ಶನಿವಾರ, ಆಗಸ್ಟ್ 13, 2022
26 °C

ಕರಾವಳಿಯಲ್ಲಿ ಭಾರಿ ಮಳೆ- ಕೊಡಗಿನಲ್ಲೂ ವರ್ಷಧಾರೆ l ಮೂಲ್ಕಿಯಲ್ಲಿ ಒಂದು ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ರಾಜ್ಯದ ಕೊಡಗು, ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಗುರುವಾರ ಧಾರಾಕಾರ ಮಳೆ ಸುರಿಯಿತು.

ಮಂಗಳೂರು ನಗರ ಮತ್ತು ಹೊರವಲಯದ ಪ್ರಮುಖ ರಸ್ತೆಗಳಲ್ಲಿ ನೀರು ತುಂಬಿದ ಕಾರಣ ವಾಹನ ಸಂಚಾರಕ್ಕೆ ಅಡ್ಡಿಯಾಯಿತು. ಗುಡ್ಡ ಜರಿದು ರೈಲು ಸಂಚಾರಕ್ಕೂ ತೊಂದರೆಯಾಯಿತು. ಹವಾಮಾನ ವೈಪರೀತ್ಯದಿಂದಾಗಿ ಕೆಲವು ವಿಮಾನಗಳ ಹಾರಾಟ ವಿಳಂಬವಾಯಿತು.

ಮಂಗಳೂರು ತಾಲ್ಲೂಕಿನ ಪಾವೂರಿನಲ್ಲಿ ಬೆಳಿಗ್ಗೆ ಅರ್ಧ ತಾಸಿನಲ್ಲೇ 6.4 ಸೆಂ.ಮೀ. ಮಳೆಯಾಗಿತ್ತು. ಶುಕ್ರವಾರವೂ ಮಳೆ ಮುಂದುವರಿಯುವ ಸಾಧ್ಯತೆ ಇರುವಕಾರಣ ದಕ್ಷಿಣ ಕನ್ನಡ ಮತ್ತು ಉಡುಪಿಜಿಲ್ಲೆಗಳ ಶಾಲಾ– ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.ಪಡೀಲ್ ಬಳಿ ರೈಲ್ವೆ ಹಳಿ ಮೇಲೆ ಗುಡ್ಡ ಜರಿದು ಬಿದ್ದ ಕಾರಣ ವಿಜಯಪುರಕ್ಕೆ ತೆರಳುವ ರೈಲು ಬಂಟ್ವಾಳ ನಿಲ್ದಾಣದಿಂದ ಹೊರಡುವ ವ್ಯವಸ್ಥೆ ಮಾಡಲಾಯಿತು. ಮಧ್ಯಾಹ್ನ 2.45ರ ವೇಳೆ ರೈಲು ಸಂಚಾರ ಪುನರಾರಂಭಗೊಂಡಿತು.

ಉಳ್ಳಾಲ ತಾಲ್ಲೂಕಿನ ಅಸೈ ಮದಕ ಮತ್ತು ಮಂಜನಾಡಿಯ ಅಸೈಗೋಳಿಯಲ್ಲಿ ಗುಡ್ಡ ಜರಿದು ಮನೆಗೆ ಹಾನಿಯಾಗಿದೆ. ಸುಳ್ಯದ ಜಟ್ಟಿಪಳ್ಳ ಸಕಾ೯ರಿ ಶಾಲೆಯ ಚಾವಣಿಯ ಒಂದು ಭಾಗ ಮುರಿದು ಬಿದ್ದಿದೆ. ಮೂಲ್ಕಿಯ ಶ್ರೀದೇವಿ ಕಾಲೇಜು ರಸ್ತೆ ಕುಸಿದಿದ್ದು ಮರವೂರು ಸೇತುವೆಯಲ್ಲಿ ಬಿರುಕು ಕಾಣಿಸಿಕೊಂಡಿದೆ. ಕೊಣಾಜೆಯ ಮುಚ್ಚಿಲಕೋಡಿಯಲ್ಲಿ ಗುಡ್ಡ ಕುಸಿದು ಬಾವಿ ಮುಚ್ಚಿಹೋಗಿದೆ. ಮಂಗಳೂರು ಹೊರವಲಯದ ನೀರುಮಾರ್ಗ ಬಳಿಯ ಬೊಂಡಂತಿಲದ ಕಟ್ಟಪಣಿ ಗ್ರಾಮದಲ್ಲಿ ನೆರೆಯ ಪರಿಸ್ಥಿತಿ ಸೃಷ್ಟಿಯಾಗಿತ್ತು.

ಉಡುಪಿ ಜಿಲ್ಲೆಯಲ್ಲಿಯೂ ಭಾರಿ ಮಳೆಯಾಗಿದೆ. ಚಿಕ್ಕಮಗಳೂರಿನ ಮಲೆನಾಡು ಭಾಗದಲ್ಲಿಯೂ ಉತ್ತಮ ಮಳೆಯಾಗಿದೆ. ತುಂಗಾ, ಭದ್ರಾ ನದಿಗಳಲ್ಲಿ ಹರಿವು ತುಸು ಹೆಚ್ಚಾಗಿದೆ.

ಇಂದೂ ಹೆಚ್ಚಿನ ಮಳೆ ಸಾಧ್ಯತೆ: ಜುಲೈ 1ರಂದು ಭಾರಿ ಮಳೆಯ ಮುನ್ಸೂಚನೆ ನೀಡಿರುವ ಹವಾಮಾನ ಇಲಾಖೆ, ಜುಲೈ 5ರವರೆಗೂ ಮಳೆ ಮುಂದುವರಿಯಲಿದ್ದು, ಸಮುದ್ರದಲ್ಲಿ ದೈತ್ಯ ಅಲೆಗಳು ಏಳುವ ಸಾಧ್ಯತೆಗಳಿವೆ. ಗಂಟೆಗೆ 40ರಿಂದ 50 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದ್ದು ಮೀನುಗಾರರು ಸಮುದ್ರಕ್ಕಿಳಿಯಬಾರದು ಎಂದು ಎಚ್ಚರಿಕೆ ನೀಡಿದೆ.

ಮೃತದೇಹ ಪತ್ತೆ: ಮೂಲ್ಕಿಯ ಕೆ.ಎಸ್‌.ರಾವ್ ನಗರದ ಲಿಂಗಪ್ಪಯ್ಯಕಾಡು ಸರ್ಕಾರಿ ಬಾವಿ ಬಳಿ ಬುಧವಾರ ಕಾಲುಜಾರಿ ಚರಂಡಿಗೆ ಬಿದ್ದಿದ್ದ ಸುನಿಲ್ (40) ಎಂಬುವವರ ಶವ ಗುರುವಾರ ಪತ್ತೆಯಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು