ಬುಧವಾರ, ಜೂನ್ 16, 2021
22 °C

ಆಸ್ಪತ್ರೆ ನಿರ್ಮಾಣಕ್ಕೆ ಮುಂದಾದ ಗಣಿ ಕಂಪನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ವ್ಯಾಪಕವಾಗಿ ಹೆಚ್ಚುತ್ತಿರುವ ಕೊರೊನಾ ಸೋಂಕಿತರ ಚಿಕಿತ್ಸೆಗೆ 100 ಹಾಸಿಗೆ ಸಾಮರ್ಥ್ಯದ ಎರಡು ಆಸ್ಪತ್ರೆಗಳನ್ನು ನಿರ್ಮಿಸಲು ವೇದಾಂತ ಗಣಿ ಕಂಪನಿ ಮುಂದಾಗಿದೆ. ಚಿತ್ರದುರ್ಗ ಹಾಗೂ ಹುಬ್ಬಳ್ಳಿಯಲ್ಲಿ ಆಸ್ಪತ್ರೆ ತೆರೆಯಲು ಸಿದ್ಧತೆ ಆರಂಭಿಸಿದೆ.

‘ಸರ್ಕಾರದ ಮಾನ್ಯತೆ ಪಡೆದು ಆರೋಗ್ಯ ಸೇವೆ ನೀಡಲಾಗುವುದು. ಹವಾನಿಯಂತ್ರಿತ ವ್ಯವಸ್ಥೆ ಹೊಂದಿದ 20 ಐಸಿಯು ಹಾಸಿಗೆ ಹಾಗೂ 180 ಆಮ್ಲಜನಕ ಸೌಲಭ್ಯ ಹೊಂದಿದ ಹಾಸಿಗೆ ನಿರ್ಮಿಸುವ ಉದ್ದೇಶ ಹೊಂದಿದೆ. ಇದರಿಂದ ಜನರಿಗೆ ಅನುಕೂಲವಾಗಲಿದೆ’ ಎಂದು ವೇದಾಂತ ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.

100 ಹಾಸಿಗೆ ಸಾಮರ್ಥ್ಯದ ತಾತ್ಕಾಲಿಕ ಆಸ್ಪತ್ರೆ ನಿರ್ಮಾಣಕ್ಕೆ ಚಿತ್ರದುರ್ಗದ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ಸ್ಥಳ ಗುರುತಿಸಲಾಗುತ್ತಿದೆ. ವೇದಾಂತ ಕಂಪನಿಯ ಅಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿ ಕವಿತಾ ಎಸ್‌.ಮನ್ನಿಕೇರಿ ಚರ್ಚೆ ನಡೆಸಿದ್ದಾರೆ. ಟೆಂಟ್‌ ಮಾದರಿಯ ಈ ಆಸ್ಪತ್ರೆ ಮೂರು ವರ್ಷದವರೆಗೆ ಬಳಕೆ ಮಾಡಬಹುದು ಎಂದು ಮೂಲಗಳು ಮಾಹಿತಿ ನೀಡಿವೆ.

ವೇದಾಂತ ಸಂಸ್ಥೆ ನಿರ್ಮಿಸಲು ಉದ್ದೇಶಿಸಿದ ತಾತ್ಕಾಲಿಕ ಆಸ್ಪತ್ರೆಗೆ 25 ಸಾವಿರ ಚದರ ಅಡಿ ಜಾಗದ ಅಗತ್ಯವಿದೆ. ನಿರ್ಮಾಣದ ಹೊಣೆಯನ್ನು ವೇದಾಂತ ಕಂಪನಿ ವಹಿಸಿಕೊಂಡಿದ್ದು, ಆಸ್ಪತ್ರೆಯ ನಿರ್ವಹಣೆಯ ಜವಾಬ್ದಾರಿಯನ್ನೂ ಹೊರಲಿದೆ. ವೈದ್ಯರ ನಿಯೋಜನೆ, ಶುಶ್ರೂಷಕರ ಸೇವೆಯನ್ನು ಜಿಲ್ಲಾಡಳಿತ ಒದಗಿಸಲಿದೆ.

‘ಕೋವಿಡ್ ರೋಗಿಗಳ ಸಂಖ್ಯೆ ಹೆಚ್ಚುತ್ತಿರುವ ಬಗ್ಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಟ್ವೀಟ್‌ ಮೂಲಕ ಕಳವಳ ವ್ಯಕ್ತಪಡಿಸಿದ್ದರು. ಹುಬ್ಬಳ್ಳಿಯಲ್ಲಿ 100 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ನಿರ್ಮಿಸುವಂತೆ ವೇದಾಂತ ಸಮೂಹದ ಅಧ್ಯಕ್ಷ ಅನಿಲ್ ಅಗರ್ವಾಲ್ ಅವರನ್ನು ಕೋರಿಕೊಂಡಿದ್ದರು. ಇದಕ್ಕೆ ವೇದಾಂತ ಸಮೂಹ ಒಪ್ಪಿಗೆ ನೀಡಿದೆ’ ಎಂದು ವೇದಾಂತ ಕಬ್ಬಿಣ ಮತ್ತು ಉಕ್ಕು ಲಿಮಿಟೆಡ್‌ನ ಸಿಇಒ ಸಾವಿಕ್‌ ಮಜುಂದಾರ್‌ ತಿಳಿಸಿದ್ದಾರೆ.

***

ಇದು ಬಿಕ್ಕಟ್ಟಿನ ಪರಿಸ್ಥಿತಿ. ಸಮುದಾಯ ಆರೋಗ್ಯ ಮತ್ತು ಸುರಕ್ಷತೆ ದೃಷ್ಟಿಯಿಂದ ಕಂಪನಿ ಈ ನಿರ್ಧಾರ ತೆಗೆದುಕೊಂಡಿದೆ. ನಿರ್ಮಾಣವಾಗಲಿರುವ ಆಸ್ಪತ್ರೆಯಲ್ಲಿ ಉಚಿತ ಆಮ್ಲಜನಕ ವ್ಯವಸ್ಥೆ ಮಾಡಲಾಗುವುದು.

–ಕೃಷ್ಣರೆಡ್ಡಿ,

ವೇದಾಂತದ ಕಬ್ಬಿಣದ ಅದಿರು ನಿರ್ದೇಶಕ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.