ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ದರಾಮಯ್ಯ ಪರ್ಸಂಟೇಜ್‌ ವ್ಯವಹಾರದ ಪಿತಾಮಹ: ಎಚ್‌.ಡಿ. ಕುಮಾರಸ್ವಾಮಿ ವಾಗ್ದಾಳಿ

Last Updated 18 ಏಪ್ರಿಲ್ 2022, 12:17 IST
ಅಕ್ಷರ ಗಾತ್ರ

ಬೆಂಗಳೂರು: ‘ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ‘ಪರ್ಸಂಟೇಜ್‌ ವ್ಯವಹಾರದ ಪಿತಾಮಹ’. ಮುಖ್ಯಮಂತ್ರಿಯಾಗಿದ್ದಾಗ ಆಪ್ತ ಶಾಸಕರಿಗೆ ಅನುದಾನ ಕೊಟ್ಟು ಕಮಿಷನ್‌ ಹೊಡೆದಿದದ್ದಾರೆ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ಸಿದ್ದರಾಮಯ್ಯ ವಿರುದ್ಧ ಟೀಕಾಪ್ರಹಾರ ನಡೆಸಿ ಸೋಮವಾರ ಸರಣಿ ಟ್ವೀಟ್‌ ಮಾಡಿರುವ ಅವರು, ‘ನಿಮ್ಮ ಕಮಿಷನ್‌ ಕತೆ ಕಾದಂಬರಿ ಬರೆಯುವಷ್ಟಿದೆ. ಅರ್ಕಾವತಿ ಬಡಾವಣೆಯ ‘ರೀಡೂ’ ಹಗರಣದಲ್ಲಿ ಕೆಂಪಣ್ಣ ಆಯೋಗದ ಕೃಪೆಯಿಂದ ಪಾರಾದ ನಿಮ್ಮ ಯೋಗ್ಯತೆ ನಮಗೆ ಗೊತ್ತಿಲ್ಲವೆ’ ಎಂದು ಪ್ರಶ್ನಿಸಿದ್ದಾರೆ.

‘2008–09ರಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ವಿರೋಧ ಪಕ್ಷದ ನಾಯಕನ ಸ್ಥಾನದಿಂದ ಕೆಳಕ್ಕಿಳಿಸಲು ಬಿಜೆಪಿ ಜತೆ ವ್ಯವಹಾರ ಕುದುರಿಸಿದ್ದು, ಆಪರೇಷನ್‌ ಕಮಲದಲ್ಲಿ ಶಾಸಕರನ್ನು ಬಿಜೆಪಿಗೆ ಕಳಿಸಿ ಹಣ ಪಡೆದದ್ದು ಎಲ್ಲವೂ ಗೊತ್ತಿದೆ. ಕೋಟಿಗಳ ಲೆಕ್ಕದ ಗಂಟು ತರಲು ಯಾರು ಹೋಗಿದ್ದರು? ಎಲ್ಲಿಗೆ ಹಣ ತಲುಪಿಸಿದರು ಎಂಬುದು ಗೊತ್ತು. ಹಣ ತಂದುಕೊಟ್ಟ ನಿಮ್ಮ ಹಳೆಯ ಸ್ನೇಹಿತರೇ ನನ್ನ ಬಳಿ ಸತ್ಯ ಬಿಚ್ಚಿಟ್ಟಿದ್ದಾರೆ’ ಎಂದಿದ್ದಾರೆ.

‘ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಕದ್ದ ವಾಚ್‌ ಕಟ್ಟಿದ್ದು ಸತ್ಯವಲ್ಲವೆ? ಅದನ್ನು ತಂದುಕೊಟ್ಟ ಪೊಲೀಸ್‌ ಅಧಿಕಾರಿಗೆ ವರ್ಗಾವಣೆ ದಯಪಾಲಿಸಿಲ್ಲವೆ?’ ಎಂದು ಕೇಳಿದ್ದಾರೆ.

‘ಈಶ್ವರಪ್ಪ ವಿಷಯದಲ್ಲಿ ಡಿವೈಎಸ್‌ಪಿ ಗಣಪತಿ ಅವರ ಹೆಸರು ಎಳೆದು ತಂದಿದ್ದೀರಿ. ನಾನು ಹೇಳಿದ್ದು ಕಲ್ಲಪ್ಪ ಹಂಡೀಭಾಗ್ ಬಗ್ಗೆ. ಹಿಂದುಳಿದ ಸಮುದಾಯಕ್ಕೆ ಸೇರಿದ್ದ ಆ ಪ್ರಾಮಾಣಿಕ ಅಧಿಕಾರಿಗೆ ಇನ್ನಿಲ್ಲದ ಕಿರುಕುಳ ಕೊಟ್ಟು ಮುಗಿಸಿದಿರಿ. ಇಲಾಖೆಯಲ್ಲಿ ಒಳ್ಳೇ ಭವಿಷ್ಯವಿದ್ದ ಅವರ ಜೀವಕ್ಕೆ ಎರವಾದಿರಿ. ಅವರ ಸಾವಿಗೆ ನಿಮ್ಮ ಸರ್ಕಾರ ಕಾರಣ ಅಲ್ಲವೆ’ ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT