ಸೋಮವಾರ, ಮೇ 16, 2022
30 °C
ವೀರಶೈವ ಲಿಂಗಾಯತ ಮಹಾಸಭಾ ಕಾರ್ಯಕ್ರಮದಲ್ಲಿ ವಿಜಯೇಂದ್ರ ಹೇಳಿಕೆ

ಹಾವು, ಚೇಳು ಮಧ್ಯೆ ಬಿಎಸ್‌ವೈ‌ ಜೀವನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ‘ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ, ಬಹಳ ಮಂದಿ ಹಾವು–ಚೇಳುಗಳ ರೀತಿ ತೊಂದರೆ ಕೊಟ್ಟಿದ್ದಾರೆ. ಆದರೆ, ಅದೇ ಹಾವು–ಚೇಳುಗಳ ಮಧ್ಯೆ ಜೀವನ ಸಾಗಿಸಿ ದೊಡ್ಡಮಟ್ಟಕ್ಕೆ ಏರಿದ್ದಾರೆ. ಅವರಿಗೆ ಸಮಸ್ಯೆಗಳೇನೂ ಹೊಸದಲ್ಲ’ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾರ್ಮಿಕವಾಗಿ ನುಡಿದರು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕದ ಭವನ ನಿರ್ಮಾಣಕ್ಕೆ ಭಾನುವಾರ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ರಾಜ್ಯದ ಜನ ಹಾಗೂ ಎಲ್ಲಾ ಸಮುದಾಯಗಳ ಸ್ವಾಮೀಜಿಗಳ ಆಶೀರ್ವಾದ ಇರುವವರೆಗೆ ಯಡಿಯೂರಪ್ಪ ಸೇವೆ ಸಲ್ಲಿಸಲಿದ್ದಾರೆ ಎಂದರು.

‘ರಾಜ್ಯದಲ್ಲಿ ಕುರುಬ, ವಾಲ್ಮೀಕಿ ಹಾಗೂ ವೀರಶೈವ ಲಿಂಗಾಯತ ಸಮುದಾಯಗಳು ಹೋರಾಟದ ಮೂಲಕ ತಮ್ಮ ಹಕ್ಕು ಪ್ರತಿಪಾದಿಸುತ್ತಿವೆ. ಯಡಿಯೂರಪ್ಪ, ನುಡಿದಂತೆ ನಡೆಯುವ ಮುಖ್ಯಮಂತ್ರಿ. ಯಾವುದೇ ಜಾತಿಗೆ ಸೀಮಿತವಾಗಿಲ್ಲ. ಎಲ್ಲಾ ಸಮುದಾಯಗಳ ಬೇಡಿಕೆಗಳಿಗೆ ಕಾನೂನು ಚೌಕಟ್ಟಿನಲ್ಲಿ ನ್ಯಾಯ ಒದಗಿಸುವುದಾಗಿ ಈಗಾಗಲೇ ಹೇಳಿದ್ದಾರೆ’ ಎಂದರು.

ಇಂಥ ಹೋರಾಟಗಳ ಸಂದರ್ಭದಲ್ಲಿ ಸುತ್ತೂರು ಸ್ವಾಮೀಜಿ ಕೂಡ ನೇತೃತ್ವ ವಹಿಸಿಕೊಂಡು, ಯಡಿಯೂರಪ್ಪ ಅವರಿಗೆ ಮಾರ್ಗದರ್ಶನ ನೀಡಬೇಕು ಎಂದು ಮನವಿ ಮಾಡಿದರು.

ಸಿನಿಮಾ ನಗರಿ ಮೈಸೂರಲ್ಲೇ ಇರಲಿ: ಮೈಸೂರಿಗೆ ಕೈತಪ್ಪಿ, ಬೆಂಗಳೂರಿಗೆ ಸ್ಥಳಾಂತರಿಸಲು ನಡೆದಿರುವ ಸಿನಿಮಾ ನಗರಿ ಯೋಜನೆಯನ್ನು ವಾಪಸ್‌ ಈ ಭಾಗಕ್ಕೆ ತರಬೇಕು. ಈ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್‌ ಪ್ರಯತ್ನಿಸಬೇಕು ಎಂದು ಹೇಳಿದರು.

ಕಾರ್ಯಕ್ರಮಕ್ಕೆ ವಿಜಯೇಂದ್ರ ಅವರನ್ನು ಮೆರವಣಿಗೆಯಲ್ಲಿ ಕರೆ ತರಲಾಯಿತು. ದಾರಿ ಮಧ್ಯೆ ಜೆಸಿಬಿಗಳಲ್ಲಿ ಹೂವು ತುಂಬಿ, ಅದರ ಮೇಲಿಂದ ಪುಷ್ಪಾರ್ಚನೆ ಮಾಡಲಾಯಿತು. ಬಾದಾಮಿಗಳಲ್ಲಿ ಮಾಡಿದ ಬೃಹತ್‌ ಹಾರವನ್ನು ಕ್ರೇನ್‌ ನೆರವಿನಿಂದ ಹಾಕಲಾಯಿತು.

‘ವರ್ಗಾವಣೆ: ಹೋಲ್‌ಸೇಲ್ ವ್ಯಾಪಾರ’
ರಾಜ್ಯದಲ್ಲಿ ಯಾರು ರಾಜಾಹುಲಿ ಆಗುತ್ತಾರೋ; ಯಾರು ಬೆಟ್ಟದ ಇಲಿ ಆಗುತ್ತಾರೋ ಗೊತ್ತಿಲ್ಲ. ಲೂಟಿ ಹೊಡೆದ ಹಣದಿಂದ ಕುತಂತ್ರಗಳು ನಡೆಯುತ್ತಿವೆ. ಐಎಎಸ್ ಅಧಿಕಾರಿಗಳ ವರ್ಗಾವಣೆಯಲ್ಲೂ ಹಣದ ಆಟ ಇದೆ. ಹೋಲ್‌ಸೇಲ್ ವ್ಯಾಪಾರದಂತೆ ವರ್ಗಾವಣೆ ಮಾಡಲಾಗಿದೆ. ವಿರೋಧ ಪಕ್ಷಗಳು ಸತ್ತಿದೆ. ಅವರೂ ಇವರೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.

ಮೀಸಲಾತಿ: ಮೌನ ಮುರಿದ ಸುತ್ತೂರು ಶ್ರೀ
ಮೀಸಲಾತಿ ಹೋರಾಟ ವಿಚಾರವಾಗಿ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮೌನ ಮುರಿದಿದ್ದು, ಸೂಕ್ಷ್ಮವಾಗಿ ಕೆಲ ವಿಚಾರ ಹಂಚಿಕೊಂಡರು.

‘2ಎ ಹಾಗೂ ಒಬಿಸಿ ಸೇರಿದಂತೆ ಕೇಂದ್ರ ಸರ್ಕಾರದ ಸೌಲಭ್ಯಗಳನ್ನು ಯಾವುದೇ ಒಂದು ಗುಂಪಿಗೆ ಪ್ರತ್ಯೇಕವಾಗಿ ನೀಡುವ ಬದಲು, ಸಮುದಾಯದ ಪ್ರತಿಯೊಬ್ಬರಿಗೆ ಸಿಗುವಂತೆ ಮಾಡಿಕೊಡುವುದು ಸರ್ಕಾರದ ಜವಾಬ್ದಾರಿ’ ಎಂದು ಅವರು ಅಭಿಪ್ರಾಯಪಟ್ಟರು.

‘ಯಾವುದೇ ಸಮುದಾಯದಲ್ಲಿ ನಾಲ್ಕಾರು ಮಂದಿ ಒಳ್ಳೆಯ ಸ್ಥಾನಮಾನ ಪಡೆದುಕೊಂಡಿದ್ದಾರೆ ಎಂದ ಮಾತ್ರಕ್ಕೆ, ಇಡೀ ಸಮುದಾಯದ ಎಲ್ಲರಿಗೂ ಸೌಲಭ್ಯ ಸಿಕ್ಕಿದೆ ಎಂದು ಭಾವಿಸಬಾರದು. ಎಲ್ಲಾ ಸಮುದಾಯಗಳಲ್ಲೂ ತುಳಿತಕ್ಕೆ ಒಳಗಾದ ಜನ ಇದ್ದಾರೆ’ ಎಂದರು.

‘ಸಮಾಜದಲ್ಲಿ ಯಾರು ಸೌಲಭ್ಯವಂಚಿತರಾಗಿರುತ್ತಾರೆಯೋ, ಯಾರಿಗೆ ಸೌಲಭ್ಯ ಪಡೆದುಕೊಳ್ಳಲು ಸಾಧ್ಯವಿಲ್ಲವೋ ಅಂಥವರಿಗೆ ಸೌಲಭ್ಯ ದೊರಕಬೇಕಾದದ್ದು ಅಗತ್ಯ’ ಎಂದು ಪ್ರತಿಪಾದಿಸಿದರು.

ಮುಂದೆ ವಿಜಯೇಂದ್ರ ರಾಜಾಹುಲಿ!
‘ಈಗ ಯಡಿಯೂರಪ್ಪ ರಾಜಾಹುಲಿಯಾಗಿದ್ದಾರೆ. ಮುಂದೆ ವಿಜಯೇಂದ್ರ ಅವರು ಕರ್ನಾಟಕದ ರಾಜಾಹುಲಿಯಾಗಿ ಹೆಸರು ಮಾಡುತ್ತಾರೆ’ ಎಂದು ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.

‘ತಂದೆ ಹಾಕಿಕೊಟ್ಟ ಮಾರ್ಗದಲ್ಲಿ ಅವರು ನಡೆಯುತ್ತಿದ್ದು, ಎಲ್ಲ ಸಮುದಾಯಗಳನ್ನು ಒಟ್ಟಿಗೆ ಕರೆದೊಯ್ಯುತ್ತಿದ್ದಾರೆ. ಅವರಿಗೆ ವಿವಿಧ ರೂಪದಲ್ಲಿ ನೂರಾರು ಪೆಟ್ಟುಗಳು ಬಿದ್ದಿವೆ. ಅದನ್ನು ತಡೆದುಕೊಂಡು, ಧೈರ್ಯದಿಂದ ಮುನ್ನುಗ್ಗುತ್ತಿದ್ದಾರೆ’ ಎಂದರು.

‘ಎಲ್ಲಾ ಜಾತಿ, ಸಮುದಾಯಗಳಿಗೆ ಭವನ ನಿರ್ಮಾಣಕ್ಕೆ ಜಾಗ ಕೊಡಲು ಮುಖ್ಯಮಂತ್ರಿ ಸೂಚಿಸಿದ್ದಾರೆ. ಜಾಗ ನೀಡುವ ಪ್ರಕ್ರಿಯೆ ನಡೆಯುತ್ತಿದೆ. ಕಟ್ಟಡ ನಿರ್ಮಾಣಕ್ಕೂ ಸಹಾಯ ಮಾಡಲಾಗುವುದು’ ಎಂದು ಭರವಸೆ ನೀಡಿದರು.

ರಾಮನ ಅವತಾರದಂತೆ ವಿಜಯೇಂದ್ರ!
‘ರಾಮನ ಅವತಾರದಂತೆ ಬಿ.ವೈ.ವಿಜಯೇಂದ್ರ ಅವರು ಬಂದು ವೀರಶೈವ ಲಿಂಗಾಯತ ಸಮುದಾಯಕ್ಕೆ ನೆರವಾಗಿದ್ದಾರೆ. ಮೈಸೂರಿನಲ್ಲಿ ಭವನ ನಿರ್ಮಾಣಕ್ಕಾಗಿ ಮಹಾಸಭಾಕ್ಕೆ ನಿವೇಶನ ಮಂಜೂರು ಮಾಡಿಸಿಕೊಟ್ಟಿದ್ದಾರೆ. ಇಂಥ ನಾಯಕನಿಗಾಗಿ ಸಮುದಾಯ ಹಂಬಲಿಸುತ್ತಿತ್ತು’ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ನಂದೀಶ್ ಹಂಚೆ ಗುಣಗಾನ ಮಾಡಿದರು.

ನೋಟಿಸ್ ಬಂದಿಲ್ಲ: ಯತ್ನಾಳ
ತುಮಕೂರು: ‘ಪಕ್ಷ ವಿರೋಧಿ ಚಟುವಟಿಕೆ ಆರೋಪದ ಮೇಲೆ ನೋಟಿಸ್ ಕೊಟ್ಟಿರುವುದಾಗಿ ಬಿಜೆಪಿ ಮುಖಂಡರು ಹೇಳುತ್ತಿದ್ದಾರೆ. ಆದರೆ ಈವರೆಗೂ ನನಗೆ ನೋಟಿಸ್ ಬಂದಿಲ್ಲ’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಭಾನುವಾರ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ‘ನನಗೆ ನೋಟಿಸ್ ಬಂದಿರುವುದು ಪಕ್ಷದ ಉಪಾಧ್ಯಕ್ಷ ವಿಜಯೇಂದ್ರ ಅವರಿಗೆ ಹೇಗೆ ಗೊತ್ತಾಯಿತು’ ಎಂದು ಪ್ರಶ್ನಿಸಿದರು. ಯಾರ ಬಳಿಯೂ ನೋಟಿಸ್ ಪತ್ರ ಇಲ್ಲ. ನೋಟಿಸ್ ನೀಡಿರುವುದಾಗಿ ಹೇಳಿಕೆ ನೀಡಿ ಮೂರು ದಿನವಾಗಿದೆ. ಎಲ್ಲಿಯೂ ನೋಟಿಸ್ ಕಾಣಿಸುತ್ತಿಲ್ಲ ಎಂದು ವ್ಯಂಗ್ಯವಾಡಿದರು.

‘ಹೆದರಿಸುವ ಸಲುವಾಗಿ ನೋಟಿಸ್ ಕೊಡಲಾಗಿದೆ. ಅದಕ್ಕೆ ತಲೆಕೆಡಿಸಿಕೊಳ್ಳಬೇಡಿ ಎಂದು ಸಚಿವರೊಬ್ಬರು ದೂರವಾಣಿ ಕರೆಮಾಡಿ ನನಗೆ ಹೇಳಿದ್ದಾರೆ. ಫೆ. 21ರ ನಂತರ ಕೇಂದ್ರ ನಾಯಕರು ನೋಟಿಸ್ ವಾಪಸ್ ಪಡೆಯುವುದಾಗಿ ಅವರು ತಿಳಿಸಿದ್ದಾರೆ. ಯಾರ ಬೆದರಿಕೆಗೂ ಅಂಜುವುದಿಲ್ಲ’ ಎಂದು ತಮ್ಮದೇ ಧಾಟಿಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಗುಡುಗಿದರು.

‘ವೀರಶೈವ ಲಿಂಗಾಯತ ಸ್ವಾಮೀಜಿಗಳು ಬೆಂಗಳೂರಿನಲ್ಲಿ ಸಭೆ ನಡೆಸಿ ಐತಿಹಾಸಿಕ ನಿರ್ಣಯ ಕೈಗೊಂಡಿದ್ದಾರೆ. ಯಾರೋ ಒಬ್ಬರು ವೀರಶೈವ ಲಿಂಗಾಯತ ಸಮುದಾಯವನ್ನು ಹೈಜಾಕ್ ಮಾಡುವ ಉದ್ದೇಶವನ್ನು ಸ್ವಾಮೀಜಿಗಳು ಮನಗಂಡಿದ್ದಾರೆ. ಸಮುದಾಯವನ್ನು ತಮ್ಮ ಮಗನ ರಾಜಕೀಯ ಬೆಳವಣಿಗೆಗಾಗಿ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ’ ಎಂದು ಟೀಕಿಸಿದರು.

ಸಚಿವ ಮುರುಗೇಶ ನಿರಾಣಿ, ವಿಜಯೇಂದ್ರ ಸೇರಿ ಪಂಚಮಸಾಲಿ ಸಮುದಾಯ ಒಡೆಯುವ ಪ್ರಯತ್ನ ನಡೆಸಿದ್ದಾರೆ.‌ ಫೆ. 21ರಂದು ಬೆಂಗಳೂರಿನಲ್ಲಿ ನಡೆಯುವ ಸಮಾವೇಶ ಹಾಳುಮಾಡಿ, ವಿಫಲಗೊಳಿಸುವ ಷಡ್ಯಂತ್ರ ನಡೆದಿದೆ. ಆದರೆ ರಾಜ್ಯದ ಮೂಲೆ ಮೂಲೆಯಿಂದ ಪಂಚಮ ಸಾಲಿಗಳು ಬರಲಿದ್ದಾರೆ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು