ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆಂಡರ್‌ಗಳಲ್ಲಿ ಕಮಿಷನ್: ರಾಜ್ಯ ಸರ್ಕಾರವನ್ನು ವಜಾಗೊಳಿಸಲು ಸಿದ್ದರಾಮಯ್ಯ ಒತ್ತಾಯ

Last Updated 27 ನವೆಂಬರ್ 2021, 13:34 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯ ಸರ್ಕಾರ ಶೇ 40 ಕಮಿಷನ್ ವಸೂಲಿ ಮಾಡುತ್ತಿದೆ ಎಂದು ಆರೋಪಿಸಿ ಒಂದು ಲಕ್ಷ ಗುತ್ತಿಗೆದಾರರು ಸದಸ್ಯರಾಗಿರುವ ಸಂಘದವರು ಪ್ರಧಾನಿಗೆ ಪತ್ರ ಬರೆದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಪ್ರಾಮಾಣಿಕರಾಗಿದ್ದರೆ ಭ್ರಷ್ಟ ರಾಜ್ಯ ಸರ್ಕಾರವನ್ನು ವಜಾ ಮಾಡಲಿ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

ಈ ಕುರಿತು ಶನಿವಾರ ಸರಣಿ ಟ್ವೀಟ್‌ ಮಾಡಿರುವ ಅವರು, ‘ಕಾಂಗ್ರೆಸ್ ಸರ್ಕಾರದ ಅವದಿಯಲ್ಲಿ ನಡೆದಿರುವ ಟೆಂಡರ್‌ಗಳೂ ಸೇರಿ ಈ ವರೆಗಿನ ಎಲ್ಲಾ ಟೆಂಡರ್ ಪ್ರಕ್ರಿಯೆಗಳ ಬಗ್ಗೆ ಸುಪ್ರೀಂ ಕೋರ್ಟ್‌ನ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆಯಾಗಲಿ. ಉಪ್ಪು ತಿಂದವರು ನೀರು ಕುಡೀತಾರೆ. ಯಾರು ತಪ್ಪು ಮಾಡಿದ್ದಾರೆ ಅವರಿಗೆ ಶಿಕ್ಷೆಯಾಗುತ್ತೆ‘ ಎಂದು ತಿಳಿಸಿದ್ದಾರೆ.

‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಶೇ 40 ಕಮಿಷನ್ ಪ್ರಕರಣದ ತನಿಖೆಗೆ ಆದೇಶ ಮಾಡಿದ್ದಾರೆ. ಆದರೆ, ಯಾವ ಇಲಾಖೆ ವಿರುದ್ಧ ಭ್ರಷ್ಟಾಚಾರದ ಆರೋಪ ಇದೆಯೋ ಅದೇ ಇಲಾಖೆಯ ಅಧಿಕಾರಿಗಳನ್ನು ತನಿಖೆಗೆ ನೇಮಿಸಿದರೆ ಸತ್ಯ ಹೊರಬರುತ್ತದಾ?‘ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

‘ವಿಧಾನ ಪರಿಷತ್ತಿನ ಚುನಾವಣೆಯಲ್ಲಿ ನಾವು ಜೆಡಿಎಸ್ ಜೊತೆಗೆ ಹೊಂದಾಣಿಕೆ ಮಾಡಿಕೊಂಡಿಲ್ಲ. ನಮ್ಮ ಬೆಂಬಲಿತರಿಗೆ, ಪಕ್ಷದ ಅಭ್ಯರ್ಥಿಗೆ ಒಂದು ಮತ ಮಾತ್ರ ಹಾಕಲು ಸೂಚನೆ ಕೊಟ್ಟಿದ್ದೇನೆ. ಆದರೆ ಬೇರೆ ಚುನಾವಣೆಗಳಂತೆ ಈ ಚುನಾವಣೆಯಲ್ಲೂ ಬಿಜೆಪಿ - ಜೆಡಿಎಸ್ ನಡುವೆ ಒಳ ಒಪ್ಪಂದ ನಡೆದಿದೆ‘ ಎಂದೂ ಮಾಜಿ ಸಿಎಂ ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT