ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರಾಕಾರ ಮಳೆ: ನೀರಲ್ಲಿ ಕೊಚ್ಚಿಹೋದ ವ್ಯಕ್ತಿ

Last Updated 10 ಸೆಪ್ಟೆಂಬರ್ 2020, 17:01 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ವಿಜಯಪುರ, ಬೆಳಗಾವಿ ಸೇರಿದಂತೆ ಹಲವೆಡೆ ಗುರುವಾರ ಉತ್ತಮ ಮಳೆಯಾಗಿದೆ. ವಿಜಯಪುರ ನಗರ ಸೇರಿ ಜಿಲ್ಲೆಯ ಹಲವೆಡೆ ವರುಣನ ಆರ್ಭಟ ಹೆಚ್ಚಿತ್ತು. ತಾಳಿಕೋಟೆಯಲ್ಲಿ ಡೋಣಿ ಪ್ರವಾಹ ತಗ್ಗಿದ್ದು, ಹಡಗಿನಾಳ ಸಂಪರ್ಕಿಸುವ ಸೇತುವೆ ಜನ ಸಂಚಾರಕ್ಕೆ ಮುಕ್ತವಾಗಿದೆ.

ಬೆಳಗಾವಿ ಜಿಲ್ಲೆಯ ಗೋಕಾಕ, ಕೌಜಲಗಿ ಹಾಗೂ ಬೈಲಹೊಂಗಲ, ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲ್ಲೂಕಿನಲ್ಲಿ ಸಾಧಾರಣ ಮಳೆಯಾಯಿತು. ಸುತಗಟ್ಟಿಯಿಂದ ಹಿಟ್ಟಣಗಿ ಗ್ರಾಮ ಸಂಪರ್ಕ ಕಲ್ಪಿಸುವ ಸೇತುವೆ ಮಳೆಯಿಂದ ಕುಸಿದಿದ್ದು, ಎರಡು ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ.

ಕೊಚ್ಚಿಹೋದ ವ್ಯಕ್ತಿ: ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲ್ಲೂಕಿನ ಶ್ರೀರಾಮರಂಗಾಪುರ ಗ್ರಾಮದ ರಾಮಪ್ಪನಹಳ್ಳದ ಸೇತುವೆ ದಾಟುವಾಗ ಶಿವಪ್ಪ ಹೊನ್ನೂರಪ್ಪ (55) ಗುರುವಾರ ಕಾಲುಜಾರಿ ಬಿದ್ದು ಹಳ್ಳದ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದಾರೆ.

ಸಿರುಗುಪ್ಪ ತಾಲ್ಲೂಕಿನ ಹಿರೇಹಳ್ಳದಲ್ಲಿ ನೀರಿನ ಪ್ರಮಾಣ ಹೆಚ್ಚಾಗಿ ತಾಳೂರು ಮಾರ್ಗದ ರಸ್ತೆ ಸಂಪರ್ಕ ಸ್ಥಗಿತಗೊಂಡಿದೆ. ಕುರುಗೋಡು ತಾಲ್ಲೂಕಿನ ಮದಿರೆ ಗ್ರಾಮದ ಬಳಿ ಸೇತುವೆ ಮೇಲೆ ಹಳ್ಳ ಹರಿದು ಕೋಳೂರು ಗ್ರಾಮಕ್ಕೆ ಸಂಪರ್ಕ ಕಡಿತಗೊಂಡಿತು. ಮಾಳಾಪುರ ಗ್ರಾಮದಲ್ಲಿ 8 ಮನೆಗಳು ಬಿದ್ದಿವೆ.

ಕಣ್ಮರೆ: ಹೊಸದುರ್ಗ ತಾಲ್ಲೂಕಿನ ಮಾಡದಕೆರೆ ಹೋಬಳಿಯ ನರಸೀಪುರ ಬಳಿ ಹಿರೇಹಳ್ಳದಲ್ಲಿ ಗುರುವಾರ ಮೀನು ಹಿಡಿಯಲು ಹೋಗಿದ್ದ ಇಬ್ಬರು ಬಾಲಕರು ಕಣ್ಮರೆಯಾಗಿದ್ದು, ಹಳ್ಳದಲ್ಲಿ ನೀರಿನಲ್ಲಿ ಕೊಚ್ಚಿ ಹೋಗಿರುವ ಶಂಕೆ ವ್ಯಕ್ತವಾಗಿದೆ.

ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗಿದೆ. ಕೋಣಂದೂರಿನಲ್ಲಿ ಭಾರಿ ಮಳೆಗೆ ಸೇತುವೆ ಕುಸಿದಿದೆ. ಕರಾವಳಿಯಲ್ಲಿ ಸಮುದ್ರ ತೀರದ ಪ್ರದೇಶಗಳಲ್ಲೇ ಅಬ್ಬರ ಹೆಚ್ಚಿತ್ತು. ಮಂಗಳೂರಿನಲ್ಲಿ 2.5 ಸೆಂ.ಮೀ.ಗೂ ಅಧಿಕ ಮಳೆ ಸುರಿದಿದೆ.

‘ಮೀನುಗಾರರಿಗೆ ಹವಾಮಾನ ಮುನ್ಸೂಚನೆ ನೀಡಲಾಗಿದೆ. ನಾಡದೋಣಿ, ಪರ್ಸಿನ್‌ ಬೋಟ್‌ಗಳು ಮೀನುಗಾರಿಕೆಗೆ ತೆರಳಿಲ್ಲ. ಆದರೆ, ಈಗಾಗಲೇ ಕೆಲವು ಟ್ರಾಲ್ ಬೋಟ್‌ಗಳು ಸಮುದ್ರಕ್ಕೆ ತೆರಳಿದ್ದು, ಮೀನುಗಾರಿಕೆಯಲ್ಲಿವೆ’ ಎಂದು ಮೀನುಗಾರಿಕಾ ಉಪನಿರ್ದೇಶಕ ಪಾರ್ಶ್ವನಾಥ ತಿಳಿಸಿದರು.

ಉಡುಪಿ ಜಿಲ್ಲೆಯ ಕೆಲವೆಡೆ, ಚಿಕ್ಕಮಗಳೂರು, ಕೊಡಗು ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದೆ. ತುಮಕೂರಿನ ತುರುವೇಕೆರೆ ತಾಲ್ಲೂಕು ದುಂಡಾ ಮತ್ತು ಸಂಪಿಗೆ ಗ್ರಾಮದಲ್ಲಿ ತಲಾ ಒಂದು ಮನೆ ಕುಸಿದಿದೆ. ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಹುಳಿಯಾರು ಹೋಬಳಿಯಲ್ಲಿ ಹೊಲಗಳಲ್ಲಿ ಬದುಗಳು ಕೊಚ್ಚಿಹೋಗಿವೆ. ರಾಯಚೂರು ಜಿಲ್ಲೆಯ ಮಾನ್ವಿ, ಕವಿತಾಳದಲ್ಲಿ ಉತ್ತಮ ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT