ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲಲು ಮೋದಿ ಅಲೆ ಸಾಲದು: ಯಡಿಯೂರಪ್ಪ ಎಚ್ಚರಿಕೆ

Last Updated 19 ಸೆಪ್ಟೆಂಬರ್ 2021, 20:40 IST
ಅಕ್ಷರ ಗಾತ್ರ

ದಾವಣಗೆರೆ: ‘ಲೋಕಸಭೆ ಚುನಾವಣೆಯಲ್ಲಿ ಮೋದಿ ಅಲೆಯಲ್ಲಿ ಗೆಲ್ಲಬಹುದು. ಆದರೆ ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲುವುದು ಕಷ್ಟ.ವಿರೋಧಪಕ್ಷಗಳನ್ನು ಹಗುರವಾಗಿ ಪರಿಗಣಿಸಬೇಡಿ’ ಎಂದು ಬಿಜೆಪಿ ನಾಯಕ ಬಿ.ಎಸ್.ಯಡಿಯೂರಪ್ಪ ಎಚ್ಚರಿಸಿದರು.

ದಾವಣಗೆರೆಯಲ್ಲಿ ಭಾನುವಾರ ನಡೆದ ಬಿಜೆಪಿ ರಾಜ್ಯ ಕಾರ್ಯಕಾರಿಣಿಯಲ್ಲಿ ಅವರು ಮಾತನಾಡಿದರು.

‘ವಿರೋಧಪಕ್ಷಗಳಿಗೂ ಅವರದ್ದೇ ಆದ ಶಕ್ತಿ ಇದೆ. ನಾವು ಎಲ್ಲರೂ ಒಗ್ಗಟ್ಟಾಗಿ ರಾಜ್ಯದಾದ್ಯಂತ ಪಕ್ಷವನ್ನು ಸಂಘಟಿಸಿ ಆತ್ಮಾಭಿಮಾನದಿಂದ ಕೆಲಸ ಮಾಡಿದರಷ್ಟೇ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯ’ ಎಂದು ಅವರು ಕಿವಿಮಾತು ಹೇಳಿದರು.

‘ಈಗಾಗಲೇ ಕಾಂಗ್ರೆಸ್ ನಾಯಕರು ನಮ್ಮ ಶಾಸಕರನ್ನು ಸಂಪರ್ಕಿಸಿರುವುದು ನಿಮಗೆಲ್ಲ ಗೊತ್ತಿದೆ. ಯಾರೂ ಮೈಮರೆಯುವಂತಿಲ್ಲ. ಎಸ್‌ಸಿ, ಎಸ್‌ಟಿ, ಒಬಿಸಿ ಮುಖಂಡರನ್ನು ಪಕ್ಷಕ್ಕೆ ಕರೆತರುವ ಮೂಲಕ ಪಕ್ಷವನ್ನು ಬಲಪಡಿಸಬೇಕು. ಪ್ರತಿ ಬೂತ್‌ನಲ್ಲಿ 25 ಮಹಿಳೆಯರು, 25 ಯುವಕರು ಕೆಲಸ ಮಾಡಿದರೆ ಕಾಂಗ್ರೆಸ್‌ಗೆ ಪಾಠ ಕಲಿಸಲು ಸಾಧ್ಯ’ ಎಂದು ತಿಳಿಸಿದರು.

‘ಸಿಂದಗಿ ಮತ್ತು ಹಾನಗಲ್‌ ಕ್ಷೇತ್ರಗಳ ಉಪಚುನಾವಣೆ ನಮ್ಮ ಮುಂದಿರುವ ಅಗ್ನಿಪರೀಕ್ಷೆ. ಅದರಲ್ಲಿ ಕಾಂಗ್ರೆಸ್‌ ಗೆದ್ದರೆ ಯಾವ ಸಂದೇಶ ಹೋಗುತ್ತದೆ ಎಂಬುದನ್ನು ಕಲ್ಪಿಸಿಕೊಳ್ಳಿ. ಯಾರೂ ಭ್ರಮೆಯಲ್ಲಿ ಇರುವುದು ಬೇಡ. ಉತ್ತಮ ಕೆಲಸ ಮಾಡಿ ಈ ಕ್ಷೇತ್ರಗಳ ಉಪ ಚುನಾವಣೆಯನ್ನು ಗೆಲ್ಲಲೇಬೇಕು’ ಎಂದರು.

‘ಯಡಿಯೂರಪ್ಪ ಪ್ರವಾಸದ ಬಗ್ಗೆ ಈಗ ಚರ್ಚೆಯಾಗುತ್ತಿದೆ. ನಾನೊಬ್ಬನೇ ಪ್ರವಾಸ ಹೋಗಲು ಸಾಧ್ಯವೇ? ಶಾಸಕರು, ಸಂಸದರು, ಪಕ್ಷದ ನಾಯಕರು ಇರುತ್ತಾರೆ. ಎಲ್ಲರೂ ಒಗ್ಗಟ್ಟಾಗಿ ಮಾಡುವ ಪ್ರವಾಸ ಇದು’ ಎಂದರು.

‘ಮುಂದಿನ ಒಂದು ತಿಂಗಳು ರಾಜ್ಯದಾದ್ಯಂತ ಎಲ್ಲರೂ ಪ್ರವಾಸ ಕೈಗೊಳ್ಳಬೇಕು’ ಎಂದು ಆಮಂತ್ರಿಸುವ ಧಾಟಿಯಲ್ಲಿ ಹೇಳಿದರು.

ಬಿಜೆಪಿ ರಾಜ್ಯ ಪ್ರಭಾರಿ ಅರುಣ್‌ ಸಿಂಗ್‌, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್‌. ಯಡಿಯೂರಪ್ಪ, ಸದಾನಂದ ಗೌಡ, ಜಗದೀಶ ಶೆಟ್ಟರ್‌, ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ, ನಾರಾಯಣ ಸ್ವಾಮಿ, ಶೋಭಾ ಕರಂದ್ಲಾಜೆ, ಭಗವಂತ ಖೂಬಾ, ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ, ರಾಜ್ಯ ಸಹಪ್ರಭಾರಿ ಅರುಣ್‌ ಕುಮಾರ್‌, ಡಿ.ಕೆ. ಅರುಣಾ, ಸಂಸದ ಜಿ.ಎಂ. ಸಿದ್ದೇಶ್ವರ, ಬಿಜೆಪಿ ಜಿಲ್ಲಾ ಸಮಿತಿ ಅಧ್ಯಕ್ಷ ವೀರೇಶ್‌ ಹನಗವಾಡಿ ಉಪಸ್ಥಿತರಿದ್ದರು.

ಮೀಸಲಾತಿ ಬೇಡಿಕೆ ಕುರಿತು ಚರ್ಚೆ
ವಿವಿಧ ಸಮುದಾಯಗಳು ಮೀಸಲಾತಿ ಬೇಡಿಕೆಗಳನ್ನು ಮುಂದಿಟ್ಟಿವೆ. ಚುನಾವಣೆ ಹತ್ತಿರ ಬಂದಾಗ ಇನ್ನಷ್ಟು ಸಮುದಾಯಗಳು ಇದೇ ರೀತಿ ಧ್ವನಿ ಎತ್ತಲಿವೆ. ಈ ಬಗ್ಗೆ ರಾಜ್ಯ ಸರ್ಕಾರ ಸರಿಯಾದ ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆಬಿಜೆಪಿ ರಾಜ್ಯ ಕಾರ್ಯಕಾರಿಣಿಯಲ್ಲಿ ಭಾನುವಾರ ಚರ್ಚೆ ನಡೆಯಿತು.

ಎಸ್‌ಸಿ, ಎಸ್‌ಟಿ ವರ್ಗೀಕರಣ, ಹಿಂದುಳಿದ ವರ್ಗದಿಂದ ಎಸ್‌ಟಿಗೆ ಸೇರ್ಪಡೆ ಮಾಡುವ ಬೇಡಿಕೆ, ಹಿಂದುಳಿದ ವರ್ಗದ 2ಎಗೆ ಸೇರಿಸುವ ಬೇಡಿಕೆ ಹೀಗೆ ವಿವಿಧ ಸಮುದಾಯಗಳು ಬೇಡಿಕೆ ಇಡುತ್ತಾ ಬಂದಿವೆ. ಇದು ಚುನಾವಣೆಯ ಸಂದರ್ಭದಲ್ಲಿ ಕಗ್ಗಂಟಾಗಬಾರದು ಎಂದು ಕೆಲವು ಮುಖಂಡರು ಪ್ರಸ್ತಾಪಿಸಿದರು ಎಂದು ತಿಳಿದುಬಂದಿದೆ.

ಹಿಂದುಳಿದ ವರ್ಗಗಳ ಮೀಸಲಾತಿಗೆ ಜಾತಿಗಳನ್ನು ಸೇರಿಸುವ ಅಧಿಕಾರವನ್ನು ಆಯಾ ರಾಜ್ಯ ಸರ್ಕಾರಗಳಿಗೆ ನೀಡುವ ಕಾಯ್ದೆಗೆ ಕಳೆದ ಲೋಕಸಭೆ ಅಧಿವೇಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ಆಸ್ಥೆ ವಹಿಸಿ ತಿದ್ದುಪಡಿ ತಂದರು. ಈ ಒಬಿಸಿ ತಿದ್ದುಪಡಿ ರಾಜ್ಯಸಭೆ ಮತ್ತು ಲೋಕಸಭೆಗಳೆರಡರಲ್ಲೂ ಅಂಗೀಕಾರವಾಯಿತು. ಹಾಗಾಗಿ ರಾಜ್ಯ ಸರ್ಕಾರ ಸರಿಯಾದ ಸಮಯಕ್ಕೆ ಸರಿಯಾದ ತೀರ್ಮಾನ ಕೈಗೊಳ್ಳಲಿದೆ. ಈ ಬಗ್ಗೆ ಕಾರ್ಯಕರ್ತರು ಗೊಂದಲ ಮಾಡಿಕೊಳ್ಳಬಾರದು. ರಾಜ್ಯ ನಾಯಕರು ಪ್ರವಾಸ ಬಂದಾಗ ಎಲ್ಲರೂ ಕೈಜೋಡಿಸಬೇಕು ಎಂದು ನಾಯಕರು ಉತ್ತರಿಸಿದ್ದಾರೆ ಎನ್ನಲಾಗಿದೆ.

ಜನಪ್ರತಿನಿಧಿಗಳು ಆಯ್ಕೆಯಾದ ಬಳಿಕ ಕಾರ್ಯಕರ್ತರಿಂದ ದೂರವಾಗುತ್ತಿದ್ದಾರೆ ಎಂಬ ಕೆಲವು ದೂರುಗಳಿವೆ. ಪಕ್ಷದ ಕಾರ್ಯಕರ್ತರನ್ನು ಒಟ್ಟಿಗೆ ಒಯ್ಯಬೇಕು ಎಂದು ಶಾಸಕರಿಗೆ ಸೂಚಿಸಲಾಯಿತು.

ಈಶ್ವರಪ್ಪಗೆ ಸಂಘಟನೆ ಜವಾಬ್ದಾರಿ: ಹಿಂದುಳಿದ ವರ್ಗಗಳ ಸಂಘಟನೆಯ ಪೂರ್ಣ ಜವಾಬ್ದಾರಿಯನ್ನು ಸಚಿವ ಕೆ.ಎಸ್‌. ಈಶ್ವರಪ್ಪ ಅವರಿಗೆ ನೀಡಲು ತೀರ್ಮಾನಿಸಲಾಯಿತು. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಪ್ರಬಲ ಪ್ರತಿಸ್ಪರ್ಧೆ ನೀಡುವ ಮತ್ತು ಮುಂದಿನ ಚುನಾವಣೆಗೆ ಹಿಂದುಳಿದ ವರ್ಗಗಳನ್ನು ಸೆಳೆಯುವ ದೃಷ್ಟಿಯಿಂದ ಈ ಜವಾಬ್ದಾರಿ ಹಂಚಿಕೆ ಮಾಡಲಾಗಿದೆ.

‘ಡಿ.ಕೆ. ಶಿವಕುಮಾರ್‌ ಗಾಳ’
‘ಒಂದಿಬ್ಬರು ಬಿಜೆಪಿ ಶಾಸಕರನ್ನು ಡಿ.ಕೆ. ಶಿವಕುಮಾರ್‌ ಸಂಪರ್ಕಿಸಿದ್ದಾರೆ. ಆದರೆ ನಮ್ಮ ಶಾಸಕರು ಎಲ್ಲೂ ಹೋಗಿಲ್ಲ’ ಎಂದು ಬಿ.ಎಸ್‌. ಯಡಿಯೂರಪ್ಪ ಸಭೆಯ ಬಳಿಕ ಸುದ್ದಿಗಾರರಿಗೆ ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT