ಸೋಮವಾರ, ಜನವರಿ 24, 2022
28 °C

ಸಂವಿಧಾನ ರಕ್ಷಣೆಗೆ ಗ್ರಾಮಗಳಲ್ಲೂ ಅಭಿಯಾನ: ರಾಜರತ್ನ ಅಂಬೇಡ್ಕರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸಂವಿಧಾನವನ್ನು ಮೂಲ ಸ್ವರೂಪದಲ್ಲೇ ಉಳಿಸಿಕೊಳ್ಳುವ ಸಲುವಾಗಿ ದೇಶದ ಎಲ್ಲ ಗ್ರಾಮಗಳಲ್ಲೂ ಜಾಗೃತಿ ಅಭಿಯಾನ ನಡೆಸಬೇಕಿದೆ ಎಂದು ಸಂವಿಧಾನ ಸುರಕ್ಷಾ ಆಂದೋಲನದ ನೇತಾರ ಮತ್ತು ಡಾ.ಬಿ.ಆರ್‌. ಅಂಬೇಡ್ಕರ್‌ ಅವರ ಮೊಮ್ಮಗ ರಾಜರತ್ನ ಅಂಬೇಡ್ಕರ್‌ ಹೇಳಿದರು.

ಬುಧವಾರ ಶಾಸಕರ ಭವನದಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ಸಂವಿಧಾನ ಸುರಕ್ಷಾ ಆಂದೋಲನದ ಕರ್ನಾಟಕ ಘಟಕವನ್ನು ರಚಿಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬೇರೆ ಬೇರೆ ಸ್ವರೂಪದಲ್ಲಿ ಸಂವಿಧಾನಕ್ಕೆ ಧಕ್ಕೆ ಉಂಟುಮಾಡುವ ಪ್ರಯತ್ನಗಳು ನಡೆಯುತ್ತಿವೆ. ಸಂವಿಧಾನದ ಪ್ರಸ್ತಾವನೆಯನ್ನೂ ಬದಲಿಸುವಂತಹ ಪ್ರಯತ್ನಗಳು ನಡೆಯುತ್ತಿವೆ. ಗ್ರಾಮ ಗ್ರಾಮಗಳಲ್ಲೂ ಇದರ ವಿರುದ್ಧ ಪ್ರತಿರೋಧ ಸೃಷ್ಟಿಸಬೇಕಿದೆ’ ಎಂದರು.

ದಲಿತರು, ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರ ಅಸ್ತಿತ್ವವೇ ಸಂವಿಧಾನದ ಮೇಲೆ ನಿಂತಿದೆ. ಸಂವಿಧಾನಕ್ಕೆ ಧಕ್ಕೆಯಾದರೆ ಈ ಸಮುದಾಯಗಳ ಅಸ್ತಿತ್ವಕ್ಕೆ ಅಪಾಯ ಎದುರಾಗುತ್ತದೆ. ಜನಪರವಾದ ಎಲ್ಲ ಹೋರಾಟಗಳೂ ಸಂವಿಧಾನದ ಬಲದಿಂದಲೇ ಗೆಲುವು ಸಾಧಿಸಿವೆ. ಈಗ ಸಂವಿಧಾನವನ್ನು ಮೂಲ ಸ್ವರೂಪದಲ್ಲೇ ಉಳಿಸಿಕೊಳ್ಳುವುದಕ್ಕೆ ಬಲವಾದ ಹೋರಾಟ ಕಟ್ಟಬೇಕಿದೆ ಎಂದು ಹೇಳಿದರು.

ಛಲವಾದಿ ಗುರುಪೀಠದ ಬಸವನಾಗಿದೇವ ಸ್ವಾಮೀಜಿ ಮಾತನಾಡಿ, ‘ಹಂತ ಹಂತವಾಗಿ ಸಂವಿಧಾನವನ್ನು ದುರ್ಬಲಗೊಳಿಸುವ ಪ್ರಯತ್ನ ನಡೆಯುತ್ತಿದೆ. ಸಂವಿಧಾನ ಮತ್ತು ಅದರ ಆಶಯಗಳಿಗೆ ವಿರುದ್ಧವಾದ ಕಾನೂನುಗಳನ್ನು ತರಲಾಗುತ್ತಿದೆ.ಇಂತಹ ಪ್ರಯತ್ನಗಳನ್ನು ಬಲವಾಗಿ ವಿರೋಧಿಸಲೇಬೇಕಾಗಿದೆ’ ಎಂದರು.

ಮೈಸೂರಿನ ಉರಿಲಿಂಗ ಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಮಾತನಾಡಿ, ‘ಸಂವಿಧಾನದ ಬಲದಲ್ಲೇ ಭಾರತ ನಿಂತಿದೆ. ಈಗ ಶಿಕ್ಷಣ, ಉದ್ಯೋಗ ಮತ್ತು ಇತರ ಹಕ್ಕುಗಳನ್ನು ದಮನಿಸುವ ಮೂಲಕ ಬಹುಸಂಖ್ಯಾತ ಜನರನ್ನು ಅಂಚಿಗೆ ತಳ್ಳುವ ಪ್ರಯತ್ನ ನಡೆದಿದೆ. ಸಂವಿಧಾನವನ್ನು ಉಳಿಸಿಕೊಂಡರೆ ಮಾತ್ರ ಈ ಜನರ ಹಕ್ಕುಗಳನ್ನು ರಕ್ಷಿಸಲು ಸಾಧ್ಯ. ಅದಕ್ಕಾಗಿ ಪ್ರತಿರೋಧ ರೂಪಿಸಲಾಗುವುದು’ ಎಂದು ಹೇಳಿದರು.

ಕಾಂಗ್ರೆಸ್‌ ಮುಖಂಡ ಡಾ.ಸಿ.ಎಸ್‌. ದ್ವಾರಕಾನಾಥ್‌ ಮಾತನಾಡಿ, ‘ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಸಂವಿಧಾನವನ್ನು ದುರ್ಬಲಗೊಳಿಸುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ. ಅದೆಲ್ಲವನ್ನೂ ಸಂಘಟಿತವಾಗಿ ವಿರೋಧಿಸುವುದು ಈ ಆಂದೋಲನದ ಗುರಿ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.