶೀಯ ಅಡಿಕೆ ಮಾರುಕಟ್ಟೆ ಮತ್ತು ಮಾಧ್ಯಮಗಳಲ್ಲಿ ತೇಲಿ ಬಿಡುವ ಉಹಾಪೋಹ ಸುದ್ದಿಗಳು,ಅವೈಜ್ಞಾನಿಕ ಬೆಲೆ ವಿಶ್ಲೇಷಣೆಗಳು ಹಾಗೂ ಅಡಿಕೆಯ ಬಗ್ಗೆ ಬುಡವಿಲ್ಲದ ಆರೋಪಗಳನ್ನು ಮಾಡುತ್ತ ಮಾರುಕಟ್ಟೆಯ ಮೇಲೆ ನಿಯಂತ್ರಣ ಹೊಂದುವಹುನ್ನಾರ ಹೊಂದಿರುವ ಕೆಲವು ಮಾರಾಟಗಾರರು ಹಾಗೂ ರೈತ ಶೋಷಕರು ಇದಕ್ಕೆ ಕಾರಣ ಅಂದರೆ ಅತಿಶಯೋಕ್ತಿಯಲ್ಲ.

ಜಗತ್ತಿನಲ್ಲಿ ಉತ್ಪಾದನೆಯಾಗುವ ಅಡಿಕೆಯಲ್ಲಿ ಶೇ 50ಕ್ಕೂ ಹೆಚ್ಚು ಭಾಗ ಭಾರತದಲ್ಲಿಯೇ ಉತ್ಪಾದನೆ ಆಗುತ್ತಿದೆ. ಅದರಲ್ಲಿ ಸಿಂಹಪಾಲು ಕರ್ನಾಟಕದ ಕರಾವಳಿ, ಮಲೆನಾಡು ಹಾಗೂ ಮಲೆನಾಡಿನ ಸರಹದ್ದಿನ ಜಿಲ್ಲೆಗಳಲ್ಲಿ ಬೆಳೆಯಲಾಗುತ್ತಿದೆಎಂಬ ಹೆಗ್ಗಳಿಕೆ ನಮ್ಮದು.

ಕೇಂದ್ರ ಕೃಷಿ ಹಾಗೂ ರೈತ ಕಲ್ಯಾಣ ಸಚಿವ ನರೇಂದ್ರ ಸಿಂಗ್ ತೋಮರ್ ಅವರುರಾಜ್ಯಸಭೆಯಲ್ಲಿಇತ್ತೀಚೆಗೆ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ 2015–16ರಿಂದ 2019–20ರ ಐದು ವರ್ಷದ ಅವಧಿಯಲ್ಲಿ ದೇಶದ ಅಡಿಕೆ ಬೆಳೆಉತ್ಪಾದನೆ ದಾಖಲೆ ಪ್ರಮಾಣದಲ್ಲಿ ಅಂದರೆ ಸುಮಾರು ಶೇ 55ರಷ್ಟು ವೃದ್ಧಿಯಾಗಿದೆ. ಈ ಅವಧಿಯಲ್ಲಿ ಅಡಿಕೆ ಬೆಳೆ ಉತ್ಪಾದನೆ 7.3 ಲಕ್ಷ ಟನ್‌ನಿಂದ 11 ಲಕ್ಷ ಟನ್‌ಗೆ ಏರಿಕೆಯಾಗಿದೆ ಎಂಬ ಮಾಹಿತಿ ನೀಡಿದ್ದಾರೆ.ಕರ್ನಾಟಕವು ಅಡಿಕೆ ಉತ್ಪಾದನೆಯ ಮುಂಚೂಣಿ ರಾಜ್ಯವಾಗಿದ್ದು, ರಾಷ್ಟ್ರದ ಒಟ್ಟು ಅಡಿಕೆ ಉತ್ಪಾದನೆಯ ನಾಲ್ಕನೇ ಮೂರರಷ್ಟು ಅಡಿಕೆ ಬೆಳೆಯಲಾಗುತ್ತಿದೆ.ಕಳೆದ ಐದು ವರ್ಷಗಳಲ್ಲಿ ಅಡಿಕೆ ಉತ್ಪಾದನೆಯ ಪ್ರಮಾಣ ಶೇ 65ರಷ್ಟು ಹೆಚ್ಚಳವಾಗಿದೆ ಎಂದಿದ್ದಾರೆ. ರಾಜ್ಯದಲ್ಲಿ 2015–16ರಲ್ಲಿಅಡಿಕೆ ಬೆಳೆಯ ವಾರ್ಷಿಕ ಉತ್ಪನ್ನ 4.36‌ ಲಕ್ಷ ಟನ್‌ನಷ್ಟಿತ್ತು. 2019–20ರಲ್ಲಿ ಇದು 8.5 ಲಕ್ಷ ಟನ್‌ಗೆ ಏರಿಕೆಯಾಗಿದೆ.

ರಾಷ್ಟ್ರದಲ್ಲಿ ಕರ್ನಾಟಕವನ್ನು ಬಿಟ್ಟರೆ, ಅಸ್ಸಾಂ, ಮೇಘಾಲಯ, ತಮಿಳುನಾಡು, ಕೇರಳದಲ್ಲಿಯೂ ಅಡಿಕೆ ಬೆಳೆ ಬೆಳೆಯಲಾಗುತ್ತಿದೆ. ಮೇಘಾಲಯ ಹಾಗೂ ಕೇರಳ ರಾಜ್ಯದಲ್ಲಿ ಅಡಿಕೆ ಬೆಳೆಯುವ ಪ್ರದೇಶ ಹಾಗೂ ಪ್ರಮಾಣ ಇತ್ತೀಚಿನ ವರ್ಷಗಳಲ್ಲಿ ಗಣನೀಯವಾಗಿ ಕಡಿಮೆಯಾಗಿದೆ ಎಂದೂ ಹೇಳಲಾಗಿದೆ.

ಮನಮೋಹನ್‌ ಸಿಂಗ್‌ ನೇತೃತ್ವದ ಯು‍ಪಿಎ ಸರ್ಕಾರದ ಅವಧಿಯಲ್ಲಿ, ನೆರೆಯ ದೇಶಗಳೊಂದಿಗೆ ಸ್ನೇಹ ವೃದ್ಧಿಸಿಕೊಳ್ಳುವ ಪ್ರಯತ್ನದ ಭಾಗವಾಗಿ ದಕ್ಷಿಣ ಏಷ್ಯಾ ದೇಶಗಳ ಜತೆಗೆ ಮುಕ್ತ ವಾಣಿಜ್ಯ ಒಪ್ಪಂದಕ್ಕೆ 2006ರಲ್ಲಿ ಸಹಿ ಹಾಕಲಾಗಿದೆ. ಅದರ ಪರಿಣಾಮವಾಗಿ ಹೊರ ದೇಶಗಳಿಂದ ಅಡಿಕೆ ಆಮದಿಗೆ ಅವಕಾಶ ದೊರೆತಿದೆ. ಆಮದಾಗುವ ಅಡಿಕೆಯ ಕನಿಷ್ಠ ಆಮದು ದರವನ್ನು ಪ್ರತಿ ಕೆ.ಜಿ.ಗೆ ₹150ಕ್ಕೆ ನಿಗದಿ ಮಾಡಲಾಗಿತ್ತು. ಅದನ್ನು 2018ರಲ್ಲಿ ₹261ಕ್ಕೆ ಹೆಚ್ಚಿಸಲಾಗಿದೆ.

ದೇಶದಲ್ಲಿ ಉತ್ಪಾದನೆಯಾಗುವ ಅಡಿಕೆ ಬೆಳೆಯ ಒಟ್ಟು ಪ್ರಮಾಣವು ಸುಮಾರು 12 ಲಕ್ಷ ಟನ್‌ ಇದ್ದು, ಇದಕ್ಕೆ ಹೋಲಿಸಿದರೆ ಆಮದಾಗುವ ಪ್ರಮಾಣ ಬಹಳ ಸಣ್ಣದಾಗಿದೆ. ಹೀಗಾಗಿ, ದೇಶೀಯ ಅಡಿಕೆ ಮಾರುಕಟ್ಟೆ ಮೇಲೆ ಯಾವುದೇ ಪ್ರತಿಕೂಲ ಪರಿಣಾಮ ಉಂಟಾಗದು ಎಂಬುದು ಮೇಲ್ನೋಟಕ್ಕೇ ಕಂಡು ಬರುತ್ತದೆ.

ನಮ್ಮ ದೇಶದಲ್ಲಿ ಉತ್ಪಾದನೆಯಾಗುವ ಅಡಿಕೆಯ ಒಟ್ಟು ಮೌಲ್ಯ ಸುಮಾರು ₹5,400 ಕೋಟಿಗಳಷ್ಟಿದ್ದರೆ, ಆಮದಾಗುವ ಅಡಿಕೆಯ ಒಟ್ಟು ಮೌಲ್ಯ ₹400 ಕೋಟಿಯಿಂದ ₹500 ಕೋಟಿ ಮಾತ್ರ. ಹಾಗಾಗಿ, ರಾಜ್ಯದ ಅಡಿಕೆ ಬೆಳೆಗಾರರು ಭೂತಾನ್‌ನಿಂದ ಆಮದಾಗುವ ಅಡಿಕೆಯ ಕುರಿತು ಆತಂಕಪಡುವ ಅಗತ್ಯವೇ ಇಲ್ಲ.

ಭೂತಾನ್‌ನಿಂದ ಅನಿರ್ಬಂಧಿತ ದರದಲ್ಲಿ17,000 ಟನ್‌ ಹಸಿರು ಅಡಿಕೆ ಆಮದಿಗೆ ಮಾತ್ರ ಈಗ ಅವಕಾಶ ನೀಡಲಾಗಿದೆ. ಬಂದರು ಮೂಲಕ ಅಡಿಕೆಯನ್ನು ದೇಶದೊಳಕ್ಕೆ ತಂದರೆ ಮಾತ್ರ ಈ ವಿನಾಯಿತಿ ಅನ್ವಯ ಎಂಬ ಷರತ್ತು ಇದೆ. ಹೀಗಾಗಿ, ಸಾಗಾಣಿಕೆ ವೆಚ್ಚದಲ್ಲಿ ಹೆಚ್ಚಳವಾಗಲಿದ್ದು, ದೇಶೀಯ ಅಡಿಕೆಯ ಬೇಡಿಕೆಯಲ್ಲಿ ಯಾವುದೇ ವ್ಯತ್ಯಾಸ ಆಗುವುದಿಲ್ಲ.

ಮರದಿಂದ ಇಳಿಸಿದ ಹಸಿರು ಅಡಿಕೆಯನ್ನು ಮೂರು ಅಥವಾ ನಾಲ್ಕು ದಿನಗಳ ಒಳಗೆ ಸಂಸ್ಕರಿಸದಿದ್ದರೆ, ಅದರ ಗುಣಮಟ್ಟ ಕುಸಿದು ದೇಶೀಯ ಅಡಿಕೆಗಿಂತ ಕಳಪೆ ಎನಿಸಿಕೊಳ್ಳುವ ಸಾಧ್ಯತೆ ಹೆಚ್ಚು. ದೇಶೀಯವಾಗಿ ಉತ್ಪಾದನೆಯಾಗುವ ಅಡಿಕೆ ಬೆಳೆಯ ಉತ್ಪಾದನೆ ವೆಚ್ಚಕ್ಕಿಂತ ಕಡಿಮೆ ಬೆಲೆಗೆ ವಿದೇಶದಿಂದ ಆಮದಾಗುವ ಅಡಿಕೆಗೆ ಇನ್‌ವಾಯ್ಸ್‌ ಹಾಕಬಾರದು. ಆಮದಾಗುವ ಅಡಿಕೆಗೆ ಆಮದು ಸುಂಕ ಮತ್ತು ತೆರಿಗೆಯೂ ಸೇರುತ್ತದೆ. ಹೀಗಾಗಿ ವಿದೇಶದ ಅಡಿಕೆಯು ಕಡಿಮೆ ದರದಲ್ಲಿ ಲಭ್ಯ ಎಂಬ ಕಾರಣಕ್ಕೆ ದೇಶೀಯ ಅಡಿಕೆಯ ಬೇಡಿಕೆ ಕುಸಿಯುವುದಿಲ್ಲ. ಕೇಂದ್ರ ಸರ್ಕಾರದ ನಿರ್ಧಾರದಿಂದ ಅವಕಾಶಗಳು ಹೆಚ್ಚಾಗಬಹುದು. ಆದರೆ ವಾಸ್ತವದಲ್ಲಿ ಯಾವುದೇ ವ್ಯತ್ಯಾಸ ಆಗುವುದಿಲ್ಲ.

ರಾಜ್ಯದ ಅಡಿಕೆ ಬೆಳೆಗಾರರ ರಕ್ಷಣೆಯ ಹೊಣೆಗಾರಿಕೆ ಹೊತ್ತಿರುವ ರಾಜ್ಯದ ಅಡಿಕೆ ಟಾಸ್ಕ್‌ ಫೋರ್ಸ್‌ ಪರಿಸ್ಥಿತಿಯ ಮೇಲೆ ನಿಕಟ ನಿಗಾ ಇರಿಸಿದೆ. ಆರ್ಥಿಕ ತಜ್ಞರು, ಅಡಿಕೆ ಬೆಳೆಗಾರರ ಸಂಘಗಳು, ಸಂಸ್ಕರಣಾ ಉದ್ದಿಮೆಗಳು ಹಾಗೂ ಮಾರುಕಟ್ಟೆ ಪ್ರತಿನಿಧಿಗಳೊಂದಿಗೆ ಸತತ ಸಂಪರ್ಕದಲ್ಲಿ ಟಾಸ್ಕ್‌ ಫೋರ್ಸ್‌ ಇದೆ. ಈಗ ಸುಸ್ಥಿರವಾಗಿ ಇರುವ ಅಡಿಕೆ ಮಾರುಕಟ್ಟೆಯನ್ನು ಕಾಯ್ದುಕೊಳ್ಳುವ ಮತ್ತು ಬೆಳೆಗಾರರ ಹಿತ ಕಾಯುವ ದಿಸೆಯಲ್ಲಿ ಎಲ್ಲ ಪ್ರಯತ್ನಗಳನ್ನೂ ನಡೆಸಲಾಗುತ್ತದೆ.

ಅಡಿಕೆ ಆಮದು ಕನಿಷ್ಠ ಬೆಲೆಯನ್ನು ಈಗಿನ ₹261ರಿಂದ ₹406ಕ್ಕೆ ಹೆಚ್ಚಿಸಬೇಕು ಎಂದು ರಾಜ್ಯ ಅಡಿಕೆ ಟಾಸ್ಕ್‌ ಫೋರ್ಸ್‌ನ ಪ್ರತಿನಿಧಿಗಳ ನಿಯೋಗವು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ. ದೇಶೀಯ ಅಡಿಕೆ ಉತ್ಪಾದನೆಯ ಕನಿಷ್ಠ ವೆಚ್ಚವನ್ನು ಹೆಚ್ಚಳ ಮಾಡಿ ನಿಗದಿ ಮಾಡಬೇಕು ಎಂಬ ಒತ್ತಾಯದೊಂದಿಗೆ ಇನ್ನೊಂದು ನಿಯೋಗವು ಸದ್ಯದಲ್ಲಿಯೇ ದೆಹಲಿಗೆ ಹೋಗಲಿದೆ. ಇದು, ಅಡಿಕೆ ಬೆಳೆಗಾರರ ಹಿತ ರಕ್ಷಣೆಗಾಗಿ ಟಾಸ್ಕ್‌ ಫೋರ್ಸ್‌ ಕೈಗೊಂಡ ಕ್ರಮಗಳಲ್ಲಿ ಕೆಲವು ಮಾತ್ರ.

ಅಡಿಕೆಯು ಸಾವಿರಾರು ವರ್ಷಗಳಿಂದ ಬಳಕೆಯಲ್ಲಿದ್ದರೂ ಅದರ ಗುಣಮಟ್ಟಕ್ಕೆ ಸಂಬಂಧಿಸಿ ಯಾವುದೇ ವ್ಯಾಖ್ಯಾನ ಇಲ್ಲದಿರುವುದನ್ನು ಮನಗಂಡ ರಾಜ್ಯ ಅಡಿಕೆ ಟಾಸ್ಟ್‌ ಫೋರ್ಸ್‌, 2019ರಲ್ಲಿ ಸಂಬಂಧಪಟ್ಟ ಇಲಾಖೆಗಳೊಂದಿಗೆ ಈ ವಿಚಾರವನ್ನು ಚರ್ಚಿಸಿದೆ. ಈ ಕುರಿತು ದಾಖಲೆಗಳನ್ನು ಸಿದ್ಧಪಡಿಸಿದೆ. ಅಡಿಕೆ ಗುಣಮಟ್ಟ ಹಾಗೂ ವರ್ಗೀಕರಣ ನಿರ್ಧರಿಸುವ ಪರಿಪಾಟ ಇದರಿಂದಾಗಿ ಅಧಿಕೃತವಾಗಿ ರೂಪುಗೊಂಡಿದೆ.

ಒಣಗಿಸಿದ ಹಣ್ಣುಗಳ ಹೆಸರಿನಲ್ಲಿ ಅಡಿಕೆಯನ್ನು ಆಮದು ಮಾಡಿಕೊಂಡು ತೆರಿಗೆ ತಪ್ಪಿಸುವ ಷಡ್ಯಂತ್ರವನ್ನು ಪತ್ತೆ ಮಾಡಲಾಗುತ್ತಿದೆ. ಸ್ಕ್ಯಾನ್‌ ಯಂತ್ರ ಅಳವಡಿಕೆ ಮೂಲಕ ಇದನ್ನು ಸಾಧಿಸಲಾಗಿದೆ. ಹೀಗಾಗಿ ದೇಶೀಯ ಬೆಳೆಗಾರರ ಹಿತರಕ್ಷಣೆ ಸಾಧ್ಯವಾಗಿದೆ.

ಅಡಿಕೆ ಕ್ಯಾನ್ಸರ್‌ಕಾರಕ ಎಂಬ ಅಪಪ್ರಚಾರವನ್ನು ರಾಜ್ಯ ಅಡಿಕೆ ಟಾಸ್ಕ್‌ ಫೋರ್ಸ್‌ ಹೋಗಲಾಡಿಸಿದೆ. ಅಡಿಕೆಯು ಆರೋಗ್ಯದಾಯಕ ಎಂಬುದನ್ನು ದಾಖಲೆ ಸಮೇತ ಪ‍್ರತಿಪಾದಿಸಿದೆ. ಈ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ಗೂ ಅರ್ಜಿ ಸಲ್ಲಿಸಲಾಗಿದೆ. ಭೂತಾನ್‌ ದೇಶದಿಂದ ಅಡಿಕೆ ಆಮದು ಮಾಡುವುದರಿಂದ ರಾಜ್ಯದ ಬೆಳೆಗಾರರಿಗೆ ಯಾವುದೇ ತೊಂದರೆ ಆಗದು.

ಲೇಖಕ: ಆರಗ ಜ್ಞಾನೇಂದ್ರ, ಗೃಹ ಸಚಿವ ಹಾಗೂ ರಾಜ್ಯ ಅಡಿಕೆಟಾಸ್ಕ್ ಫೋರ್ಸ್ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT