ಶನಿವಾರ, ಜೂನ್ 25, 2022
25 °C
ಪಠ್ಯಪುಸ್ತಕಗಳ ಮರುಪರಿಷ್ಕರಣೆಯ ಅಗತ್ಯವಿತ್ತೇ...

ಪಠ್ಯಪುಸ್ತಕಗಳ ಚರ್ಚೆ: ಬಹುತ್ವವನ್ನು ಬಲಿಗೊಡುವುದೇ ಪುನರ್ ಪರಿಷ್ಕರಣೆಯ ಆಶಯ

ಸಿ.ಎನ್. ರಾಮಚಂದ್ರನ್ Updated:

ಅಕ್ಷರ ಗಾತ್ರ : | |

Prajavani

ಪುನರ್ ಪರಿಷ್ಕೃತ ಪಠ್ಯವು ವೈವಿಧ್ಯವಿಲ್ಲದ, ಉಪದೇಶವೇ ಹೆಚ್ಚಾಗಿರುವ, ‘ಶಾಂತಿ-ಸಹಬಾಳ್ವೆ-ಬಹುತ್ವ’ದ ಆಶಯವನ್ನು ಎಲ್ಲಿಯೂ ಪುರಸ್ಕರಿಸದ, ಸಂಕಲನವಿದೆಂದು ಅನಿಸುತ್ತದೆ. ಸಂಪಾದಕ ಮಂಡಳಿ ತಮ್ಮ ಮಾತಿನಲ್ಲಿ ಉಪಯೋಗಿಸಿರುವ ‘ಭಾಷೆಯ ಪಠ್ಯದ ಹೆಸರಿನಲ್ಲಿ ಸಿದ್ಧಾಂತ ಪ್ರಚಾರಕ್ಕೆ ಅವಕಾಶವಾಗಬಾರದು’ ಎಂಬ ಘೋಷವಾಕ್ಯವು ಈ ಪುನರ್ ಪರಿಶೀಲನೆಗೆ ಒಳಪಟ್ಟ ಪಠ್ಯ ಪುಸ್ತಕಕ್ಕೇ ಹೆಚ್ಚು ಅನ್ವಯವಾಗುತ್ತದೆ...

ಶಾಲಾ-ಕಾಲೇಜುಗಳಲ್ಲಿ ಪಠ್ಯಪುಸ್ತಕಗಳನ್ನು ಸಿದ್ಧಪಡಿಸುವುದು ಆಯಾ ಕ್ಷೇತ್ರಗಳಲ್ಲಿರುವ ಅನುಭವಿ ವಿದ್ವಾಂಸರ ಕೆಲಸ ಎಂದು ಇತ್ತೀಚಿನವರೆಗೆ ಎಲ್ಲರೂ ಭಾವಿಸಿದ್ದರು. ಆದರೆ, ಕಳೆದೆರಡು ದಶಕಗಳಿಂದ ಸರ್ಕಾರಗಳೇ ನೇರವಾಗಿ ಪಠ್ಯಪುಸ್ತಕ ರಚನೆಯಲ್ಲಿ ಆಸಕ್ತಿ ವಹಿಸಿ, ‘ಈ ಪಠ್ಯವಿರಬೇಕು, ಇದು ಇರಬಾರದು’ ಎಂದು ನಿರ್ದೇಶಿಸುತ್ತಿರುವುದಕ್ಕೆ ಶಿಕ್ಷಣವನ್ನು ಕುರಿತು ಸರ್ಕಾರಗಳಿಗೆ ಇರುವ ಅಗಾಧ ಕಾಳಜಿ ಕಾರಣವೇ ಅಥವಾ ಆಡಳಿತ ಪಕ್ಷಗಳು ಬದಲಾದಂತೆ ಪಠ್ಯಪುಸ್ತಕಗಳೂ ಬದಲಾಗುತ್ತಿರುವುದು ಶಿಕ್ಷಣಕ್ಕೂ ರಾಜಕೀಯ ಲೇಪವಾಗುತ್ತಿರುವುದರ ಕುರುಹೇ ಎಂಬುದು ಗೊತ್ತಾಗುತ್ತಿಲ್ಲ.

ಸದ್ಯ ವಾದ-ವಿವಾದಗಳಿಗೆ ಗುರಿಯಾಗಿರುವುದು ಹತ್ತನೆಯ ತರಗತಿಗೆ ಸಿದ್ಧಪಡಿಸಿರುವ ಕನ್ನಡ ಪಠ್ಯಪುಸ್ತಕ. ಈ ಪುಸ್ತಕದ ಇತಿಹಾಸ ಕುತೂಹಲಕರವಾಗಿದೆ. ಮೊದಲಿಗೆ ಪ್ರೊ. ಎನ್.ತಮ್ಮಣ್ಣಗೌಡ ಅಧ್ಯಕ್ಷತೆಯ ಸಮಿತಿ 2010ರಲ್ಲಿ ‘ಸಿರಿ ಕನ್ನಡ-10’ ಎಂಬ ಪಠ್ಯಪುಸ್ತಕವನ್ನು ಸಿದ್ಧಪಡಿಸಿತು. ಅನಂತರ, 2014ರಲ್ಲಿ ಆಗ ಇದ್ದ ಸರ್ಕಾರವು ಆ ಪಠ್ಯಪುಸ್ತಕದ ಪರಿಷ್ಕರಣೆಗೆ ಪ್ರೊ. ಬರಗೂರು ರಾಮಚಂದ್ರಪ್ಪ ಅವರ ಅಧ್ಯಕ್ಷತೆಯಲ್ಲಿ ಒಂದು ಸಮಿತಿಯನ್ನು ರಚಿಸಿತು; ಆ ಸಮಿತಿಯು ಸಿದ್ಧಪಡಿಸಿದ ಪಠ್ಯಪುಸ್ತಕವು 2017-18ರಲ್ಲಿ ಜಾರಿಗೆ ಬಂದಿತು. ‘ಲಿಂಗತ್ವ ಸಮಾನತೆ, ಪ್ರಾದೇಶಿಕ ಪ್ರಾತಿನಿಧ್ಯ, ರಾಷ್ಟ್ರೀಯ ಸಮಗ್ರತೆ, ಸಾಮಾಜಿಕ ಸಾಮರಸ್ಯ’ ಈ ತತ್ವಗಳ ಹಿನ್ನೆಲೆಯಲ್ಲಿ ಈ ಸಮಿತಿಯು ಪಠ್ಯಪುಸ್ತಕವನ್ನು ಪರಿಷ್ಕರಿಸಿತು. ನಂತರ, 2021ರಲ್ಲಿ ಅಧಿಕಾರದಲ್ಲಿದ್ದ ನೂತನ ಸರ್ಕಾರ ಈ ಪರಿಷ್ಕೃತ ಪಠ್ಯಪುಸ್ತಕವನ್ನು ‘ಪುನರ್ ಪರಿಶೀಲಿಸಲು’ ರೋಹಿತ್ ಚಕ್ರತೀರ್ಥ ಅವರ ಅಧ್ಯಕ್ಷತೆಯಲ್ಲಿ ಒಂದು ಸಮಿತಿಯನ್ನು ರಚಿಸಿತು. ‘ಭಾಷಾ ಪಠ್ಯವಿರುವುದು ಅತ್ಯುತ್ತಮವಾದ ಪ್ರಾತಿನಿಧಿಕ ಪಠ್ಯವನ್ನು ಕೊಡುವುದಕ್ಕಾಗಿಯೇ ಹೊರತು ಸಾಮಾಜಿಕ ನ್ಯಾಯ, ಲಿಂಗ ಸಮಾನತೆ, ಇತ್ಯಾದಿ ಅಂಶಗಳನ್ನು ತುರುಕುವುದಕ್ಕಲ್ಲ... ಭಾಷೆಯ ಪಠ್ಯದ ಹೆಸರಿನಲ್ಲಿ ಸಿದ್ಧಾಂತ ಪ್ರಚಾರಕ್ಕೆ ಅವಕಾಶವಾಗಬಾರದು’ ಇತ್ಯಾದಿ ತಾತ್ವಿಕ ಹಿನ್ನೆಲೆಯಲ್ಲಿ ಬರಗೂರು ಸಮಿತಿ ರೂಪಿಸಿದ್ದ ಪಠ್ಯಪುಸ್ತಕವನ್ನು ಈ ‘ಪುನರ್ ಪರಿಶೀಲನಾ ಸಮಿತಿ’ಯು ಪರಿಷ್ಕರಿಸಿದೆ. ಈ ಪರಿಶೀಲನಾ ಕಾರ್ಯದಲ್ಲಿ ಮೊದಲಿನ ಪಠ್ಯಪುಸ್ತಕದಿಂದ ಕೆಲವು ಪಠ್ಯಗಳನ್ನು ಕೈಬಿಟ್ಟು ಅವುಗಳ ಜಾಗದಲ್ಲಿ ಹೊಸ ಪಠ್ಯಗಳನ್ನು ಸೇರಿಸಿದೆ. ಈ ಬದಲಾವಣೆಗಳ ಪರಿಣಾಮವನ್ನು, ವಿದ್ಯಾರ್ಥಿಗಳ ನೆಲೆಯಲ್ಲಿ, ಹೀಗೆ ಸಂಕ್ಷಿಪ್ತವಾಗಿ ದಾಖಲಿಸಬಹುದು.

1) ವೈವಿಧ್ಯ ನಷ್ಟ: ಕಿಶೋರಾವಸ್ಥೆಯ ವಿದ್ಯಾರ್ಥಿಗಳ ಕುತೂಹಲ ಹಾಗೂ ಆಸಕ್ತಿ ಇವುಗಳನ್ನು ತಣಿಸಲು ಸಾಹಿತ್ಯ ಪ್ರಭೇದಗಳ ವೈವಿಧ್ಯ ಅತ್ಯವಶ್ಯಕ. ಈ ಪುನರ್ ಪರಿಷ್ಕೃತ ಆವೃತ್ತಿಯಲ್ಲಿ ಬರಗೂರು ಸಮಿತಿ ಸಿದ್ಧಪಡಿಸಿದ್ದ ಪಠ್ಯಾವಳಿಯಲ್ಲಿ ಐದು ಪಠ್ಯಗಳನ್ನು ಕೈಬಿಡಲಾಗಿದೆ; ಅವುಗಳೆಂದರೆ: ಸಾರಾ ಅಬೂಬಕ್ಕರ್‌ ಅವರ ‘ಯುದ್ಧ’; ಎ.ಎನ್. ಮೂರ್ತಿರಾವ್ ಅವರ ‘ವ್ಯಾಘ್ರಗೀತೆ’; ಜಿ. ರಾಮಕೃಷ್ಣ ಅವರ ‘ಭಗತ್‌ ಸಿಂಗ್’ (ಈ ಪಠ್ಯವನ್ನು ಬಿಟ್ಟಿಲ್ಲ ಎಂದು ಸಚಿವರು ಹೇಳುತ್ತಿದ್ದಾರೆ; ಆದರೆ ನನಗೆ ದೊರಕಿರುವ ಆವೃತ್ತಿಯಲ್ಲಿ ಆ ಪಠ್ಯವಿಲ್ಲ); ಲಂಕೇಶ್ ಅವರ ‘ಮೃಗ ಮತ್ತು ಸುಂದರಿ’ ಮತ್ತು ‘ಜನಪದ ಒಗಟುಗಳು’. ಇವುಗಳಲ್ಲಿ, ‘ಯಾವ ಕಾರಣಕ್ಕೆ ಯುದ್ಧವಾದರೂ ಅದರಲ್ಲಿ ಸಾವು-ನೋವುಗಳಾಗುವುದು ಜನಸಾಮಾನ್ಯರಿಗೆ’ ಎಂಬ ಆಶಯದ ‘ಯುದ್ಧ’ ಎಂಬ ಪಠ್ಯ ಉತ್ತಮ ಸಣ್ಣಕಥೆ; ‘ವ್ಯಾಘ್ರಗೀತೆ’ ವೈನೋದಿಕ ಧಾಟಿಯಲ್ಲಿ ಹುಲಿಗಳಿಗೂ ಅವುಗಳದೇ ಆದ ಧರ್ಮವಿದೆ (ಹುಲಿ ಬೆನ್ನಹಿಂದೆ ಯಾರನ್ನೂ ಆಕ್ರಮಿಸುವುದಿಲ್ಲ) ಎಂಬ ಆಶಯದ ಲಲಿತ ಪ್ರಬಂಧ; ‘ಭಗತ್ ಸಿಂಗ್’ ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ ದೇಶಭಕ್ತನ ಜೀವನ ಚರಿತ್ರೆ; ‘ಮೃಗ ಮತ್ತು ಸುಂದರಿ’ ಪ್ರೀತಿ ಮೃಗತ್ವವನ್ನೂ ಬದಲಾಯಿಸುತ್ತದೆ ಎಂಬ ಆಶಯದ ಕಟ್ಟುಕಥೆ (Fable); ‘ಜನಪದ ಒಗಟುಗಳು’ ಎಂಬ ಪಠ್ಯ ಹೆಸರೇ ಹೇಳುವಂತೆ ಜಾನಪದ ಸಾಹಿತ್ಯದ ಒಂದು ಭಾಗ.

‘ಪುನರ್ ಪರಿಷ್ಕೃತ’ ಆವೃತ್ತಿಯಲ್ಲಿ ಇವುಗಳ ಸ್ಥಾನದಲ್ಲಿ ಬನ್ನಂಜೆ ಅವರ ‘ಶುಕನಾಸನ ಉಪದೇಶ’; ಹೆಡಗೇವಾರ ಅವರ ‘ನಿಜವಾದ ಆದರ್ಶ ಪುರುಷ ಯಾರಾಗಬೇಕು?’; ಶಿವಾನಂದ ಕಳವೆ ಅವರ ‘ಸ್ವದೇಶೀ ಸೂತ್ರದ ಸರಳ ಹಬ್ಬ’ ಮತ್ತು ಗೋವಿಂದ ಪೈ ಅವರ ‘ನಾನು ಪ್ರಾಸ ಬಿಟ್ಟ ಕತೆ’. ‘ಸ್ವಾಮಿ ವಿವೇಕಾನಂದರ ಚಿಂತನೆ’ ಎಂಬ ಪಠ್ಯವನ್ನು ಬದಲಿಸಿ, ‘ಉದಾತ್ತ ಚಿಂತನೆಗಳು’ ಹೆಸರಿನ ಪಠ್ಯ ಸೇರಿಸಲಾಗಿದ್ದು, ಅದರಲ್ಲಿ ವಿವೇಕಾನಂದರೊಡನೆ ಅಂಬೇಡ್ಕರ್ ಮತ್ತು ಗಾಂಧೀಜಿ ಅವರ ವಿಚಾರಗಳನ್ನೂ ಸೇರಿಸಲಾಗಿದೆ.

ಗೋವಿಂದ ಪೈ ಅವರ ಪಠ್ಯವನ್ನು ಹೊರತುಪಡಿಸಿದರೆ, ಉಳಿದ ನಾಲ್ಕೂ ಚಿಂತನಾಪ್ರಧಾನ ವೈಚಾರಿಕ ಲೇಖನಗಳು. ಪದ್ಯಭಾಗವನ್ನು ಹೊರತುಪಡಿಸಿದರೆ, ಉಳಿದ ಪಠ್ಯಗಳಲ್ಲಿ ಹೆಚ್ಚಿನವು ವೈಚಾರಿಕ ಲೇಖನಗಳು; ಪರಿಣಾಮದಲ್ಲಿ ವೈವಿಧ್ಯವಿಲ್ಲದೆ, ಏಕತಾನತೆಯಿಂದ ವಿದ್ಯಾರ್ಥಿಗಳ ಆಸಕ್ತಿ ಕುಂಠಿತವಾಗಬಹುದು.

2) ಚರ್ಚಾಸ್ಪದ ವಿಚಾರಗಳು: ಈ ಸಂಕಲನದಲ್ಲಿ (ನನಗೆ ತೋರುವಂತೆ) ಅತಿ ಹೆಚ್ಚು ಚರ್ಚೆಗೆ ಕಾರಣವಾಗುವ ಲೇಖನಗಳು ಎರಡು: ಹೆಡಗೇವಾರ್‌ ಹಾಗೂ ಶತಾವಧಾನಿ ಗಣೇಶ್ ಅವರ ಲೇಖನಗಳು. ಹೆಡಗೇವಾರ್‌ ಅವರ ‘ನಿಜವಾದ ಆದರ್ಶ ಪುರುಷ ಯಾರಾಗಬೇಕು?’ ಎಂಬ ಭಾಷಣದ ಪಠ್ಯದಲ್ಲಿ ಅವರು ಸ್ವವಿರೋಧಾತ್ಮಕ ಎರಡು ವಿಚಾರಗಳನ್ನು ಮಂಡಿಸುತ್ತಾರೆ. ಮೊದಲಿಗೆ, ‘ತತ್ವವೇ ಎಂದೆಂದೂ ನಮ್ಮ ಆದರ್ಶವಾಗಿರಬೇಕು’ ಎಂದು ಹೇಳುತ್ತಲೇ, ಅದನ್ನು ಆಚರಣೆಯಲ್ಲಿ ತರುವುದು ಕಷ್ಟಸಾಧ್ಯವಾದುದರಿಂದ, ‘ನಾವು ಯಾರನ್ನು ಸದ್ಗುಣಗಳ ಸಾಕಾರ ಸ್ವರೂಪನೆಂದೂ, ಸರ್ವಥಾ ಪ್ರಮಾದಾತೀತನೆಂದೂ ಭಾವಿಸುವೆವೋ ಆ ವ್ಯಕ್ತಿಯೇ ನಮ್ಮ ಆದರ್ಶವಾಗಬೇಕು’ ಎಂದು ತೀರ್ಮಾನಿಸುತ್ತಾರೆ. ಎಂದರೆ, ತತ್ವವನ್ನು ಎತ್ತಿ ಹಿಡಿಯುತ್ತಲೇ ವ್ಯಕ್ತಿಪೂಜೆಗೆ ಅನುವು ಮಾಡಿಕೊಡುತ್ತಾರೆ. ರಾಜ-ಮಹಾರಾಜರ ಕಾಲ ಅಳಿದು ಪ್ರಜಾಪ್ರಭುತ್ವದ ಕಾಲದಲ್ಲಿ ಇಂದು ‘ವ್ಯಕ್ತಿಪೂಜೆ’ಯನ್ನು ಒಪ್ಪಲು ಸಾಧ್ಯವೇ? ಇಷ್ಟೇ ಅಲ್ಲದೆ, ‘ಸರ್ವಥಾ ಪ್ರಮಾದಾತೀತ ವ್ಯಕ್ತಿ’ ಈ ಭೂಮಿಯ ಮೇಲೆ ಇರಲು ಸಾಧ್ಯವೇ?  (‘ಧ್ವಜ’ದ ಬಗ್ಗೆ ಹೆಡಗೇವಾರ್‌ ಅವರು ಹೇಳುವಾಗ ತಮ್ಮ ಭಾಷಣದಲ್ಲಿ ‘ಭಗವಾದ್ವಜ’ ಎಂದು, ಹಾಗೂ ‘. . . ಸಂಘಕ್ಕೆ’ ಎಂದು ನೇರವಾಗಿ ಹೇಳುತ್ತಾರೆ; ಆದರೆ ಸಂಪಾದಕ ಮಂಡಳಿ ‘ಭಗವಾ’ ಮತ್ತು ‘ಸಂಘಕ್ಕೆ’ ಪದಗಳನ್ನು ಬಿಟ್ಟಿದೆ. ಹೀಗೆ ಮೂಲಪಠ್ಯವನ್ನು ತಿರುಚಬಹುದೆ?) 

ಶತಾವಧಾನಿ ಗಣೇಶ್ ಅವರು ‘ಶ್ರೇಷ್ಠ ಭಾರತೀಯ ಚಿಂತನೆಗಳು’ ಎಂಬ ಲೇಖನದಲ್ಲಿ ‘ಪಾಶ್ಚಾತ್ಯರು ಕಟ್ಟಿಕೊಟ್ಟ ತಪ್ಪು ಕಲ್ಪನೆಗಳನ್ನೇ ನಾವು ಸತ್ಯವೆಂದು ನಂಬುವಂತಾಯಿತು’ ಎಂದು ಪ್ರಾರಂಭಿಸಿ, ನಂತರ ಅನೇಕ ಅಮೂರ್ತ ಪರಿಕಲ್ಪನೆಗಳ ‘ನಿಜವಾದ’ ಅರ್ಥವನ್ನು ಕೊಡುತ್ತಾ ಹೋಗುತ್ತಾರೆ. ಈ ಪರಿಕಲ್ಪನೆಗಳೆಂದರೆ: ಋತ, ಸತ್ಯ, ಋಣ, ಹಾಗೂ ಧರ್ಮ; ಯಜ್ಞ, ದಾನ, ತಪಸ್ಸು ಮತ್ತು ಪುರುಷಾರ್ಥ, ಸ್ವಧರ್ಮ. ಈ ಪರಿಕಲ್ಪನೆಗಳ ವ್ಯಾಖ್ಯಾನಗಳಲ್ಲಿ ಕಂಡುಬರುವ ಲೇಖಕರ ಅಗಾಧ ವಿದ್ವತ್ತನ್ನು ಮೆಚ್ಚುತ್ತಲೇ, ಇವೆಲ್ಲವೂ ‘ಬುದ್ಧಿಚಾತುರ್ಯದ ವಿನ್ಯಾಸ’ಗಳಲ್ಲವೇ ಎಂದೂ ಪ್ರಶ್ನಿಸುವಂತಾಗುತ್ತದೆ. ಉದಾಹರಣೆಗೆ, ಯಜ್ಞದಲ್ಲಿ ‘ಅಗ್ನಿಮುಖದಲ್ಲಿ ಆಹುತಿ ನೀಡುವುದು ಒಂದು ಸಂಕೇತ ಮಾತ್ರ’; ಅದರಿಂದ ‘ತ್ಯಾಗ ಮಾಡುವುದರ ಲಕ್ಷಣ ತಿಳಿಯುತ್ತದೆ’ ಎಂದು ಮಂಡಿಸುತ್ತಾರೆ. ‘ಯಜ್ಞ’ ಸಂಕೇತ ಮಾತ್ರ ಎನ್ನುವುದಾದರೆ ಅದರಲ್ಲಿ ‘ಪ್ರಾಣಿವಧೆ’ ಹೇಗೆ ಮತ್ತು ಏಕೆ ಆಗುತ್ತದೆ? ಸ್ವಧರ್ಮವೆಂದರೆ ‘ವ್ಯಕ್ತಿಯು ತನ್ನ ಸ್ವಭಾವಕ್ಕೆ ಅನುಸಾರವಾಗಿ ತನ್ನದಾದ ಬದುಕನ್ನು ರೂಪಿಸಿಕೊಳ್ಳುವುದು’ ಎಂದು ಅರ್ಥೈಸಿದರೆ, ದುಷ್ಟನೊಬ್ಬನು ತನ್ನ ದುಷ್ಟ ಸ್ವಭಾವಕ್ಕೆ ಅನುಸಾರವಾಗಿ ವರ್ತಿಸಿದಾಗ ಅದು ‘ಧರ್ಮ’ ಹೇಗಾಗುತ್ತದೆ? (ಇಲ್ಲಿ, ‘ಧರ್ಮ’ ಪದಕ್ಕೆ ಇರುವ ನಾನಾರ್ಥಗಳಲ್ಲಿ ಒಂದಾದ ‘ಮತ, ರಿಲಿಜನ್’ ಎನ್ನುವ ಅರ್ಥವನ್ನು ದೂರಮಾಡಲು  ಲೇಖಕರು ಪ್ರಯತ್ನಿಸುತ್ತಿದ್ದಾರೆಂದು ಕಾಣುತ್ತದೆ).

ಒಟ್ಟಾರೆಯಾಗಿ ನೋಡಿದಾಗ, ವೈವಿಧ್ಯವಿಲ್ಲದ, ಉಪದೇಶವೇ ಹೆಚ್ಚಾಗಿರುವ, ‘ಶಾಂತಿ-ಸಹಬಾಳ್ವೆ-ಬಹುತ್ವ’ದ ಆಶಯವನ್ನು ಎಲ್ಲಿಯೂ ಪುರಸ್ಕರಿಸದ, ಸಂಕಲನವಿದೆಂದು ಅನಿಸುತ್ತದೆ. ಸಂಪಾದಕ ಮಂಡಳಿ ತಮ್ಮ ಮಾತಿನಲ್ಲಿ ಉಪಯೋಗಿಸಿರುವ ‘ಭಾಷೆಯ ಪಠ್ಯದ ಹೆಸರಿನಲ್ಲಿ ಸಿದ್ಧಾಂತ ಪ್ರಚಾರಕ್ಕೆ ಅವಕಾಶವಾಗಬಾರದು’ ಎಂಬ ಘೋಷವಾಕ್ಯವು ಈ ಪುನರ್ ಪರಿಶೀಲನೆಗೆ ಒಳಪಟ್ಟ ಪಠ್ಯ ಪುಸ್ತಕಕ್ಕೇ ಹೆಚ್ಚು ಅನ್ವಯವಾಗುತ್ತದೆ.

ಲೇಖಕ: ವಿಮರ್ಶಕ, ಶಿಕ್ಷಣ ತಜ್ಞ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು