ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ ಮರಣಗಳಿಗೆ ಬಿಜೆಪಿಯೇ ಹೊಣೆ: ಸಿದ್ದರಾಮಯ್ಯ

Last Updated 22 ಮೇ 2021, 19:52 IST
ಅಕ್ಷರ ಗಾತ್ರ

ಬೆಂಗಳೂರು: ‘ಕೋವಿಡ್ ಲಸಿಕೆಗಳನ್ನು ಸಮರ್ಪಕವಾಗಿ ನೀಡಲಾಗದೆ, ಸಮಸ್ಯೆಗಳನ್ನು ನಿರ್ವಹಿಸಲಾಗದೇ ಜನರ ಮಾರಣಹೋಮಕ್ಕೆ ಕಾರಣವಾಗಿರುವ ಕೇಂದ್ರ ಮತ್ತು ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರಗಳು ಅಪರಾಧಿ ಸ್ಥಾನದಲ್ಲಿ ನಿಂತಿವೆ’ ಎಂದು ವಿಧಾನಸಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಕೋವಿಡ್ ಲಸಿಕೆ ವಿತರಣೆ ಸಂಬಂಧ ವಸ್ತುಸ್ಥಿತಿ ವಿವರಿಸಿ ಜನರಿಗೆ ಪತ್ರ ಬರೆದಿರುವ ಅವರು, ‘ತನ್ನದೇ ದೇಶದ ಮಕ್ಕಳಿಗೆ ಲಸಿಕೆ ನಿರಾಕರಿಸಿ ಲಕ್ಷಾಂತರ ಜನರನ್ನು ಕೊಂದ ಕೊಲೆಗಾರರು ಹೊರಬೇಕಾದ ಅಪರಾಧ ಅದು. ಸ್ವತಃ ಅಪರಾಧಿ ಸ್ಥಾನದಲ್ಲಿ ನಿಂತಿರುವ ಬಿಜೆಪಿಯು ಈಗ ದೇಶದ ನಾಗರಿಕರಿಗೆ ಲಸಿಕೆಯ ಕುರಿತು ಕಾಂಗ್ರೆಸ್ ಮುಖಂಡರು ಅಪಪ್ರಚಾರ ಮಾಡಿದರು. ಅದಕ್ಕಾಗಿ ಜನ ಲಸಿಕೆ ಹಾಕಿಸಿಕೊಳ್ಳಲಿಲ್ಲ ಎಂದು ಹೇಳಿಕೆ ನೀಡಲಾರಂಭಿಸಿದ್ದಾರೆ’ ಎಂದಿದ್ದಾರೆ.

‘ಆಡಳಿತ ನಡೆಸುವ ಬಿಜೆಪಿ, ಲಸಿಕೆ ವಿಚಾರದಲ್ಲಿ ದೇಶದ ಜನರಿಗೆ ಉತ್ತರಿಸಬೇಕಾಗಿದೆ. ದೇಶದ ಜನ ಪ್ರಶ್ನೆ ಕೇಳುತ್ತಿದ್ದಾರೆ. ಜನರ
ಪ್ರಶ್ನೆಗಳಿಗೆ ಕಾಂಗ್ರೆಸ್ ದನಿಗೂಡಿಸಿದೆ ಅಷ್ಟೇ. ಪ್ರಶ್ನೆ ಕೇಳುವುದು, ಸಲಹೆ ನೀಡುವುದು, ಪ್ರತಿಭಟಿಸುವುದು ಜನರ ಹಕ್ಕು. ಜನರ ದನಿಗೆ ಕಿವಿಗೊಟ್ಟು ಕೆಲಸ ಮಾಡಬೇಕಾಗಿರುವುದು ಸರ್ಕಾರಗಳ ಕರ್ತವ್ಯ. ಪ್ರತಿಪಕ್ಷಗಳು, ನಾಡಿನ ಜನರು ಕೇಳುತ್ತಿರುವ ಈ ಪ್ರಶ್ನೆಗಳಿಗೆ ಉತ್ತರ ಹೇಳಬೇಕಾಗಿರುವುದೂ ಸರ್ಕಾರದ ಕರ್ತವ್ಯ’ ಎಂದಿರುವ ಸಿದ್ದರಾಮಯ್ಯ, ಸರ್ಕಾರಕ್ಕೆ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆಯು ಕಳೆದ ವರ್ಷದ ಅಕ್ಟೋಬರ್‌ನಲ್ಲಿಯೇ ಭಾರತದಲ್ಲಿ ರೂಪಾಂತರ ಹೊಂದಿದ ಕೊರೊನಾ ವೈರಾಣು ಮುಂದಿನ ದಿನಗಳಲ್ಲಿ ಭಾರಿ ಹಾನಿ ಮಾಡಬಹುದು ಎಂದು ಹೇಳಿದ್ದರೂ ಕೇಂದ್ರ ಸರ್ಕಾರ ಏಕೆ ನಿರ್ಲಕ್ಷಿಸಿತು. ಜನರನ್ನು ದಾರಿ ತಪ್ಪಿಸಿ ಕ್ರೂರ ಕೊರೊನಾದ ಬಾಯಿಗೆ ದೂಡಿದವರು ಬಿಜೆಪಿಯವರಲ್ಲವೆ. ಆಡಳಿತ ನಡೆಸುವವರ ಅಪ್ರಬುದ್ಧ, ಅರಾಜಕ, ಸರ್ವಾಧಿಕಾರಿ ಧೋರಣೆಯ ರಾಜಕೀಯ ತೀರ್ಮಾನಗಳಿಂದ ಜನ ಮರಣ ಹೊಂದುತ್ತಿದ್ದಾರೆ. ಜನರ ಸಾವಿನ ಹೊಣೆಯನ್ನು ಯಾರು ಹೊರಬೇಕು’ ಎಂದು ಪ್ರಶ್ನಿಸಿದ್ದಾರೆ.

‘ಸಾವು ನೋವುಗಳಿಗೆ, ಲಸಿಕೆ ಅಭಾವಕ್ಕೆ ಕೇಂದ್ರದ ಬಿಜೆಪಿ ನಾಯಕರುಗಳ ಅವೈಜ್ಞಾನಿಕ, ದೂರದೃಷ್ಟಿ ಇಲ್ಲದ, ವಿಜ್ಞಾನಿಗಳ, ತಜ್ಞರ ಮಾತು ಕೇಳದ ಸರ್ವಾಧಿಕಾರಿ, ಹೆಸರಿಗೆ, ಕೀರ್ತಿಗೆ ಹಪ ಹಪಿಸುವಿಕೆಯೇ ಕಾರಣ. ಜನರ ಕಗ್ಗೊಲೆಗಳಿಗೂ ಇದೇ ಕಾರಣ’ ಎಂದೂ ಸಿದ್ದರಾಮಯ್ಯ ದೂರಿದ್ದಾರೆ.

ಮೋದಿ ಮೊಸಳೆ ಕಣ್ಣೀರು: ‘ಕೈ’ ನಾಯಕರ ವ್ಯಂಗ್ಯ

‘ಮೊಸಳೆ ಕಣ್ಣೀರಿಗಾಗಿ ದೇಶದಲ್ಲಿ ಆಸ್ಕರ್ ಪ್ರಶಸ್ತಿ ಕೊಡುವುದಾದರೆ ಅದನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೊಡಬೇಕು’ ಎಂದು ವಿಧಾನ
ಪರಿಷತ್‌ ಕಾಂಗ್ರೆಸ್‌ ಸದಸ್ಯ ಪ್ರಕಾಶ ರಾಠೋಡ್‌ ಲೇವಡಿ ಮಾಡಿದರು.

ಪಕ್ಷದ ವಿಧಾನ ಪರಿಷತ್‌ ಸದಸ್ಯರಾದ ನಸೀರ್ ಅಹ್ಮದ್, ಎಸ್‌. ರವಿ, ಪಿ.ಆರ್. ರಮೇಶ್ ಜೊತೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸುಳ್ಳುಗಳನ್ನೆ ಹೇಳಿ ದೇಶದ ಜನರಿಗೆ ಮೋದಿ ಮೋಸ ಮಾಡಿದ್ದಾರೆ. ಕೋವಿಡ್ ನಿವ೯ಹಣೆಯಲ್ಲಿ ಕೇಂದ್ರ – ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿವೆ’ ಎಂದು ವಾಗ್ದಾಳಿ ನಡೆಸಿದರು.

‘ಬಿಜೆಪಿ ಸಾಮಾಜಿಕ ಜಾಲತಾಣವನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ. ಟೂಲ್ ಕಿಟ್ ವಿಷಯವಾಗಿ ಬಿಜೆಪಿಗೆ ಟ್ವಿಟರ್‌ ಸಂಸ್ಥೆಯೇ ಪ್ರತಿಕ್ರಿಯೆ ನೀಡಿದ್ದು, ಬಿಜೆಪಿ ನಾಯಕರ ಬಂಡವಾಳ ಸಮಾಜಕ್ಕೆ ಗೊತ್ತಾಗಿದೆ’ ಎಂದರು.

‘ರಾಜ್ಯ ಸರ್ಕಾರ ಘೋಷಣೆ ಮಾಡಿದ ಪ್ಯಾಕೇಜ್ ಅರೆಕಾಸಿನ ಮಜ್ಜಿಗೆಯಂತೆ. ಯಡಿಯೂರಪ್ಪ ಮತ್ತು 25 ಸಂಸದರು ಕೇಂದ್ರದ ವಿರುದ್ದ ಗಟ್ಟಿ ದನಿಯಲ್ಲಿ ಮಾತನಾಡುತ್ತಿಲ್ಲ. ಆರೋಗ್ಯ ಸಚಿವ ಸುಧಾಕರ್ ಮತ್ತು ಉಪ ಮುಖ್ಯಮಂತ್ರಿ ಅಶ್ವತ್ಥನಾರಾಯಣ್ ಮಧ್ಯೆ ಸಮನ್ವಯ ಇಲ್ಲ. ಇಬ್ಬರನ್ನೂ ಸಚಿವ ಸ್ಥಾನದಿಂದ ತೆಗೆದು ಹಾಕಬೇಕು’ ಎಂದು ಎಸ್‌. ರವಿ ಆಗ್ರಹಿಸಿದರು.

‘ಆಮ್ಲಜನಕ ಉತ್ಪಾದನ ಘಟಕ ಮಾಡುವುದಾಗಿ ಹೇಳಿ ಬಿಜೆಪಿ ನಾಯಕರು ಮೋಸ ಮಾಡಿದ್ದಾರೆ’ ಎಂದು ಪಿ.ಆರ್‌. ರಮೇಶ್ ಆಕ್ರೋಶ ವ್ಯಕ್ತಪಡಿಸಿದರು.

‘ಕೋಲಾರದಲ್ಲಿ ಆರು ದಿನಗಳಲ್ಲಿ ಆಮ್ಲಜನಕ ಘಟಕ ಆರಂಭವಾಗಲಿದೆ ಎಂದು ಸಚಿವ ಅಶ್ವತ್ಥನಾರಾಯಣ್ ಹೇಳಿದ್ದರು. ಎಂಟು ದಿನಗಳಲ್ಲಿ ಆರಂಭವಾಗಲಿದೆ ಎಂದು ಅರವಿಂದ ಲಿಂಬಾವಳಿ ಹೇಳಿದರು. ಆದರೆ, ಇನ್ನೂ ಆರಂಭವಾಗಿಲ್ಲ’ ಎಂದು ನಸೀರ್ ಅಹ್ಮದ್ ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT