ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದ್ದೂ ಇಲ್ಲದಂತಾದ ಪಿಟಿಸಿಎಲ್: ದಲಿತರ ಹೋರಾಟ ಅರಣ್ಯರೋದನ

ಪಿಟಿಸಿಎಲ್: ಕಂದಾಯ ಇಲಾಖೆಯಲ್ಲೇ ಉಳಿದ ತಿದ್ದುಪಡಿ ಪ್ರಸ್ತಾವ
Last Updated 27 ಡಿಸೆಂಬರ್ 2021, 19:31 IST
ಅಕ್ಷರ ಗಾತ್ರ

ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪಂಗಡದವರನ್ನು ಭೂಹೀನರನ್ನಾಗಿ ಮಾಡುವುದನ್ನು ತಡೆಯುವ ಉದ್ದೇಶದಿಂದ ಜಾರಿಗೆ ತಂದ ಎಸ್‌ಸಿ, ಎಸ್‌ಟಿ ಭೂ ಪರಭಾರೆ ನಿಷೇಧ ಕಾಯ್ದೆ (ಪಿಟಿಸಿಎಲ್) ಈಗ ಇದ್ದೂ ಇಲ್ಲದಂತಾಗಿದೆ. ಕಾಯ್ದೆ ತಿದ್ದುಪಡಿ ಮಾಡಬೇಕು ಎಂಬ ದಲಿತ ಹೋರಾಟಗಾರರ ಕೂಗು ಅರಣ್ಯರೋದನವಾಗಿಯೇ ಉಳಿದಿದೆ.

ಮುಖ್ಯಮಂತ್ರಿ ಆಗಿದ್ದ ದೇವರಾಜ ಅರಸು ಅವರು 1979ರ ಜನವರಿ 1ರಿಂದ ಜಾರಿಗೆ ಬರುವಂತೆ ಪಿಟಿಸಿಎಲ್ ಕಾಯ್ದೆಯನ್ನು ಕರ್ನಾಟಕದಲ್ಲಿ ಜಾರಿಗೆ ತಂದರು. ಕಾಯ್ದೆ ಜಾರಿಗೆ ಮುನ್ನ ಮತ್ತು ನಂತರ ಪರಿಶಿಷ್ಟರಿಗೆ ಮಂಜೂರಾಗುವ ಜಮೀನುಗಳನ್ನು ಪರಭಾರೆ ಮಾಡಲು ಸರ್ಕಾರದ ಪೂರ್ವಾನುಮತಿ ಅತ್ಯವಶ್ಯ ಎಂಬ ಷರತ್ತು ಇದೆ.

ಕಾಯ್ದೆ ಉಲ್ಲಂಘಿಸಿ ಭೂಮಿ ಪರಭಾರೆ ಆಗಿದ್ದಲ್ಲಿ ಮರು ಮಂಜೂರಾತಿ ಕೋರಿ ಮೂಲ ಮಂಜೂರಾತಿದಾರರು ಅಥವಾ ಅವರ ವಾರಸುದಾರರು ಉಪವಿಭಾಗಾಧಿಕಾರಿಗೆ ಅರ್ಜಿ ಸಲ್ಲಿಸಬಹುದು. ಪರಭಾರೆಯಾದ ಇಂತಿಷ್ಟೇ ದಿನಗಳಲ್ಲಿ ಅರ್ಜಿ ಸಲ್ಲಿಸಬೇಕು ಎಂಬ ಕಾಲಮಿತಿ ಇರಲಿಲ್ಲ.

ನೆಕ್ಕಂಟಿ ರಾಮಲಕ್ಷ್ಮಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ‘ಸಮುಚಿತ ಸಮಯದೊಳಗೆ ಅರ್ಜಿ ಸಲ್ಲಿಸಬೇಕು’ ಎಂದು 2017ರ ಅಕ್ಟೋಬರ್ 26ರಲ್ಲಿ ತಿಳಿಸಿತು.

‘ಇದಾದ ನಂತರ ಪಿಟಿಸಿಎಲ್‌ ಕಾಯ್ದೆ ಉಲ್ಲಂಘನೆಯಾಗಿದೆ ಎಂದು ಉಪವಿಭಾಗಾಧಿಕಾರಿ, ಜಿಲ್ಲಾಧಿಕಾರಿ
ನ್ಯಾಯಾಲಯಗಳಲ್ಲಿ ಸಲ್ಲಿಕೆಯಾಗುತ್ತಿರುವ ಅರ್ಜಿಗಳಲ್ಲಿ ಪರಿಶಿಷ್ಟರಿಗೆ ವಿರುದ್ಧವಾದ ಆದೇಶಗಳು ಹೊರ ಬೀಳುತ್ತಿವೆ. ಭೂಮಿ ಪರಭಾರೆಯಾದ ನಿರ್ದಿಷ್ಟ ಸಮಯದೊಳಗೆ ಅರ್ಜಿ ಸಲ್ಲಿಸಿಲ್ಲ ಎಂಬ ಒಂದೇ ಕಾರಣ ನೀಡಿ ಅರ್ಜಿಗಳನ್ನು ತಿರಸ್ಕರಿಸಲಾಗುತ್ತಿದೆ. ನಿರ್ದಿಷ್ಟ ಸಮಯ ಎಂದರೆ ಎಷ್ಟು ಎಂಬುದನ್ನೂ ಸುಪ್ರೀಂ ಕೋರ್ಟ್ ಹೇಳಿಲ್ಲ. ರಿಯಲ್ ಎಸ್ಟೇಟ್ ಮಾಫಿಯಾಕ್ಕೆ ಅಧಿಕಾರಿಗಳು ಮಣಿಯುತ್ತಿದ್ದಾರೆ. 3 ಸಾವಿರಕ್ಕೂ ಹೆಚ್ಚು ಅರ್ಜಿಗಳನ್ನು ವಜಾಗೊಂಡಿವೆ’ ಎಂಬುದು ಅರ್ಜಿದಾರರ ಅಳಲು.

‘ಈ ಹಿಂದಿನ ಎಲ್ಲಾ ಪ್ರಕರಣಗಳಲ್ಲೂ ಸುಪ್ರೀಂ ಕೋರ್ಟ್ ಪಿಟಿಸಿಎಲ್ ಕಾಯ್ದೆಯ ಉದ್ದೇಶವನ್ನು ಎತ್ತಿ ಹಿಡಿದಿವೆ. ನೆಕ್ಕಂಟಿ ರಾಮಲಕ್ಷ್ಮಿ
ಪ್ರಕರಣದಲ್ಲಿ ಸರ್ಕಾರದ ಪರ ವಕೀಲರು ಕೋರ್ಟ್‌ಗೆ ಹಾಜರಾಗಲೇ ಇಲ್ಲ. ಕಾಯ್ದೆಯ ಉದ್ದೇಶವನ್ನು ಮನವರಿಕೆ ಮಾಡಿಕೊಡಲೇ ಇಲ್ಲ’ ಎಂದು ಪಿಟಿಸಿಎಲ್ ಹೋರಾಟಗಾರ ಚಳ್ಳಕೆರೆ ಶಾಂತಕುಮಾರ್ ಹೇಳಿದರು.‌

‘ಕಾಯ್ದೆಗೆ ಸಮಗ್ರ ತಿದ್ದುಪಡಿ ತರಬೇಕು ಎಂದು ಒತ್ತಾಯಿಸಿ ದಲಿತ ಸಂಘಟನೆಗಳು ನಿತ್ಯ ಹೋರಾಟ ನಡೆಸುತ್ತಿವೆ. ಸರ್ಕಾರ ಜಾಣಗುರುಡು ಪ್ರದರ್ಶಿಸುತ್ತಿದೆ. ಮನವಿ ಪತ್ರ ಪಡೆದು ಹೋಗುವ ಸಚಿವರು ಕಸದ ಬುಟ್ಟಿಗೆ ಬಿಸಾಸುತ್ತಿದ್ದಾರೆ. ದಲಿತರ ಭೂಮಿ ಖರೀದಿಸಿ ರಿಯಲ್ ಎಸ್ಟೇಟ್ ವಹಿವಾಟು ನಡೆಸಿರುವ ರಾಜಕಾರಣಿಗಳಿಗೆ ಈ ಕಾಯ್ದೆ ಬೇಡವಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಕುರಿತು ಸಚಿವ ಆರ್.ಅಶೋಕ್ ಅವರ ಪ್ರತಿಕ್ರಿಯೆ ಪಡೆಯಲು ಪ್ರಯತ್ನಿಸಲಾಯಿತು. ಆದರೆ, ಅವರು ಸಂಪರ್ಕಕ್ಕೆ ಬರಲಿಲ್ಲ.

ಸದನ ಸಮಿತಿಯಿಂದಲೂ ಶಿಫಾರಸು

‘ಕರ್ನಾಟಕ ವಿಧಾನ ಮಂಡಲದ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿ ಕೂಡ ಪಿಟಿಸಿಎಲ್ ಕಾಯ್ದೆಗೆ ತಿದ್ದುಪಡಿ ತರಬೇಕು ಎಂದು ಶಿಫಾರಸು ಮಾಡಿದೆ. ಕಾನೂನು ಇಲಾಖೆಯೂ ಸಮ್ಮತಿ ಸೂಚಿಸಿದೆ. ಆದರೆ, ಕಂದಾಯ ಸಚಿವರ‌ ಕಚೇರಿಯಲ್ಲಿ ಕಡತ ಮೂರು ತಿಂಗಳಿಂದ ಬಾಕಿ ಉಳಿದಿದೆ’ ಎಂದು ಪಿಟಿಸಿಎಲ್ ಹೋರಾಟಗಾರ ಎಂ.ಎಚ್. ಮಂಜುನಾಥ್ ತಿಳಿಸಿದರು.

‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಶಾಸಕರು, ವಿಧಾನ ಪರಿಷತ್ತಿನ ಸದಸ್ಯರು ಸದನದಲ್ಲಿ ಎತ್ತುತ್ತಿಲ್ಲ. ಯಾರೊಬ್ಬರಿಗೂ ಸಮುದಾಯದ ಜನರ ಬಗ್ಗೆ ಕಾಳಜಿ ಇಲ್ಲ’ ಬೇಸರ ವ್ಯಕ್ತಪಡಿಸಿದರು.


‘ಅಹೋರಾತ್ರಿ ಹೋರಾಟ’

‘ಪಿಟಿಸಿಎಲ್ ಕಾಯ್ದೆಗೆ ತಿದ್ದುಪಡಿ ತರದಿದ್ದರೆ, ಕಾಯ್ದೆ ಇದ್ದೂ ಉಪಯೋಗವಿಲ್ಲ. ಬೆಳಗಾವಿ ಅಧಿವೇಶನದಲ್ಲೂ ತಿದ್ದುಪಡಿ ಮಸೂದೆ ಮಂಡನೆಯಾಗಲಿಲ್ಲ. ದಲಿತರ ಬಗ್ಗೆ ಕಾಳಜಿ ಇಲ್ಲದಿದ್ದರೆ ಕಾಯ್ದೆಯನ್ನೇ ಸರ್ಕಾರ ರದ್ದು ಮಾಡಲಿ’ ಎಂದು ಪಿಟಿಸಿಎಲ್ ಬಾಧಿತರ ಹೋರಾಟ ಸಮಿತಿ ಅಧ್ಯಕ್ಷ ಹರಿರಾಮ್ ಹೇಳಿದರು.

‘ತಾಲ್ಲೂಕು ಮತ್ತು ಜಿಲ್ಲಾ ಮಟ್ಟದಿಂದ ಹೋರಾಟ ಪ್ರಬಲಗೊಳಿಸಲಾಗುವುದು. ಸರ್ಕಾರ ಸ್ಪಂದಿಸದಿದ್ದರೆ ಕುಟುಂಬ ಸಮೇತ ಅಹೋರಾತ್ರಿ ಪ್ರತಿಭಟನೆ ನಡೆಸಲಾಗುವುದು’ ಎಂದು ಅವರು ಎಚ್ಚರಿಸಿದರು.

***


ಪಿಟಿಸಿಎಲ್ ಕಾಯ್ದೆಗೆ ಸಣ್ಣ ತಿದ್ದುಪಡಿ ಆಗಬೇಕಿದೆ. ಈ ಬಗ್ಗೆ ಬಿಜೆಪಿ ಶಾಸಕಾಂಗ ‌ಪಕ್ಷದ ಸಭೆಯಲ್ಲಿ ಚರ್ಚಿಸಿದ್ದೇನೆ. ಮುಖ್ಯಮಂತ್ರಿ ಕೂಡ ಭರವಸೆ ನೀಡಿದ್ದಾರೆ
- ಎನ್.ಮಹೇಶ್, ಶಾಸಕರು, ಕೊಳ್ಳೇಗಾಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT