ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತಾಂತರ ನಿಷೇಧ ಮಸೂದೆ: ಪರ–ವಿರೋಧ

ಸಂಘ ಪರಿವಾರದ ಸಂಘಟನೆಗಳಿಂದ ಕಾಯ್ದೆಗೆ ಒತ್ತಡ l ತುಳಸಿ ಮುನಿರಾಜು ಅವರಿಂದ ಖಾಸಗಿ ಮಸೂದೆ
Last Updated 9 ಡಿಸೆಂಬರ್ 2021, 22:05 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಮತಾಂತರ ತಡೆಯುವ ಉದ್ದೇಶದಿಂದ ಕಾಯ್ದೆಯೊಂದನ್ನು ಜಾರಿಗೆ ತರಲು ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ತಯಾರಿ ನಡೆಸಿದ್ದು, ಇದಕ್ಕೆ ಪೂರಕವಾದ ಮಸೂದೆಯನ್ನು ಬೆಳಗಾವಿಯಲ್ಲಿ ನಡೆಯಲಿರುವ ವಿಧಾನಮಂಡಲದ ಅಧಿವೇಶನದಲ್ಲಿ ಮಂಡಿಸುವ ಸಾಧ್ಯತೆ ಇದೆ. ಉದ್ದೇಶಿತ ಮಸೂದೆಯನ್ನು ವಿರೋಧಿಸಿ ಕ್ರೈಸ್ತ ಸಮುದಾಯದವರು ರಾಜ್ಯದಾದ್ಯಂತ ಹೋರಾಟಕ್ಕೆ ಮುಂದಾಗಿದ್ದಾರೆ.

ಬಿಜೆಪಿ, ವಿಶ್ವ ಹಿಂದೂ ಪರಿಷತ್‌, ಬಜರಂಗದಳ, ಹಿಂದೂ ಜಾಗರಣಾ ವೇದಿಕೆ, ವಿವಿಧ ಮಠಾಧೀಶರು ಮತಾಂ
ತರ ನಿಷೇಧ ಕಾಯ್ದೆಯನ್ನು ಜಾರಿಗೆ ತರಲೇಬೇಕು ಎಂದು ಪಟ್ಟು ಹಿಡಿದಿದ್ದಾರೆ. ಈ ಮಧ್ಯೆ ವಿಧಾನಪರಿಷತ್‌ನ ಬಿಜೆಪಿ ಸದಸ್ಯ ತುಳಸಿ ಮುನಿರಾಜುಗೌಡ ಅವರು ‘ಮತಾಂತರ ನಿಷೇಧದ ಪ್ರಸ್ತಾಪಿಸುವ ಖಾಸಗಿ
ಮಸೂದೆ’ ಮಂಡಿಸುವುದಾಗಿ ಹೇಳಿದ್ದಾರೆ. ‘ನನ್ನ ತಾಯಿಯನ್ನು ಕ್ರೈಸ್ತ ಮಿಷನರಿಗಳು ಮತಾಂತರ ಮಾಡಿದ್ದಾರೆ’ ಎಂದು ದೂರಿ ಶಾಸಕ ಗೂಳಿಹಟ್ಟಿ ಶೇಖರ್‌ ವಿಧಾನಸಭೆ ಅಧಿವೇಶನದಲ್ಲಿ ಕಣ್ಣೀರು ಹಾಕಿದ್ದರು. ಮತಾಂತರ ನಿಷೇಧಕ್ಕೆ ಕಠಿಣ ಕಾಯ್ದೆ ತರಬೇಕು ಎಂದು ಒತ್ತಾಯಿಸಿದ್ದರು.

‘ಕ್ರೈಸ್ತ ಮಿಷನರಿಗಳು ಅದರಲ್ಲೂ ಇವಾಂಜಿಲಿಕಲ್ ಗುಂಪುಗಳು ಆಮಿಷಗ
ಳನ್ನು ಒಡ್ಡಿ, ದಬ್ಬಾಳಿಕೆಯ ಮೂಲಕ ಹಿಂದುಳಿದವರು, ಪರಿಶಿಷ್ಟ ಜಾತಿ ಮತ್ತು ಬುಡಕಟ್ಟು ಜನರನ್ನು ಭಾರೀ ಪ್ರಮಾಣದಲ್ಲಿ ಮತಾಂತರ ಮಾಡುತ್ತಿವೆ. ಧರ್ಮದ ಆಧಾರದಲ್ಲಿ ದೇಶದಲ್ಲಿ ತಮ್ಮ ಧರ್ಮದ ಜನರ ಸಂಖ್ಯೆ ಹೆಚ್ಚಿಸಿಕೊಳ್ಳುವ ಪ್ರಯತ್ನ ನಡೆದಿದೆ. ಇದಕ್ಕೆ ಕಡಿವಾಣ ಹಾಕಲು ಕಾಯ್ದೆ ಅಗತ್ಯವಿದೆ. ಆದ್ದರಿಂದ ಖಾಸಗಿ ಮಸೂದೆಯನ್ನು ಮಂಡಿಸುತ್ತೇನೆ’ ಎಂದು ತುಳಸಿ ಮುನಿರಾಜುಗೌಡ ಹೇಳಿದ್ದಾರೆ.

‘ಮತಾಂತರ ನಿಷೇಧ ಮಸೂದೆ ಹೆಸರಿನಲ್ಲಿ ಕ್ರೈಸ್ತ ಧರ್ಮೀಯರನ್ನು ನಿಯಂತ್ರಿಸುವ ಪ್ರಯತ್ನ ಆರಂಭವಾಗಿದೆ. ಕ್ರೈಸ್ತ ಮಿಷನರಿಗಳು ನಡೆಸುತ್ತಿರುವ ಶಾಲೆ, ಆಸ್ಪತ್ರೆಗಳಲ್ಲಿ ಮತಾಂತರ ನಡೆಯುತ್ತಿರುವುದಕ್ಕೆ ಸಾಕ್ಷ್ಯ ನೀಡಿದರೆ ಅಂತಹ ಸಂಸ್ಥೆಗಳನ್ನೇ ಮುಚ್ಚಲು ಸಿದ್ಧ’ ಎಂದುಬೆಂಗಳೂರು ಆರ್ಚ್ ಬಿಷಪ್ ಪೀಟರ್ ಮಚಾದೊ, ಹಿಂದೂ ಸಂಘಟನೆಗಳಿಗೆ ಬಹಿರಂಗ ಸವಾಲು ಹಾಕಿದ್ದಾರೆ.

ಕರಾವಳಿಯಲ್ಲಿ ಆಗಾಗ್ಗೆ ಘರ್ಷಣೆ

ಮಂಗಳೂರು: ಕರಾವಳಿ ಜಿಲ್ಲೆಗಳಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಗೆ ಸಂಬಂಧಿಸಿದಂತೆ ಪರ–ವಿರೋಧ ಚರ್ಚೆಗಳು ಸಹ ಜೋರಾಗಿವೆ. ವಿಶ್ವ ಹಿಂದೂ ಪರಿಷತ್‌, ಬಜರಂಗದಳ, ಹಿಂದೂ ಜಾಗರಣಾ ವೇದಿಕೆ ಸೇರಿದಂತೆ ಹಿಂದೂಪರ ಸಂಘಟನೆಗಳು ಮತಾಂತರ ನಿಷೇಧ ಕಾಯ್ದೆ ಜಾರಿ ಆಗಲೇಬೇಕು ಎನ್ನುವ ಒತ್ತಾಯ ಮಾಡುತ್ತಿವೆ. ಕ್ರೈಸ್ತ ಸಂಘಟನೆಗಳು, ಎಸ್‌ಡಿಪಿಐ ಸೇರಿದಂತೆ ಹಲವು ಸಂಘಟನೆಗಳು ಕಾಯ್ದೆ ಜಾರಿಗೆ ವಿರೋಧ ವ್ಯಕ್ತಪಡಿಸಿವೆ.

ಕೆಲ ದಿನಗಳ ಹಿಂದೆ ಧರ್ಮಸ್ಥಳಕ್ಕೆ ಭೇಟಿ ನೀಡಿದ್ದ ವಿಶ್ವ ಹಿಂದೂ ಪರಿಷತ್‌ ಕೇಂದ್ರೀಯ ಕಾರ್ಯಾಧ್ಯಕ್ಷ ಅಲೋಕ್ ಕುಮಾರ್, ‘ದೇಶದಲ್ಲಿ ಅನುಸೂಚಿತ ಜಾತಿಗಳ ಮೇಲೆ ಮತಾಂತರ ಪಿಡುಗು ವ್ಯಾಪಿಸಿದೆ. ಜೊತೆಗೆ ಲವ್ ಜಿಹಾದ್, ಬೆದರಿಕೆ ಭಯದ ವಾತಾವರಣ ಸೃಷ್ಟಿಸಿ, ಮತಾಂತರ ಮಾಡಲಾಗುತ್ತಿದೆ. ಇದನ್ನು ತಡೆಗಟ್ಟಲು ವಿಶ್ವ ಹಿಂದೂ ಪರಿಷತ್‌ ಚಿಂತನೆ ನಡೆಸಿದೆ’ ಎಂದು ಹೇಳಿದ್ದರು.

ಕಷ್ಟದಿಂದ ಪಾರಾಗಲು ಚರ್ಚ್‌ಗೆ ಹೋದೆವು.

ಚಿತ್ರದುರ್ಗ: ‘ಜಗಳ ಮಾಡಿಕೊಂಡವರ ವಿರುದ್ಧ ಮಾಟ ಮಂತ್ರ ಮಾಡಿಸುವ ಹುಚ್ಚಾಟ ನಮ್ಮಲ್ಲಿ ಹೆಚ್ಚು. ಇದು ಇಡೀ ಕುಟುಂಬವನ್ನು ಸಂಕಷ್ಟಕ್ಕೆ ತಳ್ಳಿತು. ಏಸು ಕ್ರಿಸ್ತನಿಗೆ ನಂಬಿದರೆ ಮಾಟ–ಮಂತ್ರ ತಾಗುವುದಿಲ್ಲವೆಂಬುದು ಗೊತ್ತಾಯಿತು. ಕಷ್ಟದಿಂದ ಪಾರಾಗಲು ಚರ್ಚ್‌ಗೆ ಹೋದೆವು. ಈಗ ನೆಮ್ಮದಿ ಸಿಕ್ಕಿದೆ...’

ಹೊಸದುರ್ಗ ತಾಲ್ಲೂಕಿನ ದೇವಪುರ ಭೋವಿಹಟ್ಟಿಯ ವೆಂಕಟೇಶ್‌ ಕ್ರೈಸ್ತ ಧರ್ಮದ ಮತಾಂತರಕ್ಕೆ ನೀಡುವ ವಿವರಣೆ ಇದು. ಎಂಟು ತಿಂಗಳ ಹಿಂದಿನಿಂದ ಪಟ್ಟಣದ ಕಲ್ವರಿ ಬೇತೇಲ್‌ ಚರ್ಚ್‌ಗೆ ಹೋಗುತ್ತಿದ್ದಾರೆ. ಆದರೂ ಇವರ ಮನೆಯಲ್ಲಿ ಕ್ರೈಸ್ತ ಧರ್ಮದ ಯಾವುದೇ ಕುರುಹು ಲಭ್ಯವಾಗುವುದಿಲ್ಲ.

140 ಮನೆ, 750 ಜನಸಂಖ್ಯೆ ಹೊಂದಿರುವ ಈ ಹಟ್ಟಿಯಲ್ಲಿ ಭೋವಿ ಜನಾಂಗದವರಷ್ಟೇ ಇದ್ದಾರೆ. 12 ಕುಟುಂಬಗಳು ಕ್ರೈಸ್ತ ಧರ್ಮದ ಪಾಲನೆ ಮಾಡುತ್ತಿವೆ. ಮತಾಂತರಕ್ಕೆ ಗ್ರಾಮಸ್ಥರ ವಿರೋಧವಿದೆ. ಆದರೆ, ಅದು ಬಹಿರಂಗವಾಗಿ ವ್ಯಕ್ತವಾಗಿದ್ದು ವಿರಳ.

‘ಅನಾರೋಗ್ಯ ಕಾಣಿಸಿಕೊಂಡಾಗ ದೇವರಿಗೆ ನಡೆದುಕೊಳ್ಳುವುದು ಗ್ರಾಮಸ್ಥರ ರೂಢಿ. ಹಿಂದೂ ದೇವರನ್ನು ಆರಾಧನೆ ಮಾಡಿದರೆ ಗುಣಮುಖರಾಗಲು ಸಾಧ್ಯವಿದೆ. ಸಂಕಷ್ಟಕ್ಕೆ ಸಿಲುಕಿದವರ ಮನಸ್ಸು ತಿರುಗಿಸುವ ಪ್ರಯತ್ನವನ್ನು ಫಾಸ್ಟರ್‌ಗಳು ಮಾಡುತ್ತಿದ್ದಾರೆ. ಇಂಥವರು ಚರ್ಚ್‌ ಪ್ರಾರ್ಥನೆಯಲ್ಲಿ ಪಾಲ್ಗೊಳ್ಳಲು ಆರಂಭಿಸುತ್ತಿದ್ದಾರೆ’ ಎಂಬುದು ಭೋವಿಹಟ್ಟಿಯ ರಮೇಶ್‌ ಅವರ ಆಕ್ಷೇಪ.

‘ಹಟ್ಟಿಯಲ್ಲಿ ಎಲ್ಲರೂ ಒಗ್ಗೂಡಿ ಹಬ್ಬ ಮಾಡುವ ಪದ್ಧತಿ ಊರಲ್ಲಿತ್ತು. ಆದರೆ, ಚರ್ಚ್‌ಗೆ ಹೋಗುವ ಕುಟುಂಬಗಳು ಹಬ್ಬದಲ್ಲಿ ಪಾಲ್ಗೊಳ್ಳುವುದಿಲ್ಲ. ಸಹೋದರರ ಮನೆಯಲ್ಲೇ ಹಬ್ಬದ ಊಟ ಮಾಡುವುದಿಲ್ಲ. ಕುಟುಂಬದ ಜತೆಗೆ ಒಡನಾಟ ಕಡಿಮೆ ಮಾಡಿಕೊಂಡಿದ್ದಾರೆ’ ಎನ್ನುತ್ತಾರೆ ಅವರು.

‘ಮತಾಂತರಗೊಂಡ ಕುಟುಂಬಗಳು ಹಿಂದೂಗಳ ಜತೆ ವೈವಾಹಿಕ ಸಂಬಂಧ ಬೆಳೆಸುತ್ತಿಲ್ಲ. ಬೆಂಗಳೂರಿನಲ್ಲಿ ನಡೆದ ಜಾತಿ ಸಂಘಟನೆಯ ಸಭೆಯಲ್ಲಿ ಈ ವಿಚಾರ ಚರ್ಚೆಗೆ ಬಂದಿತು. ಜಾತಿಯಿಂದ ಎಲ್ಲರನ್ನೂ ಕಿತ್ತುಹಾಕುವುದಾಗಿ ಸಮುದಾಯದ ಮುಖಂಡರು ಎಚ್ಚರಿಕೆ ನೀಡಿದರು. ಹಿಂದೂ ಧರ್ಮಕ್ಕೆ ಮರಳುವಂತೆ ಮನವಿ ಮಾಡಿಕೊಂಡರೂ ಸ್ಪಂದಿಸುತ್ತಿಲ್ಲ’ ಎಂದು ರಾಮಕೃಷ್ಣ ವಿವರಣೆ ನೀಡಿದರು.

ಮತಾಂತರ: ದೂರು–ಪ್ರತಿದೂರು

ಯಾದಗಿರಿ/ ರಾಯಚೂರು: ಯಾದಗಿರಿ ತಾಲ್ಲೂಕಿನ ನೀಲಹಳ್ಳಿ ಗ್ರಾಮದಲ್ಲಿ ಸೆಪ್ಟೆಂಬರ್ 26 ರಂದು ಕ್ರೈಸ್ತ ಪಾದ್ರಿಗಳು ಮತಾಂತರ ಮಾಡಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿ ನಾಲ್ವರ ವಿರುದ್ಧ ಸೈದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಇದಾದ ನಂತರ ಕ್ರೈಸ್ತರು ಪ್ರತಿ ದೂರು ನೀಡಲು ತೆರಳಿದಾಗ ಹಿಂದೂ ಸಮುದಾಯವರು ಪೊಲೀಸ್ ಠಾಣೆ ಬಳಿ ಪ್ರತಿಭಟನೆ ಮಾಡಿ ಪ್ರತಿದೂರು ಪಡೆಯಬಾರದು ಎಂದು ಆಗ್ರಹಿಸಿದ್ದರು. ಪ್ರತಿ ದೂರು ದಾಖಲಾಗಿಲ್ಲ. ಇದಾದ ಕೆಲ ದಿನಗಳ ನಂತರ ಮತಾಂತರ ವಿರೋಧಿಸಿ ಸೈದಾಪುರ ಬಂದ್ ಮಾಡಲಾಗಿತ್ತು. ಯಾದಗಿರಿ ನಗರದಲ್ಲಿ ಕ್ರೈಸ್ತರು ಬೃಹತ್ ಪ್ರತಿಭಟನೆ ಮಾಡಿದ್ದರು. ‘ರಾಯಚೂರು ಅಷ್ಟೇ ಅಲ್ಲ, ಎಲ್ಲಿಯೂ ಮತಾಂತರ ಎನ್ನುವುದೇ ಇಲ್ಲ. ಸ್ವ–ಇಚ್ಛೆಯಿಂದ ಧರ್ಮಗಳನ್ನು ಆಚರಿಸುವ ಸಂವಿಧಾನ ಬದ್ಧ ಹಕ್ಕು ಎಲ್ಲರಿಗೂ ಇದೆ’ ಎನ್ನುತ್ತಾರೆ ರಾಯಚೂರು ಮೆಥೋಡಿಸ್ಟ್‌ ಚರ್ಚ್‌ನ ರೆವರಂಡ್‌ ಎ. ಸಿಮಿಯನ್‌.

‘ದೂರುಗಳಿವೆ: ಪುರಾವೆಯಿಲ್ಲ’

ಬೆಳಗಾವಿ: ಹಿಂದೂ ಧರ್ಮದಿಂದ ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡಲಾಗುತ್ತಿದೆ ಎಂದು ಹಿಂದೂ ಸಂಘಟನೆಗಳು ಆರೋಪಿಸುತ್ತಿವೆ. ಆದರೆ, ಮತಾಂತರ ನಡೆಸುತ್ತಿರುವುದಕ್ಕೆ ಯಾವುದೇ ಪುರಾವೆ ಇಲ್ಲ.

‘ಸಾಮೂಹಿಕ ಪ್ರಾರ್ಥನೆ, ದೇವರ ಆರಾಧನೆ ನೆಪದಲ್ಲಿ ಮತಾಂತರಕ್ಕೆ ಪುಸಲಾಯಿಸಲಾಗುತ್ತಿದೆ’ ಎಂದು ಆರೋಪಿಸಿ ನಗರದ ಮರಾಠಾ ಕಾಲೊನಿಯ ಕಟ್ಟಡವೊಂದರ ಮೇಲೆ ಶ್ರೀರಾಮ ಸೇನೆ ಕಾರ್ಯಕರ್ತರು ನ.7ರಂದು ದಾಳಿ ನಡೆಸಿದ್ದರು.

‘ಹಿಂದೂಗಳನ್ನು ಮತಾಂತ ಗೊಳಿಸುವ ಪ್ರಯತ್ನ ನಡೆಸುತ್ತಲೇ ಇದ್ದಾರೆ. ಮತಾಂತರ ತಡೆಯಲು, ಇತರ ಧರ್ಮಗಳನ್ನು ದೂಷಿಸುವವರ ವಿರುದ್ಧ ಕಠಿಣ ಕ್ರಮಕ್ಕಾಗಿ ಸರ್ಕಾರ ಪ್ರಬಲ ಕಾನೂನು ಜಾರಿಗೊಳಿಸಬೇಕು’ ಎಂದು ಶ್ರೀರಾಮ ಸೇನಾ ಹಿಂದೂಸ್ತಾನ ಅಧ್ಯಕ್ಷ ರಮಾಕಾಂತ ಕೊಂಡೂಸ್ಕರ ಒತ್ತಾಯಿಸಿದ್ದಾರೆ.

ರಾಯಚೂರು ನಗರ ಭಾಗದಲ್ಲಿ ಮತಾಂತರ ಮೊದಲು ಬಹಳ ಜೋರಾಗಿತ್ತು. ಈಗ ಗ್ರಾಮೀಣ ಭಾಗಕ್ಕೆ ವ್ಯಾಪಿಸಿದೆ. ಜಿಲ್ಲೆಯಲ್ಲಿ ಬಲವಂತದ ಮತಾಂತರವೇ ನಡೆಯುತ್ತಿದೆ.

– ವಿಜಯಕುಮಾರ್‌ ಹೂಗಾರ, ‌ವಿಶ್ವಹಿಂದೂ ಪರಿಷತ್‌ ರಾಯಚೂರು ಜಿಲ್ಲಾ ಘಟಕದ ಕಾರ್ಯದರ್ಶ

ಮತಾಂತರ ನಿಷೇಧ ಕಾಯ್ದೆ ಜಾರಿ ಬಗ್ಗೆ ಕ್ರೈಸ್ತರಲ್ಲಿ ಆಕ್ರೋವಿದೆ. ನಾವೆಲ್ಲ ಬೇರೆ ದೇಶದಿಂದ ಬಂದಿಲ್ಲ. ನಮ್ಮ ಹಕ್ಕನ್ನು ಕಸಿದುಕೊಳ್ಳುವುದಕ್ಕೆ ಯಾರಿಗೂ ಅಧಿಕಾರವಿಲ್ಲ.

– ಸಿಮಿಯನ್‌,ಮೆಥೋಡಿಸ್ಟ್‌ ಚರ್ಚ್‌, ರಾಯಚೂರು

ಬಲವಂತದ ಮತಾಂತರ ನಡೆಯುತ್ತದೆ ಎನ್ನುವುದು ಸುಳ್ಳು. ಶಾಂತಿ ಕದಡುವುದು ಮತ್ತು ದ್ವೇಷದ ಭಾವನೆ ಬಿತ್ತಲು ಇಂಥ ಆರೋಪಗಳು ಕಾರಣವಾಗುತ್ತವೆ.

–ಸ್ಟ್ಯಾನಿ ಲೋಬೊ, ಮಂಗಳೂರು ಧರ್ಮಪ್ರಾಂತ್ಯದ ಕಥೊಲಿಕ್ ಸಭೆಯ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT