ಗುರುವಾರ , ಜನವರಿ 27, 2022
20 °C

ಕೋ-ಆಪರೇಟಿವ್ ಬ್ಯಾಂಕ್ ಹಗರಣ: ಹೂಡಿಕೆದಾರರಿಂದ ಪ್ರಧಾನಿಗೆ ಪತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಶ್ರೀ ಗುರು ರಾಘವೇಂದ್ರ ಕೋ–ಆಪರೇಟಿವ್‌ ಬ್ಯಾಂಕ್‌ನಿಂದ ವಂಚನೆಗೊಳಗಾಗಿರುವ ಠೇವಣಿದಾರರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯುವ ಮೂಲಕ ಸೋಮವಾರ ಪತ್ರ ಚಳವಳಿ ಆರಂಭಿಸಿದರು.

ಹಗರಣ ನಡೆದು ಎರಡು ವರ್ಷಗಳಾಗಿವೆ. ಹೀಗಿದ್ದರೂ ವಂಚನೆಗೆ ಒಳಗಾಗಿರುವ ತಮಗೆ ನ್ಯಾಯ ಸಿಕ್ಕಿಲ್ಲ ಎಂದು ಆರೋಪಿಸಿ ಠೇವಣಿದಾರರು ಬ್ಯಾಂಕ್‌ ಎದುರು ಪ್ರತಿಭಟನೆ ನಡೆಸಿದರು.

‘ಬ್ಯಾಂಕ್‌ನ ಹಗರಣ ಬಯಲಾದ ಬಳಿಕ ಹಣ ಕಳೆದುಕೊಂಡ ಅನೇಕರು ಆಘಾತದಿಂದ ಜೀವ ಕಳೆದುಕೊಂಡಿದ್ದಾರೆ. ಸಾವಿರಾರು ಮಂದಿಯ ಬದುಕು ಬೀದಿಗೆ ಬಿದ್ದಿದೆ. ಹೂಡಿಕೆ ಮಾಡಿದ್ದವರು ತಮ್ಮ ಮಕ್ಕಳ ವಿದ್ಯಾಭ್ಯಾಸ ಮೊಟಕುಗೊಳಿಸಿ ಅವರನ್ನು ಕೆಲಸಕ್ಕೆ ಕಳುಹಿಸುವಂತಾಗಿದೆ. ಹಲವರು ಜೀವನ ನಿರ್ವಹಣೆಗಾಗಿ ಸಾಲ ಮಾಡಿಕೊಂಡು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ’ ಎಂದು ಬ್ಯಾಂಕ್‌ನ ಷೇರುದಾರರು ಮತ್ತು ಠೇವಣಿದಾರರ ಹಿತರಕ್ಷಣಾ ವೇದಿಕೆಯ ಮಹಾ ಪೋಷಕ ಡಾ.ಶಂಕರ್‌ಗುಹಾ ದ್ವಾರಕನಾಥ್‌ ಬೆಳ್ಳೂರು ತಿಳಿಸಿದರು.

‘5 ಲಕ್ಷಕ್ಕಿಂತ ಹೆಚ್ಚಿನ ಮೊತ್ತದ ಠೇವಣಿ ಇಟ್ಟವರಿಗೆ ಪರಿಹಾರ ಯಾವಾಗ ಸಿಗುತ್ತದೆ ಎಂಬುದರ ಬಗ್ಗೆ ಸಂಸದ ತೇಜಸ್ವಿ ಸೂರ್ಯ ಹಾಗೂ ಶಾಸಕ ರವಿ ಸುಬ್ರಹ್ಮಣ್ಯ ಮಾತನಾಡುತ್ತಿಲ್ಲ. ಅವರ ಮೌನ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ತನಿಖೆ ಯಾವ ಹಂತದಲ್ಲಿ ಇದೆ ಎಂಬುದರ ಕುರಿತೂ ಸರಿಯಾಗಿ ಮಾಹಿತಿ ಇಲ್ಲ. ಪ್ರಕರಣವನ್ನು ಕೂಡಲೇ ಸಿಬಿಐ ತನಿಖೆಗೆ ವಹಿಸಬೇಕು. ಠೇವಣಿದಾರರ ಪೂರ್ಣ ಹಣ ಅವರಿಗೆ ಶೀಘ್ರವೇ ಸಿಗುವಂತೆ ಮಾಡಬೇಕು ಎಂದು ಪತ್ರದ ಮೂಲಕ ಪ್ರಧಾನ ಮಂತ್ರಿಯವರಿಗೆ ಮನವಿ ಮಾಡಿದ್ದೇವೆ’ ಎಂದು ಹೇಳಿದರು.

ಪ್ರತಿಭಟನಕಾರರು ಬಸವನಗುಡಿ ಅಂಚೆ ಕಚೇರಿ ಮೂಲಕ ಪ್ರಧಾನಿ ಅವರಿಗೆ ಪತ್ರಗಳನ್ನು ರವಾನಿಸಿದರು.  

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು