ಶನಿವಾರ, ಜುಲೈ 24, 2021
25 °C
ವೀಕ್ಷಣೆಗೆ ಮುಕ್ತವಾದ ಅಬ್ಬಿ ಜಲಪಾತ, ಇನ್ನೂ ಬಾಗಿಲು ತೆರೆಯದ ರಾಜಾಸೀಟ್‌, ನಿಸರ್ಗಧಾಮ, ದುಬಾರೆ

ಮಳೆಗಾಲದ ಪ್ರವಾಸೋದ್ಯಮ ಚಿಗುರುವ ನಿರೀಕ್ಷೆ

ಆದಿತ್ಯ ಕೆ.ಎ. Updated:

ಅಕ್ಷರ ಗಾತ್ರ : | |

Prajavani

ಮಡಿಕೇರಿ: ಕೊಡಗು ಅನ್‌ಲಾಕ್ ಬಳಿಕ ನಿಧಾನವಾಗಿ ಪ್ರವಾಸಿಗರು ಜಿಲ್ಲೆಯತ್ತ ಆಗಮಿಸುತ್ತಿದ್ದಾರೆ. ಒಂದೊಂದೇ ಪ್ರವಾಸಿ ತಾಣಗಳು ಪ್ರವೇಶಕ್ಕೆ ಮುಕ್ತವಾಗುತ್ತಿದ್ದು ಮಳೆಗಾಲದ ಪ್ರವಾಸೋದ್ಯಮ ಚಿಗುರುವ ಸಾಧ್ಯತೆ ಕಾಣಿಸುತ್ತಿದೆ.

ರಾಜ್ಯದ ಇತರೆ ಜಿಲ್ಲೆಗಳ ಪ್ರವಾಸಿ ತಾಣಗಳ ಮಾರ್ಗಸೂಚಿಯೂ ಜಿಲ್ಲೆಗೂ ಅನ್ವಯವಾಗುತ್ತದೆ ಎಂದು ಜಿಲ್ಲಾಡಳಿತವು ಸ್ಪಷ್ಟನೆ ನೀಡಿದ್ದು ಜಿಲ್ಲೆಯತ್ತ ಪ್ರವಾಸಿಗರು ಬರಲಾರಂಭಿಸಿದ್ದಾರೆ. ರಾಜಾಸೀಟ್‌ ಸೇರಿದಂತೆ ಕೆಲವು ಸ್ಥಳಗಳು, ಇನ್ನೂ ಪ್ರವೇಶಕ್ಕೆ ಮುಕ್ತವಾಗದ ಕಾರಣಕ್ಕೆ ನಿರಾಸೆ ಅನುಭವಿಸುವಂತಾಗಿದೆ. ರಾಜಾಸೀಟ್‌ ಇನ್ನೂ ಬಾಗಿಲು ಹಾಕಿದ ಸ್ಥಿತಿಯಲ್ಲಿದ್ದು ಉದ್ಯಾನದಲ್ಲಿ ಸ್ವಚ್ಛತಾ ಕಾರ್ಯ ನಡೆಯುತ್ತಿದೆ. ನಿಸರ್ಗಧಾಮ, ದುಬಾರೆ ಆನೆ ಶಿಬಿರಕ್ಕೆ ಇನ್ನೂ ಪ್ರವೇಶ ನೀಡುತ್ತಿಲ್ಲ. ಮಂಗಳವಾರ ಅಥವಾ ಬುಧವಾರ ಎಲ್ಲ ತಾಣಗಳೂ ಪ್ರವೇಶಕ್ಕೆ ಮುಕ್ತವಾಗಲಿವೆ. ಬಂದವರು ರಾಜಾಸೀಟ್‌ನ ಬಾಗಿಲು ಬಳಿ ವೀಕ್ಷಣೆ ಮಾಡಿಕೊಂಡು ವಾಪಸ್ಸಾಗುತ್ತಿದ್ದಾರೆ.

ಪ್ರಾಕೃತಿಕ ವಿಕೋಪ, ಕೋವಿಡ್‌ ಹಾಗೂ ಲಾಕ್‌ಡೌನ್‌ನಿಂದ ಜಿಲ್ಲೆಯ ಪ್ರವಾಸೋದ್ಯಮವು ನೆಲಕಚ್ಚಿತ್ತು. ಈ ವರ್ಷ ಮುಂಗಾರು ಅಬ್ಬರ ಇದುವರೆಗೂ ತಗ್ಗಿದ್ದು ಮಳೆಗಾಲದ ಪ್ರವಾಸೋದ್ಯಮ ಗರಿಗೆದರುವ ಸಾಧ್ಯತೆಯಿದೆ ಎಂಬುದು ಹೋಟೆಲ್‌, ರೆಸಾರ್ಟ್‌, ಹೋಂಸ್ಟೇ ಮಾಲೀಕರ ಅನಿಸಿಕೆ. ಪ್ರವಾಸಿಗರು ಆಗಮಿಸಿದರೆ, ಪ್ರವಾಸಿ ತಾಣಗಳಲ್ಲಿನ ವ್ಯಾಪಾರಸ್ಥರ ಬದುಕು ಸುಧಾರಣೆಯಾಗಲಿದೆ.

ಮೂರು ತಿಂಗಳಿಂದ ಬಾಗಿಲು ಮುಚ್ಚಿದ್ದ ತಾಲ್ಲೂಕಿನ ಅಬ್ಬಿ ಜಲಪಾತವು ಸೋಮವಾರದಿಂದ ವೀಕ್ಷಣೆಗೆ ಮುಕ್ತವಾಗಿದೆ. ಗ್ರಾಮ ಪಂಚಾಯಿತಿ ಅಧ್ಯಕ್ಷ ಅಯ್ಯಪ್ಪ, ಮಾಜಿ ಅಧ್ಯಕ್ಷೆ ರೀಟಾ ಮುತ್ತಣ್ಣ, ಸದಸ್ಯರಾದ ಜಾನ್ಸನ್ ಪಿಂಟೋ ಅವರ ನೇತೃತ್ವದಲ್ಲಿ ಸಭೆ ನಡೆಸಿ ಜಲಪಾತ ವೀಕ್ಷಣೆಗೆ ಅವಕಾಶ ನೀಡಲು ನಿರ್ಧರಿಸಲಾಯಿತು. ಗೇಟ್‌ ತೆರೆದು ಪ್ರವಾಸಿಗರನ್ನು ಒಳಕ್ಕೆ ಬಿಡಲಾಯಿತು. ಅನ್‌ಲಾಕ್‌ ಆದ ಮೇಲೂ ಮೂರು ದಿನಗಳಿಂದ ಬಾಗಿಲು ಬಂದ್‌ ಆಗಿತ್ತು. ಪ್ರವಾಸಿಗರು ನಿರಾಸೆಯಿಂದ ಮರಳುತ್ತಿದ್ದರು.

ರಾಜಾಸೀಟ್‌ ವಿಸ್ತಾರ: ರಾಜಾಸೀಟ್‌ ವೀಕ್ಷಣೆಗೆ ಅವಕಾಶ ಸಿಕ್ಕ ಮೇಲೆ ಪ್ರಕೃತಿ ಸೊಬಗು ಸವಿಯಲು ಸಾಧ್ಯವಾಗಲಿದೆ. ರಾಜಾಸೀಟ್‌ ಇನ್ನಷ್ಟು ಆಕರ್ಷಣೆ ಮಾಡಲು ಯೋಜನೆ ರೂಪಿಸಲಾಗಿದ್ದು, ಕಾಮಗಾರಿಗಳು ಪ್ರಗತಿಯಲ್ಲಿವೆ. ಮತ್ತೊಂದು ವೀಕ್ಷಣಾ ಗೋಪುರ ತಲೆಯೆತ್ತಿದ್ದು ಪ್ರವಾಸಿಗರ ಆಕರ್ಷಣೆ ಕೇಂದ್ರವಾಗಲಿದೆ.

ಸ್ವಚ್ಛತಾ ಕಾರ್ಯ: ಜಿಲ್ಲೆಯ ಪ್ರಮುಖ ಹೋಟೆಲ್‌, ರೆಸಾರ್ಟ್‌ಗಳಲ್ಲಿ ಸೋಮವಾರ ಸ್ವಚ್ಛತಾ ಕಾರ್ಯ ನಡೆಸುತ್ತಿರುವ ದೃಶ್ಯವು ಕಂಡುಬಂತು. ಮೂರು ತಿಂಗಳ ಬಳಿಕ ಕೆಲಸ ಆರಂಭಿಸಿದ ಹೋಟೆಲ್‌ಗಳಲ್ಲಿ ಮಾಲೀಕರು ಪೂಜೆಗೂ ವ್ಯವಸ್ಥೆ ಮಾಡಿಕೊಂಡಿದ್ದರು.

ಕೊಡಗು ಜಿಲ್ಲೆಯಲ್ಲಿ ಮಲ್ಲಳ್ಳಿ, ಇರ್ಫು ಹಾಗೂ ಚೇಲಾವರ ಜಲಪಾತ, ಮಾಂದಲ್‌ಪಟ್ಟಿ, ನಿಸರ್ಗಧಾಮ, ದುಬಾರೆ, ಆನೆ ಕ್ಯಾಂಪ್‌, ಕುಶಾಲನಗರ ಸಮೀಪದ ಟಿಬೆಟಿಯನ್‌ ಕ್ಯಾಂಪ್‌ ಸಹ ಆಕರ್ಷಣೆಯ ತಾಣಗಳು. ಜತೆಗೆ, ಭಾಗಮಂಡಲ, ತಲಕಾವೇರಿ ಹಾಗೂ ಓಂಕಾರೇಶ್ವರ ದೇವಸ್ಥಾನ ಪ್ರಮುಖ ಧಾರ್ಮಿಕ ಕೇಂದ್ರಗಳಾಗಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.