ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹಾರಂಗಿಗೆ ಹೆಚ್ಚು ನೀರು ಪ್ರವಾಹದ ಮುನ್ನೆಚ್ಚರಿಕೆ

ಜು. 6ರವರೆಗೆ ಕರಾವಳಿಯಲ್ಲಿ ನಿತ್ಯವೂ ಮಳೆ ಮುನ್ಸೂಚನೆ
Last Updated 1 ಜುಲೈ 2022, 19:57 IST
ಅಕ್ಷರ ಗಾತ್ರ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಮಳೆ ಶುಕ್ರವಾರವೂ ಮುಂದುವರಿದಿದೆ. ಹಾರಂಗಿ ಜಲಾಶಯಕ್ಕೆ 5,785 ಕ್ಯುಸೆಕ್‌ನಷ್ಟು ನೀರು ಹರಿದು ಬರುತ್ತಿರುವುದರಿಂದ ಯಾವುದೇ ಕ್ಷಣದಲ್ಲೂ ನೀರನ್ನು ಹೊರಬಿಡಬಹುದಾಗಿದ್ದು, ತಗ್ಗು ಪ್ರದೇಶದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳಬೇಕು ಎಂದು ಜಿಲ್ಲಾಡಳಿತ ಮುನ್ನಚ್ಚರಿಕೆ ನೀಡಿದೆ. ಸದ್ಯ, 2,859 ಗರಿಷ್ಠ ಅಡಿಯ ಜಲಾಶಯದಲ್ಲಿ ಈಗಾಗಲೇ 2,855.48 ಅಡಿಗಳಷ್ಟು ನೀರು ತುಂಬಿದೆ.

ಗಾಳಿ ರಭಸದಿಂದ ಬೀಸುತ್ತಿರುವುದರಿಂದ ಮಡಿಕೇರಿ– ಮಂಗಳೂರು ರಸ್ತೆಯಲ್ಲಿ ಕಾಟಕೇರಿ ಸಮೀಪ ಮರವೊಂದು ಉರುಳಿ ಬಿದ್ದು, ಸಂಚಾರ ಅಸ್ತವ್ಯಸ್ತಗೊಂಡಿತ್ತು. ತಾಳತ್ತಮನೆ ಸಮೀಪ ಮಣ್ಣು ಸ್ವಲ್ಪಸ್ವಲ್ಪವೇ ಜರುಗುತ್ತಿದೆ. ಮಳೆ ಇನ್ನಷ್ಟು ಬಿರುಸಾದರೆ ರಸ್ತೆಗೆ ಮಣ್ಣು ಬೀಳುವ ಆತಂಕ ಮೂಡಿದೆ. ಪಾಲಿಬೆಟ್ಟದಲ್ಲಿ ವಿದ್ಯುತ್‌ ಕಂಬಗಳು ಮುರಿದಿವೆ.

ಮಡಿಕೇರಿಯಲ್ಲಿ ದಿನವಿಡಿ ಮಂಜು ಕವಿದ ವಾತಾವರಣವಿದ್ದು, ವಾಹನಗಳು ಮಧ್ಯಾಹ್ನದ ವೇಳೆಯಲ್ಲೂ ದೀಪಗಳನ್ನು ಹಾಕಿಕೊಂಡು ಸಂಚರಿಸಿದವು. ಮಡಿಕೇರಿ, ವಿರಾಜಪೇಟೆ, ಸೋಮವಾರಪೇಟೆ, ಗೋಣಿಕೊಪ್ಪಲು, ಶನಿವಾರಸಂತೆ ಭಾಗಗಳಲ್ಲಿ ಮಳೆ ಮುಂದುವರಿದಿದೆ.

ಕಡಲ್ಕೊರೆತದ ಭೀತಿ (ಮಂಗಳೂರು ವರದಿ): ಕರಾವಳಿಯಲ್ಲಿ ಮಳೆಯ ಅಬ್ಬರ ಶುಕ್ರವಾರ ತುಸು ಕಡಿಮೆಯಾಗಿದೆ. ಆದರೆ, ಮುಂಗಾರು ಚುರುಕಾಗುತ್ತಿದ್ದಂತೆಯೇ ಅರಬ್ಬೀಸಮುದ್ರವು ಪ್ರಕ್ಷುಬ್ಧಗೊಂಡಿದ್ದು, ಕಡಲ್ಕೊರೆತದ ಭೀತಿ ಎದುರಾಗಿದೆ.

ಉಳ್ಳಾಲ ಸಮೀಪದ ಸೀಗ್ರೌಂಡ್‌, ಬಟ್ಟಪ್ಪಾಡಿ ಹಾಗೂ ಉಚ್ಚಿಲ ಪ್ರದೇಶಗಳಲ್ಲಿ ಕಡಲ ಅಲೆಗಳ ಅಬ್ಬರ ಜೋರಾಗಿದೆ. ಉಚ್ಚಿಲದಲ್ಲಿ ಎರಡು ಮನೆಗಳು ಕುಸಿತದ ಭೀತಿ ಎದುರಿಸುತ್ತಿವೆ. ಬಟ್ಟಪ್ಪಾಡಿಯಲ್ಲಿ ಸಂಪರ್ಕ ರಸ್ತೆ ಪೂರ್ತಿ ಕೊಚ್ಚಿಹೋಗಿದ್ದು, 30ಕ್ಕೂ ಅಧಿಕ ಕುಟುಂಬಗಳು ಸುತ್ತಿ ಬಳಸಿಮನೆಗೆ ತಲುಪಬೇಕಿದೆ. ಸೀಗ್ರೌಂಡ್‌ 25ಕ್ಕೂ ಮನೆಗಳು ಕಡಲ್ಕೊರೆತದಿಂದ ಅಪಾಯಕ್ಕೆ ಸಿಲುಕುವ ಆತಂಕ ಎದುರಿಸುತ್ತಿವೆ.

ಉಡುಪಿ ಜಿಲ್ಲೆಯಲ್ಲೂ ದೈತ್ಯ ಅಲೆಗಳು ಕಿನಾರೆಗೆ ಅಪ್ಪಳಿಸುತ್ತಿವೆ. ಬೈಂದೂರು, ಕಾಪು, ಮಲ್ಪೆಯಲ್ಲಿ ಕಡಲ್ಕೊರೆತ ಭೀತಿ ಎದುರಾಗಿದೆ.

ಜುಲೈ 6ರವರೆಗೂ ನಿತ್ಯವೂ ಕರಾವಳಿ ಪ್ರದೇಶದಲ್ಲಿ ಭಾರಿ ಮಳೆಯಾಗಲಿದೆ. ಅರಬ್ಬೀ ಸಮುದ್ರದಲ್ಲಿ 3.5 ಮೀಟರ್‌ ನಿಂದ 3.7 ಮೀಟರ್‌ ಎತ್ತರದ ಅಲೆಗಳು ಕಾಣಿಸಿಕೊಳ್ಳಲಿವೆ. ಕಡಲಿನಲ್ಲಿ ಮೀನುಗಾರಿಕೆ ನಡೆಸಬಾರದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT