ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಲ್ಕಿಸ್ ಜೊತೆ ಕರ್ನಾಟಕ: ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಪ್ರತಿಭಟನೆ

ಅತ್ಯಾಚಾರ, ಕೊಲೆ ಅಪರಾಧಿಗಳ ಕ್ಷಮಾದಾನ ರದ್ದುಪಡಿಸಲು ಆಗ್ರಹ
Last Updated 27 ಆಗಸ್ಟ್ 2022, 19:46 IST
ಅಕ್ಷರ ಗಾತ್ರ

ಬೆಂಗಳೂರು: ‘ಗುಜರಾತ್‌ನಲ್ಲಿ ಬಿಲ್ಕಿಸ್‌ ಬಾನು ಅವರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ, ಅವರ ಕುಟುಂಬದವರನ್ನು ಹತ್ಯೆ ಮಾಡಿರುವ ಅಪರಾಧಿಗಳನ್ನು ಮರಳಿ ಜೈಲಿಗೆ ಕಳುಹಿಸಬೇಕು’ ಎಂದು ಒತ್ತಾಯಿಸಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ನಗರಗಳಲ್ಲಿ ಶನಿವಾರ ಪ್ರತಿಭಟನೆಗಳು ನಡೆದವು.

ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಪಾಲ್ಗೊಂಡಿದ್ದರು. ‘ಬಿಲ್ಕಿಸ್ ಬಾನು ಜೊತೆ ಕರ್ನಾಟಕ’ ಘೋಷವಾಕ್ಯದೊಂದಿಗೆ ಫಲಕ ಹಾಗೂ ಭಿತ್ತಿಪತ್ರಗಳನ್ನು ಪ್ರದರ್ಶಿಸಿದರು. ಬಿಲ್ಕಿಸ್ ಬಾನು ಪರವಾಗಿ ಸಹಿ ಸಂಗ್ರಹ ಅಭಿಯಾನವೂ ನಡೆಯಿತು.

ಹಲವು ಸಂಘಟನೆಗಳ ಪದಾಧಿಕಾರಿ
ಗಳು, ಕಾರ್ಮಿಕರು, ವಕೀಲರು, ಕಲಾವಿದರು ಹಾಗೂ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

‘ಬಿಲ್ಕಿಸ್ ಬಾನು ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ, ಅವರ ಕುಟುಂಬದ 7 ಜನರನ್ನು ಹತ್ಯೆ ಮಾಡಿರುವ 11 ಅಪರಾಧಿಗಳನ್ನು ಸನ್ನಡತೆ ಆಧಾರದಲ್ಲಿ ಕ್ಷಮಾಧಾನ ನೀಡಿ ಜೈಲಿನಿಂದ ಬಿಡುಗಡೆ ಮಾಡಲಾಗಿದೆ. ಜೈಲಿನಿಂದ ಬಿಡುಗಡೆಯಾದ ಅಪರಾಧಿಗಳನ್ನು ವಿಶ್ವ ಹಿಂದೂ ಪರಿಷತ್ ಸದಸ್ಯರು ಹೂ ಮಾಲೆ ಹಾಕಿ ಆರತಿ ಎತ್ತಿ ಬರ
ಮಾಡಿಕೊಂಡಿರುವುದು ನಮಗೆಲ್ಲರಿಗೂ ಆಘಾತವನ್ನುಂಟು ಮಾಡಿದೆ’ ಎಂದು ಪ್ರತಿಭಟನಕಾರರು ಹೇಳಿದರು.

‘ಗುಜರಾತಿನ ದಾಹೋದ್ ಜಿಲ್ಲೆಯ ರಣಧಿಕ್‌ಪುರ ಹಳ್ಳಿಯಲ್ಲಿ 2002ರಲ್ಲಿ ಹಿಂಸೆ ನಡೆದಿತ್ತು. ಬಿಲ್ಕಿಸ್ ಬಾನು ಕುಟುಂಬವೇ ತತ್ತರಿಸಿ ಹೋಯಿತು.

ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಣೆ ಸಂದರ್ಭದಲ್ಲೇ ಸಾಮೂಜಿಕ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದ ಅಪರಾಧಿಗಳನ್ನು ಜೈಲಿನಿಂದ ಬಿಡುಗಡೆ ಮಾಡಿರುವ ಗುಜರಾತ್ ಸರ್ಕಾರದ ಕ್ರಮ ಖಂಡನೀಯ. ಕೇಂದ್ರ ಸರ್ಕಾರ ರೂಪಿಸಿದ್ದ ನಿಯಮಗಳನ್ನೂ ಗುಜರಾತ್ ಸರ್ಕಾರ ಗಾಳಿಗೆ ತೂರಿದೆ’ ಎಂದು ದೂರಿದರು.

‘ನನಗೆ ಸೇಡು ಬೇಕಿಲ್ಲ. ನ್ಯಾಯ ಬೇಕು’ ಎಂಬುದಾಗಿ ಬಿಲ್ಕಿಸ್ ಬಾನು ಹೇಳುತ್ತಿದ್ದಾರೆ. ನಾವೆಲ್ಲರೂ ಬಿಲ್ಕಿಸ್ ಬಾನು ಪರ ನಿಂತಿದ್ದೇವೆ. ನ್ಯಾಯ ಸಿಗುವವರೆಗೂ ಹೋರಾಟ ಮುಂದುವರಿಯಲಿದೆ’ ಎಂದೂ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT