ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವಶಕ್ತಿಯ ಕೌಶಲ ಅಭಿವೃದ್ಧಿಯಿಂದ ‘ಕೌಶಲ್ಯ ಕರ್ನಾಟಕ’ ಸಾಧ್ಯ: ಬಿಎಸ್‌ವೈ

Last Updated 15 ಜುಲೈ 2021, 7:54 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಜ್ಯ ಯುವಶಕ್ತಿಯ ಕೌಶಲ ಅಭಿವೃದ್ಧಿಯಿಂದ ‘ಕೌಶಲ ಕರ್ನಾಟಕ’ ನಿರ್ಮಾಣ ಸಾಧ್ಯ’ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅಭಿಪ್ರಾಯಪಟ್ಟರು.

ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ವತಿಯಿಂದ ಗುರುವಾರ ಆಯೋಜಿಸಿದ್ದ ‘ವಿಶ್ವ ಯುವ ಕೌಶಲ’ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿನ ಅವರು, ‘ದೇಶವೊಂದರ ಅಭಿವೃದ್ಧಿ ಯುವ ಜನರ ಕೌಶಲದ ಮಟ್ಟವನ್ನು ಆಧರಿಸಿದೆ’ ಎಂದರು.

‘ರಾಜ್ಯ ಸರ್ಕಾರವು ಯುವಕರ ಕೌಶಲ ಹೆಚ್ಚಿಸುವ ಉದ್ದೇಶದಿಂದ ಎರಡು ವರ್ಷಗಳಲ್ಲಿ ಹಲವು ಪ್ರಮುಖ ಯೋಜನೆಗಳನ್ನು ಹಮ್ಮಿಕೊಂಡಿದೆ. ರಾಜ್ಯದ 150 ಸರ್ಕಾರಿ ಐಟಿಐಗಳನ್ನು ಉನ್ನತೀಕರಿಸಿ ಇಂಡಸ್ಟ್ರಿಯಲ್‌ ಆಟೋಮೇಷನ್‌, ರೋಬೋಟಿಕ್ಸ್‌, ಇಂಡಸ್ಟ್ರೀ 4.0ನಂಥ ಅತ್ಯಾಧುನಿಕ ಲ್ಯಾಬ್‍ಗಳನ್ನು ಸ್ಥಾಪಿಸಲು ₹ 4,636.50 ಕೋಟಿಯ ಒಡಂಬಡಿಕೆಗೆ ಸಹಿ ಹಾಕಲಾಗಿದೆ. ಉನ್ನತೀಕರಣದ ಕೆಲಸಗಳನ್ನು ಶೀಘ್ರವಾಗಿ ಪೂರ್ಣಗೊಳಿಸಿ, ಇದೇ ಸೆಪ್ಟೆಂಬರ್‌ನಲ್ಲಿ ಉದ್ಘಾಟಿಸಲಾಗುವುದು’ ಎಂದು ಅವರು ತಿಳಿಸಿದರು.

‘ಕೋವಿಡ್ ಸಾಂಕ್ರಾಮಿಕದ ಕಾರಣ ಇತರ ರಾಜ್ಯಗಳಿಂದ ಮರಳಿದ ವಲಸೆ ಕಾರ್ಮಿಕರ ತರಬೇತಿ ಮತ್ತು ಕೆಲಸ ದೊರಕಿಸಲು ಸರ್ಕಾರ ಕೌಶಲ್‍ಕರ್-ಡಾಟ್-ಕಾo ವೆಬ್ ಪೋರ್ಟಲ್‍ ಅಭಿವೃದ್ಧಿಪಡಿಸಿದೆ. ಕೈಗಾರಿಕೆಗಳಲ್ಲಿರುವ ಉದ್ಯೋಗ ಅವಕಾಶಗಳಿಗೆ ಅನುಸಾರವಾಗಿ ಕುಶಲ ಯುವಕರಿಗೆ ಉದ್ಯೋಗ ಒದಗಿಸಲು ಸ್ಕಿಲ್‌ ಕನೆಕ್ಟ್‌ ವೆಬ್‌ ಪೋರ್ಟಲ್‍ ಮೂಲಕ ವರ್ಚುಯಲ್ ಉದ್ಯೋಗ ಮೇಳ ನಡೆಸಲಾಗುತ್ತಿದೆ. ವಿದೇಶದಲ್ಲಿರುವ ನುರಿತ ಮಾನವ ಸಂಪನ್ಮೂಲದ ಬೇಡಿಕೆಯನ್ನು ಪೂರೈಸಿ ರಾಜ್ಯದ ಯುವಕರು ವಿದೇಶಗಳಲ್ಲಿ ಉದ್ಯೋಗ ಪಡೆದುಕೊಳ್ಳಲು ನೆರವಾಗಲು ‘ಅಂತರರಾಷ್ಟ್ರೀಯ ವಲಸೆ ಕೇಂದ್ರ’ ಸ್ಥಾಪಿಸಲಾಗಿದೆ’ ಎಂದರು.

‘ಬ್ರಿಟನ್‌ ರಾಷ್ಟ್ರೀಯ ಆರೋಗ್ಯ ಸೇವೆಯ ಜೊತೆ ಒಡಂಬಡಿಕೆ ಮಾಡಿಕೊಂಡು ಕರ್ನಾಟಕದಿಂದ ವೈದ್ಯಕೀಯ ಸಿಬ್ಬಂದಿಯನ್ನು ಕಳುಹಿಸುವ ಕಾರ್ಯಪ್ರಗತಿಯಲ್ಲಿದೆ. ಸರ್ಕಾರಿ ಸಂಸ್ಥೆಗಳ ಮೂಲಕ ಉನ್ನತ ಮಟ್ಟದ ತಾಂತ್ರಿಕ ಕೌಶಲ ನೀಡಿ ರಾಜ್ಯದ ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳಿಗೆ ಕೌಶಲಯುಕ್ತ ಮಾನವ ಸಂಪನ್ಮೂಲ ಒದಗಿಸಲು ಯುವಕರಿಗೆ ತಾಂತ್ರಿಕ ಕೌಶಲ ತರಬೇತಿಗಾಗಿ ಪ್ರಸಕ್ತ ಸಾಲಿನಲ್ಲಿ ನಾಲ್ಕು ಹೊಸ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ (ಜಿಟಿಟಿಸಿ) ಡಿಪ್ಲೊಮಾ ಕಾಲೇಜು ಆರಂಭಿಸಲಾಗುವುದು’ ಎಂದು ಮುಖ್ಯಮಂತ್ರಿ ವಿವರಿಸಿದರು.

‘ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದಡಿ ರಾಜ್ಯದಲ್ಲಿ ಮಹಿಳಾ ಸ್ವ-ಸಹಾಯ ಗುಂಪುಗಳಿಗೆ ಗ್ರಾಮಮಟ್ಟದ ಒಕ್ಕೂಟದ ಮುಖಾಂತರ ಸಮುದಾಯ ಹೂಡಿಕೆ ನಿಧಿಯಾಗಿ ₹ 400 ಕೋಟಿ ಬಿಡುಗಡೆ ಮಾಡಲು ಉದ್ದೇಶಿಸಲಾಗಿದೆ. 2021-22ನೇ ಸಾಲಿನಲ್ಲಿ ಈಗಾಗಲೇ 17,121 ಸ್ವ-ಸಹಾಯ ಗುಂಪುಗಳಿಗೆ ₹ 149.03 ಕೋಟಿ ಬಿಡುಗಡೆ ಮಾಡಲಾಗಿದೆ’ ಎಂದರು.

‘ಕಳೆದ ಸಾಲಿನಲ್ಲಿ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನದ ಅಡಿಯಲ್ಲಿ 1.10 ಲಕ್ಷ ಬೀದಿ-ಬದಿ ವ್ಯಾಪಾರಿಗಳಿಗೆ ಪ್ರಧಾನ ಮಂತ್ರಿಗಳ ‘ಸ್ವ-ನಿಧಿ’ ಯೋಜನೆಯಡಿಯಲ್ಲಿ ತಲಾ ₹ 10 ಸಾವಿರ ಹೂಡಿಕೆ ಬಂಡವಾಳವನ್ನು ಸಾಲದ ರೂಪದಲ್ಲಿ ವಿತರಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ ತಲಾ ₹ 20 ಸಾವಿರ ಹೆಚ್ಚುವರಿ ಹೂಡಿಕೆ ಬಂಡವಾಳವನ್ನು ಸಾಲದ ರೂಪದಲ್ಲಿ ವಿತರಿಸಲು ಉದ್ದೇಶಿಸಲಾಗಿದೆ’ ಎಂದೂ ತಿಳಿಸಿದರು.

‘ಕಳೆದ ಎರಡು ವರ್ಷಗಳಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸಕ್ರಿಯ ಮುಂದಾಳತ್ವದಲ್ಲಿ ರಾಜ್ಯದ ಯುವಕರಿಗೆ ಕೌಶಲಾಭಿವೃದ್ಧಿ ಮತ್ತು ಜೀವನೋಪಾಯವನ್ನು ಖಚಿತಪಡಿಸುವ ನಿಟ್ಟಿನಲ್ಲಿ ಮಹತ್ತರ ಹೆಜ್ಜೆಗಳನ್ನು ಸರ್ಕಾರ ಇಟ್ಟಿದೆ. ‘ಸ್ಕಿಲ್ ಇಂಡಿಯಾ ಮಿಷನ್’ ಹಾಗೂ ‘ಆತ್ಮನಿರ್ಭರ್ ಭಾರತ ಯೋಜನೆ’ಗಳು ಯುವಜನರ ಕೌಶಲ ಹೆಚ್ಚಿಸುವ ನಿಟ್ಟಿನಲ್ಲಿ ಗಮನಾರ್ಹ ಸಾಧನೆ ಮಾಡಲಿದೆ’ ಎಂದೂ ಮುಖ್ಯಮಂತ್ರಿ ಆಶಯ ವ್ಯಕ್ತಪಡಿಸಿದರು.

‘ಮಿಷನ್‌ ಯುವ ಸಮೃದ್ಧಿʼ: ‘ರಾಜ್ಯದಲ್ಲಿ ಕೌಶಲ್ಯತೆಗೆ ಅಗ್ರಮಾನ್ಯತೆ ನೀಡಿ ಕೌಶಲ ಮತ್ತು ಉದ್ಯಮಶೀಲತೆ ವಲಯದಲ್ಲಿ ಒಂದು ಕೋಟಿ ಆರ್ಥಿಕ ಅವಕಾಶಗಳನ್ನು ಸೃಷ್ಟಿ ಮಾಡಲಾಗುವುದು’ ಎಂದು ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ ಅಶ್ವತ್ಥನಾರಾಯಣ ತಿಳಿಸಿದರು.

‘ಇಡೀ ದೇಶದಲ್ಲಿಯೇ ಇದೊಂದು ಕ್ರಾಂತಿಕಾರಕ ಉಪಕ್ರಮವಾಗಿದ್ದು, ಈಗಾಗಲೇ ಇಲಾಖೆಯ ಕಾರ್ಯದರ್ಶಿ ಸೆಲ್ವಕುಮಾರ್‌ ಅವರ ನೇತೃತ್ವದಲ್ಲಿ ಕಾರ್ಯಪಡೆ ರಚನೆ ಮಾಡಲಾಗಿದೆ. ಕಾರ್ಯಪಡೆ ಈ ಬಗ್ಗೆ ಶೀಘ್ರದಲ್ಲಿ ವರದಿ ನೀಡಲಿದೆ’ ಎಂದರು.

‘ಕೋವಿಡ್‌ ಕಾರಣದಿಂದ ರಾಜ್ಯದ ಆರ್ಥಿಕ ಅವಕಾಶ, ಉದ್ಯೋಗ ಸೇರಿದಂತೆ ಹಲವು ರೀತಿಯ ಜೀವನೋಪಾಯ ಸರಪಳಿಗಳ ಮೇಲೆ ಮಾರಕ ಪರಿಣಾಮ ಬೀರಿದೆ. ಇದಕ್ಕೆ ಚೇತರಿಕೆ ನೀಡಲು ‘ಮಿಷನ್‌ ಯುವ ಸಮೃದ್ಧಿ’ ಹೆಸರಿನಲ್ಲಿ ಆರ್ಥಿಕ ಅವಕಾಶ ಸೃಷ್ಟಿ ಯೋಜನೆ ಕೈಗೆತ್ತಿಕೊಳ್ಳಲಾಗುತ್ತಿದ್ದು, ಎಂಟು ಜಿಲ್ಲೆಗಳಲ್ಲಿ ಪೈಲಟ್‌ ಪ್ರಾಜೆಕ್ಟ್‌ ಆಗಿ ಜಾರಿ ಮಾಡಲು ನಿಶ್ಚಿಯಿಸಲಾಗಿದೆ’ ಎಂದೂ ಹೇಳಿದರು.

‘ಜುಲೈ-ಅಗಸ್ಟ್‌ ತಿಂಗಳಿನಲ್ಲಿ ʼಕೌಶಲ ಮಾಸʼ ಆಚರಿಸಲಾಗುತ್ತಿದೆ. ಆಗಸ್ಟ್‌ 21ರಂದು ‘ವಿಶ್ವ ಉದ್ಯಮಶೀಲತಾ ದಿನʼ ಆಚರಣೆ ಮಾಡಲಾಗುತ್ತಿದ್ದು, ಅಲ್ಲಿಯವರೆಗೂ ಕೌಶಲ ಮಾಸ ಆಚರಿಸಲಾಗುವುದು ಎಂದರು.

ಎಂಟು ಒಪ್ಪಂದಗಳಿಗೆ ಅಂಕಿತ ‘ರಾಜ್ಯವ್ಯಾಪಿ ಯುವಜನರಲ್ಲಿ ಅತ್ಯುತ್ತಮ ದರ್ಜೆಯ ಕುಶಲತೆಯನ್ನು ಹೆಚ್ಚಿಸಿ ಉದ್ಯೋಗಾವಕಾಶ ಸೃಷ್ಟಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಹಾಗೂ ಖಾಸಗಿ ಕ್ಷೇತ್ರದ ನಡುವೆ ಎಂಟು ಒಪ್ಪಂದಗಳಿಗೆ ಕಾರ್ಯಕ್ರಮದಲ್ಲಿ ಸಹಿ ಹಾಕಲಾಯಿತು. ಬೆಂಗಳೂರು, ರಾಮನಗರ, ತುಮಕೂರು ಜಿಲ್ಲೆಗಳಲ್ಲಿ ಆಟೋಮ್ಯಾಟೀವ್‌ ಕ್ಷೇತ್ರಕ್ಕೆ ಸಂಬಂಧಿಸಿದ ತರಬೇತಿ ಕೋರ್ಸುಗಳನ್ನು ಆಯ್ದ ಐಟಿಐಗಳಲ್ಲಿ ಆರಂಭಿಸಲು ಟೊಯೊಟಾ ಮೋಟಾರ್ಸ್ ಜತೆ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಕೌಶಲ್ಯ ಕರ್ನಾಟಕ ಯೋಜನೆಯಲ್ಲಿ ಯುವಕರಿಗೆ ತರಬೇತಿ ನೀಡಲು ವಿಪ್ರೋ, ಜಿಇ, ನಾರಾಯಣ ಹೃದಯಾಲಯ, ಸೆನ್‌ಸೆರಾ ಟೆಕ್ನಾಲಜೀಸ್‌, ಎಲಿಸಿಯಾ, ಇಎಸ್‌ಡಿಎಂ, ಕ್ಲಸ್ಟರ್‌, ಆದಿತ್ಯ ಬಿರ್ಲಾ ಗ್ರೂಪ್‌, ಹೋಮ್‌ ಲೇನ್‌ ಜತೆ ಒಪ್ಪಂದಕ್ಕೆ ಅಂಕಿತ ಹಾಕಲಾಯಿತು.

ಯುವಜನರಿಗೆ ಮಾಸ್ಟರ್‌ ಕ್ಯಾಮ್‌ ಡಿಸೈನ್‌ ಸಾಫ್ಟ್‌ವೇರ್‌ನಲ್ಲಿ ತರಬೇತಿ ನೀಡಲು ಕರ್ನಾಟಕ ಜರ್ಮನ್‌ ಬಹು ಕೌಶಲ್ಯ ಅಭಿವೃದ್ಧಿ ಕೇಂದ್ರ ಹಾಗೂ ಆಟೋ ಡೆಸ್ಕ್‌ ಕಂಪನಿ ಜತೆ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಚಿತ್ರದುರ್ಗ, ಚಳ್ಳಕೆರೆ, ಕೊಪ್ಪಳ, ಯಾದಗಿರಿಯಲ್ಲಿ ನೂತನ ನಿರ್ಮಿಸಲಾಗಿರುವ ಜಿಟಿಡಿಸಿ ಕೇಂದ್ರಗಳಲ್ಲಿ ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಡಿಪ್ಲೊಮೊ ಕೋರ್ಸುಗಳನ್ನು ಆರಂಭಿಸಲು ಎಐಸಿಟಿಇಯಿಂದ ಅನುಮೋದನೆ ಪಡೆಯಲಾಯಿತು.

ನಾರಾಯಣ ಹೃದಯಾಲಯದ ಡಾ. ದೇವಿಪ್ರಸಾದ್‌ ಶೆಟ್ಟಿ, ಟೊಯೊಟಾ ಕಿರ್ಲೋಸ್ಕರ್‌ ಹಿರಿಯ ಉಪಾಧ್ಯಕ್ಷ ಸುದೀಪ್‌ ದಲ್ವಿ ಸೇರಿದಂತೆ ವಿವಿಧ ಖಾಸಗಿ ಕಂಪನಿಗಳ ಮುಖ್ಯಸ್ಥರು ಇದ್ದರು. ಕೌಶಲಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಸೆಲ್ವಕುಮಾರ್‌, ಜೀವನೋಪಾಯ ಇಲಾಖೆಯ ನಿರ್ದೇಶಕಿ ಮಂಜುಶ್ರೀ, ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ ನಿರ್ದೇಶಕಹರೀಶ್‌ ಕುಮಾರ್‌, ಜಿಟಿಡಿಸಿ ವ್ಯವಸ್ಥಾಪಕ ನಿರ್ದೇಶಕ ಎಚ್.‌ರಾಘವೇಂದ್ರ, ಕೆಎಸ್‌ಡಿಸಿ ವ್ಯವಸ್ಥಾಪಕ ನಿರ್ದೇಶಕ ಅಶ್ವಿನ್‌ ಗೌಡ, ಸಿಡಾಕ್‌ ನಿರ್ದೇಶಕ ಡಾ.ವೀರಣ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT