ಗುರುವಾರ , ಆಗಸ್ಟ್ 11, 2022
23 °C
ಒಂದೇ ದಿನದಲ್ಲಿ ಸಾರಿಗೆ ನೌಕರರ ನಾಯಕರಾದ ಕೋಡಿಹಳ್ಳಿ

ನಲುಗಿದ್ದ ನೌಕರರ ಭುಗಿಲೆದ್ದ ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮೇಲಾಧಿಕಾರಿಗಳಿಂದ ಅನುಭವಿಸಿದ ಕಿರುಕುಳ, ಪದೇ ಪದೇ ನೀಡುವ ನೋಟಿಸ್, ವೇತನ ಕಡಿತ, ಅಮಾನತಿನ ಭಯದಲ್ಲಿ ನಲುಗಿದ್ದ ಸಾರಿಗೆ ನೌಕರರ ಆಕ್ರೋಶ ಈಗ ಒಮ್ಮೆಲೆ ಸಿಡಿದೆದ್ದಿದೆ. ಸರ್ಕಾರಿ ನೌಕರರಾಗಲೇಬೇಕು ಎಂಬ ಗಟ್ಟಧ್ವನಿಯಲ್ಲಿ ಹೋರಾಟ ಮುಂದುವರಿಸಿದ್ದಾರೆ.

ಪೊಲೀಸ್ ಇಲಾಖೆಯಂತೆ ಸಾರಿಗೆ ಸಂಸ್ಥೆಗಳ ಸೇವೆ ಕೂಡ ಅಗತ್ಯ ಸೇವೆ ಎಂದು ಪರಿಗಣಿಸುವ ಸರ್ಕಾರ, ಪೊಲೀಸರಂತೆಯೇ ನಾವೇಕೆ ಸರ್ಕಾರಿ ನೌಕರರಾಗಬಾರದು ಎಂಬುದು ನೌಕರರ ಬೇಡಿಕೆ. ಈ ಬೇಡಿಕೆ ಮುಂದಿಟ್ಟು ಕಾಲ್ನಡಿಗೆ ಜಾಥಾ ನಡೆಸಿ ನೌಕರರು ಸುಳಿವು ನೀಡಿದ್ದರು. ಮಾತುಕತೆ ನಡೆಸದೆ ನಿರ್ಲಕ್ಷ್ಯ ತಾಳಿದ್ದು ಮತ್ತು ಮುಷ್ಕರನಿರತ ನೌಕರರನ್ನು ಬಂಧಿಸಿದ್ದು ನೌಕರರಲ್ಲಿ ಹೋರಾಟದ ಕಿಚ್ಚು ಹೆಚ್ಚುವಂತೆ ಮಾಡಿದೆ.

ನೌಕರರ ಮುಷ್ಕರದ ದಿನವೇ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಕೂಡ ಭೂಸುಧಾರಣಾ ತಿದ್ದುಪಡಿ ಕಾಯ್ದೆ ವಿರೋಧಿಸಿ ಹೋರಾಟ ನಡೆಸುತ್ತಿದ್ದರು. ಅವರೊಂದಿಗೂ ನೌಕರರ ಮಾತುಕತೆ ನಡೆಸಿ ನೌಕರರ ಮುಷ್ಕರಕ್ಕೆ ಬೆಂಬಲ ಕೋರಿದರು. ಅಂದಿನಿಂದಲೇ ಕೋಡಿಹಳ್ಳಿ ಚಂದ್ರಶೇಖರ್  ಸಾರಿಗೆ ನೌಕರರ ನಾಯಕರಾದರು. ನೌಕರರ ಕೂಟದ ಗೌರವಾಧ್ಯಕ್ಷರಾಗಿ ಶನಿವಾರ ಅಧಿಕೃತವಾಗಿ ಆಯ್ಕೆಗೊಂಡಿದ್ದಾರೆ.

ಈ ಬೆಳವಣಿಗೆ 40 ವರ್ಷಗಳಿಂದ ಸಾರಿಗೆ ನೌಕರರ ನಾಯಕತ್ವ ವಹಿಸಿದ್ದ ಎಚ್.ವಿ. ಅನಂತ ಸುಬ್ಬರಾವ್ ನೇತೃತ್ವದ ಕಾರ್ಮಿಕ ಸಂಘಟನೆಗಳಿಗೆ ಹಿನ್ನೆಡೆಯುಂಟು ಮಾಡಿದೆ.

‘ಈ ದಿಢೀರ್ ಬೆಳವಣಿಗೆ ಸುನಾಮಿ ಇದ್ದಂತೆ. ಪೂರ್ವ ತಯಾರಿ ಇಲ್ಲದ ಹೋರಾಟಕ್ಕೆ ಬೆನ್ನುರಿ ಇರುವುದಿಲ್ಲ. ಬೆನ್ನುರಿ ಇಲ್ಲದ ಹೋರಾಟ ಹೆಚ್ಚುದಿನ ಉಳಿಯುವುದಿಲ್ಲ. ನಮ್ಮ ಯೂನಿಯನ್‌ನಲ್ಲಿ ಇಲ್ಲದ ಮತ್ತು ನಮ್ಮ ಹೋರಾಟಗಳ ಬಗ್ಗೆ ತಿಳಿಯದವರು ನನ್ನ ಭಾವಚಿತ್ರಗಳಿಗೆ ಬೆಂಕಿ ಹಚ್ಚುತ್ತಿದ್ದಾರೆ’ ಎಂದು ಅನಂತ ಸುಬ್ಬರಾವ್ ಹೇಳಿದರು.

‘60 ವರ್ಷಗಳ ಹೋರಾಟದ ಜೀವನದಲ್ಲಿ ಕಪ್ಪುಚುಕ್ಕಿ ಇಲ್ಲದೆ ನಡೆದುಕೊಂಡಿದ್ದೇನೆ. ಕೋಡಿಹಳ್ಳಿ ಚಂದ್ರಶೇಖರ್ ಅವರಿಗೆ ಕಾರ್ಮಿಕ ಸಮಸ್ಯೆಗಳ ಬಗ್ಗೆ ಅರಿವಿದೆಯೇ?, ದಿಢೀರ್ ಎದ್ದಿರುವ ಹೋರಾಟ ಸುನಾಮಿ ಇದ್ದಂತೆ, ಇದು ಹೆಚ್ಚು ಕಾಲ ಉಳಿಯದು’ ಎಂದು ಪ್ರತಿಕ್ರಿಯಿಸಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ನೌಕರರ ಕೂಟದ ಅಧ್ಯಕ್ಷ ಚಂದ್ರು, ‘ಕೋಡಿಹಳ್ಳಿ ಚಂದ್ರಶೇಖರ್ ಅವರನ್ನು ನಾವು ಭೇಟಿ ಮಾಡಿ ಸಮಸ್ಯೆ ಹೇಳಿಕೊಂಡೆವು. ನೌಕರರು ಕೂಡ ರೈತರ ಮಕ್ಕಳೇ ಆಗಿರುವ ಕಾರಣ ನಮ್ಮ ಹೋರಾಟಕ್ಕೆ ಬೆಂಬಲ ನೀಡಲು ಒಪ್ಪಿದರು. ಅವರನ್ನು ಗೌರವಾಧ್ಯಕ್ಷರನ್ನಾಗಿ ಆಯ್ಕೆ ಮಾಡಿಕೊಂಡಿದ್ದೇವೆ. ಮಂದಿನ ನಮ್ಮೆಲ್ಲ ಎಲ್ಲಾ ಹೋರಾಟಗಳಿಗೆ ಅವರು ಮುಂದಾಳತ್ವ ವಹಿಸಲಿದ್ದಾರೆ’  ಎಂದು ಹೇಳಿದರು.

ಮುಷ್ಕರಕ್ಕೆ ಕೋಡಿಹಳ್ಳಿ ಪ್ರಚೋದನೆ– ಬಿಎಸ್‌ವೈ

ಬೆಂಗಳೂರು: 'ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್‌ ದುರುದ್ದೇಶದಿಂದ ಕೆಲವು ಸಾರಿಗೆ ನೌಕರರನ್ನು ಎತ್ತಿಕಟ್ಟಿ ಮುಷ್ಕರ ನಡೆಸಲು ಪ್ರಚೋದಿಸುತ್ತಿದ್ದಾರೆ’ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ನೇರವಾಗಿ ಆರೋಪಿಸಿದ್ದಾರೆ.

ಮಾಧ್ಯಮ ಪ್ರಕಟಣೆ ನೀಡಿರುವ ಯಡಿಯೂರಪ್ಪ, ‘ರಾಜ್ಯ ವಿವಿಧೆಡೆ ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಬಸ್‌ಗಳ ಮೇಲೆ ಕಲ್ಲು ತೂರಾಟ ನಡೆಸುವಂತೆ ಪ್ರಚೋದಿಸಿ, ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ನಷ್ಟ ಉಂಟು ಮಾಡಲು ಕೋಡಿಹಳ್ಳಿ ಕಾರಣಕರ್ತರಾಗಿದ್ದಾರೆ’ ಎಂದೂ ದೂರಿದ್ದಾರೆ.

‘ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರೂ ಆಗಿರುವ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ  ಬಗ್ಗೆ ಕೋಡಿಹಳ್ಳಿ ಚಂದ್ರಶೇಖರ್‌ ಅತ್ಯಂತ ಲಘುವಾಗಿ ಮಾತನಾಡಿರುವುದು ಕೂಡಾ ಖಂಡನೀಯ’ ಎಂದೂ ಯಡಿಯೂರಪ್ಪ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು