ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೈಂಗಿಕ ದೌರ್ಜನ್ಯ ಪ್ರಕರಣಗಳ ವಿಲೇವಾರಿಯಲ್ಲಿ ಕರ್ನಾಟಕ ಮುಂಚೂಣಿ

Last Updated 19 ಡಿಸೆಂಬರ್ 2021, 19:31 IST
ಅಕ್ಷರ ಗಾತ್ರ

ನವದೆಹಲಿ: ಅಧಿಕಾರಿಗಳ ವಿರುದ್ಧ ದಾಖಲಾಗಿದ್ದ, ಕೆಲಸದ ಸ್ಥಳಗಳಲ್ಲಿ ಲೈಂಗಿಕ ಕಿರುಕುಳ ಪ್ರಕರಣಗಳಲ್ಲಿ ಗರಿಷ್ಠ ಪ್ರಕರಣಗಳನ್ನು ಕರ್ನಾಟಕವು ವಿಲೇವಾರಿ ಮಾಡಿದೆ ಎಂದು ಸರ್ಕಾರ ನೀಡಿದ ಅಂಕಿ ಅಂಶಗಳು ಹೇಳಿವೆ. ಕರ್ನಾಟಕದಲ್ಲಿ ಇಂತಹ ಪ್ರಕರಣಗಳ ವಿಲೇವಾರಿ ಪ್ರಮಾಣವು ಶೇ 89ರಷ್ಟು ಇದೆ. 2020–21ರಲ್ಲಿ ಕರ್ನಾಟಕದಲ್ಲಿ ಅಧಿಕಾರಿಗಳ ವಿರುದ್ಧ 56 ಪ್ರಕರಣಗಳು ದಾಖಲಾಗಿದ್ದವು. ಅವುಗಳ ಪೈಕಿ 50 ಪ್ರಕರಣಗಳು ವಿಲೇವಾರಿ ಆಗಿವೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ಸಂಸತ್ತಿಗೆ ನೀಡಿದ ಮಾಹಿತಿಯಲ್ಲಿ ಹೇಳಲಾಗಿದೆ.

ಮಹಾರಾಷ್ಟ್ರದಲ್ಲಿ ಇಂತಹ ಪ್ರಕರಣಗಳ ವಿಲೇವಾರಿ ಪ್ರಮಾಣವು ಶೇ 21ರಷ್ಟು ಮಾತ್ರ ಇದೆ. ಇದು ದೇಶದಲ್ಲಿಯೇ ಕನಿಷ್ಠ ಪ್ರಮಾಣ. ಈ ರಾಜ್ಯದಲ್ಲಿ ಗರಿಷ್ಠ ಅಂದರೆ 102 ಪ್ರಕರಣಗಳು ದಾಖಲಾಗಿದ್ದವು. 22 ಪ್ರಕರಣಗಳನ್ನು ಮಾತ್ರ ವಿಲೇವಾರಿ ಮಾಡಲಾಗಿದೆ. ದೆಹಲಿಯಲ್ಲಿ
ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳದ 62 ಪ್ರಕರಣಗಳು ದಾಖಲಾಗಿದ್ದವು. ಅವುಗಳ ಪೈಕಿ 21 ಪ್ರಕರಣ ವಿಲೇವಾರಿ ಆಗಿವೆ. ಪ್ರಮಾಣವು ಶೇ 34ರಷ್ಟು ಇದೆ.

ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಉತ್ತರ ಪ್ರದೇಶದಲ್ಲಿ 2017ರಿಂದ ಈವರೆಗೆ 92 ಪ್ರಕರಣಗಳು ದಾಖಲಾಗಿದ್ದವು. 74 ವಿಲೇವಾರಿ ಆಗಿದ್ದು, ಪ್ರಮಾಣವು ಶೇ 80ರಷ್ಟಿದೆ.

ಲೋಕಸಭೆಯ ಹಲವು ಸಂಸದರು ಕೇಳಿದ ಪ್ರಶ್ನೆಗಳಿಗೆ ಪ್ರತಿಯಾಗಿ ಸಚಿವಾಲಯವು ಈ ಮಾಹಿತಿಯನ್ನು ನೀಡಿತ್ತು. ಸಂಸದರಾದ ಮೇನಕಾ ಗಾಂಧಿ, ರಾಜಾ ಅಮರೇಶ್ವರ ನಾಯಕ, ಸುಕಾಂತಾ ಮಜುಂದಾರ್‌, ಜನಾರ್ದನ ಸಿಂಗ್‌ ಸಿಗ್ರಿವಾಲ್‌, ವಿನೋದ್‌ ಕುಮಾರ್‌ ಸೋನ್ಕರ್‌ ಮತ್ತು ಭೋಲಾ ಸಿಂಗ್‌ ಅವರು ಪ್ರಶ್ನೆ ಕೇಳಿದ್ದರು.

ಕೆಲಸದ ಸ್ಥಳದಲ್ಲಿ ನಡೆಯುವ ಲೈಂಗಿಕ ದೌರ್ಜನ್ಯವನ್ನು ತಡೆಗಟ್ಟುವ ಸಲುವಾಗಿ, ‘ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ (ತಡೆ, ನಿಷೇಧ ಮತ್ತು ಪರಿಹಾರ) ಕಾಯ್ದೆ–2013ಯ ಅಡಿ ‘ಸೆಕ್ಸುಯಲ್ ಹೆರಾಸ್‌ಮೆಂಟ್ ಎಲೆಕ್ಟ್ರಾನಿಕ್‌ ಬಾಕ್ಸ್‌ (ಶಿ–ಬಾಕ್ಸ್)’ ಎಂಬ ಆನ್‌ಲೈನ್‌ ದೂರು ನೀಡಿಕೆ ವ್ಯವಸ್ಥೆಯನ್ನು ಆರಂಭಿಸಲಾಗಿತ್ತು. 2017ರ ನಂತರ ಈ ವ್ಯವಸ್ಥೆ ಜಾರಿಗೆ ಬಂದಿದ್ದು, ಆನಂತರ ದಾಖಲಾದ ದೂರುಗಳ ಮಾಹಿತಿ ಇದು ಎಂದು ಸರ್ಕಾರ ಹೇಳಿದೆ.

‘ಶಿ–ಬಾಕ್ಸ್‌ ಮೂಲಕ ದೂರು ದಾಖಲಿಸಿದ ತಕ್ಷಣ ಅದು, ಸಂಬಂಧಿತ ಪ್ರಾಧಿಕಾರಕ್ಕೆವರ್ಗಾವಣೆಯಾಗುತ್ತದೆ. ಶಿ–ಬಾಕ್ಸ್‌ ಮೂಲಕ ಬಂದ ದೂರಿನ ವಿರುದ್ಧ ಕ್ರಮ ತೆಗೆದುಕೊಳ್ಳುವ ಮತ್ತು ಅದರ ಪ್ರಗತಿಯ ಸ್ಥಿತಿಯನ್ನು ಕಾಲಕಾಲಕ್ಕೆ ಬಹಿರಂಗಪಡಿಸುವ ಹೊಣೆ ಸಂಬಂಧಿತ ಪ್ರಾಧಿಕಾರದ್ದೇ ಆಗಿರುತ್ತದೆ’ ಎಂದು ಸರ್ಕಾರವು ತನ್ನ ಉತ್ತರದಲ್ಲಿ ವಿವರಿಸಿದೆ.

‘ಸದ್ಯಕ್ಕೆ ಈ ವ್ಯವಸ್ಥೆಯು ರಾಜ್ಯ ಸರ್ಕಾರಿ ಮತ್ತು ಕೇಂದ್ರ ಸರ್ಕಾರಿ ನೌಕರರಿಗೆ ಸಂಬಂಧಿಸಿದ ದೂರುಗಳನ್ನು ಮಾತ್ರ ನಿರ್ವಹಣೆ ಮಾಡುತ್ತಿದೆ. ಇದನ್ನು ಖಾಸಗಿ ಕಂಪನಿಗಳಿಗೆ ವಿಸ್ತರಿಸುವ ಯೋಚನೆಯೂ ಇದೆ’ ಎಂದು ಸರ್ಕಾರವು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT