ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಂಧಿವಾದವೇ ಮೈವೆತ್ತಂತಿದ್ದರು: ನುಡಿನಮನದಲ್ಲಿ ಎಚ್‌.ಎಸ್‌. ದೊರೆಸ್ವಾಮಿ ನೆನಪು

Last Updated 30 ಮೇ 2021, 19:23 IST
ಅಕ್ಷರ ಗಾತ್ರ

ಬೆಂಗಳೂರು: ‘ಅಧಿಕಾರಷಾಹಿ ಮತ್ತು ಹಿಂದುತ್ವದ ಪ್ರಭಾವಕ್ಕೆ ಯಾವತ್ತೂ ಶರಣಾಗದ ಎಚ್‌.ಎಸ್‌. ದೊರೆಸ್ವಾಮಿ ಜೀವನದ ಕೊನೆಯವರೆಗೂ ಹೋರಾಟಗಾರನಾಗಿಯೇ ಉಳಿದರು. ಗಾಂಧಿವಾದವೇ ಮೈವೆತ್ತಂತಿದ್ದ ಅವರು ಕನ್ನಡ ನಾಡಿನ ಅಂತರಾತ್ಮದ ಕಾವಲುಗಾರರಂತೆ ಇದ್ದರು’.

– ಇವು ‘ಪ್ರಜಾವಾಣಿ’ ಭಾನುವಾರ ಆಯೋಜಿಸಿದ್ದ ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌. ದೊರೆಸ್ವಾಮಿ ಅವರ ನುಡಿನಮನ ಫೇಸ್‌ಬುಕ್‌ ಲೈವ್‌ ಸಂವಾದ ಕಾರ್ಯಕ್ರಮದಲ್ಲಿ ನಾಡಿನ ಹಿರಿಯ ಹೋರಾಟಗಾರರು, ದೊರೆಸ್ವಾಮಿ ಅವರ ಒಡನಾಡಿಗಳು, ಬರಹಗಾರರಿಂದ ವ್ಯಕ್ತವಾದ ಮಾತುಗಳು.

ಆರಂಭದಲ್ಲಿ ಮಾತನಾಡಿದ ಲೇಖಕ ರಾಮಚಂದ್ರ ಗುಹಾ, ‘ದೊರೆಸ್ವಾಮಿ ಅವರ ಕಾಲಘಟ್ಟದ ಗಾಂಧಿವಾದಿಗಳಲ್ಲಿ ಹೆಚ್ಚಿನವರು ಒಂದೋ ಹಿಂದುತ್ವಕ್ಕೆ ಇಲ್ಲವೇ ಅಧಿಕಾರಷಾಹಿ ಪ್ರಭಾವಕ್ಕೆ ಒಳಗಾಗಿ ಬೇರೆ ದಾರಿಯಲ್ಲಿ ಸಾಗಿದರು. ಆದರೆ, ದೊರೆಸ್ವಾಮಿ ಕೊನೆಯ ಉಸಿರಿನವರೆಗೂ ಗಾಂಧಿವಾದಿಯೇ ಆಗಿ ಉಳಿದರು’ ಎಂದು ಅವರೊಡನೆ ಹೋರಾಟದಲ್ಲಿ ಭಾಗಿಯಾದ ನೆನಪುಗಳನ್ನು ಹಂಚಿಕೊಂಡರು.

‘ದೊರೆಸ್ವಾಮಿ ಎಂದೂ ದೊರೆಯೂ ಆಗಲಿಲ್ಲ, ಸ್ವಾಮಿಯೂ ಆಗಲಿಲ್ಲ. ಆದರೆ, ಈಗಿನ ರಾಜಕಾರಣಿಗಳು ಕಿಂಚಿತ್ತಾದರೂ ಕಣ್ಣೆತ್ತಿ ನೋಡಬೇಕಾದ, ಅನುಸರಿಸಬೇಕಾದ ಆದರ್ಶಗಳನ್ನು ಬಿಟ್ಟು ಹೋಗಿದ್ದಾರೆ’ ಎಂದು ನಿವೃತ್ತ ನ್ಯಾಯಮೂರ್ತಿ ಎ.ಜೆ. ಸದಾಶಿವ ಹೇಳಿದರು.

ಗಾಂಧಿವಾದದ ವಿಸ್ತಾರಕ: ‘ದೊರೆಸ್ವಾಮಿ ಗಾಂಧಿವಾದದ ವಿಸ್ತಾರಕ ಮತ್ತು ಮರು ನಿರೂಪಕನಾಗಿ ಜೀವನ ಸವೆಸಿದರು’ ಎಂದು ಬಣ್ಣಿಸಿದರು.

‘ತಮ್ಮ ಜೀವನದುದ್ದಕ್ಕೂ ಹಲವು ಬಾರಿ ವಿಧಾನಸೌಧ ಸೇರಿದಂತೆ ಸರ್ಕಾರಿ ಕಚೇರಿಗಳಿಗೆ ಬರುತ್ತಿದ್ದ ದೊರೆಸ್ವಾಮಿ ಯಾವತ್ತೂ ತಮಗಾಗಿ ಏನನ್ನೂ ಕೇಳಿದವರಲ್ಲ. ಹೋರಾಟದ ಭಾಗವಾಗಿಯೇ ಅವರು ಹಾಗೆ ಬರುತ್ತಿದ್ದರು. ನಿಜವಾದ ಅರ್ಥದಲ್ಲಿ ಕನ್ನಡ ನಾಡಿನ ಅಂತರಾತ್ಮದ ಕಾವಲುಗಾರನಾಗಿದ್ದರು’ ಎಂದು ನಿವೃತ್ತ ಐಎಎಸ್‌ ಅಧಿಕಾರಿ ಚಿರಂಜೀವಿ ಸಿಂಗ್‌ ಹೇಳಿದರು.

ಸಿರಿಗೆರೆ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಕಾಂಗ್ರೆಸ್‌ ಮುಖಂಡ ಬಿ.ಎಲ್‌. ಶಂಕರ್‌, ಸಾಹಿತಿಗಳಾದ ಎಚ್‌.ಎಸ್‌. ವೆಂಕಟೇಶಮೂರ್ತಿ, ಪ್ರೊ.ಎಸ್‌.ಜಿ. ಸಿದ್ದರಾಮಯ್ಯ, ವಿಜಯಮ್ಮ, ಶಾಸಕ ಎ.ಟಿ. ರಾಮಸ್ವಾಮಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್‌. ನಾಗಾಭರಣ, ದಲಿತ ಸಂಘರ್ಷ ಸಮಿತಿ ಸಂಚಾಲಕ ಮಾವಳ್ಳಿ ಶಂಕರ್‌, ಕರ್ನಾಟಕ ರಾಷ್ಟ್ರ ಸಮಿತಿ ಅಧ್ಯಕ್ಷ ರವಿಕೃಷ್ಣಾ ರೆಡ್ಡಿ ಸೇರಿದಂತೆ ಹಲವರು ನುಡಿನಮನ ಸಲ್ಲಿಸಿದರು.

ಗಾಯಕರಾದ ಪುತ್ತೂರು ನರಸಿಂಹ ನಾಯಕ್‌, ಸಂಗೀತಾ ಕಟ್ಟಿ, ಸುರೇಖಾ ಹೆಗಡೆ, ಮಂಗಳಾ ರವಿ, ಪಂಚಮ್‌ ಹಳಿಬಂಡಿ, ಸವಿತಾ ಗಣೇಶ್ ಪ್ರಸಾದ್ ಗೀತನಮನ ಸಲ್ಲಿಸಿದರು. ರಂಗಕರ್ಮಿ ಶ್ರೀನಿವಾಸ್ ಜಿ. ಕಪ್ಪಣ್ಣ ಸಂವಾದ ನಿರ್ವಹಿಸಿದರು.

ಫೇಸ್‌ ಬುಕ್‌ನಲ್ಲಿ ಸಂವಾದ ವೀಕ್ಷಿಸಲು ಈ ಲಿಂಕ್‌ ಬಳಸಿ : https://bit.ly/3yOrluy

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT