ರಾಹುಲ್ ಗಾಂಧಿ ಭಾರತವನ್ನು ಅಪಮಾನಿಸಿದ್ದಾರೆ: ಜೆ.ಪಿ.ನಡ್ಡಾ

ಚಳ್ಳಕೆರೆ (ಚಿತ್ರದುರ್ಗ): ವಿದೇಶಿ ನೆಲದಲ್ಲಿ ಪ್ರಜಾಪ್ರಭುತ್ವದ ಕುರಿತು ಟೀಕೆ ಮಾಡಿದ ರಾಹುಲ್ ಗಾಂಧಿ, ಭಾರತವನ್ನು ಅಪಮಾನ ಮಾಡಿದ್ದಾರೆ. ಪ್ರಜಾಪ್ರಭುತ್ವ ಉಳಿಸುವಂತೆ ವಿದೇಶದ ಎದುರು ಅಂಗಲಾಚಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಆಕ್ರೋಶ ವ್ಯಕ್ತಪಡಿಸಿದರು.
ಚಳ್ಳಕೆರೆಯಲ್ಲಿ ವಿಜಯ ಸಂಕಲ್ಪ ಯಾತ್ರೆಯ ಅಂಗವಾಗಿ ನಡೆದ ರೋಡ್ ಶೋ ಅಂತ್ಯಗೊಳಿಸಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, 'ಕುಣಿಯಲು ಬಾರದವರು ನೆಲ ಡೊಂಕು ಎಂಬಂತೆ ವಿದೇಶಕ್ಕೆ ತೆರಳಿ ದೇಶದ ಬಗ್ಗೆ ಟೀಕೆ ಮಾಡುತ್ತಿದ್ದಾರೆ. ತುರ್ತು ಪರಿಸ್ಥಿತಿ ಹೇರಿದ ಇಂದಿರಾಗಾಂಧಿ ಅವರ ಪಕ್ಷದವರಿಂದ ನಾವು ಪಾಠ ಕಲಿಯಬೇಕಾಗಿಲ್ಲ' ಎಂದು ತಿರುಗೇಟು ನೀಡಿದರು.
'ಕಾಂಗ್ರೆಸ್ ಅಂದರೆ ಭ್ರಷ್ಟಾಚಾರ ಪಕ್ಷ. ಬಿಜೆಪ ಎಂದರೆ ವಿಕಾಸ ಮತ್ತು ಅಭಿವೃದ್ಧಿ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ದೇಶ ಅಭಿವೃದ್ಧಿ ಹೊಂದುತ್ತಿದೆ. ಇದನ್ನು ಸಹಿಸಿಕೊಳ್ಳದ ಕಾಂಗ್ರೆಸ್ ಮುಖಂಡರು ಹೀಗೆ ಮಾತನಾಡುತ್ತಿದ್ದಾರೆ. ಇಂಥ ಪಕ್ಷದವರನ್ನು ನೀವು ಗೆಲ್ಲಿಸುವಿರಾ ಎಂದು ಪ್ರಶ್ನಿಸಿದರು.
'ಬಂಡವಾಳ ಹೂಡಿಕೆಯಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ನಾಯಕ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಡಬಲ್ ಎಂಜಿನ್ ಸರ್ಕಾರ ಅದ್ಭುತ ಕಾರ್ಯಗಳನ್ನು ಮಾಡಿದೆ. ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿ ಮತ್ತೆ ಅಧಿಕಾರಕ್ಕೆ ಬರಲಿದೆ' ಎಂದು ವಿಶ್ವಾಸ ವ್ಯಕ್ತಪಡಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.