ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುನಿರತ್ನ ಚುನಾವಣೆ ಅಕ್ರಮ ಆರೋಪ: ಆದೇಶ ಕಾಯ್ದಿರಿಸಿದ ಸುಪ್ರೀಂ ಕೋರ್ಟ್‌

Last Updated 6 ಅಕ್ಟೋಬರ್ 2020, 19:31 IST
ಅಕ್ಷರ ಗಾತ್ರ

ನವದೆಹಲಿ: ರಾಜರಾಜೇಶ್ವರಿ ನಗರ (ಆರ್.ಆರ್‌. ನಗರ) ವಿಧಾನಸಭೆ ಕ್ಷೇತ್ರದ ಉಪಚುನಾವಣೆಗೆ ಅವಕಾಶ ಕೊಡಬಾರದು ಎಂದು ಬಿಜೆಪಿಯ ತುಳಸಿ ಮುನಿರಾಜು ಗೌಡ ಸಲ್ಲಿಸಿದ್ದ ಮೇಲ್ಮನವಿ ಕುರಿತ ಆದೇಶವನ್ನು ಸುಪ್ರೀಂ ಕೋರ್ಟ್ ಮಂಗಳವಾರ ಕಾಯ್ದಿರಿಸಿದೆ.

ರಾಜ್ಯ ವಿಧಾನಸಭೆಗೆ 2018ರಲ್ಲಿ ನಡೆದ ಚುನಾವಣೆ ಸಂದರ್ಭ ಆರ್‌.ಆರ್‌. ನಗರ ಕ್ಷೇತ್ರದ ಅಭ್ಯರ್ಥಿ ಮುನಿರತ್ನ ಅವರು ಅಕ್ರಮ ಎಸಗಿ ಗೆಲುವು ಸಾಧಿಸಿದ್ದಾರೆ ಎಂದು ಆರೋಪಿಸಲಾದ ಅರ್ಜಿಯು ರಾಜ್ಯ ಹೈಕೋರ್ಟ್‌ನಲ್ಲಿ ಇತ್ಯರ್ಥ ಆಗದೆ ಬಾಕಿ ಉಳಿದಿದೆ. ಅರ್ಜಿ ಇತ್ಯರ್ಥ ಆಗುವವರೆಗೆ ಕ್ಷೇತ್ರದ ಉಪ ಚುನಾವಣೆ ನಡೆಸಕೂಡದು ಎಂದು ಮೇಲ್ಮನವಿಯಲ್ಲಿ ಕೋರಲಾಗಿತ್ತು.

‘ಚುನಾವಣೆ ವೇಳೆ ಕ್ಷೇತ್ರದಲ್ಲಿ ಮತದಾರರ ನಕಲಿ ಗುರುತಿನ ಚೀಟಿಗಳು ಪತ್ತೆಯಾಗಿದ್ದವು. ಈ ಅಕ್ರಮದಲ್ಲಿ ಮುನಿರತ್ನ ಭಾಗಿಯಾದ ಆರೋಪವಿದೆ. ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಗೆ ಹತ್ತಿರದ ಪ್ರತಿಸ್ಫರ್ಧಿಯಾಗಿದ್ದ ನನ್ನನ್ನು ಜಯಶಾಲಿ ಎಂದು ಘೋಷಿಸಬೇಕು’ ಎಂದು ಕೋರಿ ಮುನಿರಾಜು ಗೌಡ ಮೇಲ್ಮನವಿಯಲ್ಲಿ ಕೋರಿದ್ದರು.

‘ಪತ್ತೆಯಾಗಿದ್ದ ನಕಲಿ ಗುರುತಿನ ಚೀಟಿಗಳಿಗೂ, ಗೆದ್ದ ಅಭ್ಯರ್ಥಿ ಹಾಗೂ ಅರ್ಜಿದಾರರು ಪಡೆದ ಮತಗಳಿಗೆ ಸಾಕಷ್ಟು ಅಂತರವಿದೆ. ಅಲ್ಲದೆ, ಅರ್ಜಿದಾರರಿಗೆ ಅಷ್ಟು ಮತಗಳು ದೊರೆತಿದ್ದರೂ ಗೆಲ್ಲುವ ಸಾಧ್ಯತೆ ಇತ್ತೇ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಅರ್ಜಿದಾರರೂ ಒಳಗೊಂಡಂತೆ 14 ಜನ ಅಭ್ಯರ್ಥಿಗಳು ಕಣದಲ್ಲಿದ್ದರು ಎಂಬುದೂ ಮುಖ್ಯ’ ಎಂದು ನ್ಯಾಯ ಪೀಠವು ವಿಚಾರಣೆ ಸಂದರ್ಭ ಅಭಿಪ್ರಾಯಪಟ್ಟಿತು.

‘ಏನೇ ಇರಲಿ, ಈ ಕುರಿತ ಆದೇಶವನ್ನು ಪ್ರಕಟಿಸಲಾಗುವುದು’ ಎಂದು ತಿಳಿಸಿದ ನ್ಯಾಯಪೀಠ, ಪ್ರಕರಣಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗ ಹಾಗೂ ಪ್ರತಿವಾದಿಗಳ ಅಭಿಪ್ರಾಯವನ್ನೂ ಆಲಿಸಲಿಲ್ಲ.

ಶಾಸಕ ಮುನಿರತ್ನ ಅವರು ರಾಜೀನಾಮೆ ನೀಡಿ, ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರಿಂದ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಬೇಕಿತ್ತು. ಆದರೆ, ಮುನಿರಾಜು ಗೌಡ ಸಲ್ಲಿಸಿದ್ದ ಚುನಾವಣಾ ಅರ್ಜಿಯ ವಿಚಾರಣೆ ಬಾಕಿ ಇದ್ದುದರಿಂದ ಕೇಂದ್ರ ಚುನಾವಣಾ ಆಯೋಗವು ಆರ್‌.ಆರ್‌. ನಗರ ಕ್ಷೇತ್ರದ ಉಪ ಚುನಾವಣೆಯನ್ನು ಘೋಷಿಸಿರಲಿಲ್ಲ.

ತಮ್ಮ ಮೇಲಿನ ಆರೋಪದಲ್ಲಿ ಹುರುಳಿಲ್ಲದ್ದರಿಂದ ಕ್ಷೇತ್ರದಲ್ಲಿ ಚುನಾವಣೆ ನಡೆಯುವ ಅಗತ್ಯ ಇದೆ ಎಂದು ಮುನಿರತ್ನ ಸಲ್ಲಿಸಿದ್ದ ಮಧ್ಯಂತರ ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್, ಕ್ಷೇತ್ರದ ಶಾಸಕರಿಲ್ಲದೆ ಹಲವು ತಿಂಗಳುಗಳು ಕಳೆದಿದ್ದು, ಚುನಾವಣೆ ನಡೆಸಲು ಆಯೋಗಕ್ಕೆ ಅನುಮತಿ ನೀಡುವುದು ಸೂಕ್ತ ಎಂದು ಸ್ಪಷ್ಟಪಡಿಸಿತ್ತು.

ಇದೀಗ ಕ್ಷೇತ್ರದ ಉಪಚುನಾವಣೆ ಘೋಷಿಸಲಾಗಿದ್ದು, ಮುನಿರತ್ನ ಹಾಗೂ ಮುನಿರಾಜು ಗೌಡ ಅವರು ಬಿಜೆಪಿ ಟಿಕೆಟ್‌ ಆಕಾಂಕ್ಷಿಗಳಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT