ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋವುಗಳ ಸಮಸ್ಯೆಗೆ ಪರಿಹಾರ ಸಿಕ್ಕಿದೆ: ಸಿಎಂ ಬೊಮ್ಮಾಯಿ

Last Updated 7 ಮೇ 2022, 16:06 IST
ಅಕ್ಷರ ಗಾತ್ರ

ಬೆಂಗಳೂರು: ವಯಸ್ಸಾದ ಗೋವುಗಳ ರಕ್ಷಣೆ ಮತ್ತು ಆರೈಕೆಯ ಸಮಸ್ಯೆಗೆ ವಿವಿಧ ಯೋಜನೆಗಳ ಮೂಲಕ ರಾಜ್ಯ ಸರ್ಕಾರ ಪರಿಹಾರ ಹುಡುಕಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಪಶು ವೈದ್ಯಕೀಯ ಸೇವಾ ಇಲಾಖೆ ವತಿಯಿಂದ ಶನಿವಾರ ಆಯೋಜಿಸಿದ್ಧ ಸಮಾರಂಭದಲ್ಲಿ ಇಲಾಖೆಯ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸೌಲಭ್ಯ ವಿತರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು.

‘ಗೋ ಹತ್ಯೆ ನಿಷೇಧ ಕಾನೂನನ್ನು ನಮ್ಮ ಸರ್ಕಾರ ಬಿಗಿಗೊಳಿಸಿದೆ. ಕಾಯ್ದೆ ತಿದ್ದುಪಡಿಗೆ ಮುಂದಾದಾಗ ಕೆಲವರು ಗೋವುಗಳ ಕುರಿತು ಕೀಳಾಗಿ ಮಾತನಾಡಿದರು. ವಯಸ್ಸಾದ ಗೋವುಗಳನ್ನು ಯಾರು ಸಾಕುತ್ತಾರೆ ಎಂದು ಪ್ರಶ್ನಿಸಿದ್ದರು. ಗೋವುಗಳನ್ನು ದತ್ತು ತೆಗೆದುಕೊಳ್ಳುವ ಪುಣ್ಯಕೋಟಿ ಯೋಜನೆ, ಸರ್ಕಾರಿ ಪ್ರಾಯೋಜಿತ ಗೋಶಾಲೆಗಳ ಸ್ಥಾಪನೆಯಿಂದ ಈ ಸಮಸ್ಯೆಗೆ ಪರಿಹಾರ ಸಿಕ್ಕಿದೆ’ ಎಂದರು.

‘ಭಾರತೀಯ ಸಂಸ್ಕೃತಿ ಜೀವ ಉಳಿಸುವುದರ ಪರವಾಗಿದೆ. ಹತ್ಯೆ ಮಾಡುವುದರ ಪರವಾಗಿ ಇಲ್ಲ. 75 ವರ್ಷಗಳ ಕಾಲ ನೀವು ಸಮಸ್ಯೆಗಳನ್ನೇ ಸೃಷ್ಟಿಸಿದ್ದೀರಿ. ಇನ್ನೂ ಅದನ್ನೇ ಮಾಡಬೇಡಿ. ಸಮಸ್ಯೆಗಳನ್ನು ಹೇಗೆ ಪರಿಹರಿಸಬೇಕು ಎಂಬುದನ್ನು ನಾವು ತೋರಿಸುತ್ತೇವೆ’ ಎಂದು ಗೋಹತ್ಯೆ ನಿಷೇಧ ಕಾಯ್ದೆ ವಿರೋಧಿಸುವವರ ವಿರುದ್ಧ ಮುಖ್ಯಮಂತ್ರಿ ವಾಗ್ದಾಳಿ ನಡೆಸಿದರು.

ತಳಿ ಸಂವರ್ಧನೆಗೆ ನೆರವು:

ಕೇಂದ್ರ ಪಶುಸಂಗೋಪನಾ ಸಚಿವ ಪುರುಷೋತ್ತಮ್ ರೂಪಾಲಾ ಮಾತನಾಡಿ, ‘ಜಾನುವಾರು ಅಭಿವೃದ್ಧಿ ಮತ್ತು ಸಂರಕ್ಷಣೆ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಚಿಂತನೆಗಳನ್ನು ಅನುಷ್ಠಾನಕ್ಕೆ ತರುವಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ಕರ್ನಾಟಕದಲ್ಲಿ ಜಾನುವಾರುಗಳ ಕೃತಕ ವೀರ್ಯಾಣು ಸಂಗ್ರಹ ಕೇಂದ್ರವನ್ನು ಮೇಲ್ದರ್ಜೆಗೇರಿಸಲು ಶೀಘ್ರವಾಗಿ ಒಪ್ಪಿಗೆ ನೀಡಲಾಗುವುದು’ ಎಂದು ಭರವಸೆ ನೀಡಿದರು.

ವಿಮೆ ಹೆಚ್ಚಳಕ್ಕೆ ಬೇಡಿಕೆ:

ಪ್ರಾಸ್ತಾವಿಕವಾಗಿ ಮಾತನಾಡಿದ ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್, ‘ಜಾನುವಾರುಗಳ ರಕ್ಷಣೆ, ಆರೈಕೆ ಮತ್ತು ಸಾಕಣೆಗೆ ನೆರವು ನೀಡುವ ವಿಚಾರದಲ್ಲಿ ರಾಜ್ಯ ಸರ್ಕಾರ ಸಾಕಷ್ಟು ಕ್ರಮಗಳನ್ನು ಕೈಗೊಂಡಿದೆ.ಇಲ್ಲಿನ ರೈತರಿಗೆ ಅನುಕೂಲವಾಗುವಂತೆ ಜಾನುವಾರುಗಳ ಜೀವವಿಮೆ ಸೌಲಭ್ಯವನ್ನು ಹೆಚ್ಚಳ ಮಾಡಬೇಕು ಎಂದು ಒತ್ತಾಯಿಸಿದರು.

ಸಹಕಾರ ಸಚಿವ ಎಸ್‌.ಟಿ. ಸೋಮಶೇಖರ್‌, ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಶರಣು ಬಿ. ತಳ್ಳಿಕೇರಿ, ಕರ್ನಾಟಕ ಸಹಕಾರ ಕುಕ್ಕುಟ ಮಹಾಮಂಡಳದ ಅಧ್ಯಕ್ಷ ಡಿ.ಕೆ. ಕಾಂತರಾಜ, ಪಶುಸಂಗೋಪನಾ ಇಲಾಖೆ ಕಾರ್ಯದರ್ಶಿ ಸಲ್ಮಾ ಕೆ. ಫಾಹಿಂ, ಆಯುಕ್ತ ಡಾ.ಎಚ್‌. ಬಸವರಾಜೇಂದ್ರ, ನಿರ್ದೇಶಕ ಡಾ. ಮಂಜುನಾಥ್‌ ಎಸ್‌. ಪಾಳೇಗಾರ್‌ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT