ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್‌ಸಿಎಸ್‌ಪಿ, ಟಿಎಸ್‌ಪಿ: ₹ 18,649 ಕೋಟಿ ಬಿಡುಗಡೆ

Last Updated 16 ಡಿಸೆಂಬರ್ 2022, 18:41 IST
ಅಕ್ಷರ ಗಾತ್ರ

ಬೆಂಗಳೂರು: 2022-23ನೇ ಆರ್ಥಿಕ ವರ್ಷದಲ್ಲಿ ಪರಿಶಿಷ್ಟ ಜಾತಿ ಉಪ ಯೋಜನೆ (ಎಸ್‌ಸಿಎಸ್‌ಪಿ) ಮತ್ತು ಪರಿಶಿಷ್ಟ ಪಂಗಡಗಳ ಉಪ ಯೋಜನೆಗೆ ₹29,165.81 ಕೋಟಿ ಅನುದಾನ ಮೀಸಲಿಟ್ಟಿದ್ದು, ಈವರೆಗೆ ₹ 18,649.71 ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಎಸ್‌ಸಿಎಸ್‌ಪಿ ಅಡಿ ₹13,483.79 ಕೋಟಿ ಬಿಡುಗಡೆಯಾಗಿದ್ದು, ₹10,783.47 ಕೋಟಿ ವೆಚ್ಚವಾಗಿದೆ. ಒಟ್ಟು ಶೇಕಡ 52ರಷ್ಟು ಅನುದಾನ ಬಿಡುಗಡೆ ಮಾಡಿದ್ದು, ಅದರಲ್ಲಿ ಶೇ 80ರಷ್ಟನ್ನು ಬಳಕೆ ಮಾಡಲಾಗಿದೆ ಎಂದರು.

ಟಿಎಸ್‌ಪಿ ಅಡಿಯಲ್ಲಿ ₹5,165.92 ಕೋಟಿ ಬಿಡುಗಡೆಯಾಗಿದ್ದು, ₹3,383.25 ಕೋಟಿ ವೆಚ್ಚ ಮಾಡಲಾಗಿದೆ. ಮೀಸಲಿಟ್ಟ ಅನುದಾನದಲ್ಲಿ ಶೇ 41ರಷ್ಟನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಶೇ 65ರಷ್ಟು ವೆಚ್ಚವಾಗಿದೆ. ಎರಡೂ ಯೋಜನೆಗಳಲ್ಲಿ ಸಮಾಜ ಕಲ್ಯಾಣ ಇಲಾಖೆಗೆ ₹4,314.28 ಕೋಟಿ ಒದಗಿಸಲಾಗಿದೆ. ₹ 3,085.96 ಕೋಟಿ ಬಿಡುಗಡೆಯಾಗಿದ್ದು, ₹2,348.92 ಕೋಟಿ ಬಳಕೆಯಾಗಿದೆ ಎಂದರು.

ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಅಭಿವೃದ್ಧಿ ನಿಗಮಗಳಿಗೆ ಈ ಬಾರಿ ₹ 420 ಕೋಟಿ ಹೆಚ್ಚುವರಿ ಅನುದಾನ ಒದಗಿಸಲಾಗಿದೆ. ಈ ನಿಗಮಗಳಿಗೆ ₹1,000.19 ಕೋಟಿ ಅನುದಾನ ನೀಡಲಾಗಿದೆ. ಸ್ವಉದ್ಯೋಗ, ವಾಹನ ಸಾಲ, ಭೂ ಒಡೆತನ ಮತ್ತಿತರ ಯೋಜನೆಗಳಿಗೆ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ಪ್ರಗತಿಯಲ್ಲಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಬಡ ಕುಟುಂಬಗಳಿಗೆ 75 ಯೂನಿಟ್‌ವರೆಗೆ ಉಚಿತ ವಿದ್ಯುತ್‌ ಪೂರೈಸುವುದಕ್ಕಾಗಿ ಸಮಾಜ ಕಲ್ಯಾಣ ಇಲಾಖೆಯಿಂದ ₹ 800 ಕೋಟಿ ಅನುದಾನ ಒದಗಿಸಲಾಗಿದೆ ಎಂದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಅನುದಾನವನ್ನು ಅನ್ಯ ಉದ್ದೇಶಕ್ಕೆ ಬಳಸಲು ಅವಕಾಶ ಕಲ್ಪಿಸುವ ಸೆಕ್ಷನ್‌ 7 ಅನ್ನು ಜಾರಿಗೊಳಿಸಿದ್ದೇ ಸಿದ್ದರಾಮಯ್ಯ ನೇತೃತ್ವದ ಸರ್ಕಾರ. ಈಗ ಅವರೇ ಅದನ್ನು ತೆಗೆದು ಹಾಕಬೇಕು ಎನ್ನುತ್ತಿದ್ದಾರೆ. ಅವರ ಸರ್ಕಾರದ ಅವಧಿಗಿಂತಲೂ ಹೆಚ್ಚಿನ ಅನುದಾನವನ್ನು ಈಗಿನ ಸರ್ಕಾರ ಒದಗಿಸಿದೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಬಜೆಟ್‌ನಲ್ಲಿ ₹2,219.66 ಕೋಟಿ ಅನುದಾನ ಒದಗಿಸಲಾಗಿತ್ತು. ಈವರೆಗೆ ₹1,256.44 ಕೋಟಿ ಬಿಡುಗಡೆ ಮಾಡಿದ್ದು, ₹665.37 ಕೋಟಿ ವೆಚ್ಚ ಮಾಡಲಾಗಿದೆ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT