ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪ್ರಜಾವಾಣಿ’ ಓದಿಗೆ ಕಾರಿನ ಉಡುಗೊರೆ

ರಸಪ್ರಶ್ನೆ ಸ್ಪರ್ಧೆಯಲ್ಲಿ ಸ್ವಿಫ್ಟ್ ಕಾರ್ ಗೆದ್ದ ಬೆಂಗಳೂರಿನ ವಿನುತಾ
Last Updated 12 ಫೆಬ್ರುವರಿ 2021, 17:38 IST
ಅಕ್ಷರ ಗಾತ್ರ

ಬೆಂಗಳೂರು: ‘ಪ್ರಜಾವಾಣಿ’ಯ ನಿರಂತರ ಓದು, ಛಲ ಮತ್ತು ಆಸಕ್ತಿಯ ಫಲವಾಗಿ ‘ಸ್ವಿಫ್ಟ್‌’ ಕಾರು ದಕ್ಕಿದೆ.

‘ಪ್ರಜಾವಾಣಿ’ ಮತ್ತು ‘ಡೆಕ್ಕನ್‌ ಹೆರಾಲ್ಡ್‌’ ರಸಪ್ರಶ್ನೆ ಸ್ಪರ್ಧೆಯಲ್ಲಿ ಬಂಪರ್‌ ಬಹುಮಾನ ಪಡೆದ ಬೆಂಗಳೂರಿನ ಎಂ. ವಿನುತಾ ಅವರ ಸಂಭ್ರಮದ ನುಡಿ ಇದು. 42 ದಿನಗಳು ನಡೆದ ರಸಪ್ರಶ್ನೆ ಸ್ಪರ್ಧೆಯಲ್ಲಿ ಲಕ್ಷಾಂತರ ಓದುಗರು ಪಾಲ್ಗೊಂಡಿದ್ದರು. ಆ ಪೈಕಿ ಬಂಪರ್‌ ಬಹುಮಾನ ವಿನುತಾ ಅವರಿಗೆ ಒಲಿದಿದೆ.

‘ಪ್ರಜಾವಾಣಿಯನ್ನು ನಿತ್ಯವೂ ತಪ್ಪದೇ ಓದುತ್ತಿದ್ದೆ. ಶಾಲಾ–ಕಾಲೇಜುಗಳಲ್ಲಿ ನಡೆಯುವ ರಸಪ್ರಶ್ನೆಗಳಲ್ಲಿ ಗೆಲುವು ಸಾಧಿಸಲೂ ಪತ್ರಿಕೆಯ ಓದು ನೆರವಿಗೆ ಬರುತ್ತಿತ್ತು. ಇದೇ ಸ್ಪರ್ಧೆಯಲ್ಲಿ ಟಿಫಿನ್‌ ಬಾಕ್ಸ್‌ ಕೂಡ ಉಡುಗೊರೆ ಬಂದಿದೆ. ಬಂಪರ್‌ ಬಹುಮಾನವಾಗಿ ಸ್ವಿಫ್ಟ್‌ ಕಾರ್‌ ಕೂಡ ಸಿಕ್ಕಿರುವುದರಿಂದ ಖುಷಿ ಆಗಿದೆ’ ಎಂದು ಅವರು ಸಂತಸ ಹಂಚಿಕೊಂಡರು.

‘ಕನ್ನಡ ಭಾಷಾ ಜ್ಞಾನಕ್ಕೆ ಪ್ರಜಾವಾಣಿ, ಇಂಗ್ಲಿಷ್‌ ಜ್ಞಾನ ಸುಧಾರಿಸಿಕೊಳ್ಳಲು ಡೆಕ್ಕನ್‌ ಹೆರಾಲ್ಡ್‌ ತುಂಬಾ ಸಹಕಾರಿಯಾಗಿವೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಗಳಿಸಲೂ ಇದರಿಂದ ಸಾಧ್ಯವಾಗುತ್ತಿದೆ’ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

‘ಇತ್ತೀಚೆಗೆ ಪ್ರಾರಂಭಿಸಿರುವ ‘ಸ್ಪರ್ಧಾವಾಣಿ’ ಅಂಕಣದಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ. ಮನೆ ಮದ್ದು ಮತ್ತಿತರ ಅಂಕಣಗಳು ಚೆನ್ನಾಗಿ ಬರುತ್ತಿವೆ. ರಸಪ್ರಶ್ನೆಯಂತಹ ಸ್ಪರ್ಧೆಗಳನ್ನು ಆಯೋಜಿಸಿ, ಬಹುಮಾನಗಳನ್ನೂ ನೀಡುತ್ತಿರುವ ಪತ್ರಿಕೆಗೆ ಕೃತಜ್ಞತೆಗಳು’ ಎಂದು ವಿನುತಾ ತಾಯಿ ಶಶಿರೇಖಾ ಹೇಳಿದರು.

‘ಡೆಕ್ಕನ್‌ ಹೆರಾಲ್ಡ್ ಪತ್ರಿಕೆ ನಡೆಸುವ ಎಲ್ಲ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುತ್ತಿದ್ದೆ. ಕ್ರಿಕೆಟ್‌ ವಿಶ್ವಕಪ್‌ ವೇಳೆ ನಡೆದ ಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದಾಗ ಮೂರನೇ ಬಹುಮಾನ ಬಂದಿತ್ತು. ಈಗ ಬಂಪರ್‌ ಬಹುಮಾನ ಬಂದಿರುವುದು ಸಂತಸ ತಂದಿದೆ. ಭಾನುವಾರದ ಪ್ರಶ್ನೆಗಳು ಕಠಿಣವಾಗಿರುತ್ತಿದ್ದವು. ಕುಟುಂಬದವರ ನೆರವು ಪಡೆದು ಉತ್ತರ ಬರೆಯುತ್ತಿದ್ದೆ’ ಎಂದು ‘ಡೆಕ್ಕನ್‌ ಹೆರಾಲ್ಡ್‌’ ನಡೆಸಿದ ಸ್ಪರ್ಧೆಯಲ್ಲಿ ಬಂಪರ್‌ ಬಹುಮಾನ ಪಡೆದ ಎ. ಅರುಣ್‌ ಹೇಳಿದರು.

ಬಹುಮಾನ ವಿತರಿಸಿದ ಚಿತ್ರನಟಿ ಶ್ವೇತಾ ಶ್ರೀವಾತ್ಸವ್, ‘ಪ್ರಜಾವಾಣಿ’ಯ ನಡೆಸುವ ಸ್ಪರ್ಧೆಗಳಲ್ಲಿ ಲಕ್ಷಾಂತರ ಜನ ಭಾಗವಹಿಸುತ್ತಾರೆ. ಇಂತಹ ಪೈಪೋಟಿ ನಡುವೆ ಬಂಪರ್ ಬಹುಮಾನ ಗೆಲ್ಲುವುದು ದೊಡ್ಡ ಸಂಗತಿ. ಬಹುಮಾನ ಪಡೆದ ಎಲ್ಲರಿಗೂ ಅಭಿನಂದನೆಗಳು’ ಎಂದರು.

‘ಆರು ವಾರಗಳು ನಡೆದ ಸ್ಪರ್ಧೆಯಲ್ಲಿ ರಾಜ್ಯದ ಉದ್ದಕ್ಕೂ ಓದುಗರು ಉತ್ಸಾಹದಿಂದ ಪಾಲ್ಗೊಂಡರು. ಉತ್ತಮ ಸ್ಪಂದನೆ ದೊರೆಯಿತು’ ಎಂದು ದಿ ಪ್ರಿಂಟರ್ಸ್‌ ಪ್ರೈವೇಟ್ ಲಿಮಿಟೆಡ್‌ನ ಮುಖ್ಯಕಾರ್ಯನಿರ್ವಹಣಾ ಅಧಿಕಾರಿ ಸೀತಾರಾಮನ್ ಶಂಕರ್ ಹೇಳಿದರು.

‘ಯುವಸಮೂಹ ಪತ್ರಿಕೆಗಳನ್ನು ಹೆಚ್ಚಾಗಿ ಓದುವುದಿಲ್ಲ ಎಂದೇ ಹೇಳಲಾಗುತ್ತದೆ. ಆದರೆ, ಈ ಸ್ಪರ್ಧೆಗೆ ಸಿಕ್ಕ ಸ್ಪಂದನೆ ಮತ್ತು ಓದುಗರ ಪಾಲ್ಗೊಳ್ಳುವಿಕೆ ನೋಡಿದರೆ ಯುವಸಮೂಹವೂ ಪತ್ರಿಕೆಯನ್ನು ಹೆಚ್ಚು ಓದುತ್ತಿದೆ ಎಂಬುದು ಗೊತ್ತಾಗುತ್ತಿದೆ. ಇಂತಹ ಸ್ಪಂದನೆಗಳು ಇನ್ನಷ್ಟು ಹೊಸ ಸ್ಪರ್ಧೆಗಳನ್ನು ಆಯೋಜಿಸಲು, ಹೊಸ ಅಂಕಣಗಳನ್ನು ಪ್ರಾರಂಭಿಸಲು ನಮಗೆ ಪ್ರೇರಣೆ ನೀಡುತ್ತವೆ’ ಎಂದು ‘ಪ್ರಜಾವಾಣಿ’ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ ಹೇಳಿದರು.

ಆಯಾ ದಿನದ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಒಟ್ಟು 1,300 ಟಿಫಿನ್ ಬಾಕ್ಸ್, ವಾರದ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ 30 ವಾಟರ್‌ ಪ್ಯೂರಿಫೈಯರ್, 12 ಜನರಿಗೆ ತಲಾ ₹75 ಸಾವಿರ ಬೆಲೆಯ ವಾಚ್‌ಗಳನ್ನು ವಿಶೇಷ ಬಹುಮಾನವಾಗಿ ನೀಡಲಾಗಿದೆ. ಇಬ್ಬರು ಸ್ವಿಫ್ಟ್ ಕಾರ್ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT