ಶುಕ್ರವಾರ, ಅಕ್ಟೋಬರ್ 22, 2021
21 °C
ಸಂಜಯ ಪಾಟೀಲ ಕ್ಷಮೆಯಾಚನೆಗೆ ಆಗ್ರಹ

ಲಕ್ಷ್ಮಿ ಹೆಬ್ಬಾಳಕರ ವಿರುದ್ಧ ಅವಹೇಳನಕಾರಿ ಹೇಳಿಕೆ: ಮಹಿಳಾ ಆಯೋಗಕ್ಕೆ ವೀಣಾ ದೂರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ವಿರುದ್ಧ ಬಿಜೆಪಿ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಸಂಜಯ ಪಾಟೀಲ ನೀಡಿರುವ ಹೇಳಿಕೆ ಖಂಡನೀಯ. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಅಖಿಲ ಭಾರತ ಲಿಂಗಾಯತ ಪಂಚಮಶಾಲಿ ಮಹಿಳಾ ಘಟಕ ಹಾಗೂ ಚೆನ್ನಮ್ಮ ಬಳಗದ ಅಧ್ಯಕ್ಷೆ ವೀಣಾ ಕಾಶಪ್ಪನವರ್‌ ಒತ್ತಾಯಿಸಿದರು.

ಈ ಸಂಬಂಧ ಮಹಿಳಾ ಆಯೋಗದ ಅಧ್ಯಕ್ಷೆ ಆರ್‌.ಪ್ರಮೀಳಾ ನಾಯ್ಡು ಅವರಿಗೆ ಮಂಗಳವಾರ ದೂರು ನೀಡಿ ಮಾತನಾಡಿದರು. 

‘ಬಿಜೆಪಿಯವರು ತಾವು ಈ ದೇಶದ ಸಂಸ್ಕೃತಿಯ ರಕ್ಷಕರು ಎಂದು ಬಿಂಬಿಸಿಕೊಳ್ಳುತ್ತಾರೆ. ಮಹಿಳೆಯರನ್ನು ಪೂಜಿಸುವುದಾಗಿ ಹೇಳುತ್ತಾರೆ. ಆದರೆ, ಆ ಪಕ್ಷದ ನಾಯಕರು ಮಹಿಳೆಯರ ಕುರಿತು ಕೀಳುಮಟ್ಟದ ಹೇಳಿಕೆಗಳನ್ನು ನೀಡುತ್ತಾರೆ. ಇದು ಆ ಪಕ್ಷದ ಸಂಸ್ಕೃತಿಯನ್ನು ಬಿಂಬಿಸುತ್ತದೆ. ಹೆಣ್ಣು ಮಗಳೊಬ್ಬಳು ಕಷ್ಟಪಟ್ಟು ಶಾಸಕಿಯಾಗಿದ್ದಾರೆ. ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದಾರೆ. ಅವರ ಏಳ್ಗೆ ಸಹಿಸದೇ ಅವರ ವಿರುದ್ಧ ನಿಕೃಷ್ಟವಾಗಿ ಮಾತನಾಡುವುದು ಎಷ್ಟು ಸರಿ. ಅವರ ಮನೆಯ ಹೆಣ್ಣು ಮಕ್ಕಳ ಜೊತೆಗೂ ಸಂಜಯ ಪಾಟೀಲ ಹೀಗೆ ನಡೆದುಕೊಳ್ಳುತ್ತಾರಾ’ ಎಂದು ಪ್ರಶ್ನಿಸಿದರು.

‘ರಾಜ್ಯದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಹೆಚ್ಚುತ್ತಿದೆ. ಅದನ್ನು ನಿಯಂತ್ರಿಸಲು ಬಿಜೆಪಿ ಸರ್ಕಾರ ಯಾವ ಕ್ರಮಗಳನ್ನು ಕೈಗೊಂಡಿದೆ. ಸಂಜಯ ಪಾಟೀಲ ವಿರುದ್ಧ ಕ್ರಮ ತೆಗೆದುಕೊಂಡಿದ್ದಾರೆಯೇ. ರಾಜ್ಯ ಹಾಗೂ ದೇಶದಲ್ಲಿ ಮಹಿಳೆಯರಿಗೆ ರಕ್ಷಣೆಯೇ ಇಲ್ಲವೆ. ಮಹಿಳೆಯರು ರಾಜಕೀಯ ಕ್ಷೇತ್ರಕ್ಕೆ ಕಾಲಿಡುವುದು ತಪ್ಪೆ. ಸಂಜಯ ಪಾಟೀಲ ಬಹಿರಂಗ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ರಾಜ್ಯದಾದ್ಯಂತ ಹೋರಾಟ ಮಾಡಲಾಗುತ್ತದೆ’ ಎಂದು ಎಚ್ಚರಿಸಿದರು.

‘ಲಕ್ಷ್ಮಿ ಹೆಬ್ಬಾಳಕರ ಅವರ ಕುರಿತು ಸಂಜಯ ಪಾಟೀಲ ಅವಹೇಳನಕಾರಿ ಮಾತುಗಳನ್ನು ಆಡಿರುವುದನ್ನು ಖಂಡಿಸಿ ದೂರು ನೀಡಲಾಗಿದೆ. ಈ ಬಗ್ಗೆ ಮಾಹಿತಿ ಪಡೆದು ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ. ಮಹಿಳೆಯರ ಹಕ್ಕಿಗೆ ಚ್ಯುತಿಯಾದರೆ ಮಹಿಳಾ ಆಯೋಗ ಕೈಕಟ್ಟಿ ಕೂರುವುದಿಲ್ಲ. ಹೆಣ್ಣು ಮಕ್ಕಳನ್ನು ಅಗೌರವದಿಂದ ನಡೆಸಿಕೊಳ್ಳುವುದು ತಪ್ಪು’ ಎಂದು ಪ್ರಮೀಳಾ ನಾಯ್ಡು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು