ಏಳು ಜಿಲ್ಲೆಗಳಲ್ಲಿ ಭಾರಿ ಮಳೆ ಸಾಧ್ಯತೆ
ಬೆಂಗಳೂರು: ರಾಜ್ಯದ ದಕ್ಷಿಣ ಒಳನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಸೆ.14ರಂದು ಭಾರಿ ಮಳೆಯಾಗುವ ಸಾಧ್ಯತೆಯಿದ್ದು, ಶಿವಮೊಗ್ಗ, ಕೊಡಗು, ಹಾಸನ, ಚಿಕ್ಕಮಗಳೂರು, ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ 'ಆರೆಂಜ್ ಅಲರ್ಟ್' ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಕರಾವಳಿ ಜಿಲ್ಲೆಗಳಲ್ಲಿ ಸೆ.18 ರವರೆಗೆ ಭಾರಿ ಮಳೆಯಾಗಲಿದೆ. ಈ ಭಾಗದಲ್ಲಿ ಗಂಟೆಗೆ 55 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿರುವುದರಿಂದ ಮೀನುಗಾರರು ಸಮುದ್ರಕ್ಕೆ ಇಳಿಯಬಾರದು ಎಂದು ಇಲಾಖೆ ಎಚ್ಚರಿಸಿದೆ.
ಉತ್ತರ ಒಳನಾಡಿನ ಬೀದರ್, ಕಲಬುರ್ಗಿ ಹಾಗೂ ಯಾದಗಿರಿಯಲ್ಲಿ ಮುಂದಿನ 48 ಗಂಟೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇರುವುದರಿಂದ 'ಯೆಲ್ಲೊ ಅಲರ್ಟ್' ಘೋಷಿಸಲಾಗಿದೆ. ದಕ್ಷಿಣ ಒಳನಾಡಿನಲ್ಲಿ ಸೆ.15 ರಿಂದ ಮಳೆ ತಗ್ಗಲಿದೆ.
ಮಳೆ-ಎಲ್ಲಿ,ಎಷ್ಟು?: ಉಡುಪಿ ಜಿಲ್ಲೆಯ ಸಿದ್ದಾಪುರ ಹಾಗೂ ಕುಂದಾಪುರದಲ್ಲಿ ತಲಾ 11 ಸೆಂ.ಮೀ ಮಳೆಯಾಗಿದೆ. ಸುಳ್ಯ 9, ಪುತ್ತೂರು, ಭಟ್ಕಳ 8, ಅಂಕೋಲಾ 7, ಭಾಗಮಂಡಲ, ಹೊಸನಗರ 6, ಉಪ್ಪಿನಂಗಡಿ, ಮೂಡುಬಿದರೆ, ಮಂಗಳೂರು, ಕಾರ್ಕಳ 5, ಉಡುಪಿ 4, ಗದಗ, ಕಾರವಾರ, ಚಿಂಚೋಳಿ, ಬೀದರ್ 3, ಹಾವೇರಿ, ಬೆಂಗಳೂರು, ಶಿರಾ 2, ಕುಶಾಲನಗರ, ಪಾವಗಡ, ಚಿಕ್ಕಬಳ್ಳಾಪುರ, ಸಕಲೇಶಪುರ, ಬಾಗೇಪಲ್ಲಿಯಲ್ಲಿ ತಲಾ 1 ಸೆಂ.ಮೀ ಮಳೆಯಾಗಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.