ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಲಮಟ್ಟಿ ಎಂಟ್ರನ್ಸ್ ಪ್ಲಾಜಾಗೆ ಥ್ರೀಡಿ ಪ್ರೊಜೆಕ್ಷನ್ ಮ್ಯಾಪಿಂಗ್

ಥ್ರೀಡಿ ಪ್ರೊಜೆಕ್ಷನ್ ಮ್ಯಾಪಿಂಗ್ ಪಡೆದ ರಾಜ್ಯದ ಪ್ರಥಮ ತಾಣ
Last Updated 14 ಆಗಸ್ಟ್ 2021, 12:51 IST
ಅಕ್ಷರ ಗಾತ್ರ

ಆಲಮಟ್ಟಿ(ವಿಜಯಪುರ): ಹಲವು ಉದ್ಯಾನಗಳ ತಾಣ ಆಲಮಟ್ಟಿಯ 77 ಎಕರೆ ಉದ್ಯಾನದ ಎಂಟ್ರನ್ಸ್ ಪ್ಲಾಜಾ (ಪ್ರವೇಶ ದ್ವಾರ)ದ ಒಳಭಾಗದ ಕಲಾಕೃತಿಗೆ ಥ್ರೀಡಿ ಪ್ರೊಜೆಕ್ಷನ್ ಮ್ಯಾಪಿಂಗ್ ಬೆಳಕಿನ ವ್ಯವಸ್ಥೆ ಅಳವಡಿಸಲಾಗಿದೆ.

ದೊಡ್ಡ ಪ್ರಮಾಣದಲ್ಲಿ ಥ್ರೀಡಿ ಬೆಳಕಿನ ವ್ಯವಸ್ಥೆ ಅಳವಡಿಸಿದ್ದು, ಭಾರತದಲ್ಲಿಯೇ ಮೂರನೇಯ, ಕರ್ನಾಟಕದ ಮೊಟ್ಟ ಮೊದಲ ಕಟ್ಟಡ ಆಲಮಟ್ಟಿಯ ಎಂಟ್ರನ್ಸ್ ಪ್ಲಾಜಾ ಆಗಿದೆ.

ಥ್ರೀಡಿ ಪ್ರೊಜೆಕ್ಷನ್ ಮ್ಯಾಪಿಂಗ್ ಬೆಳಕಿನ ವ್ಯವಸ್ಥೆ ಹೊಂದಿದ ಮೊದಲ ಕಲಾಕೃತಿ ದಕ್ಷಿಣ ಭಾರತದ ಕೊಯ್ಮತ್ತೂರಿನ ಇಶಾ ಫೌಂಡೇಷನ್‌ನ ಶಿವಮೂರ್ತಿ, ಎರಡನೇಯದ್ದು ಗುಜರಾತ್‌ನ ಸರ್ದಾರ್ ವಲ್ಲಭಬಾಯಿ ಪಟೇಲ್‌ (ಸ್ಟ್ಯಾಚು ಆಫ್ ಯುನಿಟಿ) ಮೂರ್ತಿ, ಮೂರನೇಯದ್ದು ಆಲಮಟ್ಟಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

60 ಮೀಟರ್ ಅಗಲ ಹಾಗೂ 16 ಮೀಟರ್ ಎತ್ತರದವರೆಗೆ ಥ್ರೀಡಿ ಪ್ರೊಜೆಕ್ಷನ್ ಮ್ಯಾಪಿಂಗ್ ಮಾಡಲಾಗಿದ್ದು, ಅಲ್ಲಿಯವರೆಗೂ ನೈಜತೆಯ ಚಿತ್ರಣದ ವರ್ಣಮಯ ಬೆಳಕು ಮೂಡುತ್ತದೆ.

ಏನಿದು ಥ್ರೀಡಿ ಪ್ರೊಜೆಕ್ಷನ್ ಮ್ಯಾಪಿಂಗ್?: ಕಂಪ್ಯೂಟರ್ ರಚಿತ ಥ್ರೀಡಿ ಪರಿಸರದಲ್ಲಿ ಬೆಳಕನ್ನು ನಿರ್ದಿಷ್ಟವಾಗಿ ವಿಭಿನ್ನ ಬೆಳಕಿನ ಮೂಲಗಳನ್ನು ಹೊಂದಿಸುವ ಮೂಲಕ ಚಿತ್ರಗಳನ್ನು ಮೂರು ಆಯಾಮದಲ್ಲಿ ಸೃಷ್ಠಿಸಿ, ಅದನ್ನು ಎಂಟ್ರನ್ಸ್ ಪ್ಲಾಜಾದ ಕಟ್ಟಡದ ಮೇಲೆ ಬೀಳುವಂತೆ ಮಾಡಲಾಗಿದೆ.

ಇದರಿಂದ ನೈಜ ದೃಶ್ಯಾವಳಿಗಳು ತೆರೆಯ ಮೇಲೆ ಕಾಣುತ್ತವೆ. ನಿರಂತರ ಚಲನೆಯ ಸ್ಥಿತಿಯಲ್ಲಿ ಇದ್ದಂತೆ ಭಾಸವಾಗುತ್ತದೆ.

ಥ್ರೀಡಿ ಪರಿಸರದ ಬೆಳಕಿನ ಮೂಲಗಳು, ಛಾಯೆಗಳು, ನೆರಳುಗಳು ಮತ್ತು ಪ್ರತಿಫಲನವನ್ನು ರಚಿಸುವ ಪ್ರಕ್ರಿಯೆ. ಬೆಳಕಿನ ಮೂಲಗಳ ಸಂಯೋಜನೆಯು ಒಂದು ವಿಶೇಷ ಭಾಗದತ್ತ ಗಮನ ಸೆಳೆಯುತ್ತದೆ.

ಒಂದು ಸಣ್ಣ ಪ್ರಮಾಣದಲ್ಲಿ ವರ್ಚುವಲ್ ಇಮೇಜ್‌ಗಳನ್ನು ಸೃಷ್ಠಿಸಿ, ಅವುಗಳ ಬಣ್ಣ, ರಚನೆ ಮತ್ತು ನೋಟವನ್ನು ಸಂಪೂರ್ಣವಾಗಿ ಬದಲಾಯಿಸಿ ನಮ್ಮ ಥೀಮ್‌ಗೆ ತಕ್ಕಂತೆ ತೋರಿಸಬಹುದು.

ಗೋಡೆಯ ಮೇಲೆ ನೃತ್ಯ ಮಾಡುವ ಚಿಟ್ಟೆಗಳು, ನೈಜ ಜೀವನದ ಡೈನೋಸಾರ್‌ಗಳು, ಬೃಹತ್ ಕಲಾಕೃತಿಗಳು, ಕಾರಿಗೆ ಬೆಂಕಿ ಬಿದ್ದಾಗ ಉಂಟಾಗುವ ಸ್ಥಿತಿ, ಕಟ್ಟಡ ಬೀಳುವ, ಕಟ್ಟಡ ಕಟ್ಟುವ...ಹೀಗೆ ವಿವಿಧ ವಿಷಯಗಳನ್ನೊಳಗೊಂಡ ನೈಜತೆಗೆ ಹತ್ತಿರುವ ಚಿತ್ರಗಳು ಇಲ್ಲಿ ಮೂಡುತ್ತವೆ.

ಡಾಲ್ಬಿ ಧ್ವನಿ:

ಆ ಚಿತ್ರಕ್ಕೆ ತಕ್ಕಂತೆ ತಾಂತ್ರಿಕ ರೀತಿಯ ಧ್ವನಿ ಅಳವಡಿಸಲಾಗಿದೆ. ಸುತ್ತಲೂ ಡಾಲ್ಬಿ ಸ್ಪೀಕರ್ ಅಳವಡಿಸಲಾಗಿದೆ.

10 ನಿಮಿಷದ ಥೀಮ್: 10 ವಿವಿಧ ರೀತಿಯ 8ರಿಂದ 10 ನಿಮಿಷದ ಒಂದೊಂದು ಥೀಮ್‌ಗಳು ಇದ್ದು, ವಿಷಯಕ್ಕೆ ತಕ್ಕ ಹಾಗೆ ಹಿನ್ನಲೆ ಧ್ವನಿ ಇದೆ.

ಪ್ರಾಯೋಗಿಕ ಆರಂಭ:

ಆಗಸ್ಟ್‌ 15ರಿಂದ ಪ್ರಾಯೋಗಿಕವಾಗಿ ಆರಂಭಗೊಂಡರೂ, ಕೆಲವು ದಿನಗಳಲ್ಲಿಯೇ ಕೃಷ್ಣೆಗೆ ಬಾಗಿನ ಅರ್ಪಣೆ ಮಾಡಲು ಆಲಮಟ್ಟಿಗೆ ಬರಲಿರುವ ಮುಖ್ಯಮಂತ್ರಿ ಬೊಮ್ಮಾಯಿ ಇದನ್ನು ಅಧಿಕೃತವಾಗಿ ಲೋಕಾರ್ಪಣೆ ಮಾಡಲಿದ್ದಾರೆ ಎಂದು ಕೆಬಿಜೆಎನ್‌ಎಲ್ ಅಧಿಕಾರಿಗಳು ತಿಳಿಸಿದರು.

77 ಎಕರೆ ವಿಶಾಲ ಪ್ರದೇಶದಲ್ಲಿ ಹರಡಿರುವ ಮೊಘಲ್, ಇಟಾಲಿಯನ್, ಫ್ರೆಂಚ್, ಲೇಸರ್ ಫೌಂಟೇನ್, ಸಂಗೀತ ಕಾರಂಜಿ ನೋಡಿಕೊಂಡು ಮರಳಿ ಎಂಟ್ರನ್ಸ್ ಪ್ಲಾಜಾಕ್ಕೆ ಬರುವ ವೇಳೆಯಲ್ಲಿ ಎಂಟ್ರನ್ಸ್ ಪ್ಲಾಜಾ ಕಟ್ಟಡದ ಒಳಭಾಗ 10 ನಿಮಿಷದ ಈ ಥ್ರೀಡಿ ಪ್ರೊಜೆಕ್ಷನ್ ಮ್ಯಾಪಿಂಗ್ ಬೆಳಕಿನ ವ್ಯವಸ್ಥೆ ವೀಕ್ಷಿಸಲಿದ್ದಾರೆ.

ಆಲಮಟ್ಟಿಯ ಉದ್ಯಾನಗಳ ಸಮುಚ್ಛಯಕ್ಕೆ ಅತ್ಯಾಧುನಿಕ ತಂತ್ರಜ್ಞಾನದ ಥ್ರೀಡಿ ಪ್ರೊಜೆಕ್ಷನ್ ಮ್ಯಾಪಿಂಗ್ ಮತ್ತೊಂದು ಗರಿ ಮೂಡಿಸಿದೆ.

****

₹ 2.40 ಕೋಟಿ ವೆಚ್ಚ

ಜಪಾನ್‌ನಿಂದ ಮೂರು ಉನ್ನತ ಮಟ್ಟದ ತಂತ್ರಜ್ಞಾನದ ಪ್ರೊಜೆಕ್ಷನ್ ತರಿಸಲಾಗಿದ್ದು, 21ಸಾವಿರ ಲುಮೆನ್ಸ್ ಬೆಳಕಿನ ಕಿರಣಗಳು ಇಲ್ಲಿ ಉತ್ಪಾದನೆಯಾಗುತ್ತವೆ. ಬೆಂಗಳೂರಿನ ವೇದಾ ಎಲೆಕ್ಟ್ರಿಕ್ ಕಂಪನಿ ₹ 2.40 ಕೋಟಿ ವೆಚ್ಚದಲ್ಲಿ ಈ ಕಾಮಗಾರಿ ಕೈಗೊಂಡಿದ್ದು, ಮುಂದಿನ ಎರಡು ವರ್ಷಗಳ ನಿರ್ವಹಣೆಯ ಜವಾಬ್ದಾರಿಯನ್ನೂ ಹೊತ್ತಿದೆ. ಹವಾನಿಯಂತ್ರಿತ ನಿಯಂತ್ರಣಾ ಕೊಠಡಿ ಕೂಡ ನಿರ್ಮಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT