ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯ ಸರ್ಕಾರದ್ದು ‘ಜನಸ್ಪಂದನ’ ಅಲ್ಲ, ‘ಜನಮರ್ದನ’: ಸಿದ್ದರಾಮಯ್ಯ

Last Updated 10 ಸೆಪ್ಟೆಂಬರ್ 2022, 17:30 IST
ಅಕ್ಷರ ಗಾತ್ರ

ಬೆಂಗಳೂರು: ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರಕ್ಕೆ ವರ್ಷ ತುಂಬಿದ್ದಕ್ಕಾಗಿ ಜನಸ್ಪಂದನ ಎಂಬ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದಕ್ಕೆ ‘ಜನಸ್ಪಂದನ’ ಅಲ್ಲ ‘ಜನ ಮರ್ದನ’ ಎಂದು ಹೆಸರಿಡಬೇಕಾಗಿತ್ತು. ಮೂರು ವರ್ಷಗಳ ಬಿಜೆಪಿ ಸರ್ಕಾರದ ಭ್ರಷ್ಟಾಚಾರ, ದುರಾಡಳಿತ ಮತ್ತು ಸುಳ್ಳು ಹೇಳಿಕೆಗಳಿಂದಾಗಿ ಜನ ನಲುಗಿಹೋಗಿದ್ದಾರೆ’ ಎಂದು ವಿಧಾನಸಭೆ ವಿರೋಧ ಪಕ್ಷದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸುದೀರ್ಘ ಹೇಳಿಕೆ ಬಿಡುಗಡೆ ಮಾಡಿರುವ ಅವರು, ‘ಸ್ಪಂದನ ಮಾಡಲು ಜನರಿಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಎಲ್ಲಿದೆ? ವಿರೋಧ ಪಕ್ಷಗಳು ಪ್ರಶ್ನೆ ಮಾಡಿದರೆ ಸಿಬಿಐ, ಇಡಿ, ಐಟಿ ದಾಳಿ ನಡೆಸಿ ಬೆದರಿಸುತ್ತಾರೆ. ನಾಗರಿಕರು ಪ್ರಶ್ನೆ ಮಾಡಿದರೆ ಸುಳ್ಳು ಕೇಸ್‌ಗಳನ್ನು ಹಾಕಿ ಜೈಲಿಗೆ ಹಾಕುತ್ತಾರೆ. ಜನ ಸ್ಪಂದಿಸುವುದಾದರೂ ಹೇಗೆ’ ಎಂದು ಪ್ರಶ್ನಿಸಿದ್ದಾರೆ.

‘ಆದಷ್ಟು ಬೇಗ ಚುನಾವಣೆ ನಡೆದು ಈ ಸರ್ಕಾರ ತೊಲಗಿ ಹೋದರೆ ಸಾಕು ಎಂದು ಜನ ಕಾಯುತ್ತಿದ್ದಾರೆ. ನಮ್ಮ ಕಾಲದ ಹಗರಣಗಳನ್ನು ಬಯಲುಗೊಳಿಸುತ್ತಾರೆ ಎಂದು ಬ್ಲಾಕ್ ಮೇಲ್ ಮಾಡುತ್ತಿದ್ದಾರೆ. ಇವರ ಹುಸಿ ಬೆದರಿಕೆಗೆ ನಾವು ಹೆದರುವುದಿಲ್ಲ. ಕಳೆದ ಹದಿನಾರು ವರ್ಷಗಳಲ್ಲಿ ಹನ್ನೊಂದು ವರ್ಷ ಇವರೇ ಅಧಿಕಾರದಲ್ಲಿದದ್ದು. ಧೈರ್ಯ ಇದ್ದರೆ ಅದನ್ನೂ ಸೇರಿಸಿ ತನಿಖೆ ಮಾಡಲಿ. ನಾವು ತನಿಖೆ ಎದುರಿಸಲು ಸಿದ್’ ಎಂದೂ ಅವರು ಸವಾಲು ಹಾಕಿದ್ದಾರೆ.

‘ಭ್ರಷ್ಟಾಚಾರ ನಿಗ್ರಹ ದಳಕ್ಕೆ ಭ್ರಷ್ಟಾಚಾರವೇ ದಂಧೆಯಾಗಿದೆ. ಸಿಸಿಬಿ ದೊಡ್ಡ ಭ್ರಷ್ಟರ ಕೂಪವಾಗಿದೆ. ಎಸಿಬಿ ಕಚೇರಿಯೇ ಕಲೆಕ್ಷನ್ ಸೆಂಟರ್‌ಗಾಗಿವೆ ಎಂದು ಹೇಳಿದ್ದು ನಾವಲ್ಲ ರಾಜ್ಯ ಹೈಕೋರ್ಟ್ ನ್ಯಾಯಾಧೀಶರು. ಹೈಕಮಾಂಡ್‌ಗೆ ₹ 2000 ಕೋಟಿ ರೂಪಾಯಿ ಕೊಟ್ಟರೆ ಮುಖ್ಯಮಂತ್ರಿಯಾಗಿದ್ದಾರೆ. ಮಾಜಿ ಮುಖ್ಯಮಂತ್ರಿಯ ಮಗ ಲಂಚ ಹೊಡೆಯುತ್ತಿದ್ದಾರೆ ಎಂದು ಹೇಳುತ್ತಿರುವುದು ಅವರದ್ದೇ ಪಕ್ಷದ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್. ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ₹ 2 ಸಾವಿರ ಕೋಟಿ ಕಿಕ್ ಬ್ಯಾಕ್ ಪಡೆಯಲಾಗಿದೆ ಎಂದು ಮೊದಲ ಬಾರಿಗೆ ಇಡಿ ರಾಜ್ಯಕ್ಕೆ ಹೇಳಿದವರು ಬಿಜೆಪಿ ಪಕ್ಷದ ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್. ಮುಖ್ಯಮಂತ್ರಿ ಯಡಿಯೂರಪ್ಪನವರು ಮತ್ತು ಮತ್ತವರ ಮಕ್ಕಳು ನನ್ನ ಖಾತೆಯಲ್ಲಿ ಕೈ ಆಡಿಸುತ್ತಿದ್ದಾರೆ ಎಂದು 2021ರ ಮಾರ್ಚ್ ನಲ್ಲಿ ರಾಜ್ಯಪಾಲರಿಗೆ ದೂರು ನೀಡಿದ್ದು ನಾವಲ್ಲ, ಅವರದ್ದೇ ಸರ್ಕಾರದಲ್ಲಿ ಸಚಿವರಾಗಿದ್ದ ಕೆ.ಎಸ್.ಈಶ್ವರಪ್ಪ. ಪಿಎಸ್ ಐ ನೇಮಕಾತಿ ಹಗರಣದಲ್ಲಿ ವಸೂಲಿ ಮಾಡಿದ ಲಂಚವನ್ನು ಸರ್ಕಾರಕ್ಕೆ ನೀಡಿದ್ದೇನೆ ಎಂದು ಹೇಳಿರುವುದು ಕನಕಗಿರಿ ಶಾಸಕ ಬಸವರಾಜ ದಡೆಸುಗೂರ್’ ಎಂದು ಸಿದ್ದರಾಮಯ್ಯ ಕುಟುಕಿದ್ದಾರೆ.

‘ಸರ್ಕಾರಿ ಕಾಮಗಾರಿಗಳಲ್ಲಿ ಶೇ 40 ಕಮಿಷನ್ ನೀಡಬೇಕಾಗುತ್ತದೆ, ಇಲ್ಲದೆ ಇದ್ದರೆ ಬಿಲ್ ಪಾಸ್ ಮಾಡುತ್ತಿಲ್ಲ ಎಂದು ಪ್ರಧಾನಿಗೆ ಪತ್ರ ಬರೆದಿರುವುದ ನಾವಲ್ಲ, ಗುತ್ತಿಗೆದಾರರ ಸಂಘದ ಅಧ್ಯಕ್ಷರು. ಶಿಕ್ಷಣ ಇಲಾಖೆಯಲ್ಲಿ ನ ಭ್ರಷ್ಟಾಚಾರದ ಬಗ್ಗೆಯೂ ಪ್ರಧಾನಿಗೆ ಪತ್ರ ಬರೆದಿರುವುದು ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟ (ರುಪ್ಸಾ) ಬರೆದಿರುವುದು ನಾವು ಅಲ್ಲ. ಮೂಲಸೌಕರ್ಯ ಇಲ್ಲದಿದ್ದರೂ ಹಣ ಪಡೆದು ಈ ಹಿಂದೆಯೇ ಖಾಸಗಿ ಶಾಲೆಗಳ ಆರಂಭಕ್ಕೆ ಬೇಕಾಬಿಟ್ಟಿ ಅನುಮತಿ ನೀಡಿದ್ದ ಶಿಕ್ಷಣ ಇಲಾಖೆಯ ಅಧಿಕಾರಿಗಳು ಈಗ ಕಟ್ಟಡ ಸುರಕ್ಷತೆ, ಅಗ್ನಿ ಅವಘಡಗಳ ಸುರಕ್ಷತೆಯ ಖಾತರಿ ನಿಯಮಗಳ ಪಾಲನೆ ಹೆಸರಿನಲ್ಲಿ ಅಡ್ಡ ವ್ಯವಹಾರ ನಡೆಸುತ್ತಿದ್ದಾರೆ ಎಂದು ರುಪ್ಸಾ ದೂರಿನಲ್ಲಿ ಉಲ್ಲೇಖಿಸಿದೆ. ರಾಜ್ಯ ಸರ್ಕಾರದ ಭ್ರಷ್ಟಾಚಾರಕ್ಕೆ ಅವರ ಪಕ್ಷದ ಶಾಸಕರು, ಸಚಿವರೇ ಸಾಕ್ಷಿ ನೀಡುತ್ತಿದ್ದಾರೆ. ಇವರನ್ನು ಸಾಲಾಗಿ ವೇದಿಕೆಯಲ್ಲಿ ನಿಲ್ಲಿಸಿ ಜನಸ್ಪಂದನ ಮಾಡಿದರೆ ಕಾರ್ಯಕ್ರಮ ಯಶಸ್ವಿಯಾಗಬಹುದು. ಪಿಎಸ್ಐ ನೇಮಕಾತಿಯ ಹಗರಣ ಈಗ ರಾಷ್ಟ್ರೀಯ ಸುದ್ದಿಯಾಗಿದೆ. ಈ ಹಗರಣದಲ್ಲಿ ಸಚಿವರು, ಮಾಜಿ ಸಚಿವರು ಮತ್ತು ಅವರ ಮಕ್ಕಳು ಸೇರಿದ ಹಾಗೆ ಎಲ್ಲರೂ ಭಾಗಿಯಾಗಿದ್ದಾರೆ ಎಂದು ತನಿಖಾ ವರದಿಗಳು ಹೇಳುತ್ತಿವೆ. ದುರಾಸೆಗೆ ಬಿದ್ದ ಯುವಕರಿಂದ ಕೋಟ್ಯಂತರ ರೂಪಾಯಿ ವಸೂಲಿ ಮಾಡಲಾಗಿದೆ. ಎಡಿಜಿಪಿ ಮಟ್ಟದ ಅಧಿಕಾರಿಯನ್ನು ಬಂಧಿಸಲಾಗಿದೆ. 54,000 ಯುವಕರ ಭವಿಷ್ಯ ಈಗ ಕತ್ತಲಲ್ಲಿದೆ’ ಎಂದೂ ಅವರು ಹೇಳಿದ್ದಾರೆ.

‘ಇಷ್ಟು ಮಾತ್ರವಲ್ಲ . ಕೆಪಿಎಸ್‌ಸಿಯಿಂದ ಈ ಹಿಂದೆ ನಡೆದ ಎಫ್‌ಡಿಎ, ಎಸ್‌ಡಿಎ, ಪಿಡಬ್ಯ್ಲುಡಿ ಮತ್ತು ಜೆಇ ಹಾಗೂ ಪೊಲೀಸ್ ಕಾನ್‌ಸ್ಟೆಬಲ್‌ ನೇಮಕಕ್ಕಾಗಿ ನಡೆದ ಲಿಖಿತ ಪರೀಕ್ಷೆಯಲ್ಲೂ ಅಕ್ರಮಗಳು ನಡೆದಿರುವ ಸಂಗತಿಯನ್ನು ಸಿಐಡಿ ತನ್ನ ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಿದೆ. ಎಸ್ಐ ಕರ್ಮಕಾಂಡ ರೀತಿಯೇ ಕೆಪಿಟಿಸಿಎಲ್ ಪರೀಕ್ಷಾ ಅಕ್ರಮ ನಡೆದಿದೆಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಕೆಪಿಟಿಸಿಎಲ್ ಕಿರಿಯ ಅಭಿಯಂತರರ ನೇಮಕಾತಿಗಾಗಿ ನಡೆಸಿದ್ದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿನ ಅಕ್ರಮಕ್ಕೆ ಸಂಬಂಧಿಸಿದಂತೆ ತನಿಖೆ ಆರಂಭವಾಗಿದೆ. ರಾಷ್ಟ್ರೀಯ ಅಪರಾಧ ದಾಖಲಾತಿ ಬ್ಯೂರೋ (ಎನ್ಸಿಆರ್ಬಿ) ಇತ್ತೀಚಿಗೆ ಬಿಡುಗಡೆ ಮಾಡಿದ ಅಂಕಿ ಅಂಶಗಳಲ್ಲೂ ರಾಜ್ಯ ಭ್ರಷ್ಟಾಚಾರದಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಆದಾಯಕ್ಕಿಂತ ಅಧಿಕ ಆಸ್ತಿ ಗಳಿಕೆ, ಲಂಚ ಸ್ವೀಕಾರದಲ್ಲಿ ರಾಜ್ಯದಲ್ಲಿ ದಾಕಲಾಗಿರುವ ಪ್ರಕರಣಗಳ ಆಧಾರದಲ್ಲಿ ರಾಜ್ಯ ನಾಲ್ಕನೇ ಸ್ಥಾನಕ್ಕೆ ಬಂದಿದೆ ಎಂದು ಹೇಳಿದೆ’

‌‘ಬೆಂಗಳೂರು ಅಭಿವೃದ್ದಿ ಪ್ರಾಧಿಕಾರ ಲಂಚಾವತಾರದ ಕೂಪವಾಗಿದೆ. ಗೃಹ ಸಚಿವ ಆರಗ ಜ್ಞಾನೇಂದ್ರ ಸೇರಿ ಬಿಡಿಎ ಯಿಂದ ನಾಲ್ಕು ಮಂದಿಗೆ ದುಬಾರಿ ಬೆಲೆಯ ಬದಲಿ ನಿವೇಶನ ಹಂಚಿಕೆ ಮಾಡಲಾಗಿದೆ. ಅಭಿವೃದ್ಧಿ ಹೊಂದಿದ ಬಡಾವಣೆಗಳು, ಅತಿಕ್ರಮಣದಾರರಿಂದ ವಶಕ್ಕೆ ಪಡೆದ ನಿವೇಶನಗಳನ್ನು ಹರಾಜಿನ ಮೂಲಕವೇ ಮಾರಾಟ ಮಾಡಬೇಕು ಎಂಬ ಸುಪ್ರೀಂಕೋರ್ಟ್ ಆದೇಶವನ್ನು ಉಲ್ಲಂಘಿಸಿರುವ ಬಿಡಿಎ ಹಾಲಿ, ಸಚಿವರು, ಮಾಜಿ ಸಂಸದರು ಸೇರಿದಂತೆ ನಾಲ್ವರಿಗೆ ರಹಸ್ಯವಾಗಿ ದುಬಾರಿ ಮೌಲ್ಯದ ಪರ್ಯಾಯ ನಿವೇಶನಗಳನ್ನು ಹಂಚಿಕೆ ಮಾಡಿದೆ. ಇದಕ್ಕೆ ಸಂಬಂಧಪಟ್ಟಂತೆ ಬಿಡಿಎ ಆಯುಕ್ತ ರಾಜೇಶ್ ಗೌಡ ಎಂ.ಬಿ.ರಾಜೇಶ್ ಗೌಡ ಅವರನ್ನು ಸುಪ್ರೀಂಕೋರ್ಟ್ ಸೂಚನೆ ಬಳಿಕ ಸರ್ಕಾರ ಎತ್ತಂಗಡಿ ಮಾಡಿತು. ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಅನುಕೂಲವಾಗುವ ಹಾಗೂ ಫಲಾನುಭವಿಗಳೇ ಇಲ್ಲದ ಕಾಮಗಾರಿಗಳನ್ನು ನಿರ್ವಹಿಸುವ ಮೂಲಕ ಕುಷ್ಟಗಿ ಉಪವಿಭಾಗ, ಕೃಷ್ನ ಭಾಗ್ಯ ಜಲ ನಿಗಮದ ₹ 1136.63 ಕೋಟಿ ಭ್ರಷ್ಟಾಚಾರ ಮೇಲುನೋಟಕ್ಕೆ ನಿಜವಾಗಿದೆ. ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಲಾಗಿರುವ ನಿಗಮದ ನಿವೃತ್ತ ವ್ಯವಸ್ಥಾಪಕ ನಿರ್ದೇಶಕ ಪ್ರಭಾಖರ್ ಎಂ.ಚಿಣಿ ಅವರ ವಿರುದ್ಧದ ಆರೋಪಗಳು ಮತ್ತು ಪ್ರಕರಣದ ಸತ್ಯಾಸತ್ಯತೆಯ ತನಿಖೆ ನಡೆಸಲು ವಿಚಕ್ಷಣಾ ದಳಕ್ಕೆ ವಹಿಸಿ 2022ರ ಫೆ.16 ರಂದು ಆದೇಶ ಹೊರಡಿಸಲಾಗಿದೆ’ ಎಂದೂ ಹೇಳಿದ್ದಾರೆ.

‘2021ರ ಡಿಸೆಂಬರ್ 13 ರಂದು ನಡೆದಿದ್ದ ಲೋಕೋಪಯೋಗಿ ಇಲಾಖೆಯ ಕಿರಿಯ ಎಂಜಿನಿಯರ್ ನೇಮಕಾತಿ ಪರೀಕ್ಷೆಗಳಲ್ಲೂ ಅಕ್ರಮ ನಡೆದಿರುವ ವಿಡಿಯೊ ಬಹಿರಂಗಗೊಂಡಿದೆ. ಕೆಪಿಎಸ್ಸಿ ಈ ಪರೀಕ್ಷೆಗಳನ್ನು ನಡೆಸಿತ್ತು. ಲಾಡ್ಜ್‌ನಲ್ಲಿ ಕುಳಿತು ಬ್ಲೂ ಟೂತ್ ಮೂಲಕ ಪರೀಕ್ಷಾರ್ಥಿಗಳಿಗೆ ಸರಿ ಉತ್ತರಗಳನ್ನು ಒದಗಿಸುತ್ತಿರುವ ವಿಡಿಯೊ ಬಹಿರಂಗಗೊಂಡಿದೆ. ಇಷ್ಟು ಮಾತ್ರವಲ್ಲ, ಕೆಪಿಎಸ್‌ಸಿಯಿಂದ ಈ ಹಿಂದೆ ನಡೆದ ಎಫ್‌ಡಿಎ, ಎಸ್‌ಡಿಎ, ಪಿಡಬ್ಯ್ಲುಡಿ ಮತ್ತು ಜೆಇ ಹಾಗೂ ಪೊಲೀಸ್ ಕಾನ್ಸ್ಟೆಬಲ್ ನೇಮಕಕ್ಕಾಗಿ ನಡೆದ ಲಿಖಿತ ಪರೀಕ್ಷೆಯಲ್ಲೂ ಅಕ್ರಮಗಳು ನಡೆದಿರುವ ಸಂಗತಿಯನ್ನು ಸಿಐಡಿ ತನ್ನ ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಿದೆ.

‘ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪರೀಕ್ಷೆಯ ಪ್ರಶ್ನೆಗಳ ಸೋರಿಕೆ ಪ್ರಕರಣ ಸಂಬಂಧ ಧಾರವಾಡ ಕರ್ನಾಟಕ ವಿಶ್ವ ವಿದ್ಯಾಲಯದ ಮೌಲ್ಯಮಾಪನ ವಿಭಾಗದ ಕುಲಸಚಿವ ಪ್ರೊ.ಎಚ್.ನಾಗರಾಜ್ ಅವರನ್ನು ಮಲ್ಲೇಶ್ವರಂ ಠಾನೆ ಪೊಲೀಸರು ಬಂಧಿಸಿದ್ದಾರೆ. ಹಲವು ಪ್ರಾಧ್ಯಾಪಕರನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಖರೀದಿಸುವ ರಾಗಿ, ಭತ್ತ ಮತ್ತು ಮೆಕ್ಕೆಜೋಳ ರೈತರಿಗೆ ಉಚಿತವಾಗಿ ಗೋಣಿಚೀಲ (ಗನ್ನಿ ಬ್ಯಾಗ್) ವಿತರಣೆ ಹೆಸರಿನಲ್ಲಿ ಅಕ್ರಮ ನಡೆದಿದೆ. ರೈತರಿಗೆ ಚೀಲವನ್ನೂ ಕೊಡದೆ, ಹಣವನ್ನೂ ಕೊಡದೆ ಕೇಂದ್ರ ಸರ್ಕಾರದಿಂದ ಬಿಡುಗಡೆಯಾದ ಕೋಟಿಗಟ್ಟಲೆ ದುಡ್ಡನ್ನು ರೈತರ ಹೆಸರು ಹೇಳಿಕೊಂಡು ನಿಗಮದ ಅಧಿಕಾರಿಗಳೇ ಜೇಬಿಗಿಳಿಸಿದ್ದಾರೆ. ಭೂ ವ್ಯಾಜ್ಯ ಪ್ರಕರಣದಲ್ಲಿ ಅರ್ಜಿದಾರರ ಪರವಾಗಿ ಆದೇಶ ನೀಡಲು 5 ಲಕ್ಷ ರೂ ಲಂಚ ಪಡೆದ ಪ್ರಕರಣದಲ್ಲಿ ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ.ಮಂಜುನಾಥ್ ನನ್ನು ಎಸಿಬಿ ಅಧಿಕಾರಿಗಳು ಬಂಧಿಸಿದರು. ಬೆಂಗಳೂರು ಉಪನೋಂದಣಿ ಕಚೇರಿಗಳಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ, ಮಧ್ಯವರ್ತಿಗಳ ಃಆವಳಿ, ಅಕ್ರಮವಾಗಿ ದಾಖಲೆಗಳ ನೋಂದಣಿ ಕುರಿತು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿರುವ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ ವಿಚಾರಣೆ ಆರಂಭಿಸಿದ್ದಾರೆ. ಬಿಜೆಪಿಯ ಶೇ 40 ಸಾಧನೆ ಬಿಬಿಎಂಪ ಯಲ್ಲೂ ರಾರಾಜಿಸುತ್ತಿದೆ’ ಎಂದು ಅವರು ಟೀಕಿಸಿದ್ದಾರೆ.

‘ಖಾಲಿ ಕುರ್ಚಿಗಳ ಉತ್ಸವ’

ಬಿಜೆಪಿ ಸರ್ಕಾರದ ‘ಜನ ಸ್ಪಂದನ’ ಕಾರ್ಯಕ್ರಮವನ್ನು ಟೀಕಿಸಿ ಸರಣಿ ಟ್ವೀಟ್‌ ಮಾಡಿರುವ ರಾಜ್ಯ ಕಾಂಗ್ರೆಸ್‌ ಘಟಕ, ‘ಇನ್ನೂ ಸಂಪುಟ ಸಚಿವರೊಬ್ಬರ ಸಾವಿನ ಸೂತಕವೇ ಕಳೆದಿಲ್ಲ. ಜೀವ ಬಿಟ್ಟ ತಮ್ಮದೇ ಪಕ್ಷದ ನಿಷ್ಠಾವಂತ ಕಾರ್ಯಕರ್ತನ ಕುಟುಂಬದ ಕಣ್ಣೀರು ಆರಿಲ್ಲ. ತಮ್ಮವರ ಸಾವುಗಳೇ ಬಿಜೆಪಿಗೆ ಕೊಂಚವೂ ಬೇಸರ ಮೂಡಿಸಿಲ್ಲ ಎಂದಾದರೆ ಜನರ ನೋವಿಗೆ ಮರುಕಪಡುವರೆ? ರಾಜ್ಯ ಬಿಜೆಪಿ ಸರ್ಕಾರಕ್ಕೆ ಕನಿಷ್ಠ ಅಂತಃಕರಣವಿಲ್ಲ. ಬಿಜೆಪಿಯ ಭ್ರಷ್ಟೋತ್ಸವದ ಮುಂದೆ ಮಾನವೀಯತೆ ಕಳೆದುಹೋಗಿದೆ’ ಎಂದು‌ ವ್ಯಂಗ್ಯವಾಡಿದೆ.

‘ಬಿಜೆಪಿ ಸರ್ಕಾರ ಸಮಾವೇಶ ಗಳಿಗೆ ಹೆಚ್ಚು ಖರ್ಚು ಮಾಡುವ ಅಗತ್ಯವಿಲ್ಲ. ಕೇವಲ ಶೇ 40 ಕುರ್ಚಿ ಗಳನ್ನು ತರಿಸಿದರೆ ಸಾಕು. ಶೇ 40 ಶಾಮಿಯಾನ ಮಾತ್ರ ಹಾಕಿದರೆ ಸಾಕು. ಏಕೆಂದರೆ, ಕುರ್ಚಿಗಳು ತುಂಬುವುದು ಶೇ 40ರಷ್ಟು ಮಾತ್ರ. ಲೂಟಿ ಹಣವನ್ನು ಅನಗತ್ಯ ಖರ್ಚು ಮಾಡುವುದಕ್ಕಿಂತ ಕಾರ್ಯಕ್ರಮದ ಗುತ್ತಿಗೆದಾರರಿಗೆ ಶೇ 40 ಹಣ ನೀಡಿದರೆ ಸಾಕು. ಇದು ಜನಸ್ಪಂದನೆಯಲ್ಲ, ಖಾಲಿ ಕುರ್ಚಿಗಳ ಸ್ಪಂದನೆ. ಜನೋತ್ಸವವಲ್ಲ, ಖಾಲಿ ಕುರ್ಚಿಗಳ ಉತ್ಸವ’ ಎಂದೂ ಟೀಕಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT