ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೆಇಎ ಎಡವಟ್ಟು: 500ಕ್ಕೂ ಹೆಚ್ಚು ಉಪನ್ಯಾಸಕರು ಅತಂತ್ರ

ಋಣಾತ್ಮಕ ಅಂಕಗಳ ಕಡಿತದ ತಪ್ಪು ಸರಿಪಡಿಸಲು ಪತ್ರ * ಅಕ್ರಮವಾಗಿ ಪದವಿ ಪಡೆದ ನಾಲ್ವರ ವಿರುದ್ಧ ಕ್ರಮ
Last Updated 13 ಜನವರಿ 2023, 19:37 IST
ಅಕ್ಷರ ಗಾತ್ರ

ಬೆಂಗಳೂರು: ಪದವಿಪೂರ್ವ ಕಾಲೇಜುಗಳ 1,203 ಉಪನ್ಯಾಸಕರಿಗೆ ನೇಮಕಾತಿ ಆದೇಶ ನೀಡಿದ ಮೂರು ವರ್ಷಗಳ ಬಳಿಕ ಲೋಪಗಳನ್ನು ಸರಿಪಡಿಸಲು ಸರ್ಕಾರ ಮುಂದಾಗಿದ್ದು, 500ಕ್ಕೂ ಹೆಚ್ಚು ಉಪನ್ಯಾಸಕರ ಭವಿಷ್ಯ ಅತಂತ್ರವಾಗಿದೆ.

ರಾಜ್ಯದ ಪದವಿಪೂರ್ವ ಕಾಲೇಜುಗಳಲ್ಲಿ ಖಾಲಿ ಇದ್ದ ಹುದ್ದೆಗಳ ಭರ್ತಿಗೆ 2015ರ ಮೇನಲ್ಲಿ ಅಧಿಸೂಚನೆ ಹೊರಡಿಸಲಾಗಿತ್ತು. ಅದೇ ಅಧಿಸೂಚನೆಯನ್ನು ತಿದ್ದುಪಡಿ ಮಾಡಿ 2017ರ ಫೆಬ್ರುವರಿಯಲ್ಲಿ ಮತ್ತೆ ಅರ್ಜಿ ಆಹ್ವಾನಿಸಲಾಗಿತ್ತು. 47,120 ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು. 2019ರಲ್ಲಿ ಅಭ್ಯರ್ಥಿಗಳ ಅರ್ಹತಾಪಟ್ಟಿ, 2020ರಲ್ಲಿ ಅಂತಿಮ ಆಯ್ಕೆ ಪಟ್ಟಿ ಬಿಡುಗಡೆ ಮಾಡಲಾಗಿತ್ತು.

ಪರೀಕ್ಷೆ ನಡೆಸಿದ್ದ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮಾಡಿಸುವಾಗ ಅಭ್ಯರ್ಥಿ ಬರೆದ ತಪ್ಪು ಉತ್ತರಕ್ಕೆ (ಋಣಾತ್ಮಕ ಅಂಕಗಳು) ನಿಯಮದಂತೆ 1/4 ರಷ್ಟು ಅಂಕಗಳನ್ನು ಕಡಿತಮಾಡಬೇಕಿತ್ತು. ಅಂದರೆ 150 ಅಂಕಗಳ ಪರೀಕ್ಷೆಯಲ್ಲಿ 100 ಪ್ರಶ್ನೆಗಳಿದ್ದು, ಪ್ರತಿ ಪ್ರಶ್ನೆಯೂ 1.50 ಅಂಕಗಳನ್ನು ಒಳಗೊಂಡಿತ್ತು. ಆದರೆ, ಪ್ರಾಧಿಕಾರ ಪ್ರತಿ ತಪ್ಪು ಉತ್ತರಕ್ಕೆ 0.375 ಅಂಕ ಕಡಿತ ಮಾಡುವ ಬದಲು 0.25 ಅಷ್ಟೇ ಕಡಿತ ಮಾಡಿತ್ತು.

ತಪ್ಪು ಉತ್ತರಗಳ ಅಂಕ ಕಡಿತದಲ್ಲಿನ ವ್ಯತ್ಯಾಸದಿಂದಾಗಿ ಅರ್ಹರಲ್ಲದ 500ಕ್ಕೂ ಹೆಚ್ಚು ಅಭ್ಯರ್ಥಿಗಳು ಆಯ್ಕೆಯಾಗಿದ್ದರು. ಇದರ ವಿರುದ್ಧ ಉದ್ಯೋಗ ವಂಚಿತ ಅಭ್ಯರ್ಥಿಗಳು ನಿರಂತರ ಹೋರಾಟ ನಡೆಸಿದ್ದರು. ಕೊನೆಗೂ ಆಗಿರುವ ಪ್ರಮಾದವನ್ನು ಸರಿಪಡಿಸಲು ಮುಂದಾಗಿರುವ ಪದವಿಪೂರ್ವ ಶಿಕ್ಷಣ ಇಲಾಖೆ, ನೇಮಕಾತಿ ಪ್ರಕ್ರಿಯೆಯಲ್ಲಿ ಮಾಡಲಾದ ಋಣಾತ್ಮಕ ಅಂಕಗಳ ತಪ್ಪು ಲೆಕ್ಕಾಚಾರವನ್ನು ಪರಿಶೀಲಿಸುವಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಪತ್ರ ಬರೆದಿದೆ.

ನಾಲ್ವರ ವಿರುದ್ಧ ಕ್ರಮಕ್ಕೆ ಸೂಚನೆ: 2022 ಏಪ್ರಿಲ್‌ಗೂ ಹಿಂದೆ ಇದ್ದ ಯುಜಿಸಿ ನಿಯಮಗಳ ಪ್ರಕಾರ ಒಬ್ಬ ವಿದ್ಯಾರ್ಥಿ ಒಂದೇ ಶೈಕ್ಷಣಿಕ ಅವಧಿಯಲ್ಲಿ ಏಕ ಕಾಲಕ್ಕೆ ಎರಡು ಪದವಿ ಪಡೆಯುವಂತಿಲ್ಲ. ಆದರೆ, ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರಾಗಿ ಆಯ್ಕೆಯಾಗಿರುವ ಅಭ್ಯರ್ಥಿಗಳಲ್ಲಿ ಕೆಲವರು ಒಂದೇ ಶೈಕ್ಷಣಿಕ ಅವಧಿಯಲ್ಲಿ ಸ್ನಾತಕೋತ್ತರ ಪದವಿ ಹಾಗೂ ಬಿ.ಇಡಿ ಪದವಿ ಪೂರೈಸಿರುವ ಪ್ರಮಾಣಪತ್ರ ಸಲ್ಲಿಸಿದ್ದಾರೆ. ಈ ಕುರಿತು ಹಿಂದಿ ಭಾಷಾ ವಿಷಯದ ಅಭ್ಯರ್ಥಿ ಕಲಬುರಗಿಯ ಮನೋಹರ ಅವರು ಸಲ್ಲಿಸಿದ ಅರ್ಜಿ ಆಧಾರದಲ್ಲಿ, ಆ ವಿಷಯದಲ್ಲಿ ನಿಯಮಬಾಹಿರವಾಗಿ ಪದವಿ ಪಡೆದಿದ್ದ ನಾಲ್ವರ ವಿರುದ್ಧ ಕ್ರಮ ಕೈಗೊಳ್ಳಲು ಸರ್ಕಾರ ಸೂಚಿಸಿದೆ.

‘20 ವಿಷಯಗಳಿಗೆ ಉಪನ್ಯಾಸಕರ ನೇಮಕಾತಿ ನಡೆದಿದೆ. ಅರ್ಜಿ ಸಲ್ಲಿಸಿದ ಹಿಂದಿ ವಿಷಯದಲ್ಲಷ್ಟೆ ಕ್ರಮ ಕೈಗೊಳ್ಳಲು ಸರ್ಕಾರ ಮುಂದಾಗಿದೆ. ಉಳಿದ ವಿಷಯಗಳಲ್ಲೂ ಇಂತಹ 200ಕ್ಕೂ ಹೆಚ್ಚು ಅಭ್ಯರ್ಥಿಗಳಿದ್ದಾರೆ. ನೇಮಕಾತಿಯ ಎಲ್ಲ ನ್ಯೂನತೆಗಳ ಕುರಿತು ತನಿಖೆ ನಡೆಸಬೇಕು. ಅಲ್ಲಿಯವರೆಗೂ ನೇಮಕವಾದ ಉಪನ್ಯಾಸಕರ ಸೇವೆ ಕಾಯಂ ಮಾಡಬಾರದು’ ಎಂದು ಉದ್ಯೋಗ ವಂಚಿತ ಮನೋಹರ್ ಒತ್ತಾಯಿಸಿದ್ದಾರೆ.

*
ಹಿಂದಿ ವಿಷಯದ ನಾಲ್ವರು ಉಪನ್ಯಾಸಕರು ನಿಯಮಕ್ಕೆ ವಿರುದ್ಧವಾಗಿ ಪದವಿ ಪಡೆದಿರುವುದು ದೃಢಪಟ್ಟಿದೆ. ಉಳಿದ ವಿಷಯಗಳಲ್ಲೂ ವಿಚಾರಣೆ ನಡೆಸಲಾಗುವುದು.
-ರಿತೀಶ್‌ಕುಮಾರ್ ಸಿಂಗ್ ಪ್ರಧಾನ ಕಾರ್ಯದರ್ಶಿ, ಶಿಕ್ಷಣ ಇಲಾಖೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT